ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ನೋಡಬನ್ನಿ

ಸುತ್ತಾಣ
Last Updated 27 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸುತ್ತಲೂ ಹಚ್ಚ ಹಸಿರು ಹೊದ್ದ ಬೆಟ್ಟಗುಡ್ಡ. ಮಧ್ಯ ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಪಾತ. ನೀರಿನ ಝರಿಯಲ್ಲಿ ಜುಳುಜುಳು ನಿನಾದ. ಪ್ರವಾಹದಂತೆ ಹರಿಯುವ ನೀರು. ನೀರಿನ ರಭಸಕ್ಕೆ ಜಲಪಾತವೇ ಹಿಮದ ಹೊದಿಕೆಯಂತೆ. ಆ ಹಿಮದ ಮೇಲೆ ರವಿಯ ಎಳೆ ಬಿಸಿಲ ಸಿಂಚನ– ಇದು ಗಗನಚುಕ್ಕಿ ಭರಚುಕ್ಕಿ ಜಲಪಾತದ ಮನಮೋಹಕ ನೋಟ.

ಬೆಂಗಳೂರಿನಿಂದ ಒಂದು ದಿನದ ಪ್ರವಾಸ ಹೊರಡುವವರಿಗೆ ಗಗನಚುಕ್ಕಿ ಭರಚುಕ್ಕಿ ಫಾಲ್ಸ್ ಹೇಳಿ ಮಾಡಿಸಿದ ತಾಣ.
ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಗಡಿಭಾಗದಲ್ಲಿರುವ ಶಿವನಸಮುದ್ರದಲ್ಲಿನ ಗಗನಚುಕ್ಕಿ, ಭರಚುಕ್ಕಿ ಜಲಪಾತ ಜೋಗಜಲಪಾತದಷ್ಟೆ ಪ್ರಸಿದ್ಧ ಪ್ರವಾಸಿ ಕೇಂದ್ರ. ಇಲ್ಲಿ ಕಾವೇರಿ ನದಿ ಕವಲೊಡೆದು ಗಗನಚುಕ್ಕಿ, ಭರಚುಕ್ಕಿಯಾಗಿ ಹರಿಯುತ್ತಾಳೆ.

ಎಡಭಾಗಕ್ಕೆ ಸುಮಾರು 300 ಅಡಿ ಎತ್ತರದಿಂದ ಗಗನಚುಕ್ಕಿ ಧುಮುಕಿದರೆ, ಬಲಕ್ಕೆ 100 ಅಡಿ ಎತ್ತರದಿಂದ ರಭಸವಾಗಿ ಭರಚುಕ್ಕಿ ಧುಮುಕುತ್ತಾಳೆ.

ಇಲ್ಲಿ ಕಾವೇರಿ ಹಾಲಿನ ನೊರೆಯಾಗಿ ಇಳಿದು, ತಿಳಿಯಾಗಿ ತೇಲಿ 100 ಅಡಿ ಎತ್ತರದಿಂದ ಧುಮುಕುತ್ತಾ ಪ್ರವಾಸಿಗರ ಸಂತೋಷದ ರಸನಿಮಿಷಕ್ಕೆ ಸಾಕ್ಷಿಯಾಗಿದ್ದಾಳೆ.



ಹೋಗುವುದು ಹೀಗೆ...
ಬೆಂಗಳೂರಿನಿಂದ ಗಗನಚುಕ್ಕಿ ಭರಚುಕ್ಕಿ ಜಲಪಾತ143 ಕಿ.ಮೀ. ದೂರದಲ್ಲಿದೆ. ಬೆಂಗಳೂರಿನಿಂದ ಮದ್ದೂರಿಗೆ ಬಂದು, ಮದ್ದೂರಿನ ಟಿ.ಬಿ. ವೃತ್ತದ ಬಳಿ ಎಡ ತಿರುವು ಪಡೆದು, ಮಳವಳ್ಳಿ ಕೊಳ್ಳೇಗಾಲ ರಸ್ತೆಯಲ್ಲಿ 55 ಕಿ.ಮೀ. ಚಲಿಸಿದರೆ ಸತ್ತೇಗಾಲ ಹ್ಯಾಂಡ್‌ಪೋಸ್ಟ್ ಸಿಗುತ್ತದೆ. ಅಲ್ಲಿಂದ ಎಡತಿರುವು ಪಡೆದು 8 ಕಿ.ಮೀ. ಚಲಿಸಿದರೆ ಗಗನಚುಕ್ಕಿ ಸಿಗುತ್ತದೆ. ಅಲ್ಲಿಂದ 2 ಕಿ.ಮೀ. ದೂರದಲ್ಲೇ ಭರಚುಕ್ಕಿ ಜಲಪಾತ ಇದೆ.

ಬೆಂಗಳೂರಿನಿಂದ ಕನಕಪುರ ಮಾರ್ಗವಾಗಿಯೂ ಬರಬಹುದು. ಈ ಮಾರ್ಗದಲ್ಲಿ ಮೊದಲು ಕನಕಪುರಕ್ಕೆ ಬಂದು, ಕನಕಪುರದಿಂದ ಹಲಗೂರಿಗೆ ಹೋಗಬೇಕು. ಅಲ್ಲಿಂದ ಮಳವಳ್ಳಿಗೆ ಬರಬೇಕು. ಆ ನಂತರ ಸತ್ತೇಗಾಲ ಸಿಗುತ್ತದೆ.

ಸತ್ತೇಗಾಲ ಹ್ಯಾಂಡ್‌ಪೋಸ್ಟ್ವರೆಗೂ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳಿವೆ. ಹ್ಯಾಂಡ್‌ಪೋಸ್ಟ್ನಿಂದ ಬೆಳಿಗ್ಗೆ 8 ಮತ್ತು 11:30ಕ್ಕೆ ಹಾಗೂ ಮಧ್ಯಾಹ್ನ 3:45ಕ್ಕೆ ಸರ್ಕಾರಿ ಬಸ್ ಬರುತ್ತದೆ. ಒಂದು ವೇಳೆ ಬಸ್ ಸಿಗದಿದ್ದರೆ ಚಿಂತೆಯಿಲ್ಲ, 20 ರೂಪಾಯಿ ಕೊಟ್ಟರೆ ಸಾಕಷ್ಟು ಪ್ರಯಾಣಿಕರ ಆಟೋಗಳು ಸಿಗುತ್ತವೆ. ಸ್ವಂತ ವಾಹನದಲ್ಲಿ ಹೊರಡುವವರು ತಲಕಾಡು ಮತ್ತು ಮಲೆಮಹದೇಶ್ವರ ಬೆಟ್ಟಕ್ಕೂ ಭೇಟಿ ನೀಡಬಹುದು.

ದಾರಿಯುದ್ದಕ್ಕೂ ಕಾಣುವ ಕಬ್ಬು, ಭತ್ತದ ಪೈರು ನಿಮ್ಮ ಮನಸ್ಸಿನಲ್ಲಿ ಹಸಿರಿನ ಚಿತ್ತಾರವನ್ನು ಮೂಡಿಸುತ್ತದೆ.
ಬೆಳ್ಳಿಗ್ಗೆ 8ರಿಂದ ಸಂಜೆ 5ರವರೆಗೂ ಪ್ರವಾಸಿಗರು ಇಲ್ಲಿಗೆ ಬರಬಹುದು. ವಾರಾಂತ್ಯ, ಸರ್ಕಾರಿ ರಜೆ, ದಸರಾ, ಮತ್ತು ಡಿಸೆಂಬರ್ ತಿಂಗಳಲ್ಲಿ ಪ್ರವಾಸಿಗರು ಮತ್ತು  ಶಾಲಾ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.

ದೋಣಿ ವಿಹಾರದ ಮೋಜು 
ನೀರಿನಲ್ಲಿ ಇಳಿಯಲು ಭಯ ಪಡುವವರು ದೋಣಿ ವಿಹಾರ ಮಾಡುತ್ತ ಜಲಪಾತದ ಸಂಪೂರ್ಣ ಸೌಂದರ್ಯವನ್ನು    ಕಣ್ತುಂಬಿಕೊಳ್ಳಬಹುದು. ಜಲಪಾತವನ್ನು  ಒಂದು ಸುತ್ತು ಸುತ್ತಲು ಒಬ್ಬರಿಗೆ 50 ರೂ. ಕೊಡಬೇಕು. ಜಲಪಾತದ ಜಲಧಾರೆಯಲ್ಲಿ ತೇಲುವ ತೆಪ್ಪದಲ್ಲಿ ಕೂತು ಭರಚುಕ್ಕಿಯ ಸೊಬಗನ್ನು ಕಣ್ತುಂಬಿಕೊಳ್ಳಬಹುದು.

ತೆಪ್ಪ ವಾಲಾಡುವ ರೀತಿಗೆ ಎದೆಯಲಿ ಗುಡುಗು ಮಿಂಚಿನ ಸಂಚಾರ, ಹಿಮದ ನೀರು ತುಂತುರು ಹನಿಯಾಗಿ ಮೈಮೇಲೆ ಬಿದ್ದಾಗ ಮನದಲ್ಲಿ ಮುಂಗಾರು ಮಳೆಯ ಹಿತ ಅನುಭವ.

ರಭಸವಾಗಿ ಹರಿಯುವ ನೀರಿನಲ್ಲಿ, ಧುಮ್ಮಕ್ಕುವ ಜಲಪಾತದಲ್ಲಿ ಈಜುವ ಸಾಹಸ ಹುಡುಗರದ್ದು. ಜಲಪಾತದ ಮೇಲೆ ನಿಂತು ಪ್ರವಾಸಿಗರತ್ತ ಕೈಬೀಸಿ ಕರೆಯುವುದು, ಸಿಳ್ಳೆ, ಕೇಕೆಗಳ ಆರ್ಭಟ...  ಇದು ನೋಡುವವರಿಗೆ ಹೊಸ ಅನುಭವ. ಸುತ್ತಲೂ ಹಸಿರು, ಮಧ್ಯೆ ಬಿಳಿ ಹೊಳಪು, ಭರಚುಕ್ಕಿಯ ರಮ್ಯತೆಗೆ ಮನಸ್ಸು ಮಳೆಯಲಿ ಮಿಂದ ಹೂವಿನಂತೆ ಅರಳುತ್ತದೆ. ಬೆಟ್ಟದ ಮೇಲಿನಿಂದ ಬಳುಕುತ್ತಾ ಕೆಳಗಿಳಿಯುವ ನೀರು ದೃಶ್ಯಕಾವ್ಯದಂತೆ ಕಾಣುತ್ತದೆ.  ಹಾಲಿನಷ್ಟೇ ಬಿಳುಪಾದ ನಿರ್ಮಲ ಜಲಧಾರೆ ಪ್ರವಾಸಿಗರ ಕಣ್ಮನ ಸೆಳೆಯುತ್ತದೆ.

ಬಂಡೆಗಲ್ಲುಗಳ ಮೇಲಿನಿಂದ ಧುಮುಕುವ ನೀರಿನ ರಮಣೀಯ ದೃಶ್ಯವನ್ನು ನೋಡಿಯೇ ಕಣ್ತುಂಬಿಕೊಳ್ಳಬೇಕು.

ಜಾರದಿರಿ... ಜೋಪಾನ
ಈ ಜಲಪಾತದ ನೀರಿನ ಬಂಡೆಗಳ ಮೇಲೆ ಪಾಚಿ ಇದ್ದು, ಜಾರುವ ಸಂಭವವಿರುತ್ತದೆ. ಅಲ್ಲಲ್ಲಿ ಸುಳಿಗಳೂ ಇವೆ. ಆದ್ದರಿಂದ ಸುಳಿ ಇರುವ ಸ್ಥಳದಲ್ಲಿ ಈಜುವುದು ಅಪಾಯಕಾರಿ. ನೀರು ಧುಮ್ಮಿಕ್ಕುವ ವೇಗಕ್ಕೆ ಆಯತಪ್ಪುವ ಸಂಭವವಿರುತ್ತದೆ. ಹೆಚ್ಚು ಹುಡುಗಾಟ ಬೇಡ.

ಪ್ರವಾಸಿಗರಿಗೆ ಉಚಿತ ಪ್ರವೇಶವಿದ್ದು, ಇಲ್ಲಿಗೆ ಬರುವ ವಾಹನಗಳಿಗೆ ಮಾತ್ರ ಶುಲ್ಕವಿದೆ. ಬಸ್ ರೂ 50, ಟೆಂಪೊ ರೂ 30, ಕಾರು, ಮಿನಿಟೆಂಪೊ, ಆಟೋ ರೂ 20, ದ್ವಿಚಕ್ರ ವಾಹನಗಳಿಗೆ ರೂ 10 ಶುಲ್ಕ ಕೊಡಬೇಕು. ಆದರೆ ಶಾಲಾ ಕಾಲೇಜುಗಳ ಅಧ್ಯಯನ ಪ್ರವಾಸ ಕೈಗೊಳ್ಳುವ ಎಲ್ಲಾ ವಾಹನಗಳಿಗೆ ಮತ್ತು  ಸರ್ಕಾರಿ ವಾಹನಗಳಿಗೆ ಪ್ರವೇಶ ಉಚಿತ.

ಇಲ್ಲಿ ಕುಡಿಯುವ ನೀರು, ತಂಪು ಪಾನೀಯ, ಕುರುಕಲು ತಿಂಡಿ ಸಿಗುತ್ತದೆ.  ದಾರಿ ಮಧ್ಯೆ ತಿನ್ನಲು ತಾಜಾ ಕರಿದ ಮೀನು ಸಿಗುತ್ತದೆ.
ಕರ್ನಾಟಕದ ಪ್ರಮುಖ ಪ್ರವಾಸಿ ತಾಣವಾಗಿರುವ ಈ ಜಲಪಾತದಲ್ಲಿ ಭರಚುಕ್ಕಿ ಮೈದುಂಬಿ ಹರಿದರೆ ಗಗನಚುಕ್ಕಿ ಸ್ವಲ್ಪ ಮಂಕಾಗಿದ್ದಾಳೆ. ಆದರೂ ನಿಸರ್ಗದ ರಮಣೀಯತೆ ಸವಿಯಲು ಅಡ್ಡಿ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT