ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಡಗೆರೆ ಗುಡ್ಡ: ಚಾರಣಿಗರ ಸೆಳೆಯುವ ತಾಣ

ಯಳಂದೂರು ಪಟ್ಟಣದಿಂದ ಆರು ಕಿಲೋ ಮೀಟರ್‌ ದೂರದಲ್ಲಿರುವ ಸ್ಥಳ
Last Updated 16 ಮೇ 2021, 2:37 IST
ಅಕ್ಷರ ಗಾತ್ರ

ಯಳಂದೂರು: ಇಲ್ಲಿನ ಎತ್ತರದ ಸ್ಥಳಗಳಿಗೆ ಯಾರೋ ತಂದು ಇಟ್ಟಂತಿರುವ ಬಂಡೆಗಳು, ದೂರದ ಊರುಗಳನ್ನು ನೋಡುತ್ತ, ಹೂ ಮುಡಿದು ಕುಳಿತಂತೆ ಭಾಸವಾಗುವ ಬೃಹತ್‌ ಕಲ್ಲುಗಳು... ‌

ನಾವಿಲ್ಲಿ ವರ್ಣಿಸುತ್ತಿರುವುದು ‘ವಡಗೆರೆ ಬಂಡೆಗಳ ಗುಡ್ಡ’ವನ್ನು. ಪಟ್ಟಣದಿಂದ ಬಿಳಿಗಿರಿರಂಗನ ಬೆಟ್ಟಕ್ಕೆ ತೆರಳುವ ಮಾರ್ಗದ 6 ಕಿ.ಮೀ ದೂರದಲ್ಲಿ ಈ ಗುಡ್ಡ ಇದೆ. ಮೂರು ಮಾರ್ಗಗಳಿಂದ ಇಲ್ಲಿಗೆ ತಲುಪಬಹುದು. ಸಮೀಪದ ಗ್ರಾಮ ವಡಗೆರೆ. ಹೆಸರಿಗೆ ತಕ್ಕಂತೆ ಗುಡ್ಡಕ್ಕೆ ರಂಗನಾಥಸ್ವಾಮಿ ಮತ್ತು ಆಂಜನೇಯನ ಸ್ನೇಹದ ಕಥೆಗಳು ಬೆಸೆದುಕೊಂಡಿದ್ದು, ಇಲ್ಲಿನ ಬಂಡೆ ಕಲಾಕೃತಿಗಳ ಮೂಲಕ ಪುರಾಣ ಐತಿಹ್ಯ ಕಟ್ಟಿಕೊಡುತ್ತವೆ.

ಈ ಗುಡ್ಡ ಏರಿ ನಿಂತರೆ, ಸುತ್ತಮುತ್ತಲಿನ ಪ್ರಕೃತಿಯನ್ನು ವೀಕ್ಷಿಸಿ ಆನಂದಿಸಬಹುದು. ಇಲ್ಲಿನ ಬಂಡೆಗಳಲ್ಲಿ ಮೂಡಿರುವ ಹಲವಾರು ಗೆರೆ, ವಿವಿಧ ಆಕೃತಿಗಳಲ್ಲಿ ಅರಳಿದ ಶಿಲೆ ಮತ್ತು ಅವುಗಳ ಸುತ್ತ ಹರಡಿಕೊಂಡ ಸಸ್ಯ ರಾಶಿ ಆಕರ್ಷಿಸುತ್ತವೆ.

ಹಲವು ಪಾರ್ಶ್ವಗಳಲ್ಲಿ ಪುಟ್ಟ ಗುಹೆಗಳಿವೆ. ಒಂದರ ಮೇಲೊಂದು ಪೇರಿಸಿಟ್ಟ ವಿಶಿಷ್ಟ ಮತ್ತು ವಿಚಿತ್ರ ಆಕೃತಿಯ ಕಲ್ಲುಗಳು ವಿವಿಧ ದಿಕ್ಕಿನಿಂದ ಪ್ರಾಣಿ, ಪಕ್ಷಿಗಳ ಹಾವ, ಭಾವವನ್ನು ತೋರುತ್ತವೆ. ಮೂರು ಕಲ್ಲುಗಳ ಮೇಲೆ ಕುಳಿತ ಬಂಡೆಗೆ ಸ್ಥಳೀಯರು ಪೂಜಿಸುತ್ತಾರೆ.

ಕಂದಾಯ ಇಲಾಖೆಗೆ ಸೇರಿದ ಗುಡ್ಡವನ್ನು ಅಭಿವೃದ್ಧಿ ಮಾಡಿ, ಚಾರಣಕ್ಕೆ ಮುಕ್ತಗೊಳಿಸುವ ಬಗ್ಗೆ ಯೋಜನೆ ರೂಪಿಸಲಾಗಿತ್ತು. ನಂತರ ಗುಡ್ಡದ ಸಮೀಪ ಬುದ್ದ, ಆಂಜನೇಯನ ಬೃಹತ್ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಬಗ್ಗೆ ವರ್ಚೆ ನಡೆದಿತ್ತು. ಈಗ ಒತ್ತುವರಿ ಸಮಸ್ಯೆಯಿಂದ ಗುಡ್ಡದ ವ್ಯಾಪ್ತಿ ಕಿರಿದಾಗಿದೆ ಎಂದು ಪರಿಸರ ಪ್ರಿಯರು ಬೇಸರ ವ್ಯಕ್ತಪಡಿಸುತ್ತಾರೆ.

ರಮ್ಯ ತಾಣದ ಮಣ್ಣಿಗೆ ಕನ್ನ: ‘ಬಂಡೆಗಳ ಮೇಲೆ ನಿಂತರೆ ನವಿಲುಗಳ ಕೂಗು, ಬಣ್ಣದ ಚಿಟ್ಟೆಗಳ ಕಲರವ ಕೇಳಿಸುತ್ತದೆ. ತುಂತುರು ಮಳೆಯಲ್ಲಿ ಒಣಭೂಮಿ ಸಸ್ಯವರ್ಗ, ಅತಿಥಿಗಳಂತೆ ಕಾಣಬರುವ ಕಾಡು ಹೂ, ಔಷಧೀಯ ಗಿಡ, ಕಾರೆ, ಮಜ್ಜಿಗೆ ಮತ್ತು ರೋಜಾ ಹಣ್ಣುಗಳ ರುಚಿಯನ್ನು ಆಸ್ವಾದಿಸಬಹುದು. ಪ್ರವಾಸಿಗರ ಸಂಖ್ಯೆ ಹೆಚ್ಚಿಲ್ಲವಾದ್ದರಿಂದ ಪ್ಲಾಸ್ಟಿಕ್ ತ್ಯಾಜ್ಯವಿಲ್ಲ. ಆದರೆ, ಗುಡ್ಡದ ಬುಡವನ್ನು ಕೊರೆಯಲಾಗಿದೆ. ಇಂತಹ ಕಡೆ ತ್ಯಾಜ್ಯ ತುಂಬಲಾಗಿದೆ. ಇದರಿಂದ ಸುಂದರ ಪರಿಸರಕ್ಕೆ ಕುತ್ತು ಬರಬಹುದು’ ಎಂದು ಅರಣ್ಯ ಇಲಾಖೆಯ ರಮೇಶ್ ಆತಂಕ ವ್ಯಕ್ತಪಡಿಸಿದರು.

ರಾಕ್ಷಸನನ್ನು ಸಂಹರಿಸಿದ ಸ್ಥಳ

‘ಗುಡ್ಡದ ಗುಹೆಯಲ್ಲಿ ವಾಸವಿದ್ದ ಕಿವಿಮೂಲ ರಾಕ್ಷಸನ ಹಾವಳಿ ಹೆಚ್ಚಾಗಿತ್ತು. ವಸಿಷ್ಠ ಮಹರ್ಷಿ ಉಪಟಳ ತಾಳಲಾರದೆ, ನಾರಾಯಣನಲ್ಲಿ ಬೇಡಿಕೊಂಡರು. ರಂಗನಾಥ ರಾಕ್ಷಸನನ್ನು ಸಂಹರಿಸಲು ಆಂಜನೇಯನಿಗೆ ಸೂಚಿಸಿದ. ಕಾಳಗದಲ್ಲಿ ಕಿವಿಮೂಲ ಹತನಾದ, ರಂಗಸ್ವಾಮಿ ಬರುವುದನ್ನೇ ಕಾಯುತ್ತ ಬೆಟ್ಟದ ಕಡೆಗೆ ಮಲಗಿದ ಆಂಜನೇಯನಿಗೆ ಭಕ್ತರು ಈಗಲೂ ಎಲೆ, ಅಡಿಕೆ ಹಾಕಿಕೊಳ್ಳಲು, ಸುಣ್ಣವನ್ನು ಸುರಿಯುತ್ತಾರೆ. ಇದರ ಗುರುತು ಈಗಲೂ ಕಲ್ಲು ಬಂಡೆಗಳಲ್ಲಿ ಮೂಡಿವೆ ಎಂದು ಭಕ್ತರು ನಂಬುತ್ತಾರೆ’ ಎಂದು ಬಿದ್ದ ಆಂಜನೇಯಸ್ವಾಮಿ ದೇವಳದ ಅರ್ಚಕ ಗಿರೀಶ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT