ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಗಡ ಚಾರಣದ ಸೊಬಗು

Last Updated 27 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ಮೈಸೂರಿನ ’ನಿಸರ್ಗ’ ತಂಡದ ರೂವಾರಿ, ಗೆಳೆಯ ಅಯ್ಯಪ್ಪ ದೂರವಾಣಿ ಕರೆಮಾಡಿ ಶಿವರಾಯನ ರಾಜಗಡಕ್ಕೆ ಚಾರಣ ಬರ್ತಿರೇನು? ಎಂದು ಪ್ರಶ್ನಿಸುತ್ತಿದ್ದಂತೆ ತಟ್ಟಕ್ಕನೆ ಆಯ್ತು ಎಂದಿದ್ದೆ. ಚಾರಣದ ಮುನ್ನಾದಿನ ಕರಾವಳಿ ಕಡೆಯಿಂದ ಆಯ್ಕೆಯಾದ ಮತ್ತೊಬ್ಬ ಸದಸ್ಯ ಪುತ್ತೂರಿನ ಗಣಪಯ್ಯ ಹಾಗೂ ನಾನು ಕಾರವಾರದಿಂದ ಪನವೆಲ್ ಮೂಲಕ ಪುಣೆಯ ರೈಲ್ವೆ ನಿಲ್ದಾಣ ತಲುಪಿದೆವು. ಅದಾಗಲೇ ಮುಂಬೈಯಿಂದ ಬಂದಿದ್ದ ಗೆಳೆಯರು ನಮ್ಮನ್ನು ಬರಮಾಡಿಕೊಂಡರು. ತಂಡದ ಇನ್ನುಳಿದ ಸದಸ್ಯರು ಬೆಂಗಳೂರಿನಿಂದ ಉದ್ಯಾನ ಎಕ್ಷಪ್ರೆಸ್‌ನಲ್ಲಿ ಬರುವರಿದ್ದರು. ಅವರಿಗಾಗಿ ನಾವಿನ್ನು ಕಾಯ ಬೇಕಿತ್ತು. ಕೆಲ ಸಮಯಕಳೆಯುವುದಲ್ಲೇ ಸಿರಿಗನ್ನಡದ ಸವಿನುಡಿಗಳು ಕಿವಿಗೆ ಬಿದ್ದವು. ಅಪ್ಪಟ ಮರಾಠಿ ಪ್ರದೇಶದಲ್ಲಿ ಕನ್ನಡ ಕೇಳಿಸುತ್ತಿದೆಯಲ್ಲಾ ಎಂದು ಅತ್ತ ನೋಡಿದರೆ, ‘ನಿಸರ್ಗ ತಂಡ’ ಟೋಳಿ ಹಾಡುತ್ತಾ ನಮ್ಮೆಡೆ ದಾಪುಗಾಲು ಹಾಕಿ ಬರುತ್ತಿತ್ತು. ಕುಶಲೋಪರಿಯ ಬಳಿಕ ಎಲ್ಲರೂ ಬಸ್ ಏರಿ ಬೇಸ್ ಕ್ಯಾಂಪಿದ್ದ ವೆಲ್ಲೆ ಹಳ್ಳಿಗೆ ಬಂದಿಳಿದಾಗ ಗಡಿಯಾರದಲ್ಲಿ ರಾತ್ರಿ 8.30 ಆಗಿತ್ತು.

ಮುಂಜಾನೆ ಎದ್ದು ಪಕ್ಕದಲ್ಲಿ ಹರಿಯುತ್ತಿದ್ದ ನಾಲಾದಲ್ಲಿ ಸ್ನಾನ. ನಂತರ ತಿಂಡಿ. ಮಧ್ಯಾಹ್ನದ ಊಟ ಕಟ್ಟಿಕೊಂಡು ಕ್ಯಾಂಪ್ ಹೊರಗೆ ನಿಂತೆವು. ಆ ಪರಿಣತ ಚಾರಣಿಗರಾದ ಸದಾಶಿವ ಪಡ್ತರೆ ಹಾಗೂ ಶಂಕರ ತೆವರ್‌, ದೂರದಲ್ಲಿ ಕಾಣುವ ರಾಜಗಡ ದುರ್ಗ ತೋರಿಸುತ್ತಾ, ಚಾರಣದ ಮಾರ್ಗಸೂಚಿ ನೀಡಿದರು. ‘ನಮ್ಮದು ‘ಮಾನ್‌ಸೂನ್ ಟ್ರೆಕ್’ ಆಗಿದ್ದರಿಂದ ಇರುವ ದಾರಿಗಳಲ್ಲಿ ಸುಲಭವಾದ ‘ಪಾಲಿ ದರವಾಜಾ’ ದಾರಿಯನ್ನು ಆಯ್ಕೆ ಮಾಡಲಾಗಿದೆ. ಎಲ್ಲರೂ ಬಸ್ ಏರಿ ಒಂದು ಘಂಟೆ ನಂತರ ಬರುವ ಪಾಲಿ ಗ್ರಾಮದಲ್ಲಿ ಇಳಿದು ಚಾರಣ ಪ್ರಾರಂಭಿಸಿ. ರಾಜಗಡದ ಸ್ಥಳಗಳನ್ನು ನೋಡಿ ಮಧ್ಯಾಹ್ನ ದುರ್ಗದ ಮಧ್ಯಭಾಗದಲ್ಲಿರುವ ‘ಪದ್ಮಾವತಿ’ ದೇವಳದ ಹತ್ತಿರ ಸೇರಬೇಕು’ ಎಂದು ಸೂಚಿಸಿದರು.

ಕಿರಿದಾದ ರಸ್ತೆಗಳಲ್ಲಿ ಒಟ್ಟು 52 ಸದಸ್ಯರನ್ನು ಹೊತ್ತ ಬಸ್ ಸಹ್ಯಾದ್ರಿ ಗಿರಿ ಶಿಖರಗಳ ನಡುವಿರುವ ಚಿಕ್ಕ ಚಿಕ್ಕ ಹಳ್ಳಿಗಳನ್ನು ಹಾದು ಪಾಲಿ ಗ್ರಾಮಕ್ಕೆ ನಮ್ಮನ್ನು ತಂದಿತು. ಸುಮಾರು 40 ಚದರ ಕಿ.ಮಿ ಪ್ರದೇಶದಲ್ಲಿ ಹರಡಿಕೊಂಡಿದ್ದ, ಸಮುದ್ರ ಮಟ್ಟದಿಂದ 4520 ಅಡಿಗಳ ಮೇಲಿರುವ ರಾಜಗಡ ಕೋಟೆ ಹತ್ತಲು ಗುಂಜವಣೆ ಮಾರ್ಗ ಅಥವಾ ಚೋರ ದರವಾಜಾ, ಚಿರಮುಡಿ ಮಾರ್ಗ, ಅಲೂ ದರವಾಜಾ, ಮಾಳೆಮಾರ್ಗ ಹಾಗೂ ಐತಿಹಾಸಿಕ ರಾಜಮಾರ್ಗವಾದ ಪಾಲಿ ದರವಾಜಾಗಳೆಂಬ ಹಲವು ದಾರಿಗಳಿವೆ. ಮೊದಲೇ ನಿರ್ಧರಿಸಿದ್ದಂತೆ ನಾವು ಪಾಲಿದರ್ವಾಜದಿಂದ ಚಾರಣ ಆರಂಭಿಸಿದೆವು. ಮೋಡ ಕವಿದ ಮಳೆಗಾಲದ ವಾತಾವರಣವಿದ್ದರೂ ಚಾರಣದ ಆರಂಭಕ್ಕೇ ಬೆವರು ಹನಿಗಳು ಹಣೆಯ ಮೇಲೆ ಮೂಡಲು ಶುರುವಾದವು.

ಶಿವಾಜಿಯ ಬದುಕು ಮತ್ತು ಸುಮಾರು 26 ವರ್ಷಗಳ ಕಾಲ ಈ ದುರ್ಗಮ ಕೋಟೆಯಲ್ಲೆ ಕಳೆದಿದ್ದು, ಹಲವು ರಾಜ್ಯಗಳನ್ನು ಗೆದ್ದ ರೋಚಕ ಕಥೆಗಳನ್ನು ಕೇಳುತ್ತಾ ದಟ್ಟ ಮರಗಳ ಚಾವಣಿಗಳನ್ನು ದಾಟಿ ಬಯಲು ಸ್ಥಳದಲ್ಲಿ ನಿಂತಾಗ ಅರ್ಧ ದಾರಿ ಕ್ರಮಿಸಿದ್ದು ತಿಳಿಯಲೇ ಇಲ್ಲ. ಆಗ ಬಯಲಿನಲ್ಲಿ ಬೀಸುತ್ತಿದ್ದ ಆಹ್ಲಾದಕರ ತಂಪುಗಾಳಿಗೆ ಮೈಯೊಡ್ಡಿ ಸುತ್ತಲೂ ಕಣ್ಣು ಹಾಯಿಸಿದಾಗ ಪುಷ್ಪಲೋಕವೊಂದು ತೆರೆದುಕೊಂಡಿತ್ತು. ಆ ಲೋಕದಲ್ಲಿ ಅಗ್ನಿಶಿಖ, ಮಂದಾರ, ಭರಂಗಿ, ಘಂಟೆ ಭರಂಗಿ, ಗೌರಿ, ಕಾಡು ಅರಿಷಿಣ, ಸೋನೆರಿಲಾ, ಚಿರೆ ಗುಲಾಬಿ ಹೂಗಗಳಂತಹ ಹೂವುಗಳು ಸಾಲಿಟ್ಟಿದ್ದವು. ಕೆಂಪು, ನೀಲಿ, ನೇರಳೆ, ಹಳದಿ, ಅರಿಷಿಣ, ಗುಲಾಬಿ, ಬಿಳಿ ವರ್ಣಗಳಲ್ಲಿ ರಾಜಗಡದ ಅಡಿ ಅಡಿಗಳಲ್ಲಿ ತಮ್ಮ ಚಿತ್ತಾರವನ್ನು ಮೂಡಿಸಿದ್ದವು.

ಕಣ್ಣಾಮುಚ್ಚಾಲೆ ಆಡುವ ಮಂಜಿನ ಮೋಡಗಳು ಸರಿದಾಗ ಕಾಣುವ ಹೂವುಗಳೂ, ಕಾಡು ಬಾಳೆಯಂತಹ ಸಸ್ಯ ಹಾಗೂ ಪಕ್ಷಿ ಸಂಕುಲಗಳನ್ನು ವೀಕ್ಷಿಸುತ್ತಾ, ಅಲ್ಲಲ್ಲಿ ಜಿನುಗುವ ನೀರನ್ನು ಹೀರುತ್ತಾ ಚಾರಣದ ಮುಕ್ಕಾಲು ಭಾಗ ಕ್ರಮಿಸಿದೆವು. ಮುಂದೆ ಕೋಟೆಯ ಮುಖ್ಯಬಾಗಿಲು ಸಮೀಪಿಸುತ್ತಿದ್ದಂತೆ ಮೆಟ್ಟಿಲುಗಳ ರಚನೆ ಕಂಡಿತು. ಮೆಟ್ಟಿಲುಗಳು ಹಾಗೂ ಅಕ್ಕಪಕ್ಕದ ಗೋಡೆಗಳ ಸಂದುಗಳಲ್ಲಿ ಅರಳಿದ್ದ ಪುಷ್ಪಗಳು ಮಂದ ಮಾರುತದ ತಂಗಾಳಿಗೆ ಚಾಮರದಂತೆ ಓಲಾಡುತ್ತಿದವು. ಪ್ರಧಾನ ಬಾಗಿಲಾದ ‘ಪಾಲಿ ದರವಾಜಾ’ ಅದರ ಮೇಲಿದ್ದ ಕಾವಲು ಬುರುಜುಗಳಲ್ಲಿ ನಿಂತು, ವಿರಮಿಸಿಕೊಂಡು ತುಸು ದೂರು ನಡೆದೆವು. ನಂತರ ಆಗಿನ ರಾಜ ಪರಿವಾರದ ವಾಸ ಸ್ಥಳಗಳ ಅವಶೇಷಗಳಂತಿದ್ದ ಸ್ಥಳಕ್ಕೆ ಬಂದು ತಲುಪಿ, ವಿರಮಿಸಿಕೊಳ್ಳುತ್ತಿದ್ದೆವು. ಅಲ್ಲಿಗೆ ರಾಜಗಡದ ಕೆಳಭಾಗದಿಂದ ಬಂದ ಮಜ್ಜಿಗೆ, ಮೊಸರು, ಪಾನಕ ಮಾರುವವರು ಕಂಡ. ಎರಡು ಲೋಟ ಮಜ್ಜಿಗೆ ಗಂಟಲಿಗೆ ಇಳಿಸಿದಾಗ ಆಯಾಸ ಕಡಿಮೆ ಆದಂತಾಯಿತು. ಮಜ್ಜಿಗೆ ಕುಡಿದ ಸ್ಥಳ ‘ಸಂಜೀವಿನಿಮಾಚಿ’ ಎಂದು ತಿಳಿಯಿತು. ಇಲ್ಲಿ ಮಾಚಿ ಎಂದರೆ ನಾವು ಕನ್ನಡದಲ್ಲಿ ವೇದಿಕೆ ಅಥವಾ ಸಮತಳವಾದ ಜಾಗ‌ವೆನ್ನಬಹುದು.

’ರಾಜಗಡವನ್ನು ಸಂಪೂರ್ಣವಾಗಿ ನೋಡಬೇಕಾದರೆ ಒಂದುರಾತ್ರಿ ತಂಗ ಬೇಕಾಗುತ್ತದೆ’ ಎಂದು ಶಂಕರ್ ಹೇಳಿದ್ದು ನೆನಪಾಯಿತು. ಏಕೆಂದರೆ, ಸಮಯ ಸರಿಯುತ್ತಿತ್ತು. ಹೀಗಾಗಿ ಮನಸಿದ್ದರೂ ಸುವೆಳಾ ಹಾಗೂ ಬುದ್ಳಾ ಮಾಚಿಗಳ ಗೋಜಿಗೆ ಹೋಗದೆ. ರಾಜಗಡದ ಹೃದಯಭಾಗ, ಜೀಜಾಮಾತೆ ಹಾಗೂ ಶಿವಬಾನ ಅತ್ಯಂತ ಪ್ರಿಯ ಮಾಚಿಯಾದ ‘ಪದ್ಮಾವತಿಮಾಚಿ’ ಕಡೆಗೆ ನಾನು ಮುಖ ಮಾಡಿದೆ. ಅಲ್ಲಿರುವ ಪುರಾತನ ಪದ್ಮಾವತಿಯ ದೇಗುಲದ ಬಲಪಕ್ಕ ಕುಡಿಯಲು ತಂಪಾದ ನೀರುಬಾವಿಯಿದೆ. ಎಡಭಾಗದಲ್ಲಿ ಅರ್ಧ ಚಂದ್ರಾಕೃತಿಯ ವಿಶಾಲ ಕೊಳವಿದೆ. ಈ ಮಾಚಿಗೆ ಭೂಷಣಪ್ರಾಯವಾಗಿದೆ. ರಾಜಗಡಕ್ಕೆ ಬಂದವರು ಹೆಚ್ಚು ಸಮಯ ಇಲ್ಲಿಯೇ ಕಳೆಯುವುದು. ಪದ್ಮಾವತಿಮಾಚಿಯ ಪ್ರಕೃತಿ ದೃಶ್ಯ ನಾವು ಹೋದ ಸಮ ಯದಲ್ಲಿ ಭೂಲೋಕದ ಸ್ವರ್ಗಕ್ಕೆ ಸಮಾನವೆನ್ನುವಂತೆ ಇತ್ತು. ಈ ಮಾಚಿಯಲ್ಲಿಯೇ ಶಿವನ ಚಿಕ್ಕ ದೊಂದು ದೇವಸ್ಥಾನ ಹಾಗೂ ಶಿವಾಜಿಯ ಮೊದಲ ಮಡದಿ ಸಯಿಬಾಯಿಯ ಸಮಾಧಿಯಿದೆ. ಪುಣೆ ಸಮೀಪವಿರುವ ಈ ದುರ್ಗಕ್ಕೆ ಪ್ರವಾಸಿಗರು ಲಗ್ಗೆ ಹಾಕುವುದು ಸಾಮಾನ್ಯ. ಬಂದ ಪ್ರವಾಸಿಗರು ತಮ್ಮ ಹೊಟ್ಟೆ ತಣಿಸಲು ದುರ್ಗದ ಕೆಳಭಾಗದ ಗ್ರಾಮಸ್ಥರು ಪೊರೈಸುವ ರುಚಿಕರವಾದ ಜೋಳದ ರೊಟ್ಟಿ, ಜುಣಕ, ಕಾಳುಪಲ್ಯೆ, ಬದನೆಯ ಎಣ್ಣೆಗಾಯಿ, ಚಟ್ನಿ, ಮೊಸರು, ಮಜ್ಜಿಗೆಗಳನ್ನು ಆಯ್ಕೆ ಮಾಡುವುದು ಉತ್ತಮ.

ನಿಸರ್ಗ ತಂಡದ ನಾವು, ತಂದಿದ್ದ ಬುತ್ತಿಯನ್ನು ಪದ್ಮಾವತಿಯ ಅಂಗಳದಲ್ಲಿ ತಿಂದು, ಸ್ವಲ್ಪ ವಿಶ್ರಮಿಸಿದೆವು. ಸ್ವಚ್ಛಭಾರತದ ಅಂಗವಾಗಿ ಬಂದಿದ್ದ ಸುತ್ತಮುತ್ತಲಿನ ಪಟ್ಟಣಗಳ ಕಾರ್ಯಕರ್ತರು ನಮ್ಮೊಂದಿಗೆ ಜೊತೆಗೂಡಿ ಹಾಡಿ ನಲಿದರು. ಅಚ್ಚರಿ ಎಂದರೆ, ಇಲ್ಲಿಗೆ ನಿತ್ಯ ಸಾವಿರಾರು ಪ್ರವಾಸಿಗರು ಬಂದು ಹೋದರೂ ಪ್ಲಾಸ್ಟಿಕ್ ಹಾಗೂ ಕಸದ ಹಾವಳಿ ಅಷ್ಟಾಗಿ ಕಾಣಲಿಲ್ಲ. ನಾವು ಕೋಟೆಯ ರಾಜದ್ವಾರದಿಂದ ಹೊರಗೆ ಬಂದು ಕತ್ತನ್ನು ಹೊರಳಿಸಿ ಒಮ್ಮೆ ರಾಜಗಡದ ವಿಹಂಗಮ ನೋಟವನ್ನು ಕಂಡು ಕಣ್ಣು ತುಂಬ ತುಂಬಿಕೊಂಡೆ. ಮುಂದಿನ ದಿನಗಳಲ್ಲಿ ತೋರಣ, ಸಿಂಹ ಹಾಗೂ ಪ್ರತಾಪಗಡಗಳಿಗೆ ಲಗ್ಗೆ ಹಾಕಬೇಕೆಂದು ಗೆಳೆಯರೊಂದಿಗೆ ಚರ್ಚಿಸುತ್ತಾ ಬೆಟ್ಟದಿಂದ ಕೆಳಗಡೆ ಇಳಿಯಲು ಪ್ರಾರಂಭಿಸಿದೆ. ಮಂಜಿನ ಮೋಡವೊಂದು ನಮ್ಮೆದರು ತೇಲಿ ಹೋಯಿತು.

ರಕ್ಷಣಾ ತಂತ್ರಗಾರಿಕೆ ಕೋಟೆ

ರಾಜಗಡದಲ್ಲಿ ಸಂಜೀವಿನಿ, ಪದ್ಮಾವತಿ, ಸುವೆಳಾ ಹಾಗೂ ಬುದ್ಳಾ ಎನ್ನುವ ನಾಲ್ಕು ಮಾಚಿಗಳಿವೆ. ರಾಜಗಡ ಎಂದರೆ ಒಂದೇ ಕೋಟೆಯಲ್ಲ. ಕೋಟೆಗಳ ಸಮೂಹ. ನೈಸರ್ಗಿಕವಾಗಿ ನಿರ್ಮಿತ ಈ ದುರ್ಗದಲ್ಲಿ ಆಯಾಕಟ್ಟಿನ ಸ್ಥಳಗಳಲ್ಲಿ ಗೋಡೆಗಳನ್ನು, ಕಾವಲು ಗೋಪುರಗಳನ್ನು ಕಟ್ಟಲಾಗಿದೆ. ಸಂಜೀವಿನಿ ಹಾಗೂ ಸುವೆಳಾ ಮಾಚಿಗಳ ತಲೆಯ ಮೇಲೆ ಏರಿರುವ ಕಲ್ಲುಗಳಲ್ಲಿರುವ ಮೆಟ್ಟಿಲುಗಳನ್ನು ಹತ್ತುತ್ತಾ ಕಡಿದಾದ ಹಾಗೂ ಅಷ್ಟೇ ಭಯಂಕರವಾದ ದಾರಿಯಲ್ಲಿ ಸಾಗಿದರೆ ರಾಜಗಡದ ತುತ್ತತುದಿ ‘ಬಾಲೆಕಿಲ್ಲಾ’ ಎಂಬ ಮತ್ತೊಂದು ಕೋಟೆ ಸಿಗುತ್ತದೆ. ಈ ಕಿಲ್ಲೆಯ ರಕ್ಷಣಾ ತಂತ್ರಗಾರಿಕೆಯನ್ನು ಅತ್ಯಂತ ಜಾಣ್ಮೆಯಿಂದ ರಚಿಸಲಾಗಿದೆ. ಶತ್ರುಗಳು ಇದನ್ನು ಬೇಧಿಸುವುದು ಆಗಿನ ಕಾಲದಲ್ಲಿ ಸಾಧ್ಯವೇ ಇರಲಿಲ್ಲ ವೆಂಬುವ ಮಾತಿತ್ತು !

ಹೋಗುವುದು ಹೇಗೆ?
ಕರ್ನಾಟಕದಿಂದ ರಾಜಗಡಕ್ಕೆ ಎರಡು ದಾರಿಗಳಿವೆ. ಬಸ್‌ ಸೌಲಭ್ಯವಿದೆ. ಸ್ವಂತ ವಾಹನದಲ್ಲೂ ಹೋಗಬಹುದು.

ಕೊಲ್ಲಾಪುರ ಮಾರ್ಗ: ಕೊಲ್ಲಾಪುರ – ಕರಾಡ – ಸಾತಾರಾ – ಶಿರವಳ – ಭೋರ್ - ಗುಂಜಾವಣಿ

ಸೊಲ್ಲಾಪುರ ಮಾರ್ಗ: ಪಂಢಾಪುರ – ಫಲ್ಟಣ - ಲೊಣಂದ್ – ಶಿರವಳ - ಭೋರ್ – ಗುಂಜಾವಣಿ

ಚಾರಣಕ್ಕೆ ಹೋಗುವವರು ಒಂದು ದಿನ ಮುನ್ನವೇ ರಾಜಗಡ ಸಮೀಪದ ಊರುಗಳಿಗೆ ತಲುಪಿ ವಾಸ್ತವ್ಯ ಮಾಡಿದರೆ ಒಳ್ಳೆಯದು. ಈ ಊರುಗಳಲ್ಲಿ ಹೋಮ್ ಸ್ಟೇ, ಹೋಟೆಲ್ ಗಳು ಇವೆ.

ಚಾರಣ ಮಾರ್ಗಗಳು :

ಗುಂಜಾವಣಿ ಮಾರ್ಗ: ಒಟ್ಟು ದೂರ 5.5 ಕಿ.ಮೀ ಸಮಯ 3 ಘಂಟೆಗಳು

ಪಾಲಿ ದರವಾಜಾ ಮಾರ್ಗ: ಒಟ್ಟು ದೂರ 2.5 ಕಿ.ಮೀ. ಸಮಯ 1.5 ಘಂಟೆಗಳು (ನಾನು ಈ ಮಾರ್ಗದಿಂದ ಹೋಗಿದ್ದು).

ಉತ್ತಮ ಕಾಲ: ಸೆಪ್ಟೆಂಬರ್ ಮಧ್ಯದಿಂದ ಡಿಸೆಂಬರ್‌ವರೆಗೆ. ಹೂವು ಅರಳಿದಾಗ ಹೋದರೆ ಒಳ್ಳೆಯದು.

ರಾತ್ರಿ ಉಳಿಯುವವರಿಗೆ ಗುಂಜಾವಣಿಯಲ್ಲಿ ಟೆಂಟ್‌ಗಳು ಬಾಡಿಗೆಗೆ ದೊರೆಯುತ್ತವೆ. ಶಿವಾಲಯದಲ್ಲೂ ತಂಗಬಹುದು. ರಾತ್ರಿ ಉಳಿಯುವವರಿಗೆ ರಕ್ಷಣೆ ಇಲ್ಲ. ಆದರೆ, ಅಪಾಯವೂ ಇಲ್ಲ. ಗುಂಪುಗಳಲ್ಲಿ ಚಾರಣ ಮಾಡುವುದು ಒಳಿತು.

ರಾಜಗಡದಲ್ಲಿ ಹೋಟೆಲ್‌ಗಳಿಲ್ಲ. ಆದರೆ, ಸುತ್ತಲಿನ ಹಳ್ಳಿಯವರು ಊಟ, ಉಪಹಾರಗಳನ್ನು ತಂದು ಮಾರಾಟ ಮಾಡುತ್ತಾರೆ. ಜೋಳದ ರೊಟ್ಟಿ, ಜುಣಕ, ಕಾಳುಪಲ್ಯೆ, ಬದನೆಯ ಎಣ್ಣೆಗಾಯಿ, ಚಟ್ನಿ, ಮೊಸರು, ಮಜ್ಜಿಗೆ ಸಿಗುತ್ತವೆ.

ಎಲ್ಲೂ ಸುತ್ತ ಶೌಚಾಲಯದ ವ್ಯವಸ್ಥೆ ಇಲ್ಲ. ವಾರಾಂತ್ಯದಲ್ಲಿ ಜನಸಂದಣಿ ಬಹಳವಿರುತ್ತದೆ. ವಾರಾಂತ್ಯ ಹೊರತುಪಡಿಸಿದ ದಿನಗಳನ್ನೇ ಆಯ್ಕೆ ಮಾಡಿಕೊಂಡರೆ ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT