ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಲಿ ಸರೋವರಗಳ ನಾಡಲ್ಲೊಂದು ಸುತ್ತು

Last Updated 18 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಜಿಲ್ಲೆಗಳನ್ನೂ ರಾಜ್ಯಗಳನ್ನೂ ಬಸ್ಸಿನಲ್ಲಿ ಸುತ್ತಿದ್ದುಂಟು. ಆದರೆ ದೇಶ ದೇಶಗಳನ್ನೂ ಬಸ್ಸಿನಲ್ಲಿಯೇ ಸುತ್ತಬಹುದೆಂದು ನನಗೆ ಅರಿವು ಮಾಡಿಕೊಟ್ಟಿದ್ದೇ ಸ್ಲೊವೇನಿಯಾ ಎಂಬ ಪುಟ್ಟ ದೇಶದ ಸೆಳೆತ. ಬುಡಾಪೆಸ್ಟಿನಿಂದ ಹೊರಟದ್ದು ನಾನು ಮತ್ತು ಸಚಿನ್. ಬೇಸಿಗೆಯ ಬಿರುಬಿಸಿಲಿಗೆ ಬರ್ಮುಡಾ ಮತ್ತು ಟಿ ಶರ್ಟ್ ಧರಿಸಿ, ಡಬಲ್ ಡೆಕ್ಕರ್ ಬಸ್ಸೊಂದನ್ನು ಹತ್ತಿದ್ದಾಯ್ತು. ಬಸ್ಸಿನ ಗಾತ್ರವನ್ನೇ ಮರೆತು ಗಾಡಿ ಚಲಾಯಿಸುತ್ತಿದ್ದ 35ರ ಹರೆಯದ ಚಾಲಕಿ, ಯಾರದೋ ಮೇಲಿನ ಕೋಪವನ್ನು ನಮ್ಮ ಮೇಲೆ ತೀರಿಸಿಕೊಳ್ಳುತ್ತಿರುವಂತೆ ಕಾಣುತ್ತಿತ್ತು. ಶಿಸ್ತುಬದ್ಧವಾಗಿ ಕುಳಿತಿದ್ದ ಪಯಣಿಗರ ನಡುವೆ, ಜೋರಾಗಿ ಮಾತನಾಡುತ್ತ ಬಸ್ಸಿನುದ್ದಕ್ಕೂ ತಿರುಗುತ್ತಿದ್ದ ನಾವು, ಒಂದೆರಡು ಬಾರಿ ಬೈಸಿಕೊಂಡಿದ್ದಂತೂ ನಿಜ. ಕೆಲವೇ ಗಂಟೆಗಳಲ್ಲಿ, ಕ್ರೊಯೇಷಿಯಾ ದೇಶದ ಗಡಿ ತಲುಪಿದ್ದೆವು.

ಗಡ್ಡ ಮೀಸೆ ಹೆಚ್ಚಾಗಿಯೇ ಬೆಳೆಸಿದ್ದ ನಾವು, ಗಡಿಯಲ್ಲಿ ಪೊಲೀಸರಿಗೆ ಭಯೋತ್ಪಾದಕರಂತೆ ಕಂಡೆವೇನೋ. ಹಾಗಾಗಿಯೇ ನಮ್ಮ ಪಾಸ್‌ಪೋರ್ಟ್‌ಗಳನ್ನು ಪರಿಶೀಲಿಸಲು ಎಲ್ಲರಿಗಿಂತಲೂ ತುಸು ಹೆಚ್ಚೇ ಸಮಯ ತೆಗೆದುಕೊಂಡರು. ಸಂಜೆ ಏಳಕ್ಕೆ ತಲುಪಬೇಕಿದ್ದ ಬಸ್ಸು, ರಾತ್ರಿ ಹನ್ನೊಂದಕ್ಕೆ ಸ್ಲೊವೇನಿಯಾದ ರಾಜಧಾನಿ ಲ್ಯೂಬ್ಲಿಯಾನ ತಲುಪಿತ್ತು. ಕಾರಿರುಳಿಗೆ ಸಂಗೀತವೆಂಬಂತೆ ಮಳೆ ಹನಿ ಜಿನುಗತೊಡಗಿತ್ತು. ಹಸಿದ ಹೊಟ್ಟೆಗೆ ಸಸ್ಯಾಹಾರಿ ಆಹಾರವೇ ಬೇಕಿತ್ತು! ಬ್ರೆಡ್ಡಿನ ನಡುವೆ ಸೊಪ್ಪು ಸದೆ ತುಂಬಿದ ಬರ್ಗರ್ ತಿಂದು, ಸಂಜೆ ಹಾಸ್ಟೆಲ್ಲಿನಲ್ಲಿ ತಂಗಿದೆವು.

ಮರುದಿನ ಬೆಳಿಗ್ಗೆ ಏಳು ಗಂಟೆಗೆ ಎದ್ದು, ತಿಂಡಿ ತೀರ್ಥಗಳನ್ನೆಲ್ಲ ಮುಗಿಸಿ, ತಯಾರಾಗಿ ನಿಂತಿದ್ದೆವು. ಸ್ವಲ್ಪ ಸಮಯಕ್ಕೆ ಕಪ್ಪು ಇನೋವಾ ಗಾಡಿ ಕಣ್ಣ ಮುಂದೆ ಬಂದು ನಿಂತಿತ್ತು. 40ರ ಹರಯದ ಚಾಲಕಿ, ‘ವೆಲ್‌ಕಮ್‌ ಟು ಸ್ಲೊವೇನಿಯಾ’ ಎನ್ನುತ್ತಾ ಪರಿಚಯ ಮಾಡಿಕೊಂಡಳು. ಏಳು ಜನರಲ್ಲಿ ಐದು ಜನ ಕ್ಯಾನ್ಸಲ್‌ಮಾಡಿದ್ದರಿಂದ ನಮ್ಮಿಬ್ಬರಿಗೆ ಪ್ರೈವೇಟ್ ಜರ್ನಿಯ ಭಾಗ್ಯ ದೊರೆತಿತ್ತು. (ಬ್ಲೆಡ್ ಸರೋವರ120ಕಿ.ಮೀ. ದೂರ ಇರುವುದರಿಂದ, ಕಾರಿನ ಜೊತೆಗೆ ಗೈಡೂ ಬರುವಂಥ ಪ್ಯಾಕೇಜ್ ಕೊಳ್ಳುವುದು ಉತ್ತಮ) ಆಕೆಗೋ, ಸಾಹಸದ ಹುಚ್ಚು. ಕಂಪ್ಯೂಟರ್ ಜೊತೆಗಿನ ಬದುಕು ಬೇಸತ್ತು, ಪರ್ವತಗಳನ್ನೇರುವುದು, ಪ್ಯಾರಾ ಗ್ಲೈಡಿಂಗ್ ಇತ್ಯಾದಿ ಹವ್ಯಾಸಗಳನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದಳು.

ಸುಮ್‌ ಜಲಪಾತ
ಸುಮ್‌ ಜಲಪಾತ

ಸುಂದರ ಕಣಿವೆ ವಿಂಟ್ಗಾರ್‌ ಗೋರ್ಜ್‌

ಲ್ಯೂಬ್ಲಿಯಾನದಿಂದ ನಾವು ಮೊದಲು ಹೋಗಬೇಕಾಗಿದ್ದು ವಿಂಟ್ಗಾರ್ ಗೋರ್ಜ್ ಎಂಬ ಕಣಿವೆಯ ಕಡೆಗೆ. ಪಶ್ಚಿಮದ ಕಡೆಗೆ 60 ಕಿ.ಮೀ. ಸಾಗಬೇಕಿತ್ತು. ಚಾಲಕಿಯ ಸಾಹಸಗಾಥೆಗಳನ್ನು ಅವಳ ತುಂಡು ತುಂಡು ಇಂಗ್ಲಿಷಿನಲ್ಲಿ ಕೇಳದೆ ವಿಧಿಯಿರಲಿಲ್ಲ. ಕಾರಿನಾಚೆಗಿನ ಸೌಂದರ್ಯ ಬರಸೆಳೆಯುವಂತಿತ್ತು. ಒಂದೆಡೆ, ಬೆಳೆದ ಸೂರ್ಯಕಾಂತಿ ಹೂಗಳೆಲ್ಲ ತಲೆದೂಗುವಂತೆ ಕಾಣುತಿತ್ತು. ಮತ್ತೊಂದೆಡೆ ಮಂಜು ಮುಸುಕಿದ ಆಲ್ಫಿನ್ ಪರ್ವತಶ್ರೇಣಿಗಳು, ಕವಿದ ಮೋಡಕ್ಕೆ ಸೆಡ್ಡು ಹೊಡೆದಂತೆ ಭಾಸವಾಗುತ್ತಿತ್ತು. ನಿರ್ಜನ ಕಾಡೊಂದರೊಳಗೆ ಕಾರು ಚಲಿಸತೊಡಗಿತ್ತು.

ಅದೊಂದು ದಟ್ಟ ಕಾಡು. ಹಸಿರ ನಡುವಲ್ಲಿ ಕಂಗೊಳಿಸುವ ಹಾಲು ಹಾದಿಯ ಜಲಪಾತಕ್ಕೆ ಸುಮ್‌ ಎಂದು ಹೆಸರಿಡಲಾಗಿದೆ. ಅಲ್ಲಿಯ ಭಾಷೆಯಲ್ಲಿ ‘ಸುಮ್’ ಎಂದರೆ ಸದ್ದು ಎಂದರ್ಥ. ಅಪ್ಪಳಿಸುವ ನೀರಿನ ಸದ್ದಿನಲ್ಲಿ ಯಾರ ಮಾತೂ ಕೇಳಿಸದು. ಇನ್ನೊಂದು ವಿಶೇಷವೆಂದರೆ ಈ ಜಲಪಾತ ತಲುಪಲು 1890ನೇ ಇಸವಿಯ ತನಕ ಹಾದಿಯೇ ಇರಲಿಲ್ಲ. ನಂತರ ಕಣಿವೆಯುದ್ದಕ್ಕೂ ಮರದ ಹಾದಿಯನ್ನು ನಿರ್ಮಿಸಲಾಯಿತು. ಟ್ರೈಪಾಡ್ ನಿಲ್ಲಿಸಿ, ಜಲಪಾತದ ವಿಡಿಯೊ ಮಾಡಬೇಕೆನ್ನುವಷ್ಟರಲ್ಲಿ, ದೊಡ್ಡ ದೊಡ್ಡ ಮಳೆಯ ಹನಿಗಳು ಜಿನುಗತೊಡಗಿದವು. ಯೂರೋಪಿನ ಕಾಡುಗಳಲ್ಲಿ, ಮಳೆ ಬೀಳುತ್ತಿದ್ದಂತೆಯೇ ಚಳಿ ಹೆಚ್ಚಾಗತೊಡಗುತ್ತದೆ. ತಾಪಮಾನ ಸೊನ್ನೆ ತಲುಪಿತ್ತು. ಗಡಗಡನೆ ನಡುಗುತ್ತ, ಕಣಿವೆಯ ಹಾದಿ ಹಿಡಿದೆವು.

ರಡೊವ್ನಾ ನದಿಯ ಕಿನಾರೆಯಲ್ಲಿ ಸಾಗುವ ಈ ಕಣಿವೆಗೆ, ಬೇಸಿಗೆಯಲ್ಲಿ ಜನಸಾಗರವೇ ಹರಿದು ಬರುತ್ತದೆ. 1.6 ಕಿ.ಮೀ. ಉದ್ದವಿರುವ ಈ ಕಣಿವೆ, ಅಲ್ಲಲ್ಲಿ ಕಿರಿದಾದ ಹಾದಿಗಳನ್ನು ಸೃಷ್ಟಿಸಿ ನಮ್ಮನ್ನು ಸಾಹಸದ ಹೊಸ್ತಿಲಲ್ಲಿ ನಿಲ್ಲಿಸುತ್ತದೆ. ಹೆಜ್ಜೆ ಹೆಜ್ಜೆಗೂ ಹರಿವ ಝರಿಗಳು ಮತ್ತು ಬೀಳುವ ಜಲಪಾತಗಳನ್ನು ನೋಡುತ್ತಾ ಸಾಗುತ್ತಿದ್ದರೆ, ಬೀಳುವ ಆತಂಕವೇ ಇಲ್ಲ. ತಿಳಿನೀರಿಗೆ ಮುಖವೊಡ್ಡಿ ನಿಂತರೆ ಕನ್ನಡಿಯಂತೆ ಮುಖವನ್ನು ಪ್ರತಿಫಲಿಸಬಲ್ಲದು. ಜಿನುಗೋ ಮಳೆಗೆ, ಕೊಡೆ ಹಿಡಿದು, ತೀವ್ರ ಚಳಿಗೆ, ಜಾಕೆಟ್ ಧರಿಸಿ ಸಾಗುತ್ತಿದ್ದರೆ, ಆಗಾಗ ಜೋರಾಗಿ ಬೀಸುವ ತಣ್ಣನೆ ಗಾಳಿ, ಮುಖವನ್ನೇ ಮಂಜುಗಡ್ಡೆಯಾಗಿಸೀತು. ನದಿಯ ಕಿನಾರೆಯಲ್ಲಿ ಜೋಡಿಸಿಟ್ಟ ಕಲ್ಲಿನ ಆಕೃತಿಗಳು, ಲಗೋರಿಯ ನೆನಪು ತರಿಸುವುದಂತೂ ಖಚಿತ. ಐಸ್ ಏಜ್‌ನ ನಂತರ, ಮಂಜುಗಡ್ಡೆ ಕರಗುತ್ತ ಕಣಿವೆಯಾಗಿದ್ದು, ಹಾದಿಯಲ್ಲೇ ರೈಲು ಮಾರ್ಗವೊಂದು ಹಾದು ಹೋಗಿರುವುದು, ನೋಟಕ್ಕೆ ಹೊಸ ಮೆರುಗು ನೀಡಬಲ್ಲದು.

ಹರಿವ ಜಲಧಾರೆಯ ನೆತ್ತಿಮೇಲಿನ ರೈಲ್ವೆ ಬ್ರಿಡ್ಜ್‌
ಹರಿವ ಜಲಧಾರೆಯ ನೆತ್ತಿಮೇಲಿನ ರೈಲ್ವೆ ಬ್ರಿಡ್ಜ್‌

ಬ್ಲೆಡ್ ಸರೋವರ

ಕಣಿವೆಯಾಚೆ, ಹೊಸ ಕಥೆಗಳೊಂದಿಗೆ ಚಾಲಕಿ ತಯಾರಾಗಿ ನಿಂತಿದ್ದಳು. ಸ್ಲೊವೇನಿಯಾ ದೇಶಕ್ಕೆ ಕಾಲಿಟ್ಟು, ಅಲ್ಲಿಯ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಪಾಕಿಸ್ತಾನಿಗಳಿಂದ ಆರಂಭವಾಗಿ, ಏಷ್ಯನ್ನರೆಲ್ಲರ ಮೇಲೂ ಸಾಮೂಹಿಕವಾಗಿ ಆಕೆಗೆ ಕೋಪವಿತ್ತು. ಆದರೆ ಭಾಷೆಯ ಅಂತರದ ನಡುವೆ ಚರ್ಚೆಗಿಳಿಯುವ ಸಮಯವೂ ಅದಾಗಿರಲಿಲ್ಲ. ದೂರ ದೂರದಲ್ಲೊಂದು ಸರೋವರ. ಸರೋವರದ ನಡುವೆ ತೇಲಿ ಸಾಗುತ್ತಿರುವ ಪುಟ್ಟ ಪುಟ್ಟ ದೋಣಿಗಳು. ನಟ್ಟ ನಡುವಲ್ಲಿ ಒಂದು ಚರ್ಚು. ಸುತ್ತ ಹಚ್ಚ ಹಸಿರು. ಹಸಿರಿನಾಚೆ ನೀಲಿ ಪರ್ವತಗಳು. ಮತ್ತಷ್ಟು ನೀಲಿ ಮುಗಿಲು. ನೀರಿಗೆ ಮುಗಿಲಿನ ರಂಗು. ಭೂರಮೆಗೆ ಕಾನನದ ರಂಗು. ಅದೊಂದು ಸಗ್ಗವೀಡು.

ದಡದಿಂದ ಚರ್ಚಿಗೆ ಸಾಗಲು ಒಂದಷ್ಟು ದೋಣಿಗಳಿವೆ. ತಲತಲಾಂತರಗಳಿಂದ ಒಂದೇ ಕುಟುಂಬ ಅದರ ಉಸ್ತುವಾರಿ ವಹಿಸಿಕೊಂಡಿದೆ. ದಡದ ಸುತ್ತಲೂ, ವಯಲಿನ್, ಕೊಳಲು, ಹಾಡು- ಹೀಗೆ ಹತ್ತು ಹಲವು ಸ್ವಯಂಪ್ರೇರಿತ ಮನರಂಜನೆಗಳನ್ನು ಕಾಣಬಹುದು. ನಾವಿಕನ ಮೋಜಿನ ಆಟಗಳನ್ನು ನೋಡುತ್ತಾ ಸಾಗುತ್ತಿದ್ದರೆ, ಚರ್ಚು ತಲುಪಿದ್ದೇ ತಿಳಿಯದು. ಅದರ ಹೆಸರು ಮೇರಿ ಕ್ವೀನ್ ಚರ್ಚ್. 15ನೇ ಶತಮಾನದಲ್ಲೇ ನವೀಕರಣಗೊಂಡ ಈ ಚರ್ಚು, ಭೂಕಂಪ, ಪ್ರವಾಹದಂತಹ ನೈಸರ್ಗಿಕ ವಿಕೋಪಗಳಿಗೆ ಸಿಲುಕುತ್ತ, ಮರು ನಿರ್ಮಾಣಗೊಳ್ಳುತ್ತಲೇ ಬಂದಿದೆ. ಹಲವಾರು ರಾಜಮನೆತನಗಳಿಗೂ, ಹಲವಾರು ರಾಷ್ಟ್ರೀಯ ಸಮಾವೇಶಗಳಿಗೂ ಸಾಕ್ಷಿಯಾದ ಈ ಚರ್ಚಿಗೆ ತನ್ನದೇ ಆದ ಇತಿಹಾಸವಿದೆ.

ಇಲ್ಲಿ ನಡೆಯುವ ಮದುವೆಗಳಿಂದಲೇ ಪ್ರಸಿದ್ಧವಾಗಿರುವ ಈ ಚರ್ಚನ್ನು ತಲುಪಲು ಬ್ಲೆಡ್ ಸರೋವರದಿಂದ 99 ಮೆಟ್ಟಿಲುಗಳಿವೆ. ವರ ತನ್ನ ವಧುವನ್ನು ಹೊತ್ತುಕೊಂಡು, 99 ಮೆಟ್ಟಿಲು ಹತ್ತಿ ಚರ್ಚಿಗೆ ತಲುಪಿ, ಅಲ್ಲಿಯ ಘಂಟೆಯನ್ನು ಬಾರಿಸಿದರೆ, ಆ ಜೋಡಿಯ ದಾಂಪತ್ಯ ಸುಗಮವಾಗಿರುವುದು ಎಂಬ ನಂಬಿಕೆಯೊಂದು ಬೇರೂರಿದೆ. ಇದೆಲ್ಲ ನೋಡಿದ ಮೇಲೆ, ‘ಮುಂಗಾರು ಮಳೆ’ ಸಿನಿಮಾದಲ್ಲಿ, ಪೂಜಾಳನ್ನು ಹೊತ್ತು ಸಾಗುವ ಗಣೇಶನ ನೆನಪಾಗುವುದಂತೂ ನಿಜ. ಈ ಪ್ರದೇಶಕ್ಕೆ ಕಾಲಿಟ್ಟಿದ್ದ ಡೊನಾಲ್ಡ್ ಟ್ರಂಪ್, ಸರೋವರದ ಸುತ್ತಲಿರುವ ಮನೆಗಳಲ್ಲಿ ಒಂದನ್ನು ಖರೀದಿಸಲು ಇಚ್ಛಿಸಿದ್ದು, ಆದರೆ ದೇಶದ ಪ್ರಧಾನಿ ಅದಕ್ಕೆ ನಿರಾಕರಿಸಿದ್ದು, ಹೀಗೆ ಹತ್ತು ಹಲವು ಕಥೆಗಳನ್ನು ಹೇಳುತ್ತ ಸಾಗುತ್ತಿದ್ದ ನಮ್ಮ ಚಾಲಕಿಯನ್ನು, ಎಷ್ಟು ನಂಬುವುದು ಎಂಬುದು ಪ್ರಶ್ನೆಯಾಗಿಯೇ ಉಳಿದಿತ್ತು.

ರಾಜಧಾನಿಯಲ್ಲೊಂದು ಸುತ್ತು

ಸಾಹಸಗಳನ್ನೆಲ್ಲ ಮುಗಿಸಿ, ಮುಸ್ಸಂಜೆಗೆ ಲ್ಯೂಬ್ಲಿಯಾನ ನಗರಕ್ಕೆ ಬಂದು ಸೇರಿದ್ದವು. ಪುಟ್ಟ ನಗರವಾದರೂ, ಸ್ವಚ್ಛ ಸುಂದರ ನಗರವದು. ನಗರದ ನಡುವೆ ಲ್ಯೂಬ್ಲಿಯಾನಿಕಾ ನದಿ ಹರಿದು ಹೋಗುತ್ತದೆ. ನದಿಯ ಕಿನಾರೆಯಲ್ಲಿ ನಡೆದು ಸಾಗಿದರೆ, ಪುಟ್ಟ ಪುಟ್ಟ ರೆಸ್ಟೊರೆಂಟ್‌ಗಳು ಕಾಣಸಿಗುತ್ತವೆ.ದೋಣಿಯಲ್ಲೇ ನಗರ ವೀಕ್ಷಣೆ ಮಾಡಬಹುದು. ದಡದಲ್ಲಿ ಕುಳಿತು, ವಿಹರಿಸುವ ಹಲವು ಪ್ರವಾಸಿಗರು, ವೈನ್ ಸವಿಯುತ್ತ ತಮ್ಮದೇ ಲೋಕದಲ್ಲಿ ಮುಳುಗಿಹೋದ ನವ ಜೋಡಿಗಳು, ವಯಲಿನ್ ಹಿಡಿದು ಹಾಡುತ್ತಿದ್ದ ಅನಾಮಿಕ ಚೆಲುವೆ... ಸಂಜೆಗೆ ರಂಗೇರಿಸಲು ಇನ್ನೇನು ಬೇಕು?

ಅಲ್ಲಲ್ಲಿ ಪುಟ್ಟ ಪುಟ್ಟ ಸೇತುವೆಗಳನ್ನು ಕಟ್ಟಲಾಗಿದೆ. ಇರುಳು ಕವಿಯುತ್ತಿದ್ದಂತೆಯೇ, ಸೇತುವೆಯ ಮೇಲೆ ದೀಪಗಳ ಅಲಂಕಾರ. ಸಂಗೀತ ಮೊಳಗುತ್ತದೆ. ಪ್ರೇಮಮಯ ಸಂಜೆಯಿಲ್ಲಿ ಪಾರ್ಟಿಯ ಇರುಳಾಗಿ ಪರಿವರ್ತನೆಯಾಗುತ್ತದೆ. ಪ್ಯಾರಿಸ್, ಇಟಲಿಯಲ್ಲೆಲ್ಲ ಹೆಚ್ಚು ಭಾರತೀಯರು ಕಾಣಸಿಗುತ್ತಾರೆ. ಆದರೆ ಇಲ್ಲಿ ಮಾತ್ರ ಭಾರತೀಯರ ಸುಳಿವೂ ಇಲ್ಲದೆ, ಹೊಸ ನಾಡಿನಲ್ಲಿದ್ದ ಅನುಭವವಾಗುತ್ತದೆ. ತಾಳ್ಮೆ, ಸಂಯಮ, ಸರಳ ಜೀವನ ಇಲ್ಲಿಯ ಜನರ ಮೂಲ ಮಂತ್ರ. ನದಿಯ ದಡದಲ್ಲಿ ಕುಳಿತು ಸೇತುವೆಯ ದೀಪಗಳ ಎಣಿಸುತ್ತ ಒಂದಷ್ಟು ಹಾಡು ಕೇಳಿ ದಿನಕ್ಕೆ ಅಂತ್ಯ ಬರೆದೆವು.

ಕಲಾವಿದನ ಕುಂಚಕ್ಕೆ ಕ್ಯಾನ್ವಾಸ್‌ ಆಗಿರುವ ಮಟೆಲ್ಕೋವದ ಗೋಡೆ
ಕಲಾವಿದನ ಕುಂಚಕ್ಕೆ ಕ್ಯಾನ್ವಾಸ್‌ ಆಗಿರುವ ಮಟೆಲ್ಕೋವದ ಗೋಡೆ

ಕುಂಚಪ್ರೇಮಿಗಳ ನಲ್ದಾಣ ಮೆಟೆಲ್ಕೋವ

ಪ್ರವಾಸದ ಒಂದು ದಿನ ಸೂರ್ಯೋದಯಕ್ಕೆ ಮುನ್ನವೇ ಎದ್ದು, ನಗರದ ನಡುವಿನ ಕೋಟೆಗೆ ಲಗ್ಗೆಯಿಟ್ಟೆವು. ನೋಟವೇ ದಣಿಯುವಷ್ಟು ಎತ್ತರವಿರುವ ಈ ಕೋಟೆಯ ಮೇಲಿಂದ ಪುರಾತನ ನಗರವನ್ನು ನೋಡುವುದೇ ಸೊಬಗು. ಕೆಂಪು ಮನೆಗಳ ಮೇಲೆ ಮೋಡ ಕವಿದ ಆಕಾಶ. ಎಲ್ಲ ನೋಟಗಳನ್ನೂ ಕಣ್ತುಂಬಿಕೊಂಡು, ಮೆಟೆಲ್ಕೋವಗೆ ತಲುಪಿದೆವು.

ಕುಂಚಕ್ಕೆ ಹೆಚ್ಚು ಮಹತ್ವ ನೀಡುವ ಯೂರೋಪಿನ ಸಂಸ್ಕೃತಿಗೆ ಈ ನಗರವೇನೂಹೊರತಲ್ಲ. ಮೆಟೆಲ್ಕೋವ ಕಲಾವಿದರಿಗೆ ಹೇಳಿ ಮಾಡಿಸಿದ ಸ್ಥಳ. ಅರ್ಧಕ್ಕೆ ಕಟ್ಟಿ ನಿಲ್ಲಿಸಿದ ಮನೆಗಳನ್ನೆಲ್ಲ ಕಲಾವಿದರಿಗೆ ನೀಡಲಾಗಿತ್ತು.

ಅವರೋ, ಗೋಡೆಗಳ ತುಂಬೆಲ್ಲ ದೃಶ್ಯ ಚಿತ್ತಾರವನ್ನೇ ಮೂಡಿಸಿದ್ದರು. ಹಾರುವ ಚಿಟ್ಟೆಗಳು, ಬಣ್ಣದ ಬಣ್ಣದ ಮಾಡರ್ನ್ ಆರ್ಟ್ ಕಲಾಕೃತಿಗಳು, ಪ್ರಾಣಿ ಪಕ್ಷಿಗಳು, ಅರ್ಥಕ್ಕೂ ನಿಲುಕದ ಭಾವುಕ ಚಿತ್ರಗಳು- ಹೀಗೆ, ಕಲೆಯನ್ನರಸಿ ಬಂದವರಿಗೆ ಇಲ್ಲಿ ದಣಿವು ತಿಳಿಯದು. ಬಣ್ಣಗಳ ನಡುವೆ, ಬಣ್ಣವಾಗಿ, ಈ ಸಣ್ಣ ನಗರದ ಸೊಬಗಿಗೆ ಮರುಳಾಗದೇ ಇರಲು ಸಾಧ್ಯವೇ?

ಲ್ಯೂಬ್ಲಿಯಾನಿಕಾ ನದಿಯ ನೋಟ
ಲ್ಯೂಬ್ಲಿಯಾನಿಕಾ ನದಿಯ ನೋಟ
ಸುಮ್‌ ಜಲಪಾತಕ್ಕೆ ಹೋಗಲು ಕಟ್ಟಿದ ಮರದ ಸೇತುವೆ
ಸುಮ್‌ ಜಲಪಾತಕ್ಕೆ ಹೋಗಲು ಕಟ್ಟಿದ ಮರದ ಸೇತುವೆ
ಲ್ಯೂಬ್ಲಿಯಾನ ನಗರದ ಒಂದು ನೋಟ
ಲ್ಯೂಬ್ಲಿಯಾನ ನಗರದ ಒಂದು ನೋಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT