ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಡಲ್ ಟು ಜಂಗಲ್

Last Updated 26 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ಪೆಡಲ್ ಟು ಜಂಗಲ್ – ದಿ ಸೈಕಲ್ ಸಫಾರಿ...! ಹೆಸರೇ ಎಷ್ಟು ವಿಭಿನ್ನವಾಗಿದೆ ಅಲ್ವಾ? ಹೆಸರಷ್ಟೇ ಅಲ್ಲ, ಕಾರ್ಯಕ್ರಮ ಕೂಡ ಅಷ್ಟೇ ವಿಭಿನ್ನವಾಗಿದೆ. ಸೈಕಲ್ಲೇರಿ ಕಾಡು ಸುತ್ತಾಡುವ ಕಾರ್ಯಕ್ರಮವೇ ‘ಪೆಡಲ್ ಟು ಜಂಗಲ್- ದಿ ಸೈಕಲ್ ಸಫಾರಿ’.

ಪರಿಸರ ಮತ್ತು ವನ್ಯಜೀವಿಗಳ ಬಗ್ಗೆ ಕಾಳಜಿಯುಳ್ಳ ಪ್ರವಾಸ ರೂಪಿಸುವ ಉದ್ದೇಶದಿಂದ ರಾಜಸ್ಥಾನ ಅರಣ್ಯ ಇಲಾಖೆ ಈ ಕಾರ್ಯಕ್ರಮ ಆಯೋಜಿಸಿತ್ತು. ಕಳೆದ ವರ್ಷ ಆರಂಭವಾಗಿರುವ ಕಾನನದೊಳಗಿನ ಸೈಕಲ್ ಯಾನಕ್ಕೆ ಈಗ ಎರಡನೇ ವರ್ಷ.

ಸೈಕ್ಲಿಸ್ಟ್‌ಗಳು ಸೈಕಲ್ ಏರಿ ಉದಯಪುರದ ವನ್ಯಜೀವಿ ವಲಯದ ದಾರಿಯಲ್ಲಿ ಸುತ್ತಾಡುತ್ತಾ, ಅಲ್ಲಿನ ಜನರೊಟ್ಟಿಗೆ ಅರಣ್ಯ ಮತ್ತು ಕಾಡುಪ್ರಾಣಿಗಳ ಕುರಿತು ಸಂವಾದ ನಡೆಸುವಂತೆ ಕಾರ್ಯಕ್ರಮ ರೂಪಿಸಲಾಗಿತ್ತು.

ದೇಶದ ವಿವಿಧ ಭಾಗಗಳ ವನ್ಯಜೀವಿ - ಪರಿಸರ ಪ್ರಿಯ ಸೈಕ್ಲಿಸ್ಟ್‌ಗಳು ಭಾಗವಹಿಸಿದ್ದರು. ಕರ್ನಾಟಕದಿಂದ ಮಂಗಳೂರಿನ ಅಶೋಕ ವರ್ಧನ, ಅನಿಲ್ ಕುಮಾರ್ ಶಾಸ್ತ್ರಿ ಮತ್ತು ಹರಿಪ್ರಸಾದ್‌ ಶೇವಿರೆ ಪಾಲ್ಗೊಂಡಿದ್ದರು. ಈ ಮೂರ್ನಾಲ್ಕು ದಿನಗಳ ಕಾಲ ರಾಜಸ್ಥಾನದ ಕಾಡು ದಾರಿಯಲ್ಲಿ ಸೈಕಲ್ ತುಳಿಯುತ್ತಾ, ತಾವು ಕಂಡುಕೊಂಡ ಅನುಭವಗಳನ್ನು ಅಶೋಕವರ್ಧನ ಹಾಗೂ ಅನಿಲ್ ಅವರು ‘ಯುವ ಪುರವಣಿ’ಯೊಂದಿಗೆ ಹಂಚಿಕೊಂಡಿದ್ದಾರೆ. ಅದನ್ನು ಅವರ ಮಾತುಗಳಲ್ಲೇ ತಿಳಿಯುವುದು ಚೆಂದ.

‘ಮಂಗಳೂರಿನಿಂದ ನೇರ ಉದಯಪುರಕ್ಕೆ ರೈಲು ಸಂಪರ್ಕ ಇರಲಿಲ್ಲ. ಹಾಗಾಗಿ ಕಂಕನಾಡಿಯಿಂದ ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ವಡೋದರ ಮುಟ್ಟಿದೆವು. ಅಲ್ಲಿಂದ ಬಸ್ಸಿನಲ್ಲಿ ಉದಯಪುರ ತಲುಪಿ, ಕಾರ್ಯಕ್ರಮ ಆಯೋಜಕರು ನಿಗದಿಪಡಿಸಿದ್ದ ಹೋಟೆಲ್‌ನಲ್ಲಿ ಚೆಕ್ ಇನ್ ಆದೆವು. ಮೂವತ್ತು ತಾಸುಗಳ ಪ್ರಯಾಣದಿಂದ ದಣಿದಿದ್ದ ನಾವು, ವಿಶ್ರಾಂತಿಗೆ ಮೊರೆ ಹೋದೆವು’.

ಉದಯಪುರ ಜಿಲ್ಲೆಯ ಬಾಗ್ಧರಾ ವನ್ಯಜೀವಿ ಉದ್ಯಾನವನದಿಂದ ಯಾನ ಆರಂಭಿಸಿ ನಂತರ ಜಗತ್ ಗ್ರಾಮ, ಜೈಸಮಂದ್ ಸರೋವರ, ಸೀತಾಮಾತಾ ವನ್ಯಜೀವಿ ಅಭಯಾರಣ್ಯ ದಾಟಿ ದಮ ದಮಾ ಅರಣ್ಯ ಠಾಣೆಯಲ್ಲಿ ಪೂರ್ಣಗೊಳಿಸಲು ಆಯೋಜಕರು ಮಾರ್ಗ ನಿಗದಿಪಡಿಸಿದ್ದರು.

ನವೆಂಬರ್ 29ರ ಸಂಜೆ ಉದಯಪುರದ ‘ಬೈಕ್ ಸ್ಟುಡಿಯೊ’ದಲ್ಲಿ ಸೈಕಲ್ ಯಾನಿಗಳಿಗೆ ಸ್ವಾಗತ ಕೋರಲಾಯಿತು. ಭಿತ್ತಿಪತ್ರ ಹಾಗೂ ಯಾನಕ್ಕೆ ಅಗತ್ಯವಿರುವ ಜೆರ್ಸಿ ವಿತರಿಸಿದರು. ಕ್ರಮಿಸಲಿರುವ ಹಾದಿಯ ವಿವರ, ಮಾರ್ಗ ಮಧ್ಯೆ ಭೇಟಿಯಾಗುವ ಸ್ಥಳಗಳು ನ.30 ಹಾಗೂ ಡಿ.1ರಂದು ರಾತ್ರಿಗಳನ್ನು ಕಳೆಯುವ ಜಾಗ ತಿಳಿಸಿದರು. ರಾತ್ರಿ ವಾಸ್ತವ್ಯಕ್ಕೆ ಟೆಂಟ್ ವ್ಯವಸ್ಥೆ ಮಾಡಿದ್ದರು. ಯಾನದ ಅವಧಿಯಲ್ಲಿ ಕಾಡಿನ ನಡುವೆ ರಾತ್ರಿಗಳನ್ನು ಕಳೆದ ಆ ಅನುಭವ ಅಪರೂಪದ್ದು.

***

ನ.30ರ ಬೆಳಿಗ್ಗೆ ಬಾಗ್ಧರಾ ವನ್ಯಜೀವಿ ಉದ್ಯಾನದಿಂದ ಸೈಕಲ್ ಯಾನ ಆರಂಭ. 6-7 ಕಿ.ಮೀ. ಕ್ರಮಿಸಿ ಉದ್ಯಾನದಿಂದ ಹೊರಬಿದ್ದೆವು. ಮೊದಲ ಭೇಟಿ ಜಗತ್ ಎಂಬ ಗ್ರಾಮಕ್ಕೆ ಭೇಟಿ. ಇಲ್ಲಿರುವ ಐತಿಹಾಸಿಕ ಪ್ರಸಿದ್ಧಿಯುಳ್ಳ 10ನೇ ಶತಮಾನದ ಅಂಬಿಕಾ ದೇಗುಲ ವೀಕ್ಷಣೆಗಾಗಿ ಸವಾರಿಗೆ ಇಲ್ಲೊಂದು ಪುಟ್ಟ ವಿರಾಮ. ನಂತರ ಪಕ್ಕದಲ್ಲೇ ಇದ್ದ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಎಳೆಯರೊಂದಿಗೆ ಕೊಂಚ ಕಾಲ ಕಾಡು-ಪರಿಸರ ಕುರಿತು ಮಾತುಕತೆ.

ನಂತರ 15 ಕಿ.ಮೀ ದೂರದಲ್ಲಿರುವ ಜೈಸಮಂದ್‌ ಸರೋವರ ಮುಂದಿನ ಗುರಿ. ಇದು ಆ ದಿನದ ಯಾನದ ಕೊನೆಯ ತಾಣ. ಜೈಸಮಂದ್ ಏಷ್ಯಾದಲ್ಲಿಯೇ ಮಾನವ ನಿರ್ಮಿತವಾದ ಎರಡನೇ ಅತಿದೊಡ್ಡ ಸರೋವರ. ಇದರ ದಂಡೆಯಲ್ಲಿಯೇ ಆ ರಾತ್ರಿ ವಾಸ್ತವ್ಯ. ಹಾಗಾಗಿ ಟೆಂಟ್‌ಗಳನ್ನು ಮೊದಲೇ ಸಿದ್ಧಪಡಿಸಲಾಗಿತ್ತು. ಇಬ್ಬರು ಯಾನಿಗಳಿಗೆ ಒಂದರಂತೆ ಅವರವರ ಟೆಂಟ್‌ ನಿಗದಿಪಡಿಸಿದ ಬಳಿಕ ಮಧ್ಯಾಹ್ನದ ಊಟ. ನಂತರ ತಜ್ಞ ಮಾರ್ಗದರ್ಶಕರೊಂದಿಗೆ ಜೈಸಮಂದ್ ಸಮೀಪದಲ್ಲಿರುವ ರುಥಿ ರಾಣಿ ಮಹಲ್ ಬೆಟ್ಟಕ್ಕೆ ಚಾರಣ. 17ನೆಯ ಶತಮಾನದಲ್ಲಿ ಮಹಾರಾಣಾ ಜೈಸಿಂಗ್ ನಿರ್ಮಿಸಿದ ಈ ಮಹಲ್‌ಗೆ ಹವಾ ಮಹಲ್ ಎನ್ನುವ ಹೆಸರೂ ಇದೆ. ಪ್ರಸ್ತುತ ಭಾರತೀಯ ಪ್ರಾಚ್ಯವಸ್ತು ಇಲಾಖೆ ಇದನ್ನು ನಿರ್ವಹಿಸುತ್ತಿದೆ.

ಸೈಕಲ್ ಯಾನದಲ್ಲಿ ಏರುದಾರಿಯುದ್ದಕ್ಕೂ ಹಾಗೂ ಮಹಲ್ ಮೇಲ್ಭಾಗದಿಂದಲೂ ಕಾಣುವ ಸರೋವರದ ದೃಶ್ಯ ಮನಮೋಹಕ. ಸಂಜೆ ಸರೋವರದಲ್ಲಿ ದೋಣಿವಿಹಾರ, ನಂತರ ರಾಜಸ್ಥಾನದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಬಳಿಕ ರಾತ್ರಿಯ ಊಟ ಮುಗಿಸಿ ಸರೋವರದ ಮುಂಭಾಗ ಹಾಕಲಾಗಿದ್ದ ಟೆಂಟ್‌ಗಳಲ್ಲಿ ವಾಸ್ತವ್ಯ ಹೂಡಿದೆವು.

***

ಜೈಸಮಂದ್‌ ನಂತರದ ಮುಂದಿನ ಗುರಿ 70 ಕಿ.ಮೀ ದೂರದ ಧರಿಯಾವಾದ್‌. ಗ್ರಾಮಕ್ಕೆ ಪ್ರವೇಶಿಸುತ್ತಿದ್ದಂತೆ ಗ್ರಾಮಸ್ಥರಿಂದ ಸಾಂಪ್ರದಾಯಿಕ ಸ್ವಾಗತ. ಇಲ್ಲಿ ಕೊಂಚ ಸಮಯ ವಿರಮಿಸಿಕೊಂಡು, ಬೆಟ್ಟಗುಡ್ಡಗಳಲ್ಲಿನ ಗ್ರಾಮಗಳನ್ನು ಹಾದು ನಂತರದ ಗುರಿ ಸೀತಾಮಾತಾ ವನ್ಯಜೀವಿ ಅಭಯಾರಣ್ಯದ ಅನುಪ್ಪುರ ಅರಣ್ಯ ಠಾಣೆ. ಮಧ್ಯಾಹ್ನ ಮೂರಕ್ಕೆ ಇಲ್ಲಿ ಊಟ ಮುಗಿಸಿ ದಿನದ ಕೊನೆಯ ತಾಣವಾದ ಸೀತಾಮಾತಾ ತಲುಪಿದಾಗ ಸಂಜೆ 5.

ರಾತ್ರಿ ಕಳೆಯಲು ಅಲ್ಲಿಯೇ ಹರಿಯುವ ಝಕಮ್ ನದಿಗೆ ಅಡ್ಡಲಾಗಿರುವ ಸಣ್ಣದೊಂದು ಸೇತುವೆ ಮೇಲೆಯೇ ಎಲ್ಲರಿಗೂ ಟೆಂಟ್ ವ್ಯವಸ್ಥೆ. ಸುತ್ತಲಿನ ಕತ್ತಲೆ ಓಡಿಸಲು ಸಣ್ಣದೊಂದು ಜನರೇಟರ್‌ ನೆರವಿನಿಂದ ಬೆಳಕಿನ ವ್ಯವಸ್ಥೆಯಾಗಿತ್ತು. ಜತೆಗೆ ಒಂದಿಷ್ಟು ಅಗ್ಗಿಷ್ಟಿಕೆಗಳಿದ್ದವು. ಅದರ ಸುತ್ತಲೂ ರಾಜಸ್ಥಾನಿ ಬುಡಕಟ್ಟು ಗಾಯಕರು ಹಾಡಲಾರಂಭಿಸಿದರು. ಹಾಡು ಕೇಳುತ್ತಾ, ನದಿಯ ಜೋಗುಳದಲ್ಲಿ ನಿದ್ರೆಗೆ ಜಾರಿದೆವು.

***

ಸೈಕಲ್ ಯಾನದ ಬಳಲಿಕೆ ಕಳೆಯಲು ಮುಂಜಾನೆ ಕಾಡಿನಲ್ಲಿ ಅರ್ಧ ಗಂಟೆ ಯೋಗಾಭ್ಯಾಸ. ನಂತರ, ಸಫಾರಿಯ ಅಂತಿಮ ಗುರಿಯಾದ 30 ಕಿ.ಮೀ ದೂರದಲ್ಲಿರುವ ದಮ ದಮಾ ಅರಣ್ಯ ಠಾಣೆಗೆ ಯಾನ ಶುರು. ಇದು ಕೊಂಚ ಕಠಿಣವಾದ ಕಾಡಿನ ದಾರಿ. ಇಕ್ಕೆಲಗಳಲ್ಲಿದ್ದ ಹಸಿರ ಹೊದಿಕೆಯಿಂದಾಗಿ ಬಿಸಿಲಿನ ಝಳ ಅರಿವಿಗೆ ಬರಲೇ ಇಲ್ಲ. ಗಮ್ಯ ತಲುಪುತ್ತಿದ್ದಂತೆ ಬ್ಯಾಂಡ್ ಸೆಟ್‌ನೊಂದಿಗೆ ಅದ್ಭುತ ಸ್ವಾಗತ ದೊರಕಿತು. ನೃತ್ಯ ಕಾರ್ಯಕ್ರಮವೂ ಇತ್ತು. ನಂತರ ಮಧ್ಯಾಹ್ನದ ಊಟ. ಬಳಿಕ ಬೀಳ್ಕೊಡುಗೆ ಕಾರ್ಯಕ್ರಮ.

ಬಹುಶಃ ರಾಷ್ಟ್ರದಲ್ಲೇ ಪ್ರಥಮ ಎನ್ನಿಸುವ ‘ಸೈಕಲ್ ಯಾನ’ ಇದಾಗಿತ್ತು. ಇಲ್ಲಿ ಆಯೋಜಕರ ವೃತ್ತಿಪರತೆ ಎದ್ದು ಕಾಣಿಸುತ್ತಿತ್ತು. ಊಟ, ಉಪಾಹಾರ, ವಸತಿ ಸೇರಿದಂತೆ ಯಾನದಲ್ಲಿ ಯಾವುದೇ ಕೊರತೆಯಾಗಲಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳಾದ ರಾಹುಲ್ ಭಟ್ನಾಗರ್‌ ಮತ್ತು ಸುಹೇಲ್ ಮಜ್ಬೂರ್‌ ಅವರ ಪರಿಶ್ರಮದಿಂದ ಇಡೀ ಪ್ರವಾಸ ಉತ್ತಮ ಅನುಭವ ನೀಡಿತು. ಭಾಗವಹಿಸಿದವರ ಯೋಗಕ್ಷೇಮಕ್ಕೆ ಧಕ್ಕೆಯಾಗದಂತೆ ಅರಣ್ಯ ಇಲಾಖೆ ಮತ್ತು ಲೆ ಟೂರ್ ದೆ ಇಂಡಿಯಾದವರು ಶ್ರಮ ವಹಿಸಿದ್ದರು.

ಅರಣ್ಯ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮವಾದ್ದರಿಂದ ವನ್ಯಧಾಮದೊಳಗೆ ರಾತ್ರಿ ವಸತಿ ಸಾಧ್ಯವಾಯಿತು. ಇಲ್ಲವಾದಲ್ಲಿ ಸಾಧಾರಣ ಪ್ರವಾಸಿಗರಿಗೆ ಇಂಥ ಅವಕಾಶವಿಲ್ಲ. ಯಾನ ಮುಗಿಯುವ ವೇಳೆಗೆ ಜೀವಮಾನದ ಅನುಭವ ಪಡೆದ ತೃಪ್ತಿ ನಮ್ಮದಾಗಿತ್ತು.

**

ಪೆಡಲ್ ಟು ಜಂಗಲ್

* ಕ್ರಮಿಸಿದ ಹಾದಿ: 220 ಕಿ.ಮೀ.

* ಪ್ರವಾಸದ ಅವಧಿ: 3 ರಾತ್ರಿ 4 ಹಗಲು

* ಆಯೋಜನೆ: ರಾಜಸ್ಥಾನ ಅರಣ್ಯ ಇಲಾಖೆಯ ಉದಯಪುರ ವನ್ಯಜೀವಿ ವಲಯ ಮತ್ತು ‘ಲೆ ಟೂರ್ ದೆ ಇಂಡಿಯಾ’ ಸಹಯೋಗ

* ಪ್ರವಾಸದ ಶುಲ್ಕ: ತಲಾ ರೂ 9 ಸಾವಿರ

* ಮುಂದಿನ ಬಾರಿ ಈ ಸೈಕಲ್ ಸಫಾರಿಯಲ್ಲಿ ಪಾಲ್ಗೊಳ್ಳುವ ಯೋಚನೆ ಮನಸ್ಸಿನಲ್ಲಿ ಮೂಡುತ್ತಿದೆಯೇ? ಇಂತಹ ಪ್ರವಾಸದ ಮಾಹಿತಿಗೆ https://www.letourdeindia.com.

**

ಸೈಕ್ಲಿಸ್ಟ್‌ಗಳ ಯೋಗಕ್ಷೇಮ

ಮೂರು ದಿನವೂ ಯಾನದುದ್ದಕ್ಕೂ, ಸೈಕಲ್ ಯಾನಿಗಳಿಗೆ ದಣಿವಾರಿಸಿಕೊಳ್ಳಲು ಆಯೋಜಕರು ಅಲ್ಲಲ್ಲೇ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ಹಣ್ಣಿನ ರಸ, ಶಕ್ತಿವರ್ಧಕ ಪೇಯ, ಚಾಕಲೇಟ್ ಹಾಗೂ ತಾಜಾ ಹಣ್ಣುಗಳ ವ್ಯವಸ್ಥೆ ಮಾಡಿದ್ದರು. ಪ್ರತಿ ಗ್ರಾಮ ದಾಟುವಾಗ, ಹಳ್ಳಿಗರು ತಿಲಕವಿಟ್ಟು, ಚೆಂಡು ಹೂವಿನ ಹಾರ ಹಾಕಿ ಸ್ವಾಗತಿಸುತ್ತಿದ್ದರು. ಈ ಹೂವಿನ ಹಾರ ನೋಡಿ ನಮ್ಮ ಕಡೆ ಕುರಿ ಬಲಿ ಕೊಡುವಾಗಿನ ಚಿತ್ರಣ ಕಣ್ಮುಂದೆ ಬರುತ್ತಿತ್ತು ಎಂದು ಹಾಸ್ಯ ಮಾಡುತ್ತಾರೆ ತಂಡದ ಸದಸ್ಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT