ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ್ದಾಪಾರಾ ಘೇಂಡಾಗಳ ನೋಡು ಬಾರಾ...

Last Updated 16 ಜುಲೈ 2011, 19:30 IST
ಅಕ್ಷರ ಗಾತ್ರ

ಪಶ್ಚಿಮ ಬಂಗಾಳದ ಜಲ್ದಾಪಾರಾ ಅಭಯಾರಣ್ಯ ಜೀವವೈವಿಧ್ಯಕ್ಕೆ ಬಹುಪ್ರಸಿದ್ಧಿ. ಈ ರಾಷ್ಟ್ರೀಯ ಅಭಯಾರಣ್ಯವು ಒಂಟಿಕೊಂಬಿನ ಘೇಂಡಾಮೃಗಗಳ ಸಂರಕ್ಷಿತ ಕ್ಷೇತ್ರ. ಇಲ್ಲಿಂದ ಭೂತಾನ್ ದೇಶದ ಗಡಿ ಪ್ರದೇಶ ಪುನ್ಶೊಲಿಂಗ್ (ಭಾರತದ ಜೈಗಾಂವ್) ಬಹು ಸಮೀಪ.

ಜಲ್ದಾಪಾರಾ ಅಭಯಾರಣ್ಯಕ್ಕೆ ಹೋಗಲು `ಇಕೋ ಡೆವೆಲಪ್‌ಮೆಂಟ್ ಕಮಿಟಿ~ ಕಚೇರಿಯಲ್ಲಿ ನೋಂದಣಿ ಮಾಡಿಸಬೇಕು. ಇದು ಕೂಚ್ ಬಿಹಾರ್ ವಲಯಕ್ಕೆ ಬರುತ್ತದೆ. ವಾಹನಗಳಲ್ಲಿ ಹೋಗುವುದಿದ್ದರೆ 75 ರೂಪಾಯಿ ವಾಹನ ಶುಲ್ಕವಿದೆ.
 
ಇನ್ನು ಪ್ರತಿ ಪ್ರವಾಸಿಗನೂ ಚಿಲಾಪಾಟಾ ಜಂಗಲ್ ಸಫಾರಿಗೆ 150 ರೂಪಾಯಿ, ಕಾರ್ ಸಫಾರಿಗೆ 100 ರೂಪಾಯಿ, ಟೋಟೋಪಾರಾ ದರ್ಶನಕ್ಕೆ 100 ರೂಪಾಯಿ  ಶುಲ್ಕ ಕಟ್ಟಬೇಕು. ಹಾಗಾಗಿ ಈ ಅಭಯಾರಣ್ಯದ ದರ್ಶನ ಕೊಂಚ ದುಬಾರಿಯ ಬಾಬತ್ತೇ. ಆದರೆ, ನಿಸರ್ಗದ ಸಮ್ಮುಖದಲ್ಲಿ ಸಿಗುವ ಸುಖದೆದುರು ಈ ಶುಲ್ಕಗಳೆಲ್ಲ ತೀರಾ ಕಡಿಮೆ ಎನ್ನಿಸುತ್ತವೆ.

ಜಲ್ದಾಪಾರಾ ಅಭಯಾರಣ್ಯದಲ್ಲಿ ಬೆಳಗಿನ ವೇಳೆ ಆನೆಯ ಸವಾರಿ ಮಾಡಿ ಇತರೆ ಪ್ರಾಣಿಗಳನ್ನು ವೀಕ್ಷಿಸಬಹುದು. ಈ ಅಭಯಾರಣ್ಯ ಒಂದು ಕೊಂಬಿನ ಘೇಂಡಾಮೃಗಗಳಿಗೆ ಬಹುಖ್ಯಾತಿ. ಘೇಂಡಾಮೃಗಗಳೇ ಇಲ್ಲಿನ ಪ್ರಮುಖ ಆಕರ್ಷಣೆ. ವಿಹರಿಸುವ ಘೇಂಡಾಮೃಗಗಳನ್ನು ಇಲ್ಲಿ ಕಾಣಬಹುದು. ಅಲ್ಲಲ್ಲಿ ನವಿಲುಗಳೂ ಕಂಡುಬರುತ್ತವೆ.

ಪಶ್ಚಿಮ ಬಂಗಾಳದ ಜಲ್‌ಪೈಗುರಿ ಜಿಲ್ಲೆಯಲ್ಲಿರುವ ಈ ಅಭಯಾರಣ್ಯದ ತೀರದಲ್ಲಿ ತೋರ್ಸಾ ನದಿ ಹರಿಯುತ್ತದೆ. ಜಲ್ದಾಪಾರಾದಿಂದ 30 ಕಿ.ಮೀ. ದೂರಕ್ಕೆ ಭೂತಾನ್ ಸೀಮೆಗೆ ತಾಗಿದ ಮತ್ತು ತೋರ್ಸಾ ನದಿಯ ಆಚೆ ತೀರದಲ್ಲಿ ಟೋಟೋ ಆದಿವಾಸಿಗಳ ನಿವಾಸ ಸ್ಥಳವನ್ನೂ ವೀಕ್ಷಿಸಬಹುದು.
 
ಟೋಟೋ ಆದಿವಾಸಿಗಳ ನಿವಾಸ ಸ್ಥಳ ಟೋಟೋಪಾಡಾ ವಿದೇಶಿ ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸುವ ತಾಣ. ಈ ಆದಿವಾಸಿಗಳ ಜೀವನ ವಿಧಾನ ಅರಿಯಲು ದೇಶವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ.

ಅಭಯಾರಣ್ಯದ ಮತ್ತೊಂದು ಭಾಗ ಚಿಲಾಪಟಾ ಅರಣ್ಯದ ಒಳಗಡೆ ಐತಿಹಾಸಿಕ ಕೋಟೆಯಿದೆ. ಐದನೇ ಶತಮಾನದ ಗುಪ್ತರ ವಂಶಕ್ಕೆ ಸೇರಿದ ಈ ಕೋಟೆಯನ್ನು ಕಂಡಾಗ ಭಾರತದ `ಸುವರ್ಣ ಕಾಲ~ದ ನೆನಪಾಗುತ್ತದೆ.

ಇಂದು ಜಲ್ದಾಪಾರಾದಲ್ಲಿ ಘೇಂಡಾಮೃಗಗಳ ಸಂತತಿ ಅಳಿಯುವ ಹಂತದಲ್ಲಿದೆ. ಅರವತ್ತರ ದಶಕದಲ್ಲಿ ಇಲ್ಲಿ ಮುನ್ನೂರಕ್ಕೂ ಹೆಚ್ಚು ಘೇಂಡಾಮೃಗಗಳಿದ್ದವಂತೆ. ಈಗ ಐವತ್ತಕ್ಕೂ ಕಡಿಮೆ ಇವೆ ಎನ್ನಲಾಗಿದೆ. ಇದಕ್ಕೆ ಮುಖ್ಯ ಕಾರಣ ಅಸ್ಸಾಂನಿಂದ ಬರುವ ಬೇಟೆಗಾರರು. ಜಲ್ದಾಪಾರಾ ಮತ್ತು ಪಕ್ಕದ ಗೋರೂಮಾರಾದಲ್ಲಿ ಕಳ್ಳಬೇಟೆ ನಡೆಯುತ್ತಿದೆ ಎನ್ನುವ ಸುದ್ದಿಗಳಿವೆ. ಹೀಗಾಗಿ `ಜಲ್ದಾಪಾರಾ ಘೇಂಡಾಮೃಗ ಬೇಟೆಗಾರರ ಸ್ವರ್ಗ~ ಎಂಬ ಮಾತು ಪ್ರಚಲಿತದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಭದ್ರತೆ ಸ್ವಲ್ಪ ಮಟ್ಟಿಗೆ ಬಿಗಿಪಡಿಸಲಾಗಿದೆ.

ಜಲ್ದಾಪಾರಾ ಅಭಯಾರಣ್ಯಕ್ಕೆ ತಾಗಿಕೊಂಡ ಮದಾರೀಹೌಟ್ ಎಂಬಲ್ಲಿ ಉಳಿದುಕೊಳ್ಳಲು ಹೋಟೆಲುಗಳಿವೆ. ಪ್ರವಾಸೋದ್ಯಮ ಇಲಾಖೆ ವತಿಯಿಂದಲೂ ವ್ಯವಸ್ಥೆ ಮಾಡಲಾಗುತ್ತದೆ. ಅದಕ್ಕಾಗಿ ಅವರನ್ನು ಮೊದಲೇ ಸಂಪರ್ಕಿಸಬೇಕಾಗುತ್ತದೆ. ಅದ್ಭುತ ಪ್ರಾಕೃತಿಕ ಸೌಂದರ್ಯವುಳ್ಳ ಅರಣ್ಯದಲ್ಲಿನ ವಸತಿಗೃಹಗಳಲ್ಲಿ ತಂಗುವುದು ಪ್ರವಾಸಿಗರಿಗೆ ರೋಮಾಂಚನ ಉಂಟು ಮಾಡುತ್ತದೆ.

ಜಲ್ದಾಪಾರಾಕ್ಕೆ ಹತ್ತಿರದ ವಿಮಾನ ನಿಲ್ದಾಣ ಬಾಗ್‌ಡೊಗ್ರಾ. ಇಲ್ಲಿಂದ 145 ಕಿ.ಮೀ. ದೂರದಲ್ಲಿದೆ. ಸಿಲಿಗುರಿ ನಗರದಿಂದ ವಿಮಾನ ನಿಲ್ದಾಣಕ್ಕೆ 13 ಕಿ.ಮೀ. ಸಿಲಿಗುರಿಯಿಂದ ಜಲ್ದಾಪಾರಕ್ಕೆ ಮೂರು ಗಂಟೆಯ ರಸ್ತೆ ದಾರಿ.

ಬೇಸಗೆಯಲ್ಲಿ ವಿಪರೀತ ಸೆಕೆ ಮತ್ತು ಮಳೆಗಾಲದಲ್ಲಿ ವಿಪರೀತ ಮಳೆಯ ಕಾರಣ- ಸೆಪ್ಟೆಂಬರ್‌ನಿಂದ ಮಾರ್ಚ್ ತನಕ ಜಲ್ದಾಪಾರ ವೀಕ್ಷಣೆಗೆ ಉತ್ತಮ ಕಾಲ ಎನ್ನಬಹುದು. ಡಾರ್ಜಲಿಂಗ್ - ಸಿಕ್ಕಿಂನ ಪ್ರವಾಸ ಹಮ್ಮಿಕೊಳ್ಳುವಾಗ ಇಲ್ಲಿಗೂ ಬರಬಹುದು. ಅಥವಾ ಭೂತಾನ್ ದೇಶದ ಪ್ರವಾಸದ ಸಮಯ ಒಂದು ದಿನ ಇಲ್ಲಿ ಉಳಿದುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT