ಮಂಗಳವಾರ, ಮೇ 26, 2020
27 °C

ನೆನೆ ನೆನೆಯುವ ನಡಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊ ದಲ ಮಳೆಹನಿ ಭೂಮಿಗೆ ತಾಕುತ್ತಿದ್ದಂತೆ ಮಳೆಯಲ್ಲಿ ನೆನೆಯಲು ಮನ ಬಯಸುತ್ತದೆ. ಆದರೆ ಈ ಸಿಲಿಕಾನ್‌ ಸಿಟಿಯಲ್ಲಿ ಅದಕ್ಕೆ ಜಾಗ ಎಲ್ಲಿ? ಆಫೀಸ್, ಮನೆಕೆಲಸದ ನಡುವೆ ಟ್ರಾಫಿಕ್‌ ಸುಸ್ತು ಮಾಡುತ್ತದೆ. ಇನ್ನು ಯಾಂತ್ರಿಕ ಜೀವನದಿಂದ ಬೇಸತ್ತವರಿಗೆ, ಮಳೆ ಅನುಭವಗಳನ್ನು ದಕ್ಕಿಸಿಕೊಳ್ಳಬೇಕು ಎಂದು ಬಯಸುವ ನಗರದ ಜನರಿಗೆ ಕೊಡೆ, ರೈನ್‌ಕೋಟ್‌ ಹಂಗಿಲ್ಲದೇ ಮಳೆಯಲ್ಲಿ ನೆನೆಯುತ್ತಾ ಸಂಪೂರ್ಣ ಒಂದು ದಿನ ಕಳೆಯುವ ಅವಕಾಶವನ್ನು ರೈನಥಾನ್‌ ತಂಡ ಕಲ್ಪಿಸಿದೆ.

ರೈನಥಾನ್‌ ಆರಂಭಿಸಿದವರು ನಗರದ ಕಿಶೋರ್‌ ಪಟವರ್ಧನ್‌. ಈಗ ಈ ತಂಡದಲ್ಲಿ 5 ಜನ ಆಡ್ಮಿನ್‌ಗಳು ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಕಾಯಂ ಸದಸ್ಯರಿದ್ದಾರೆ. ಇದನ್ನು ಆರಂಭಿಸಿದ್ದು 2013ರಲ್ಲಿ. ಐದು ವರ್ಷಗಳ ಹಿಂದೆ ಕಿಶೋರ್‌ ಪಟವರ್ಧನ್‌ ಒಂದಿನ ಆಫೀಸಿನಿಂದ ಮನೆಗೆ ಮರಳುತ್ತಿರುವಾಗ ಮಳೆಗೆ ಸಿಕ್ಕಿಹಾಕಿಕೊಂಡರು. ಸುಮಾರು ದೂರ ಮಳೆಯಲ್ಲಿ ನೆನೆಯುತ್ತಾ ಸಾಗಿದಾಗ ಅವರಿಗೆ ಹೊಳೆದದ್ದು ರೈನಥಾನ್‌ ಕಲ್ಪನೆ.

ಈ ಟ್ರಾಫಿಕ್‌ ಕಿರಿಕಿರಿಯಲ್ಲಿ ನೆನಯುವುದಕ್ಕಿಂತ, ಪ್ರಶಾಂತ ಪರಿಸರದಲ್ಲಿ ಪರಿಸರ ಸೊಬಗಿನ ಜೊತೆಗೆ ಮಳೆಯ ಆನಂದವನ್ನು ಅನುಭವಿಸುವಂತಾದರೆ ಎಷ್ಟು ಚೆನ್ನ? ಎಂದು ಯೋಚಿಸಿ ಕಾರ್ಯಮಗ್ನರಾದರು. ಪ್ರತಿವರ್ಷ ಜೂನ್‌ನಿಂದ ಆಗಸ್ಟ್‌ನೊಳೊಗೆ ಎರಡು ಬಾರಿ ಸಮಾನ ಮನಸ್ಕರ ತಂಡ ಪೂರ್ವನಿಗದಿಯಾದ ಜಾಗಕ್ಕೆ ಒಂದು ದಿನ 15- 20 ಕಿ.ಮೀ ದೂರ ಮಳೆಯಲ್ಲಿ ನೆನೆಯುತ್ತ ನಡೆಯುತ್ತಾರೆ. ಇಡೀ ದಿನ ಕೊಡೆ, ಟೋಪಿ, ರೈನ್‌ಕೋಟ್‌ ಇವ್ಯಾವುದನ್ನು ಬಳಸದೆ ಎಲ್ಲರೊಂದಿಗೆ ಬೆರೆತು ಗುರಿ ಸಾಗುವುದು ಈ ತಂಡದ ವಿಶೇಷ. 

ಮಳೆಯಲ್ಲಿ ನೆನೆಯಬೇಕು. ಬಾಲ್ಯದ ದಿನಗಳನ್ನು ಮತ್ತೊಮ್ಮೆ ನೆಡನಪಿಸಿಕೊಳ್ಳಬೇಕು ಎಂದು ಬಯಸುವವರಿಗೆ ರೈನಥಾನ್‌ ಪಿಕ್‌ನಿಕ್‌ ಉತ್ತಮ ಆಯ್ಕೆ. ಈ ಬಾರಿ ಆರನೇ ವರ್ಷಕ್ಕೆ ರೈನಥಾನ್‌ ಕಾಲಿಟ್ಟಿದ್ದು, 11ನೇ ಬಾರಿಯ ಕಾರ್ಯಕ್ರಮವು ಜೂನ್‌ 23ರಂದು ಮಡಿಕೇರಿಯ ಭಾಗಮಂಡಲದ ಬಳಿಯ ಬಾಚಿಮಲೆ- ತೊಡಿಕಾನವರೆಗೆ ಸುಮಾರು 12 ಕಿ.ಮೀ ನಡಿಗೆ ಮಾಡಲಿದೆ.

ಮಳೆ ಹೆಚ್ಚು ಬೀಳುವ, ಇಡೀ ದಿನ ಮಳೆ ಬೀಳುವ ಪ್ರದೇಶಗಳನ್ನೇ ಈ ತಂಡ ಆಯ್ದುಕೊಳ್ಳುತ್ತದೆ. ಈ ಹಿಂದೆ ಚಾರ್ಮಾಡಿ ಘಾಟಿ, ಆಗುಂಬೆ ಘಾಟಿ, ಬಿಸಿಲೆ ಘಾಟಿ, ಎಳ್ನೀರ್ ಘಾಟಿ, ಮೆಣಸಿನ ಹಾಡ್ಯ, ದೇವರಮನೆ, ಗಾಳಿಗುಡ್ಡೆ, ಉದಕಮಂಡಲ, ಬಲ್ಲಾಳರಾಯನ ದುರ್ಗ, ಹಳುವಳ್ಳಿ ಸ್ಥಳಗಳಿಗೆ ಈ ತಂಡ ತೆರಳಿತ್ತು. 

‘ಇಲ್ಲಿತನಕ ಪ್ರತಿ ಬಾರಿ ಹೋದಾಗಲೂ ತಂಡದ ಸದಸ್ಯರೆಲ್ಲರೂ ಮಳೆಯಲ್ಲಿ ಸಂಪೂರ್ಣ ನೆನೆದಿದ್ದೆವು. ಆದರೆ ಯಾರೂ ನೆಗಡಿ, ಶೀತ ಅಂತಾ ಮಲಗಿದ್ದೇ ಇಲ್ಲ’ ಎಂದು ಹೇಳುವ ತಂಡದ ಅಡ್ಮಿನ್‌ ರಶ್ಮಿ ಪಟವರ್ಧನ್, ‘ಇದು ಬರೀ ಮಳೆಯಲ್ಲಿ ನೆನೆಯುವ ಕಾರ್ಯಕ್ರಮ ಮಾತ್ರ ಅಲ್ಲ. ಪರಿಸರ ಕಾಳಜಿಯನ್ನೂ ವಹಿಸುತ್ತೇವೆ. ಬೀಜದುಂಡೆಗಳನ್ನು ಕೊಂಡು ಹೋಗಿ ಕಾಡಿನ ಮಾರ್ಗದಲ್ಲಿ ಬಿಸಾಕುತ್ತೇವೆ. ಮನೆಯಲ್ಲಿ ತಿಂದ ಹಣ್ಣುಗಳ ಬೀಜಗಳನ್ನು ತೆಗೆದುಕೊಂಡು ಹೋಗಿ, ಅದನ್ನೂ ಕಾಡಿನಲ್ಲಿ ಬಿಸಾಕುತ್ತೇವೆ’ ಎಂದು ಹೇಳುತ್ತಾರೆ. 

ತಿಂಗಳ ಹಿಂದೆಯೇ ರೈನಥಾನ್‌ ತಂಡ ಪೂರ್ವ ತಯಾರಿ ನಡೆಸಿರುತ್ತದೆ. ತಂಡದ ಎಲ್ಲಾ ಸದಸ್ಯರಿಗೆ ಒಂದೇ ರೀತಿಯ ಟೀ–ಶರ್ಟ್‌ ನೀಡಲಾಗುತ್ತದೆ. ಬಸ್‌ ನಿಗದಿ, ದಾರಿ ಮಧ್ಯದಲ್ಲಿ ಮಧ್ಯಾಹ್ನಕ್ಕೆ ಊಟ ತಯಾರಿ, ಬೆಳಗ್ಗಿನ ಉಪಾಹಾರ, ಸ್ಥಳ ನಿಗದಿ ಬಗ್ಗೆ ಅಡ್ಮಿನ್‌ಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ. ಇನ್ನು ನಡಿಗೆಯುದ್ದಕ್ಕೂ ಟೋಪಿ ಬೇಕಾ ಟೋಪಿ, ಸ್ಕಿಪ್ಪಿಂಗ್‌ ಮೊದಲಾದ ದೇಶಿ ಆಟಗಳು, ಭೇಟಿ ನೀಡುತ್ತಿರುವ ಊರಿನಲ್ಲಿನ ಗ್ರಾಮೀಣ ಪ್ರತಿಭೆಗೆ ಸನ್ಮಾನ, ನಾಟಕ, ನೃತ್ಯ ಸೇರಿದಂತೆ ಕೆಲ ಸಾಂಸ್ಕೃತಿಕ ಕಾರ್ಯಕ್ರಮಗಳೂ ಇರುತ್ತವೆ. 

ಈ ಬಾರಿಯ ರೈನಥಾನ್ ವಿಶೇಷ: ಭಾಗಮಂಡಲದ ಬಳಿಯ ಬಾಚಿಮಲೆ- ತೊಡಿಕಾನವರೆಗೆ ಸುಮಾರು 12 ಕಿಲೋಮೀಟರು ನಡಿಗೆ. ಜೂನ್ 22 ರಾತ್ರಿ ಬೆಂಗಳೂರಿನಿಂದ ಹೊರಟು 23ರಂದು ರೈನಥಾನ್ ಮುಗಿಸಿ ರಾತ್ರಿ ಅಲ್ಲಿಂದ ಹೊರಟು 24 ಬೆಳಿಗ್ಗೆ ನಗರಕ್ಕೆ ವಾಪಸ್‌. ಒಬ್ಬರಿಗೆ ಶುಲ್ಕ ₹2,700. 

ಮಾಹಿತಿಗೆ– www.rainathon.com 


ಕಿಶೋರ್‌ ಪಟವರ್ಧನ್‌

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.