ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೋ ನೋಡಿ ರಾಮದಾಸರ ಭದ್ರಾಚಲಂ

Last Updated 7 ನವೆಂಬರ್ 2018, 19:30 IST
ಅಕ್ಷರ ಗಾತ್ರ

‘ರಾಮದಾಸರನ್ನು ಸೆರೆಮನೆಯಿಂದ ಬಿಡಿಸಲು ಸಾಕ್ಷಾತ್ ಶ್ರೀರಾಮಚಂದ್ರನೇ ತಮ್ಮ ಲಕ್ಷ್ಮಣದ ಜೊತೆಗೆ ಬಂದುಬಿಟ್ಟ. ಅವತ್ತು ಭದ್ರಾಚಲಂ ದೇವಸ್ಥಾನದಲ್ಲಿ ರಾಮ-ಲಕ್ಷ್ಮಣರ ವಿಗ್ರಹಗಳು ಕ್ಷತ್ರಿಯ ರಾಜಕುಮಾರರಂತೆ ಕಂಗೊಳಿಸಿದ್ದವು’.

ಚಿಕ್ಕಂದಿನಲ್ಲಿ ಅಜ್ಜಿ ಹೇಳುತ್ತಿದ್ದ ಕಥೆಗಳಲ್ಲಿ ಅನೇಕ ಬಾರಿ ಭದ್ರಾಚಲಂ ರಾಮದಾಸರ ಪ್ರಸಂಗ ಬಂದುಹೋಗಿತ್ತು. ಮನಸ್ಸಿನಲ್ಲಿ ಅಚ್ಚಳಿಯದಂತೆ ಕೂತಿದ್ದ ರಾಮದಾಸರ ಜೀವನ, ಸಂಘರ್ಷದ ಬದುಕು, ಅಚಲ ನಂಬಿಕೆ, ಜೀವನಾನುಭದ ಹದಪಾಕದಲ್ಲಿ ಮೇಳೈಸಿದ ಅವರ ಸಾಹಿತ್ಯ. ಹೀಗೆ ರಾಮದಾಸರು ಮತ್ತು ಅವರ ಸಾಧನಾಕ್ಷೇತ್ರವಾದ ಭದ್ರಾಚಲಂ ನನ್ನ ಭಾವಕೋಶದಲ್ಲಿ ಕಾವು ಪಡೆದು ಬೆಳೆಯುತ್ತಲೇ ಇತ್ತು.

‘ಮಕ್ಕಳಿಗೆ ಹೇಗೂ ದಸರಾ ರಜೆ. ಮನೆಮಂದಿಯೆಲ್ಲರೂ ಒಂದು ವಾರದ ಪ್ರವಾಸ ಹೋಗಿ ಬರೋಣ’ ಎಂದು ಪ್ಲ್ಯಾನ್ ಮಾಡುತ್ತಿದ್ದಾಗ ಹೊಳೆದ ಮೊದಲ ಹೆಸರೇ ಭದ್ರಾಚಲಂ. ನಮ್ಮ ತಂಡದಲ್ಲಿ ಎರಡರಿಂದ ಐದು ವರ್ಷದ ಆರು ಮಕ್ಕಳೂ ಸೇರಿ ಒಟ್ಟು 20 ಜನರಿದ್ದರು. ಎಲ್ಲ ವಯೋಮಾನದವರಿಗೂ ಆಸಕ್ತಿ ಮೂಡುವಂತೆ ಪ್ರವಾಸ ಪ್ಲ್ಯಾನ್ ಮಾಡಬೇಕಿತ್ತು. ಒಂದು ಸಲ ಇಂಟರ್ನೆಟ್‌ ಜಾಲಾಡಿದೆ. ಹೆಚ್ಚೇನೂ ಸಹಾಯವಾಗಲಿಲ್ಲ.

ರಾಜಮಂಡ್ರಿಯಿಂದ ಭದ್ರಾಚಲಂಗೆ ಹೊರಡುವ ಮದುವೆ ದಿಬ್ಬಣದ ಪ್ರಯಾಣದಲ್ಲಿಯೇ ದೃಶ್ಯಗಳನ್ನು ಪೋಣಿಸಿರುವ ತೆಲುಗು ಚಿತ್ರ ‘ಗೋದಾವರಿ’ ನೆನಪಾಯಿತು. ಬೆಂಗಳೂರಿನಿಂದ ರಾಜಮಂಡ್ರಿಗೆ ‘ಪ್ರಶಾಂತಿ ಎಕ್ಸ್‌ಪ್ರೆಸ್‌’ಗೆ ಟಿಕೆಟ್‌ಗಳನ್ನು ಬುಕ್ ಮಾಡಿದೆ. ಒಂದು ದಿನ ರಾಜಮಂಡ್ರಿಯಲ್ಲಿ ಉಳಿದು, ಮಾರನೇ ದಿನ ಮುಂಜಾನೆ ಭದ್ರಾಚಲಂಗೆ ದೋಣಿಯಲ್ಲಿ ಹೋಗುವುದು, ಭದ್ರಾಚಲಂನಲ್ಲಿ ಎರಡು ದಿನ ಉಳಿದು ಗುಂತಕಲ್ ಮಾರ್ಗವಾಗಿ ದೊಡ್ಡಬಳ್ಳಾಪುರ ತಲುಪುವುದು ಎನ್ನುವ ಪ್ಲಾನ್‌ಗೆ ಪ್ರವಾಸ ಹೊರಟಿದ್ದ ಸರ್ವಸದಸ್ಯರ ಅನುಮೋದನೆ ಸಿಕ್ಕಿತು.

ದೋಣಿಯಲ್ಲಿ ಮೋಜು
ದೋಣಿಯಲ್ಲಿ ಮೋಜು

ಶುರುವಾಯ್ತು ಪಯಣ

ಅ.14ರಂದು ನಮ್ಮ ಪ್ರವಾಸದ ಮುಖ್ಯ ಭಾಗ ಆರಂಭವಾಗುವ ಥ್ರಿಲ್ ಎಲ್ಲರಲ್ಲಿಯೂ ಇತ್ತು. ಮಕ್ಕಳಂತೂ ‘ದೋಣಿಯಲ್ಲಿ ಹಾಗಿರುತ್ತೆ, ಹೀಗಿರುತ್ತೆ’ ಎಂದೆಲ್ಲಾ ಹರಟೆ ಕೊಚ್ಚುತ್ತಿದ್ದರು. ಭದ್ರಾಚಲಂನಿಂದ ರಾಜಮಂಡ್ರಿಗೆ ಪ್ರತಿ ಪ್ರಯಾಣಿಕರಿಗೆ ತಲಾ ₹1600 ಟಿಕೆಟ್ ದರ ಇತ್ತು. ರಾಜಮಂಡ್ರಿಯಿಂದ ಪುರುಷೋತ್ತಮಪುರಂ ಬೋಟ್ ಪಾಯಿಂಟ್ ಎನ್ನುವ ಸ್ಥಳಕ್ಕೆ ಬಸ್‌, ಅಲ್ಲಿಂದ ಪೇರಂಟಪಲ್ಲಿಯವರೆಗೆ ಒಂದು ಬೋಟ್, ಪೇರಂಟಪಲ್ಲಿಯಿಂದ ಪೋಚವರಂವರೆಗೆ ಮತ್ತೊಂದು ಬೋಟ್, ಅಲ್ಲಿಂದ ಭದ್ರಾಚಲಂಗೆ ರಸ್ತೆ ಮಾರ್ಗದಲ್ಲಿ ಪ್ರಯಾಣ.

ಆಂಧ್ರಪ್ರದೇಶ ಸರ್ಕಾರವು ಗೋದಾವರಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಪೋಲಾವರಂ ಜಲಾಶಯದ ಕಾಮಗಾರಿ ಭರದಿಂದ ಸಾಗುತ್ತಿದೆ. ಜಲಾಶಯ ಪೂರ್ಣಗೊಂಡ ನಂತರ ರಾಜಮಂಡ್ರಿ- ಭದ್ರಾಚಲಂ ದೋಣಿಯಾನದ ಸುಖ ಮರೀಚಿಕೆ. ಹೋಗಬೇಕು ಎನ್ನುವ ಆಸೆ ಇದ್ದರೆ ಶೀಘ್ರ ಹೊರಟುಬಿಡಿ.

ಪೇರಂಟಪಲ್ಲಿ ರಾಮಕೃಷ್ಣ ಮುನಿ ಆಶ್ರಮ ಸಂದರ್ಶಿಸಿ ಹಿಂದಿರುಗುತ್ತಿರುವ ಪ್ರವಾಸಿಗರು
ಪೇರಂಟಪಲ್ಲಿ ರಾಮಕೃಷ್ಣ ಮುನಿ ಆಶ್ರಮ ಸಂದರ್ಶಿಸಿ ಹಿಂದಿರುಗುತ್ತಿರುವ ಪ್ರವಾಸಿಗರು

ಭದ್ರಾಚಲಂ ಕಡೆಗೆ ಹೊರಡುವ ದೋಣಿ ಏರಿದ ನಂತರದ ಅನುಭವಗಳು ಚಂದಕ್ಕಿಂತ ಚಂದ. ಗೋದಾವರಿ ನೀರು ಮುಟ್ಟಿ ಹಾಯ್ದು ಬರುತ್ತಿದ್ದ ತಂಗಾಳಿ ನಮ್ಮ ಆಯಾಸವನ್ನೂ ಅಪಹರಿಸಿತು. ದೋಣಿಯಲ್ಲಿ ಇಡ್ಲಿ, ವಡೆ, ಉಪ್ಪಿಟ್ಟಿನ ಜೊತೆಗೆ ಕಾಫಿಯ ಸಮಾರಾಧನೆ. ತಿಂಡಿ ತಿಂದು ಡೆಕ್ ಮೇಲೆ ಹೋದರೆ ಬಗೆಬಗೆ ಆಟಗಳ ಮನರಂಜನೆ. ವಿವಿಧ ವಯೋಮಾನದವರನ್ನು ಪ್ರತ್ಯೇಕವಾಗಿ ವೇದಿಕೆ ಮೇಲೆ ಕರೆದು ತಮಾಷೆ ಪ್ರಶ್ನೋತ್ತರಗಳು, ಡಾನ್ಸ್‌, ಹಾಡು... ಹೀಗೆ ನದಿಯ ಪ್ರಯಾಣಕ್ಕೆ ಮೋಜಿನ ಜೊತೆ ಇತ್ತು. ನನ್ನ ಅಪ್ಪ–ಅಮ್ಮ, ಅತ್ತೆ–ಮಾವನೂ ಬಂದಂತೆ ಡಾನ್ಸ್ ಮಾಡಿದರು ಅನ್ನಿ. ಹೆಂಡತಿ ಫ್ಯಾಷನ್‌ ಶೋದಲ್ಲಿ ಪಾಲ್ಗೊಂಡಿದ್ದಳು. ಮಕ್ಕಳಂತೂ ಅವರದೇ ಲೋಕದಲ್ಲಿ ಮುಳುಗಿ ಹೋಗಿದ್ದರು.

ನಾನು ಡೆಕ್‌ನಿಂದ ಕೆಳಗಿಳಿದು ದೋಣಿಯ ಬದಿಯಲ್ಲಿ ಕಾಲು ಇಳಿಬಿಟ್ಟು ಕುಳಿತುಕೊಂಡೆ. ಕಾಡಿನ ಮಧ್ಯೆ ಸಾಗುವ ನದಿಯ ಸೊಗಸನ್ನು ಮೌನವಾಗಿ ಆಸ್ವಾದಿಸಿದ ಕ್ಷಣಗಳು ಮುದನೀಡಿದವು. ಗೋದಾವರಿ ನದಿಯ ಎದುರು ಪ್ರವಾಹದಲ್ಲಿ ನಿಧಾನವಾಗಿ ಸಾಗುವ ದೋಣಿ, ಹಿಂದೋಡುವ ಪರ್ವತಗಳು, ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಹಸಿರು ಕಾಡು, ಮೋಡದೊಳಗೆ ಅವಿತು ಕಣ್ಮುಚ್ಚಾಲೆ ಆಡುವ ಸೂರ್ಯ, ಯಾವಾಗಲಾದರೊಮ್ಮೆ ಮೇಲೆದ್ದು ಚಿಮ್ಮಿ ಬಟ್ಟೆ ತೋಯಿಸುವ ಅಲೆಗಳು ವಾವ್…

ಪೊಚವರಂನಲ್ಲಿ ಕುಡಿದ ಟೀ ‘ನ ಭೂತೋ ನ ಭವಿಷ್ಯತ್’ ಎನ್ನುವಷ್ಟು ಅದ್ಭುತವಾಗಿತ್ತು. ಅಲ್ಲಿಂದ ದಟ್ಟಕಾಡಿನಲ್ಲಿ 75 ಕಿ.ಮೀ. ಮಾರ್ಗ ಸವೆಸಿದೆವು. ಹಾದಿಯುದ್ದಕ್ಕೂ ಗೋದಾವರಿಯ ವೈಯ್ಯಾರ, ಎತ್ತರದ ಮರಗಳು, ಅಪರಿಚಿತ ಹೂಗಳ ಸುವಾಸನೆ, ಪಕ್ಷಿಗಳ ಹಾಡು, ಬಿಳಿದಾವರೆ ತುಂಬಿದ ಕೊಳಗಳು ಮನಕ್ಕೆ ಮುದ ನೀಡುತ್ತವೆ.‌

‘ಭದ್ರಾದ್ರಿ ರಾಮಯ್ಯ ಪಾದಾಲಕಿ ಗೋವಿಂದೋ ಗೋವಿಂದ’ ಎಂದು ಚಾಲಕ ಕೂಗಿದಾಗ ನಾವೆಲ್ಲರೂ ಭದ್ರಾಚಲಂಗೆ ಬಂದಿದ್ದೇವೆ ಎಂದು ಅರಿವಾಯಿತು.

ಬೆಳಿಗ್ಗೆಯಿಂದ ಒಂದೇ ಸಮನೆ ಓಡಾಡಿ ದಣಿದಿದ್ದ ದೇಹಕ್ಕೆ ಗುಡ್ಡದ ಮೇಲೆ ಕಂಡ ಶಂಖ, ಚಕ್ರಗಳ ಮಧ್ಯೆ ಮೂರು ನಾಮವಿದ್ದ ವಿದ್ಯುತ್ ದೀಪಗಳ ದರ್ಶನ ಹೊಸ ಹುರುಪು ನೀಡಿತು.

ಭದ್ರಾಚಲಂನಲ್ಲಿರುವ ಸೀತಾರಾಮ ಮಂದಿರ
ಭದ್ರಾಚಲಂನಲ್ಲಿರುವ ಸೀತಾರಾಮ ಮಂದಿರ

ಭದ್ರಾಚಲಂಗೆ ಹೋಗುವುದು ಹೀಗೆ…

ಭದ್ರಾಚಲಂಗೆ ಬೆಂಗಳೂರಿನಿಂದ ನೇರ ರೈಲು ಸಂಪರ್ಕ ಇಲ್ಲ. ಬೆಂಗಳೂರಿನಿಂದ ಗುಂತಕಲ್‌ಗೆ ಸಾಕಷ್ಟು ರೈಲುಗಳಿವೆ. ಗುಂತಕಲ್‌ನಿಂದ ಪ್ರತಿದಿನ ರಾತ್ರಿ 9.45ಕ್ಕೆ ಹೊರಡುವ ಮುನುಗೂರು ಎಕ್ಸ್‌ಪ್ರೆಸ್‌ ಹತ್ತಿದರೆ ಮಾರನೇ ದಿನ ಬೆಳಿಗ್ಗೆ 11:20ಕ್ಕೆ ಭದ್ರಾಚಲಂ ರೋಡ್ (ಕೊತ್ತಗುಡಂ) ತಲುಪುತ್ತೇವೆ. ಅಲ್ಲಿಂದ ಭದ್ರಾಚಲಂಗೆ ಬಸ್‌ನಲ್ಲಿ ಒಂದು ತಾಸು ಪ್ರಯಾಣ. ಈ ಮಾರ್ಗ ಹೊರತುಪಡಿಸಿದರೆ ಕಾಚಿಗುಡ ಅಥವಾ ಸಿಕಿಂದ್ರಾಬಾದ್ ಮೂಲಕ ಭದ್ರಾಚಲಂಗೆ ಮೂರು ರೈಲುಗಳು ಸಂಚರಿಸುತ್ತವೆ.

ನನಗೇನೋ ಗುಂತಕಲ್ ಮೂಲಕ ತೆರಳುವುದು ಉತ್ತಮ ಆಯ್ಕೆ ಎನಿಸುತ್ತದೆ. ಭದ್ರಾಚಲಂಗೆ ಹೋದ ನಂತರ ಗೋದಾವರಿ ನದಿಯಲ್ಲಿ ದೋಣಿ ಮೂಲಕ ಪಾಪಿಕೊಂಡಲು ಮತ್ತು ಇತರ ಸ್ಥಳಗಳಿಗೆ ಭೇಟಿ ನೀಡಬಹುದು. ದೋಣಿ ಮೂಲಕ ಭದ್ರಾಚಲಂಗೆ ಹೋಗಲು ಇಷ್ಟಪಡುವವರು ತುಸು ಬಳಸು ದಾರಿಯಾದರೂ ರಾಜಮಂಡ್ರಿಯ ಮೂಲಕ ಹೋಗುವ ಮಾರ್ಗ ಆಯ್ಕೆ ಮಾಡಿಕೊಳ್ಳುವುದು ಒಳಿತು. ಬೆಂಗಳೂರಿನಿಂದ ರಾಜಮಂಡ್ರಿಗೆ ಸಾಕಷ್ಟು ರೈಲುಗಳಿವೆ. ಬೆಳಿಗ್ಗೆ 11 ಗಂಟೆಗೆ ಬೆಂಗಳೂರು ಬಿಟ್ಟು ಮಾರನೇ ದಿನ ಬೆಳಿಗ್ಗೆ 5 ಗಂಟೆಗೆ ರಾಜಮಂಡ್ರಿ ತಲುಪುವ ‘ಶೇಷಾದ್ರಿ ಎಕ್ಸ್‌ಪ್ರೆಸ್‌’ ಉತ್ತಮ ಆಯ್ಕೆ. ರಾಜಮಂಡ್ರಿಯಿಂದ ಭದ್ರಾಚಲಂಗೆ ದೋಣಿ ಮಾರ್ಗದಲ್ಲಿ ಹೊರಡುವ ಯಾತ್ರಿಕರನ್ನು ಪೋಲವರಂ ಪ್ರಾಜೆಕ್ಟ್‌ಗೆ ಕರೆದೊಯ್ಯುವ ಬಸ್ಸುಗಳು ಬೆಳಿಗ್ಗೆ 7.30ಕ್ಕೆ ರಾಜಮಂಡ್ರಿ ಬಿಡುತ್ತವೆ. ಹೀಗಾಗಿ ಸಮಯ ಹೆಚ್ಚು ಪೋಲಾಗುವುದಿಲ್ಲ. ಭದ್ರಾಚಲಂನಲ್ಲಿ ರಾತ್ರಿ 9ಕ್ಕೆ ದೇಗುಲದ ಬಾಗಿಲು ಹಾಕುತ್ತಾರೆ. ದೋಣಿ ಮೂಲಕ ಹೋದರೆ ಮೊದಲ ದಿನವೇ ದರ್ಶನವೂ ಆಗುತ್ತದೆ.

ರಾಜಮಂಡ್ರಿಯಲ್ಲಿಯೂ ನೋಡಬೇಕಾದ್ದು ಸಾಕಷ್ಟು ಇದೆ. ಇಸ್ಕಾನ್‌ನ ದಶಾವತಾರ ದೇಗುಲ, ದೊಡ್ಡ ಸೇತುವೆ, ಗೋದಾವರಿಯಲ್ಲಿ ಜಲಕ್ರೀಡೆ, ಮರೆದುಮಿಲ್ಲಿ ಜಲಪಾತ, ಪುಷ್ಕರ ಘಾಟ್, ಬುಡಕಟ್ಟು ಹಳ್ಳಿಗಳು... ಹೀಗೆ ಪಟ್ಟಿ ಉದ್ದಕ್ಕೆ ಬೆಳೆಯುತ್ತದೆ. ಒಂದು ದಿನ ರಾಜಮಂಡ್ರಿಯಲ್ಲಿ ಉಳಿದು ನಂತರ ಭದ್ರಾಚಲಂನತ್ತ ಪ್ರಯಾಣ ಬೆಳೆಸುವವರೂ ಇದ್ದಾರೆ. ರಾಜಮಂಡ್ರಿ ರೈಲು ನಿಲ್ದಾಣದ ಸಮೀಪವೇ ಇರುವ ಇಸ್ಕಾನ್‌ನಲ್ಲಿ ವಸತಿಯ ಕ್ಯಾಂಟೀನ್ ಸೌಲಭ್ಯವೂ ಇದೆ.

ದೋಣಿ ಮೇಲೆ ಪಯಣ

‘ಗೋದಾವರಿ’ ಫಿಲಂ ನೋಡಿದ ಹಲವರು ಕನಸು ಕಟ್ಟಿಕೊಂಡು ರಾಜಮಂಡ್ರಿಯಿಂದ ಭದ್ರಾಚಲಂಗೆ ಹೋಗಲು ಹಾತೊರೆಯುತ್ತಾರೆ. ಗೋದಾವರಿಯ ಮೇಲೆ ತೇಲಿ ಬರುವ ತಂಪುಗಾಳಿಗೆ ದೋಣಿಯ ಬಾಲ್ಕನಿಯಲ್ಲಿ ಮೈ ಒಡ್ಡುವ ಅನುಭವವನ್ನು ಯಾವ ಸಂತೋಷಕ್ಕೂ ಹೋಲಿಸಲು ಸಾಧ್ಯವಿಲ್ಲ. ದೋಣಿಯಲ್ಲಿ ಇರುವ ಕಲಾವಿದರು ನಮ್ಮಿಂದ ಹಾಡಿಸಿ, ಕುಣಿಸಿ ಖುಷಿಪಡಿಸುತ್ತಾರೆ. ಮಕ್ಕಳಂತೂ ಕಣ್ಣವೆ ಮುಚ್ಚದೆ ಪ್ರವಾಸವನ್ನು ಎಂಜಾಯ್ ಮಾಡುತ್ತವೆ. ಭದ್ರಾಚಲಂಗೆ ಹೋಗುವ ಮಾರ್ಗಮಧ್ಯೆ ಸಿಗುವ ಬುಡಕಟ್ಟು ಹಳ್ಳಿಗಳಾದ ಕೊಲ್ಲೂರು, ಶಿವಗಿರಿಗಳ ಬಿದಿರು ಗುಡಿಸಲುಗಳಲ್ಲಿ ರಾತ್ರಿ ಉಳಿದುಕೊಳ್ಳಲು ಅವಕಾಶ ಇರುವ ಪ್ಯಾಕೇಜ್‌ಗಳನ್ನೂ ಕೆಲ ಪ್ರವಾಸಿ ಸಂಸ್ಥೆಗಳು ಒದಗಿಸುತ್ತಿವೆ. ಇಂಥ ಪ್ಯಾಕೇಜ್‌ಗಳಲ್ಲಿ ಕಾಡಿನಲ್ಲಿ ನಿಸರ್ಗ ನಡಿಗೆ, ಕ್ಯಾಂಪ್‌ಫೈರ್, ದೇಗುಲಗಳ ಭೇಟಿಯೂ ಸೇರಿರುತ್ತವೆ. ಈ ಪ್ಯಾಕೇಜ್ ನಂತರವೂ ಭದ್ರಾಚಲಂಗೆ ಬರಬಹುದು.

* ಆನ್‌ಲೈನ್‌ ಬುಕಿಂಗ್ ಮತ್ತು ಇತರ ಮಾಹಿತಿಗೆ www.papikondalustay.online ಮತ್ತುwww.papihills.org

* ರಾಜಮಂಡ್ರಿಯಲ್ಲಿ ವಸತಿಗೆ www.iskconrajahmundry.com

* ಭದ್ರಾಚಲಂ ದೇಗುಲ ಕಾರ್ಯನಿರ್ವಹಣಾಧಿಕಾರಿ ಸಂಖ್ಯೆ– 76600 07680.ಮಾಹಿತಿಗೆ www.bhadrachalarama.org

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT