ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೈಸ್ಟ್‌ಚರ್ಚ್‌ ಸುತ್ತಾಟ

Last Updated 10 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ನ್ಯೂ ಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ ಇತ್ತೀಚೆಗೆ ಬಾಂಬ್‌ ದಾಳಿಯಿಂದ ಸುದ್ದಿಯಾಗಿತ್ತು. ಅದಕ್ಕೂ ಮುನ್ನ ಕ್ರಿಕೆಟ್‌ ಹೆಸರಲ್ಲಿ ಈ ನಗರದ ಹೆಸರನ್ನು ಆಗಾಗ್ಗೆ ಕೇಳುತ್ತಿದ್ದೆವು. ಇಂಥ ವಿಶ್ವವಿಖ್ಯಾತ ನಗರಕ್ಕೆ ಭೇಟಿ ನೀಡುವ ಅವಕಾಶ ಕಲ್ಪಿಸಿದ್ದು ಕರ್ನಾಟಕ ಸರ್ಕಾರ. ಅಲ್ಲಿ ಆಯೋಜಿಸಿದ್ದ ತರಬೇತಿಯೊಂದಕ್ಕೆ ನನ್ನನ್ನೂ ಸೇರಿದಂತೆ ಒಂಭತ್ತು ಮಂದಿ ಎಂಜಿನಿಯರ್‌ಗಳನ್ನು ನಿಯೋಜನೆ ಮಾಡಿತ್ತು. ತರಬೇತಿ ಮುಗಿಸಿ, ಬಿಡುವಿನ ವೇಳೆಯಲ್ಲಿ ಕ್ರೈಸ್ಟ್‌ಚರ್ಚ್‌ ಮತ್ತು ಸಮೀಪದಲ್ಲಿರುವ ಒಂದೆರಡು ತಾಣಗಳಿಗೆ ಭೇಟಿ ನೀಡಿದ್ದೆವು.

ಬಹುತೇಕರಿಗೆ ಇದೇ ಮೊದಲ ಬಾರಿಗೆ ವಿದೇಶ ಪ್ರವಾಸದಂತೆ ಕಾಣುತ್ತಿತ್ತು. ಹಾಗಾಗಿ ಪ್ರಯಾಣದ ಬಗ್ಗೆಯೇ ಸಹಜವಾಗಿ ಒಂದಷ್ಟು ಕುತೂಹಲಗಳಿತ್ತು. ಕುತೂಹಲಗಳೊಂದಿಗೆ ಮಾರ್ಚ್‌ 2 ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕ್ರೈಸ್ಟ್‌ಚರ್ಚ್‌ ಕಡೆಗೆ ಪ್ರಯಾಣ ಬೆಳೆಸಿದೆವು. ನಾವು ಏರಿದ ವಿಮಾನ ಸಿಂಗಪುರ, ಆಸ್ಟ್ರೇಲಿಯಾದ ಸಿಡ್ನಿ ಮಾರ್ಗವಾಗಿ ಕ್ರೈಸ್ಟ್‌ಚರ್ಚ್‌ ನಗರ ತಲುಪಿತು. ಸುಮಾರು 18 ತಾಸುಗಳ ಸುದೀರ್ಘ ವಿಮಾನ ಯಾನದ ನಂತರ ದ್ವೀಪರಾಷ್ಟ್ರ ತಲುಪಿದೆವು.

ವಿಮಾನ ನಿಲ್ದಾಣದಿಂದ ನಗರವನ್ನು ಪ್ರವೇಶಿಸುತ್ತಿದ್ದಂತೆ, ಅಲ್ಲಿನ ಸ್ವಚ್ಛತೆ, ವಿಶಾಲವಾದ ರಸ್ತೆಗಳು, ಹಸಿರಿನಿಂದ ಕಂಗೊಳಿಸುವ ಉದ್ಯಾನಗಳು, ಶಿಸ್ತುಬದ್ಧ ಸಂಚಾರಿ ನಿಯಮಗಳನ್ನು ಪಾಲಿಸುವ ಜನ.. ಎಲ್ಲವೂ ನಮ್ಮನ್ನು ಅಚ್ಚರಿಗೊಳಿಸಿದೆವು. ಇವೆಲ್ಲವನ್ನೂ ನೋಡುತ್ತಲೇ ಮೊದಲೇ ನಿಗದಿಯಾಗಿದ್ದ ಹೋಟೆಲ್‌ ರೂಮ್‌ಗಳನ್ನು ತಲುಪಿದೆವು. ಮರುದಿನ ತರಬೇತಿ ಕಾರ್ಯಕ್ರಮ. ಸಂಜೆ ಬಿಡುವಿನ ವೇಳೆಯಲ್ಲಿ ಕ್ರೈಸ್ಟ್‌ ಚರ್ಚ್‌ ನಗರವನ್ನು ಸುತ್ತಾಡಲು ಹೊರಟೆವು.

ನಗರದ ನಡುವಿನ ‘ಟ್ರಾಮ್‌ ವೇ’ ಪ್ರಯಾಣ ನೋಡಿ ಖುಷಿಪಡುತ್ತಾ, ನಾವು ಅದೇ ಟ್ರಾಮ್‌ನಲ್ಲೇ ಕುಳಿತು ನಗರ ಪ್ರದಕ್ಷಿಣೆ ಮಾಡಿದೆವು. ನಗರ ಸುತ್ತುತ್ತಿದ್ದಾಗ, ಅಹ್ಲಾದಕರ, ತಂಪಿನ ವಾತಾವರಣ ಅನುಭವಕ್ಕೆ ಬಂತು. ಸುತ್ತಲಿನ ಉದ್ಯಾನಗಳೇ ಆ ತಂಪಿನ ವಾತಾವರಣಕ್ಕೆ ಮೂಲ ಕಾರಣವಾಗಿದ್ದವು.

ಟೆಕೊಪೊ ಲೇಕ್‌ಗೆ ಭೇಟಿ

ಶನಿವಾರ ಕ್ರೈಸ್ಟ್‌ ಚರ್ಚ್‌ ನಗರದಿಂದ 250 ಕಿ.ಮೀ ದೂರದಲ್ಲಿರುವ ಟೆಕಪೊ ಲೇಕ್‌ಗೆ (Tekapo lake) ಪ್ರಯಾಣ ಬೆಳೆಸಿದೆವು. ದಾರಿ ಉದ್ದಕ್ಕೂ ಇಕ್ಕೆಲಗಳಲ್ಲಿ ಕೃಷಿ ಚಟುವಟಿಕೆಗಳು ನಡೆಯುತ್ತಿತ್ತು. ಅಲ್ಲಿನ ರೈತರೊಟ್ಟಿಗೆ ಮಾತನಾಡಿದೆವು. ಅತ್ಯಾಧುನಿಕ ತಾಂತ್ರಿಕ ಸಾಧನಗಳಿಂದ ಹೊಲಗಳಿಗೆ ನೀರು ಹರಿಸುವುದನ್ನು ಗಮನಿಸಿದೆವು. ಮುಂದೆ ಸಾಗುತ್ತಿದ್ದಾಗ, ನದಿಗಳು ಎದುರಾದವು.

ಉಬ್ಬುಗಳಿಲ್ಲದ ನಯವಾದ ರಸ್ತೆಯಲ್ಲಿ ಪ್ರಯಾಣಿಸಿದ್ದೇ ತಿಳಿಯಲಿಲ್ಲ. ಅಂತಿಮವಾಗಿ ಟೆಕಪೊ ಲೇಕ್ ತಲುಪಿದೆವು. ಇದು ನೀಲಿ ವರ್ಣದ ಸರೋವರ. ಬಹುಶಃ ಸ್ವರ್ಗ ಎಂದರೆ ಹೀಗೇ ಇರಬಹುದೇನೋ ಎನ್ನುವಂತಿತ್ತು ಆ ಸುತ್ತಲಿನ ವಾತಾವರಣ.

ನ್ಯೂಜಿಲೆಂಡ್‌ನ ಅತೀ ಎತ್ತರದ ಅಲ್‌ಪೈನ್ ಪ್ರದೇಶದಲ್ಲಿ ಈ ನೀಲಿ ನೀರಿನ ಟೆಕಪೊ ಲೇಕ್ ಪ್ರವಾಸಿಗರಿಗೆ ಹೆಚ್ಚು ಆಕರ್ಷಣೀಯ ತಾಣ. ಈ ಪ್ರದೇಶದ ಸುತ್ತ ಹಿಮದ ಶಿಖರಗಳಿವೆ. ಸಾಹಸಿ ಪ್ರವಾಸಿಗರಿಗೆ ಸೈಕ್ಲಿಂಗ್, ಕುದುರೆ ಸವಾರಿ, ಗಾಲ್ಫ್‌, ಫಿಶಿಂಗ್ ಮಾಡಬಹುದು. ವಾಯುವಿಹಾರಕ್ಕಂತೂ ಹೇಳಿ ಮಾಡಿಸಿದ ತಾಣ. ಲೇಕ್ ಪಕ್ಕದಲ್ಲಿ ಸುಂದರವಾದ ಚರ್ಚ್‌ ಇದೆ.

ಈ ತಿರುಗಾಟದಲ್ಲಿ ಒಮ್ಮೆ ಮಿನಿ ಫ್ಲೈಟ್‌ನಲ್ಲೂ (ಚಿಕ್ಕ ವಿಮಾನ) ಹಿಮದ ಶಿಖರಗಳು ಮತ್ತು ಟೇಕ್‌ಪೊ ಲೇಕ್‌ ಮೇಲ್ಭಾಗದಲ್ಲಿ ಹಾರಾಡಿದೆವು. ವಿಮಾನದಲ್ಲಿ ಕುಳಿತಿದ್ದ ನಮಗೆ ಒಂದು ಕಡೆ ರೋಮಾಂಚನ, ಇನ್ನೊಂದು ಕಡೆ ನಾವೇ ಆಗಸದಲ್ಲಿ ತೇಲುತ್ತಿದ್ದೇವೆನೋ ಎಂಬಂಥ ಅನುಭವ. ಆ ಅನುಭವವನ್ನು ಶಬ್ಧಗಳಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ.

ಅವಕಾಶ ಸಿಕ್ಕಿದರೆ, ಇಂಥ ಅಪೂರ್ವ ದ್ವೀಪರಾಷ್ಟ್ರ ನ್ಯೂಜಿಲೆಂಡ್‌ನ ಕ್ರೈಸ್ಟ್‌ ಚರ್ಚ್‌ ನಗರಕ್ಕೆ ಭೇಟಿ ನೀಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT