ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಯಲ್ಲಿ ದೀಪಗಳ ರಂಗವಲ್ಲಿ...

ಆಮ್‌ಸ್ಟರ್‌ಡಾಮ್‌ನಲ್ಲಿ ಚಳಿಯ ಮಾಯಾಲೋಕ
Last Updated 30 ಜನವರಿ 2019, 19:30 IST
ಅಕ್ಷರ ಗಾತ್ರ

‘ನೆದರಲೆಂಡ್ಸ್‌ (ಹಾಲಂಡ್) ರಾಜಧಾನಿ ಆ್ಯಮ್‍ಸ್ಟರ್‌ಡ್ಯಾಂ ನಗರ ಚಳಿಗಾಲದಲ್ಲಿ ಕಿನ್ನರಲೋಕವಾಗಿ ರೂಪಗೊಳ್ಳುತ್ತದೆ’ ಎಂದು ಅಲ್ಲಿರುವ ನನ್ನ ಮಗ ಪ್ರದೀಪ ಹೇಳುತ್ತಿದ್ದ. ಅವನ ಮಾತಿಗೆ ಓಗೊಟ್ಟು, ಕಳೆದ ಬಾರಿ ನವಂಬರ್‌ನಲ್ಲಿ ಆ್ಯಮ್‍ಸ್ಟರ್‌ಡ್ಯಾಂಗೆ ಹೋಗಿದ್ದೆ. ಮಗನ ಹೇಳಿಕೆಯಲ್ಲಿ ಕೊಂಚವೂ ಉತ್ಪ್ರೇಕ್ಷೆ ಇರಲಿಲ್ಲ. ಪ್ರಾಚೀನ ಕಟ್ಟಡ ಹಾಗೂ ನೀರುಗಾಲುವೆಯ ಈ ನಗರ ಚಳಿಗಾಲದಲ್ಲಿ ಮಾಯಾಲೋಕದ ಅನುಭವ ಮೊಗೆದು ಕೊಟ್ಟಿತು.

ಆ್ಯಮ್‍ಸ್ಟರ್‌ಡ್ಯಾಂ ನಗರದಲ್ಲಿ ನವೆಂಬರ್‌ –ಫೆಬ್ರುವರಿ ನಡುವೆ 1 ಡಿಗ್ರಿಯಿಂದ ರಿಂದ 8 ಡಿಗ್ರಿ ಸೆ. ತಾಪಮಾನವಿರುತ್ತದೆ. ಒಮ್ಮೊಮ್ಮೆ –5 ಡಿಗ್ರಿಗೂ ಇಳಿಯುತ್ತದೆ. ಅನೇಕ ಬಾರಿ ಹಿಮಪಾತವೂ ಆಗುತ್ತದೆಯಂತೆ. 1977ರಲ್ಲಿ ಉಷ್ಣತೆಯಲ್ಲಿ ತೀವ್ರ ಕುಸಿತವಾಗಿ ನೀರು ಕಾಲುವೆಯ ನೀರು ಮಂಜುಗಡ್ಡೆಯಾಗಿತ್ತಂತೆ. ಇದನ್ನೆಲ್ಲ ಸಹಿಸಿಕೊಂಡು ಬೆಚ್ಚನೆ ಉಡುಪಿನೊಂದಿಗೆ ಓಡಾಡುವ ಅಲ್ಲಿನವರ ಸಾಹಸ ಮೆಚ್ಚುಗೆಯಾಯಿತು.

ಚಳಿಯನ್ನೇ ಹೊದ್ದು ಮಲಗುವ ಈ ನಗರಕ್ಕೆ ಸೂರ್ಯಕಿರಣಗಳು ಕೇವಲ ಅತಿಥಿ. ಇಲ್ಲಿ ಬೆಳಗಾಗುವುದೇ ಬೆಳಿಗ್ಗೆ 9 ರ ನಂತರ. ಮಧ್ಯಾಹ್ನ 4 ಗಂಟೆ ಹೊತ್ತಿಗೆ ವಿದ್ಯುತ್ ದೀಪಗಳು ರಾರಾಜಿಸುತ್ತವೆ. ಮನೆ, ಅಂಗಡಿ, ಮಾಲ್, ಬಸ್ ಟ್ರಾಮ್, ಟ್ರೇನ್, ಹೋಟೆಲ್‌ಗಳಲ್ಲಿ ಚಳಿ ನಿರ್ಬಂಧಕ್ಕೆ ಬಿಸಿಗಾಳಿ ಹೊರಚೆಲ್ಲುವ ಹೀಟರ್‌ಗಳನ್ನು ಉಪಯೋಗಿಸುತ್ತಾರೆ. ಹೀಗಾಗಿ ಜನ ತಾಪಮಾನದ ವರದಿ ಗಮನಿಸಿ, ಸೂಕ್ತ ಉಡುಪಿನೊಂದಿಗೆ ಹೊರಡುತ್ತಾರೆ. ಎಷ್ಟೇ ಚಳಿ ಇದ್ದರೂ ಇಲ್ಲಿನ ಜನ ಜಾಗಿಂಗ್, ಸೈಕಲ್ ಸವಾರಿ ನಿಲ್ಲಿಸುವುದಿಲ್ಲ.

ದೀಪೋತ್ಸವದ ಸೊಬಗು

ಡಿಸೆಂಬರ್‌ನಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷ ಆಚರಣೆಯ ದಿನಗಳಲ್ಲಿ ಆ್ಯಮ್‍ಸ್ಟರ್‌ಡ್ಯಾಂನಲ್ಲಿ ದೀಪಗಳ ಸಂಭ್ರಮ. ನಾನು ಹೋಗಿದ್ದೂ ಅದೇ ಸಮಯವಾದ್ದರಿಂದ ಇಡೀ ನಗರ ಜಗಮಗಿಸುವ ಬೆಳಕಿನಲ್ಲಿ ತೋಯ್ದಿದ್ದನ್ನು ಕಂಡೆ. ವಿದ್ಯುತ್ ದೀಪ ಅಲಂಕಾರಿಕ ಪುಷ್ಪಗಳ ಪ್ರದರ್ಶನ ಹಾಗೂ ಕಲಾತ್ಮಕ ಸಿಡಿ ಮದ್ದುಗಳ ಚಿತ್ತಾರದಿಂದ ಈ ನಗರ ವರ್ಣರಂಜಿತ ಲೋಕವಾಗಿತ್ತು. ಇಲ್ಲಿರುವ ನೀರುಗಾಲುವೆ‌ಗಳಿಗೆಲ್ಲ ದೀಪಾಲಂಕಾರ ಮಾಡಿದ್ದರು. ಸೇತುವೆಗಳು, ಕಾಲುವೆ ಬದಿಯ ಬೀದಿಗಳಿಗೂ ದೀಪದ ಸರಗಳ ಅಲಂಕಾರ. ಇಡೀ ಊರೇ ದೀಪೋತ್ಸವದಲ್ಲಿ ಮುಳುಗಿದಂತಿತ್ತು. ಹೊರಗಡೆಯಷ್ಟೇ ಅಲ್ಲ, ಸಾರ್ವಜನಿಕರೂ ತಮ್ಮ ಮನೆ, ಕಿಟಕಿಗಳಲ್ಲಿ ದೀಪಗಳನ್ನು ಅಲಂಕಾರಿಕವಾಗಿ ಸಜ್ಜುಗೊಳಿಸಿ ಸಂಭ್ರಮಿಸುತ್ತಿದ್ದರು. ನೀರುಗಾಲುವೆ ಜಾಲದಲ್ಲಿ ಹೆಣೆದುಕೊಳ್ಳುವ ದೀಪಾಲಂಕಾರವನ್ನು ಸೈಕಲ್ ಮೇಲೆ ಸುತ್ತಾಡಿ ನೋಡುವುದು ಖುಷಿ.

ಸ್ಕೇಟಿಂಗ್ ಆಟ

ಸ್ಕೇಟಿಂಗ್ ನೆದರ್‌ಲೆಂಡ್ಸ್‌ನ ಪ್ರಮುಖ ಕ್ರೀಡೆ. ಚಳಿಗಾಲದಲ್ಲಿ ಹಿಮ ಪ್ರದೇಶಗಳಲ್ಲಿ ಮಕ್ಕಳಾದಿಯಾಗಿ ಎಲ್ಲರೂ ಸ್ಕೇಟಿಂಗ್ ಆಡುತ್ತಾರೆ. ಇಲ್ಲಿ ಸ್ಪರ್ಧೆಗಳೂ ನಡೆಯುತ್ತವೆ. ಸ್ಕೇಟಿಂಗ್ ರಿಂಕ್‍ನಲ್ಲಿ ಮೋಜಿನಾಟ
ಗಳನ್ನು ನೋಡಬಹುದು. ಹಿಮಪಾತದಿಂದ ಸ್ಕೇಟಿಂಗ್ ಕ್ರೀಡೆಗಾಗಿ 11 ಪ್ರವಾಸಿತಾಣದ ನಗರಗಳನ್ನು ಗುರುತಿಸಿದ್ದು ಈ ಹಿಮದ ತಾಣಗಳು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಅಕರ್ಷಿಸುತ್ತಿವೆ.

ಚಳಿಗಾಲದಲ್ಲಿ ಇಲ್ಲಿನ ಕಾಲುವೆಗಳಲ್ಲಿರುವ ಬೋಟ್‍ಹೌಸ್, ಪ್ರಮುಖ ರಸ್ತೆಗಳು, ವೃತ್ತಗಳು, ಪಾರಂಪರಿಕ ಕಟ್ಟಡಗಳಲ್ಲಿ ಅರಮನೆಯಂತಹ ಮಾಯಾಲೋಕ ಸೃಷ್ಟಿಯಾಗುತ್ತದೆ. ವೊಂಡೆಲ್ ಪಾರ್ಕ್‌, ಡ್ಯಾಂ ಸ್ಕ್ವೇರ್‌ ಚೌಕ, ಮೇಣದ ಪ್ರತಿಮೆ ಪ್ರದರ್ಶನ ಮಳಿಗೆ, ಅನ್ನೆಫ್ರಾಂಕ್‍ಳ ಮನೆ, ನೆದರ್‌ಲೆಂಡ್ಸ್‌ ಇತಿಹಾಸ ಪರಿಚಯಿಸುವ ‘ರೈಜ್’ ಮ್ಯೂಸಿಯಮ್, ಬ್ಯಾಗ್ ಪರ್ಸ್‌ಗಳು, ಚಿತ್ರಕಲೆ ವಜ್ರಾಭರಣದ ಮ್ಯೂಸಿಯಂಗಳು ನಮ್ಮಂಥ ಪ್ರವಾಸಿಗರಿಂದ ಭರ್ತಿಯಾಗಿರುತ್ತವೆ.

ಚಳಿಗಾಲದ ಅಬ್ಬರದ ಜೊತೆಗೆ ನಗರದ ಬೀದಿಗಳೆಲ್ಲಾ ವಿವಿಧ ತಿನಿಸು, ಸಾಮಾಗ್ರಿ ಪೇಯಗಳ ಮಾರಾಟದ ಅಂಗಡಿ ತಲೆ ಎತ್ತುತ್ತವೆ. ರೆಸ್ಟೋರೆಂಟ್, ಪಬ್, ಬಾರ್‌ಗಳಲ್ಲಿ ಕಲಾವಿದರಿಂದ ಡಿಸ್ಕೊ, ಡಚ್ ನೃತ್ಯಗಳು, ಕರೋಕೆ ಸಂಗೀತ ಗೀತೆಗಳ ಕಾರ್ಯಕ್ರಮ, ಚಳಿಗಾಲಕ್ಕಾಗಿಯೇ ಸ್ವಾದಿಷ್ಟ ಹಾಗೂ ಸ್ನೇಹಶೀಲ ಔತಣಕೂಟಗಳು ಮನರಂಜಿಸುವ ಕಾರ್ಯಕ್ರಮಗಳು ಏರ್ಪಾಡಾಗುತ್ತವೆ.

ಹೊಸವರ್ಷಕ್ಕೆ ವಿಶಿಷ್ಟ ತಿನಿಸು

‘ಕ್ರಿಸ್‍ಮಸ್’ ಮುಗಿಯುತ್ತಿದ್ದಂತೆಯೇ ಹೊಸವರ್ಷದ ಸ್ವಾಗತಕ್ಕೆ ಅಣಿಯಾಗುತ್ತಾರೆ. ಅದಕ್ಕಾಗಿ ‘ಒಲಿಯೆಬೋಲಿನ್’ ಎಂಬ ಸಕ್ಕರೆ ಲೇಪಿತ ಕಜ್ಜಾಯ (ನಮ್ಮಲ್ಲಿಯ ಮೈಸೂರು ಬಜ್ಜಿಯಂತೆ ಕರಿದ ಸಿಹಿ ಪದಾರ್ಥ) ಮಾರಾಟಕ್ಕೆ ವಿಶೇಷ ಮಳಿಗೆಗಳು ಪ್ರಾರಂಭವಾಗುತ್ತವೆ. ಅಲ್ಲಿ ಭರ್ಜರಿ ವ್ಯಾಪಾರ, ಡಿಸೆಂಬರ್ 31ರ ಮಧ್ಯರಾತ್ರಿ ಆ್ಯಮ್‍ಸ್ಟರ್‌ಡ್ಯಾಂ ನಭೋ ಮಂಡಲದಲ್ಲಿ ವರ್ಣರಂಜಿತ ಬಾಣ ಬಿರುಸುಗಳ ಅನಾವರಣ. ಆಕಾಶದಲ್ಲಿ ಹರಡುವ ಈ ರಂಗವಲ್ಲಿ ವೀಕ್ಷಣೆಗೆ ಅಸಂಖ್ಯಾತ ಜನ ಸೇರುತ್ತಾರೆ. ಹೊಸವರ್ಷದ ದಿನ ಸಮುದ್ರ ತೀರಕ್ಕೆ ತೆರಳಿ ಮಧ್ಯಾಹ್ನದ ಹೊತ್ತಿಗೆ ಮೋಡಗಳ ಮಧ್ಯೆ ಇಣುಕು ಹಾಕುವ ಸೂರ್ಯನನ್ನು ಕಾಣುವ ಹೊತ್ತಿಗೆ ನೀರಿಗೆ ಧಮುಕಿ ಈಜಾಡಿ ಸಮುದ್ರದ ಸ್ನಾನ ಮಾಡುವ ಮೂಲಕ ಆನಂದಿಸುತ್ತಾರೆ.

ಇಂಥದ್ದೊಂದು ಅಪೂರ್ವ ನಗರಕ್ಕೆ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ನಗರ ವ್ಯಾಪಾರ, ಪ್ರವಾಸೋದ್ಯಮ, ಸಂಗೀತ, ಸಾಹಿತ್ಯ, ಕಲೆಯಲ್ಲಿ ಸುದೀರ್ಘ ಮತ್ತು ಆಸಕ್ತಿದಾಯಕ ಇತಿಹಾಸ ಹೊಂದಿದೆ.

ನೀರುಗಾಲುವೆಗಳ ಆಕರ್ಷಣೆ

ಆ್ಯಮ್‍ಸ್ಟರ್‌ಡ್ಯಾಂನಲ್ಲಿ ನೀರು ಕಾಲುವೆಗಳದ್ದು ಅತ್ಯಂತ ಮಹತ್ವದ ಪಾತ್ರ. ಈ ಕೆನಾಲ್‍ಗಳಲ್ಲಿ ಸುತ್ತಾಡುವುದೇ ಒಂದು ವಿಶಿಷ್ಟ ಅನುಭವ. 17 ನೇ ಶತಮಾನದಲ್ಲಿ ವಾಣಿಜ್ಯ ಹಾಗೂ ವಸತಿಗಾಗಿ ಇಲ್ಲಿಯ ಜವುಳು ಭೂಮಿಯನ್ನು ಪರಿವರ್ತಿಸಿ, ಕಾಲುವೆ ಹಾಗೂ ಜಲಚಲನಶಾಸ್ತ್ರ (ಹೈಡ್ರಾಲಿಕ್ಟ್ ) ಎಂಜಿನಿಯರಿಂಗ್ ಪದ್ಧತಿ ರೂಪಿಸಲಾಗಿದೆ. ಇಡೀ ಯೂರೋಪ್‌ನಲ್ಲಿ ಈ ಮಾದರಿಯ ಯೋಜನೆ ಜನಜನಿತವಾಗಿದೆ. ಚಳಿಗಾಲದಲ್ಲಿ ಈ ಕಾಲುವೆಗಳು ವಿಶಿಷ್ಟ ಅಲಂಕಾರದಿಂದ ಪ್ರಕಾಶಿಸುತ್ತವೆ. 100 ಕಿ.ಮೀ ಜಾಲ ವಿಸ್ತರಿಸಿದ್ದು 1500 ಸೇತುವೆಗಳನ್ನು ನಿರ್ಮಿಸಲಾಗಿದೆ. ಕಾಲುವೆಗುಂಟ ಒತ್ತೊತ್ತಾಗಿ ನಿರ್ಮಿಸಲಾದ ಎತ್ತರದ ಸುಂದರ ಮನೆ ಕಟ್ಟಡಗಳು ಕಾಲುವೆಯ ಸೌಂದರ್ಯ ಹೆಚ್ಚಿಸಿವೆ. ಈ ಕಾಲುವೆಗಳ ಜಾಲವನ್ನು ಯುನೆಸ್ಕೋ 2010 ರಲ್ಲಿ ವಿಶ್ವ ಪರಂಪರೆ ತಾಣವಾಗಿ ಪೋಷಿಸಿದೆ. ಈ ಕಾಲುವೆಗಳಲ್ಲಿ ದೋಣಿಗಳ ಮೂಲಕ 90 ನಿಮಿಷ ಪಯಣಿಸಿ ಇಡೀ ನಗರವನ್ನು ಸುತ್ತಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT