ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿ ಬರೆದ ಚಿತ್ರಶಾಲೆ ‘ಕೀರಗಂಗಾ’

Last Updated 21 ಜುಲೈ 2018, 19:30 IST
ಅಕ್ಷರ ಗಾತ್ರ

ನಿಮಗೆ ಎರಡು, ಮೂರು ದಿನದ ಚಾರಣ ಸಾಕು. ಜಾಸ್ತಿ ನಡೆಯಲಾಗಲ್ಲ. ಆದರೆ, ಚಾರಣ ಮತ್ತು ಪ್ರವಾಸವೊಂದರ ಎಲ್ಲಾ ಸೌಕರ್ಯ ಮತ್ತು ಮಜವನ್ನೂ ಅನುಭವಿಸಬೇಕು ಅಷ್ಟೆ. ಅನುಕೂಲಕರ ಪರಿಸರವೂ ಇರಬೇಕು. ಚಳಿಯ ಜೊತೆಗೆ ಹಿಮ ಸುರಿತ, ಬಿಸಿನೀರಿನ ಬುಗ್ಗೆಗಳ ಪ್ರಾಕೃತಿಕ ಕೌತುಕ ಹೀಗೆ ಎಲ್ಲವನ್ನೂ ಅನುಭವಿಸಬೇಕಾದರೆ ಒಮ್ಮೆ ಕೀರಗಂಗಾ ಚಾರಣ ಮಾಡಿ ಬನ್ನಿ.

ಹದಿಮೂರು ಸಾವಿರ ಅಡಿ ಎತ್ತರದ ಅರೆಬರೆ ಆಮ್ಲಜನಕದ ಭೂಪರಿಸರ, ಎಲ್ಲೆಡೆ ಹಸಿರು ಹೊನ್ನಿನ ಬಂಗಾರದ ಮೇರು ಪರ್ವತಗಳು, ಎತ್ತ ಕ್ಯಾಮೆರಾ ತಿರುಗಿಸಿದರೂ ಚಿತ್ರಕ್ಕೆ ಕೊರತೆ ಇರದ ಭೂದೃಶ್ಯ ಕಾವ್ಯ ಎದುರಿಗೆ ತೆರೆದುಕೊಳ್ಳುತ್ತಲೇ ಸಾಗುವ ಅಪರೂಪದ ದೃಶ್ಯ ವೈಭವ ಕೀರಗಂಗಾ ಪ್ರವಾಸ ತಾಣದ್ದು. ಇಲ್ಲಿಗೆ ತಲುಪುವುದಕ್ಕೆ ಕೇವಲ ಕಾಲ್ನಡಿಗೆ ಮಾತ್ರವೇ ಸಾಧನವಾಗಿದೆ. ಹಾಗಾಗಿ, ಇದು ಪ್ರವಾಸೋದ್ಯಮದ ಮುಖ್ಯಭೂಮಿಕೆಯಿಂದ ಸ್ವಲ್ಪ ದೂರ ಉಳಿದುಬಿಟ್ಟಿದೆ. ಆದರೆ, ಖಾಸಗಿಯವರಿಗೆ ಯಾವ ಅಡೆತಡೆ ಇಲ್ಲದ್ದರಿಂದ ಇಲ್ಲೀಗ ಪ್ರತಿ ಮನೆಯೂ ಅತಿಥಿ ಗೃಹವೇ.

ಹಿಮಾಚಲದ ಕಣಿವೆಯ ಸೆರಗಿಗೂ, ಪಾರ್ವತಿ ವ್ಯಾಲಿ ಶ್ರೇಣಿಯ ಮಗ್ಗುಲಿಗೆ, ಅತ್ತಲಿಂದ ಒತ್ತಾಗಿ ನಿಂತ ಪರ್ವತದ ಶ್ರೇಣಿಗಳ ಸಂದಿನಲ್ಲಿ ಅದುಮಿಟ್ಟಂತೆ ಅರಳಿರುವ ಕೀರಗಂಗಾ ಇತ್ತ ಊರೂ ಅಲ್ಲ ಅತ್ತ ಕಾಡೂ ಅಲ್ಲ. ಪ್ರವಾಸಿಗರಿಂದಾಗಿ ಆಗೀಗ ಗಿಜಗುಡುವ ಟೆಂಟುಗಳ ಲೋಕ, ಡೇರೆಗಳ ಗೋದಾಮು. ಅದಕ್ಕೂ ಮೀರಿ ಹೋಮ್‍ಸ್ಟೇಗಳ ಅಡ್ಡೆ ಎಂದರೂ ತಪ್ಪಲ್ಲ.

ಊರಿನ ಲೆಕ್ಕದ ವ್ಯವಸ್ಥೆಯೇ ಇಲ್ಲಿರದಿದ್ದರೂ ಎಲ್ಲವೂ ಇದೆ. ಸಾಲು ಸಾಲು ಪೈನ್, ದೇವದಾರು ಮತ್ತು ಓಕ್ ಮರಗಳ ಜೊತೆಗೆ ಹಿಮಾಚಲದ ಸೇಬಿನ ತೋಟದ ಮರೆಗಳಲ್ಲಿ ಮಾಡಿನ ಸಾಲು, ಅದರ ಬಾಲ್ಕನಿ, ತಂಗಾಳಿಗೆ ಮೈಯೊಡ್ಡಿ ಕೂತು ಹೀರುವ ಮಸಾಲೆ ಟೀ ಹೀಗೆ ಕೀರಗಂಗಾ ಒಂದು ನಿರಂತರ ಮತ್ತು ಮುಗಿಯದ ಪ್ರಾಕೃತಿಕ ನೆಲೆ.

ಹಿಮಾಚಲಪ್ರದೇಶದ ಪಾರ್ವತಿ ಕಣಿವೆ ಪ್ರದೇಶಕ್ಕೆ ಸೇರಿರುವ ಕೀರಗಂಗಾದ ಹೆಬ್ಬಾಗಿಲು ಬರಶೈಣಿ ಎಂಬ ಪ್ರದೇಶ. ದೆಹಲಿಯಿಂದ ಮನಾಲಿ ಮಾರ್ಗವಾಗಿ ಹೊರಟು ಅದಕ್ಕೂ ಮೊದಲೇ ಸಿಗುವ ಬುಂಥರ್‌ನಲ್ಲಿ ಇಳಿದು ಬಿಡಬೇಕು. ಹೆಚ್ಚಿನಂಶ ಇದೇ ದಾರಿ ಎಲ್ಲಾ ಪ್ರವಾಸಿಗರದ್ದು. ಅಲ್ಲಿಂದ ಕಸೋಲ್ ಎಂಬ ಮೆಕ್ಸಿಕನ್ ಸಿಟಿ ಎನ್ನಿಸುವ ಊರಿಗೆ ದಿನವಿಡೀ ಬಸ್‌ಗಳು, ಇತರೆ ವಾಹನಗಳು ನಿಮ್ಮ ಪರ್ಸಿಗೆ ತಕ್ಕಂತೆ ಲಭ್ಯವಿವೆ. ಸಾಹಸಿಗಳಿಗೆ ಬುಂಥರ್‌ನಿಂದ ತರಹೇವಾರಿ ಬೈಕ್‌ಗಳ ಬಾಡಿಗೆ ಸೌಲಭ್ಯ ಇದೆ. ಅಲ್ಲಿಂದ ಕಾಸೋಲ್‌ಗೆ 32 ಕಿ.ಮೀ. ಕಾಸೋಲ್ ತಲುಪಿ, ಮಣಿಕರಣ ಎಂಬ ಪ್ರಸಿದ್ಧ ಯಾತ್ರಾ ಸ್ಥಳ ತಲುಪಿದರೆ ಅಗಾಗ್ಗೆ ಚಲಿಸುವ ಹಿಮಾಚಲ ಪರಿವಾಹನ ನಿಮ್ಮನ್ನು ಬರಶೈಣಿ ಮೂಲಕ ತೋಷ್ ಗ್ರಾಮದವರೆಗೂ ಮುಟ್ಟಿಸುತ್ತದೆ. ಇಲ್ಲದಿದ್ದರೆ ಬಾಡಿಗೆ ಆಟೊರಿಕ್ಷಾಗಳು ಇದ್ದೇ ಇವೆ.


–ಬಿಸಿನೀರಿನ ಬುಗ್ಗೆಯಲ್ಲಿ ಮೀಯುತ್ತಿರುವ ಪ್ರವಾಸಿಗರು

ಇಲ್ಲಿಗೆ ತಲುಪುವವರೆಗೆ ಸರಿಸುಮಾರು ಮಧ್ಯಾಹ್ನವಾಗಿ ಬಿಡುವುದರಿಂದ ಇಲ್ಲೆ ಎಲ್ಲಾದರೂ ಮೊದಲ ದಿನದ ವಸತಿ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ. ಕಾರಣ ತೋಷ್‍ನಿಂದ ರುದ್ರನಾಗ ಮೂಲಕ ನಿರಂತರ ಹದಿನಾಲ್ಕು ಕಿ.ಮೀ. ಚಾರಣ ಕಡ್ಡಾಯ. ಅದರಲ್ಲೂ ಮೊದಲ ಅವಧಿಯ ರುದ್ರನಾಗವರೆಗೆ ಉತ್ತಮ ಎನ್ನಬಹುದಾದ (4-5 ಕಿ.ಮೀ) ರಸ್ತೆ ಇದ್ದು ಅಲ್ಲಿಯವರೆಗೂ ಕೆಲವೊಮ್ಮೆ ಡ್ರಾಪು ಸಿಗುವುದಿದೆ.

ಆದರೆ, ಅದರ ನಂತರ ಮಾತ್ರ ಕಡಿದಾದ ಪರ್ವತಗಳ ಹೆಗಲ ಮೇಲಿನ ಕಾಲ್ನಡಿಗೆಯೇ ಕೀರಗಂಗಾವರೆಗೂ ತಲುಪುತ್ತದೆ. ಅದಕ್ಕಾಗಿ ಬೆಳಿಗ್ಗೆ ಚಾರಣ ಆರಂಭಿಸಿದರೆ ಕೀರಗಂಗಾ ತಲುಪುವವರೆಗೆ ಸಂಜೆಯಾದರೂ ಆದೀತು. ಕಾರಣ ದಾರಿಯ ಎರಡೂ ಬದಿಗಳಲ್ಲಿ ಕೂತಲ್ಲಿ ನಿಂತಲ್ಲಿ ಫೋಟೊ ತೆಗೆಯುವ ಅದ್ಭುತ ರಮ್ಯ ತಾಣಗಳೇ. ಸಮಯ ಸರಿದದ್ದೇ ಗೊತ್ತಾಗುವುದಿಲ್ಲ. ಜೊತೆಗೆ ಅದ್ಭುತವಾದ ಚಿಕ್ಕಚಿಕ್ಕ ಹಳ್ಳಿಗಳ ದಾರಿ (ಗ್ರಹಣ, ಕಲ್ಗಾ, ಪುಲ್ಗಾ, ಮಲಾನಾ ಇತ್ಯಾದಿ) ಯಾವ ಪ್ರವಾಸಿಯನ್ನೂ ಮುದಗೊಳಿಸದೆ ಬಿಡುವುದಿಲ್ಲ. ಕೀರಗಂಗಾ ಪ್ರವಾಸಕ್ಕಾಗಿ ಹಿಂದಿನ ದಿನ ಕಸೋಲ್‍ನಲ್ಲಿ ಉಳಿದು ಅಲ್ಲಿಂದ ತೋಷ್‍ವರೆಗೆ ಡ್ರಾಪ್ ತೆಗೆದುಕೊಳ್ಳುವುದು ಉತ್ತಮ ಯೋಜನೆ.

ಈ ಮಧ್ಯೆ ರುದ್ರನಾಗ ದಾಟಿದ ಮೇಲೆ ಸಾಲುಸಾಲು ಪರ್ವತಗಳ ಹೆಗಲು ಸವರಿಕೊಂಡು ಹೋಗುವ ಚಾರಣ ತೀರ ‘ಬಾಹುಬಲಿ’ ಚಿತ್ರದ ಸೆಟ್ಟಿನಂತೆ ಕಾಣಿಸುತ್ತಿರುತ್ತದೆ. ಪ್ರತಿ ತಿರುವೂ ಅದ್ಭುತವಾದ ನಿಸರ್ಗ ಬರೆದ ಚಿತ್ರಶಾಲೆ. ಅದರಲ್ಲೂ ಕೀರಗಂಗಾ ಹತ್ತಿರ ಒಂದು ಅತ್ಯುತ್ತಮ ಬಿಸಿನೀರಿನ ಕೊಳವಿದ್ದು, ಆ ಹಳ್ಳಿಯ ಸುತ್ತಮುತ್ತ ಹಾಯುವ ಪ್ರತಿಯೊಬ್ಬ ಚಾರಣಿಗ ಇಲ್ಲಿ ಸ್ನಾನ ಮಾಡದೆ ಹೊರಡಲಾರ.

ಬೀಸಿನೀರಿನ ಬುಗ್ಗೆ ಉಕ್ಕುತ್ತಲೇ ಇರುತ್ತದೆ. ಇದನ್ನು ಪವಿತ್ರ ತಾಣವಾಗಿಯೂ ಸ್ಥಳೀಯರು ಗುರುತಿಸುವುದರಿಂದ ಇಲ್ಲಿ ಮೋಜಿಗೆ ಅವಕಾಶವಿಲ್ಲ. ಮನದಣಿಯೆ ನೀರಿನಲ್ಲಿಳಿದು ಬಿಸಿನೀರಿನ ಆಮೋದವನ್ನು ಸವಿಯಬಹುದು. ಚಿಕ್ಕ ಈಜುಕೊಳ ದಂತೆ ಅದಕ್ಕೆ ಕಟ್ಟೆ ಕಟ್ಟಿ ಅನುಕೂಲಕರವಾಗಿ ಇರಿಸಲಾಗಿದ್ದು, ದಾರಿಯ ದಣಿವು ಪೂರ್ತಿ ತಣಿಯುವುದು ಸುಳ್ಳಲ್ಲ.

ಮೇ ತಿಂಗಳಾಂತ್ಯದಲ್ಲಿ ಹಿಮ ಸುರಿದ ಮೈಯನ್ನು ಕೊಡವಿ ನಿಲ್ಲುವ ಕೀರಗಂಗಾ ನಂತರ ಸೆಪ್ಟೆಂಬರ್‌ವರೆಗೆ ನಳನಳಿಸುವ ಅಚ್ಚ ಹಸಿರಿನ ಹೊನಲಿನಲ್ಲಿ ಪ್ರವಾಸಿಗರಿಗೆ ಅಪ್ಪಟ ಸ್ವರ್ಗ. ಜೂನ್ ಮತ್ತು ಅಕ್ಟೋಬರ್‌ನಲ್ಲಿ ಈಗೀಗ ಅತಿಹೆಚ್ಚು ಪ್ರವಾಸಿಗರು ಜಮೆಯಾಗತೊಡಗಿದ್ದು, ಅದರಲ್ಲೂ ವಿದೇಶಿಯರು ಬಂದರೆ ವಾರಗಟ್ಟಲೇ ಪುಸ್ತಕ ಓದುತ್ತಾ, ಹಸಿರು ಗುಡ್ಡ ನೋಡುತ್ತಾ ಕೂತು ಬಿಡುವುದರಿಂದ ಸ್ಥಳೀಯರಿಗೆ ಸ್ಥಳಾವಕಾಶಕ್ಕೆ ತೊಂದರೆ ನಿಚ್ಚಳ. ಯಾವುದಕ್ಕೂ ಮುಂಗಡ ಯೋಜನೆ ಮತ್ತು ಬುಕಿಂಗ್ ವಾಸಿ.

ಅಲ್ಲಿ ಯಾವುದೇ ಮೊಬೈಲ್ ನೆಟ್‌ವರ್ಕ್ ಕೆಲಸ ಮಾಡುವುದಿಲ್ಲ. ಅದಕ್ಕಾಗಿ ಕಾಸೋಲ್‍ನಲ್ಲಿ ಕೆಲವು ಟೂರ್ ಆಪರೇಟರ್‌ಗಳು ವ್ಯವಸ್ಥೆ ಮಾಡುತ್ತಾರಾದರೂ ಅದು ಕೆಲವೊಮ್ಮೆ ದುಬಾರಿಯಾಗುವುದೂ ಇದೆ. ನೇರವಾಗಿ ಹೋದಲ್ಲಿ ಸ್ಥಳಿಯವಾಗಿ ಲಭ್ಯವಾಗುವ ದಿನಕ್ಕೆ ಇನ್ನೂರು ಮುನ್ನೂರು ರೂಪಾಯಿ ಲೆಕ್ಕದ ಹೋಮ್‌ಸ್ಟೇಗಳಿಗೆ ಸಾವಿರದ ಲೆಕ್ಕದಲ್ಲಿ ಸುಲಿಗೆಯಾಗುತ್ತದೆ. ಹಾಗಾಗಿ ಸ್ಥಳೀಯರ ಬೆಂಬಲದ ಸ್ವಂತ ವ್ಯವಸ್ಥೆ ಮಾಡಿಕೊಂಡರೆ ಕೀರಗಂಗಾ ಮಟ್ಟಿಗೆ ಅದ್ಭುತ ಪ್ರವಾಸ ಮತ್ತು ಮನದಲ್ಲುಳಿಯುವ ಹಸಿರು ನಾಕವಾಗುವುದರಲ್ಲಿ ಸಂಶಯವಿಲ್ಲ. ಯೋಜನೆ ಮತ್ತು ಯೋಚನೆ ಎರಡೂ ಬೇಡ. ಸುಮ್ಮನೆ ಏಕಾಂತ ಬಯಸಿ ಕೂರುವುದಾದರೆ ಹೊರಟು ಬಿಡಿ. ಸ್ವರ್ಗ ಕೀರಗಂಗೆಯ ತಟದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT