ಅಶೋಕ ಚಕ್ರದ ಯಶೋಗಾಥೆ

7

ಅಶೋಕ ಚಕ್ರದ ಯಶೋಗಾಥೆ

Published:
Updated:

ಬೆನ್ನಿಗೆ ಬೆನ್ನು ಸೇರಿಸಿಕೊಂಡಂತಿರುವ ನಾಲ್ಕು ಸಿಂಹಗಳು ಚಕ್ರದ ಚಿಹ್ನೆಯುಳ್ಳ ವೃತ್ತಾಕಾರದ ಪೀಠದಲ್ಲಿ ಕುಳಿತಿರುವ ನಮ್ಮ ರಾಷ್ಟ್ರೀಯ  ಲಾಂಛನವನ್ನು, ಅಶೋಕ ಚಕ್ರವರ್ತಿ ಸಾರನಾಥದಲ್ಲಿ ಕಟ್ಟಿಸಿದ ಸ್ತೂಪದಿಂದ ಪಡೆಯಲಾಗಿದೆ ಎಂಬುದನ್ನು ಚರಿತ್ರೆಯ ಪಾಠಗಳಲ್ಲಿ ಓದಿದ್ದೇವೆ. ನಮ್ಮ ರಾಷ್ಟ್ರಧ್ವಜದಲ್ಲಿ ಅಳವಡಿಸಿಕೊಳ್ಳಲಾದ ಅಶೋಕ ಚಕ್ರವು, ಸಾಮ್ರಾಟ್ ಅಶೋಕನ ‘ಸಿಂಹಶೀರ್ಷ’ ಚಿಹ್ನೆಯಾಗಿದೆ.

ಅತಿಯಾದ ಸಾಮ್ರಾಜ್ಯ ವಿಸ್ತರಣೆಯ ಮದದಲ್ಲಿದ್ದ ಅಶೋಕನು  ಕ್ರಿ.ಪೂ. 261ರಲ್ಲಿ ನಡೆದ ‘ಕಳಿಂಗ’ ಮಹಾಯುದ್ದದಲ್ಲಿ ಜಯಗಳಿಸಿದ. ಆದರೆ ರಣರಂಗದ ಭೀಕರ, ಭೀಭತ್ಸ ದೃಶ್ಯಗಳನ್ನು ಕಣ್ಣಾರೆ ಕಂಡು, ಸಾವಿರಾರು ಸಾವು ನೋವುಗಳಿಗೆ ತಾನೇ ಕಾರಣ ಎಂದು ಮನಗಂಡು, ಹೃದಯ ಪರಿವರ್ತನೆಯಾಗಿ ಶಸ್ತ್ರಸನ್ಯಾಸ ಮಾಡಿದ ಸ್ಥಳವು ಈಗಿನ ಒಡಿಶಾ ರಾಜ್ಯದ ಧೌಲಗಿರಿ ಎಂಬಲ್ಲಿದೆ. ಆಮೇಲೆ, ಬೌದ್ಧ ಧರ್ಮವನ್ನು ಸ್ವೀಕರಿಸಿದ ಅಶೋಕನು ತನ್ನ ಸಾಮ್ರಾಜ್ಯದ ಹಲವೆಡೆ ಸ್ತೂಪಗಳನ್ನು ನಿರ್ಮಿಸಿದನು. ಹೀಗೆ ಕಟ್ಟಿಸಿದ ಸ್ತೂಪಗಳಲ್ಲಿ ಸಾರನಾಥದಲ್ಲಿರುವ ‘ಧಮೇಕ್ ಸ್ತೂಪ’ವು ಪ್ರಮುಖವಾದುದು.

ಉತ್ತರ ಪ್ರದೇಶ ರಾಜ್ಯದಲ್ಲಿರುವ ವಾರಾಣಸಿಯಿಂದ ಸುಮಾರು 13 ಕಿ.ಮೀ. ದೂರದಲ್ಲಿ, ಬೌದ್ಧ ಧರ್ಮದ  ‘ಸಾರನಾಥ’ ನಗರಿಯಿದೆ. ಇದು ಸಾರಂಗ ಅಥವಾ ಜಿಂಕೆಗಳ ತಾಣವಾದುದರಿಂದ ಊರಿನ ಹೆಸರು ‘ಸಾರಂಗನಾಥ’ವಾಗಿ, ಆಡುಮಾತಿನಲ್ಲಿ ಸಾರನಾಥವಾಯಿತು. ಇಲ್ಲಿ ಈಗಲೂ ಜಿಂಕೆಗಳ ಉದ್ಯಾನವನವಿದೆ. ಸಾರನಾಥ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೈಗೊಂಡ ಉತ್ಖನನದ ವೇಳೆ ಅನೇಕ ಪ್ರಾಚೀನ ಬೌದ್ಧ ವಿಹಾರಗಳು ಮತ್ತು ಸ್ತೂಪಗಳ ಅವಶೇಷಗಳು ಲಭಿಸಿವೆ. ಪ್ರಸ್ತುತ ಸಾರನಾಥದಲ್ಲಿ, ಬೃಹದಾಕಾರದ ಪ್ರಾಚೀನ ಧಮೇಕ್ ಸ್ತೂಪ, ಪ್ರಾಚ್ಯವಸ್ತು ಇಲಾಖೆಯವರು ನಿರ್ವಹಿಸುವ ಮ್ಯೂಸಿಯಂ, ಜಪಾನಿ ಪಗೋಡ ಶೈಲಿಯ ಸ್ತೂಪ, ಸುಂದರವಾದ ವಿವಿಧ ಗಾತ್ರ ಹಾಗೂ ವಿಭಿನ್ನ ಶೈಲಿಯ ಬುದ್ಧನ ವಿಗ್ರಹಗಳು ಹಾಗೂ ಜಿಂಕೆವನ ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಗಳು.

ಹಚ್ಚಹಸಿರಿನ ಉದ್ಯಾನದಲ್ಲಿ ಇಟ್ಟಿಗೆ ಬಣ್ಣದಲ್ಲಿ ಭವ್ಯವಾಗಿ ಕಾಣುವ ಧಮೇಕ್ ಸ್ತೂಪ, ಅಲ್ಲಲ್ಲಿ ಕಾಣಿಸುವ ನೂರಾರು ಚಿಕ್ಕ ಪುಟ್ಟ ಸ್ತೂಪಗಳು, ಕೆಂಪು-ಹಳದಿ ಬಣ್ಣದ ವಿಶಿಷ್ಟ ಉಡುಗೆಯನ್ನು ತೊಟ್ಟು ಸ್ತೂಪದ ಮುಂದೆ ಮಂಡಿಯೂರಿ ಕುಳಿತು ಮಂತ್ರಪಠಣ ಮಾಡುವ  ಬೌದ್ಧ ಮತಾನುಯಾಯಿಗಳು, ನಿಶ್ಶಬ್ದವಾಗಿ ಧ್ಯಾನ ಮಾಡುತ್ತಿರುವವರು. ಅತ್ತಿತ್ತ ಸುತ್ತಾಡುವ ಸ್ವದೇಶಿ ಮತ್ತು ವಿದೇಶಿ ಪ್ರವಾಸಿಗರು, ಪಕ್ಕದಲ್ಲಿರುವ ಜಿಂಕೆವನ... ಇವು ಸಾರನಾಥದಲ್ಲಿ  ಎದುರಾಗುವ ದೃಶ್ಯಗಳು.

ಸಾರನಾಥದಲ್ಲಿ ಸಾಮ್ರಾಟ್ ಅಶೋಕನು ಕಟ್ಟಿಸಿದ ಧಮೇಕ್ ಸ್ತೂಪವು ಇಂದಿಗೂ ಸದೃಢವಾಗಿದೆ. ಕೆಂಪು ಇಟ್ಟಿಗೆ ಹಾಗೂ ಮರಳುಕಲ್ಲಿನಿಂದ ಕಟ್ಟಲಾದ ಸ್ತೂಪವು 43.6 ಮೀಟರ್ ಎತ್ತರ ಹಾಗೂ 28 ಮೀಟರ್ ಸುತ್ತಳತೆಯನ್ನು ಹೊಂದಿದ್ದು ದೂರದಿಂದಲೇ ಪ್ರವಾಸಿಗರನ್ನು ಸೆಳೆಯುತ್ತದೆ. ಈಗ ‘ಧಮೇಕ್ ಸ್ತೂಪ’ ಇರುವ ಜಾಗದಲ್ಲಿ ಗೌತಮ ಬುದ್ಧನು ಮೊದಲ ಬಾರಿಗೆ ಅಷ್ಟಮಾರ್ಗವನ್ನು ಬೋಧಿಸಿದ ಎಂದು ನಂಬಲಾಗುತ್ತದೆ.


‘ಧಮೇಕ್ ಸ್ತೂಪ’

ಧಮೇಕ್ ಸ್ತೂಪವು ಮೌರ್ಯರ ಕಾಲದ ವಾಸ್ತುಶಿಲ್ಪ, ಕಟ್ಟಡ ವಿನ್ಯಾಸ ಹಾಗೂ ನಿರ್ಮಾಣದ ಬಗ್ಗೆ ಅವರಿಗಿದ್ದ ಕೌಶಲಕ್ಕೆ ಸಾಕ್ಷಿಯಾಗಿದೆ. ಅಚ್ಚರಿ ಸ್ತೂಪದ ಗೋಡೆಯಲ್ಲಿ ಮೌರ್ಯರ ಕಾಲದ ಬ್ರಾಹ್ಮಿ ಭಾಷೆಯ ಶಾಸನಗಳು, ವಿವಿಧ ರೇಖಾಚಿತ್ರಗಳಿವೆ.

ಸಾರನಾಥದಲ್ಲಿ ಅಶೋಕ ಚಕ್ರವರ್ತಿಯು ಕಟ್ಟಿಸಿದ ಸ್ತಂಭದಲ್ಲಿದ್ದ ‘ಸಿಂಹಶೀರ್ಷ’ದ ಕೆತ್ತನೆಯು ಅಮೋಘವಾಗಿದೆ. ಸಾರಾನಾಥದ ಅಶೋಕ ಸ್ತಂಭವನ್ನು ಚೂನಾರ್ ಪರ್ವತಗಳಲ್ಲಿ ಲಭ್ಯವಿದ್ದ ವಿಶಿಷ್ಟ ಮರಳುಕಲ್ಲುಗಳಿಂದ ರಚಿಸಲಾಗಿದೆ. ಮೊದಲನೆಯದಾಗಿ, ತಲೆಕೆಳಗಾಗಿ ಹಿಡಿದ ಗಂಟೆಯ ಆಕಾರದಲ್ಲಿ, ಎರಡು ಅಡಿ ಎತ್ತರದ ಅರಳಿದ ಕಮಲದ ಎಳೆಗಳನ್ನು ಹೋಲುವ ಪೀಠವಿದೆ. ಇದರ ಮೇಲೆ ಸುಮಾರು ಒಂದು ಅಡಿ ಎತ್ತರದ, ಎರಡು ಅಡಿ ಸುತ್ತಳತೆಯ ವೃತ್ತಾಕಾರದ ಕಲ್ಲಿನ ಪೀಠವಿದೆ. ಈ ಪೀಠದಲ್ಲಿ ನಾಲ್ಕು ದಿಕ್ಕಿಗೂ ನಾಲ್ಕು ಚಕ್ರಗಳಿವೆ. ಪ್ರತಿ ಚಕ್ರದಲ್ಲಿಯೂ 24 ಗೆರೆಗಳಿದ್ದು ಇವು ಬೌದ್ಧರ ಆಚರಣೆಗಳ ಸಂಕೇತ. ಪ್ರತಿ ಎರಡು ಚಕ್ರಗಳ ಮಧ್ಯೆ ತಲಾ ಒಂದು ಆನೆ, ವೃಷಭ, ಕುದುರೆ, ಸಿಂಹಗಳನ್ನು ಕೆತ್ತಲಾಗಿದ್ದು, ಇವು ಬುದ್ಧನ ಜೀವನದ ಘಟ್ಟಗಳ ಸೂಚಕವಂತೆ. ಈ ಕಲ್ಲಿನ ಪೀಠದ ಮೇಲೆ, ಬೆನ್ನಿಗೆ ಬೆನ್ನು ಜೋಡಿಸಿಕೊಂಡ, ಬಾಯಿ ತೆರೆದ ನಾಲ್ಕು ಸಿಂಹಗಳನ್ನು ಬಹಳ ಕಲಾತ್ಮಕವಾಗಿ ಕೆತ್ತಿದ್ದಾರೆ. ಪ್ರತೀ ಸಿಂಹವೂ ಮೂರು ಅಡಿಗಳಷ್ಟು ಎತ್ತರವಾಗಿದೆ. ಈ ಸಿಂಹಶೀರ್ಷವೇ ಭಾರತದ ರಾಷ್ಟ್ರೀಯ ಲಾಂಛನ.

ಸಿಂಹಶೀರ್ಷವನ್ನಿರಿಸಿದ್ದ ಕಲ್ಲಿನ ಕಂಬವು 50 ಅಡಿಗಳಷ್ಟು ಎತ್ತರವಿದ್ದಿರಬಹುದು ಎಂದು ಲಭ್ಯ ಅವಶೇಷಗಳ ಆಧಾರದಲ್ಲಿ ಊಹಿಸಿದ್ದಾರೆ. ಕಾಲಕ್ರಮೇಣ ಸ್ತಂಭ ಮುರಿದುಬಿದ್ದು ಸ್ವಲ್ಪಮಟ್ಟಿಗೆ ಹಾನಿಗೊಳಗಾದರೂ, ತನ್ನ ಬಹುತೇಕ ಸೌಂದರ್ಯವನ್ನುಳಿಸಿಕೊಂಡು ಮ್ಯೂಸಿಯಂನಲ್ಲಿ ಭದ್ರವಾಗಿದೆ.

ಸಾರನಾಥವನ್ನು ತಲಪುವ ಬಗೆ

ಸಾರನಾಥದ ಸಮೀಪದ ವಾರಾಣಸಿ ಹೆಚ್ಚಿನ ನಗರಗಳಿಂದ ವಿಮಾನ, ರೈಲು ಅಥವಾ ರಸ್ತೆಸಾರಿಗೆ ಸಂಪರ್ಕವಿದೆ. ವಾರಣಾಸಿಯಿಂದ ರಸ್ತೆಯ ಮೂಲಕ ಸುಲಭವಾಗಿ ಸಾರನಾಥವನ್ನು ತಲಪಬಹುದು. ಇಲ್ಲಿ ಬೇಸಗೆ ಸಮಯದಲ್ಲಿ ಬಿಸಿಲಿನ ಝಳ ಇರುವುದರಿಂದ ನವಂಬರ್‌ನಿಂದ ಮಾರ್ಚ್‌ನ ಅವಧಿ ಪ್ರವಾಸಕ್ಕೆ ಹಿತಕಾರಿ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !