ಬುಧವಾರ, ಜೂನ್ 3, 2020
27 °C

ಮೂಢನಂಬಿಕೆಗೆ ಸಡ್ಡುಹೊಡೆದಿದ್ದ ಅಂಬೇಡ್ಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

1942ರ ಜುಲೈ 22ರಂದು ಬಾಬಾಸಾಹೇಬ್ ಅಂಬೇಡ್ಕರ್ ಅವರು ಅಂದಿನ ಗವರ್ನರ್ ಜನರಲ್‌ರ ಕಾರ್ಯಕಾರಿ ಸಮಿತಿಯಲ್ಲಿ ಕೇಂದ್ರ ಕಾರ್ಮಿಕ ಸಚಿವರಾಗಿ (ಈಗಿನ ಕ್ಯಾಬಿನೆಟ್ ದರ್ಜೆಯ ಮಂತ್ರಿ) ಅಧಿಕಾರ ಸ್ವೀಕರಿಸಿದರು. ಅವರಿಗೆ ಲೋಕೋಪಯೋಗಿ, ನೀರಾವರಿ ಮತ್ತು ವಸತಿ ಇಲಾಖೆಗಳ ಹೊಣೆ ಕೂಡ ವಹಿಸಲಾಗಿತ್ತು. ಹಾಗೆ ಅಧಿಕಾರ ಸ್ವೀಕರಿಸಿದಾಗ ಸಹಜವಾಗಿ ಅವರಿಗೆ ದೆಹಲಿಯಲ್ಲಿ ಮನೆಯೊಂದನ್ನು ಹಂಚಿಕೆ ಮಾಡಿ, ಮಂತ್ರಿಗಳಿಗಾಗಿ ಮೀಸಲಿಟ್ಟಿದ್ದ ಹಲವು ಸರ್ಕಾರಿ ವಸತಿಗೃಹಗಳನ್ನು ತೋರಿಸಲಾಯಿತು. ಪೃಥ್ವಿರಾಜ್‌ ಮಾರ್ಗದ 22ನೇ ಸಂಖ್ಯೆಯ ವಸತಿಗೃಹವನ್ನು ಅಂಬೇಡ್ಕರ್‌ ತಮಗಾಗಿ ಆರಿಸಿಕೊಂಡರು.

ಅಂಬೇಡ್ಕರ್‌ ಅಭಿರುಚಿಗೆ ತಕ್ಕಂತೆ ಆ ವಸತಿಗೃಹವಿತ್ತು. ಆದರೆ ಹಲವು ವರ್ಷಗಳ ಕಾಲ ಅದು ಖಾಲಿ ಬಿದ್ದಿತ್ತು! ಬ್ರಿಟಿಷ್ ಅಧಿಕಾರಿಗಳು ಕೂಡ ಅಲ್ಲಿ ವಾಸ ಮಾಡಲು ಹಿಂದೇಟು ಹಾಕಿದ್ದರು. ಕಾರಣ, ಅದಕ್ಕೆ ‘ದೆವ್ವದ ಮನೆ’ ಎಂಬ ಕುಖ್ಯಾತಿ ಇತ್ತು. ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳು ಸಹ ‘ಆ ಮನೆಯಲ್ಲಿ ಇರಬೇಡಿ’ ಎಂದು ಅಂಬೇಡ್ಕರ್‌ ಅವರಿಗೆ ಸಲಹೆ ನೀಡಿದ್ದರಂತೆ. ಹೀಗೆ ಸಲಹೆ ಕೊಟ್ಟವರಿಗೆ ಅಂಬೇಡ್ಕರ್‌ ಕೊಟ್ಟ ಉತ್ತರ– ‘ನಾನು ರಾಜಕೀಯ ಪ್ರವೇಶಿಸಿದಂದಿನಿಂದ ಅನೇಕ ಬಗೆಯ ದೆವ್ವ, ಭೂತ- ಪ್ರೇತಗಳ ಜೊತೆ ಹೋರಾಡಿದ್ದೇನೆ. ನಾನೊಬ್ಬ ಸುಧಾರಕನಷ್ಟೇ ಅಲ್ಲ, ಜಾದೂಗಾರ್ (ಮಾಂತ್ರಿಕ) ಕೂಡ ಹೌದು. ಈ ಮನೆಯ ವಿಷಯದಲ್ಲೂ ಅಷ್ಟೇ, ಈ ಮನೆ ಕೂಡ ನನಗೆ ಒಂದು ಹೊಸ ಅನುಭವವಾಗಲಿ’.

ಆ ನಂತರ ಆ ಬಂಗಲೆಯಲ್ಲಿ ಆಗಬೇಕಿದ್ದ ಸಣ್ಣಪುಟ್ಟ ರಿಪೇರಿಗಳನ್ನು ಮಾಡಲಾಯಿತು. ಹೊಸದಾಗಿ ಹುಲ್ಲು ಹಾಸು,
ಹೂವಿನ ಸಾಲುಗಳು ನಳನಳಿಸಲಾರಂಭಿಸಿದವು. ನೋಡನೋಡುತ್ತಲೇ ಇಡೀ ಕಟ್ಟಡ ಕಂಗೊಳಿಸಲಾರಂಭಿಸಿತ್ತು! ಆ ಮನೆಯನ್ನು ನಿರಾಕರಿಸಿದ್ದ ವೈಸರಾಯ್ ಅವರ ಮಂತ್ರಿಮಂಡಲದ ಇತರ ಸದಸ್ಯರು ಸಹ ಮನೆಯನ್ನು ನೋಡಿ ಅಕ್ಷರಶಃ ಅಚ್ಚರಿಗೊಂಡರು. ಸ್ವತಃ ವೈಸರಾಯ್ ಲಾರ್ಡ್ ಲೆನ್‌ಲಿತ್‌ಗೊ, ತಮ್ಮನ್ನು ಭೇಟಿಮಾಡಲು ಬರುತ್ತಿದ್ದ ವಿದೇಶಿ ಗಣ್ಯರಿಗೆ ಅಂಬೇಡ್ಕರರ ಈ ಬಂಗಲೆಗೂ ಭೇಟಿ ಕೊಡುವಂತೆ, ಅಲ್ಲಿಯ ಉದ್ಯಾನದ ಸೌಂದರ್ಯವನ್ನು ಸವಿಯುವಂತೆ ಸೂಚಿಸಲಾರಂಭಿಸಿದ್ದರು. ಆ ಬಂಗಲೆಗೆ ಭೇಟಿ ನೀಡಿದ್ದ ಒಬ್ಬ ಅಮೆರಿಕನ್ ಮಹಿಳೆ, ಅಂಬೇಡ್ಕರ್‌ ವಾಸಿಸುತ್ತಿದ್ದ ಈ ಬಂಗಲೆಯನ್ನು ಚಿತ್ರೀಕರಿಸಿದ್ದರು ಮತ್ತು ತನ್ನ ಪ್ರತಿಕ್ರಿಯೆಯಲ್ಲಿ ಆಕೆ, ಓರ್ವ ಅಸ್ಪೃಶ್ಯ ಭಾರತೀಯ ಹಚ್ಚ ಹಸಿರಿನಿಂದ ಕೂಡಿದ ಇಂಥ ಭವ್ಯ ಬಂಗಲೆಯಲ್ಲಿ ಹೇಗೆ ವಾಸಿಸುತ್ತಿದ್ದಾರೆ, ಅದರ ಸೌಂದರ್ಯ ಯಾವ ಪರಿ ಇದೆ ಎಂದು ಮನಃಪೂರ್ವಕವಾಗಿ ವರ್ಣಿಸಿದ್ದರು.

ಆ ಬಂಗಲೆಯ ಉದ್ಯಾನದ ಗಿಡಗಳಿಗೆ ಸ್ವತಃ ಅಂಬೇಡ್ಕರರೇ ಆಗಾಗ ನೀರುಣಿಸುತ್ತಿದ್ದರು, ಮತ್ತದರ ನಿತ್ಯಹರಿದ್ವರ್ಣ ನೋಟಕ್ಕೆ ಅವರೇ ಕಾರಣರಾಗಿದ್ದರು. ದೆವ್ವದ ಮನೆ ಎಂದು ಖ್ಯಾತಿ ಪಡೆದಿದ್ದ ಆ ಮನೆಯಲ್ಲಿ ಅಂಬೇಡ್ಕರ್‌ ನಾಲ್ಕು ವರ್ಷ ವಾಸವಿದ್ದರು (My Experiences and Memories of Dr.Babasaheb Ambedkar by Shankarananda Shastri, Pg.112).

ದುರಂತವೆಂದರೆ ಈಗಿನ ಮಂತ್ರಿ ಮಹೋದಯರು ಎಲ್ಲದಕ್ಕೂ ಗಳಿಗೆ, ಶಾಸ್ತ್ರ- ಪುರಾಣ ನೋಡುತ್ತಾರೆ. ವಾಸ್ತು ನೋಡದೆ ತಮ್ಮ ವಾಸದ ಮನೆಗೆ ಅವರು ಪ್ರವೇಶಿಸುವುದೇ ಇಲ್ಲ. ಕೆಲವರ ಕೈಗಳಲ್ಲಂತೂ ನಿಂಬೆಹಣ್ಣು ಸದಾ ಇರಲೇಬೇಕು. ಸರ್ಕಾರಿ ಕಾಮಗಾರಿ- ಕಟ್ಟಡಗಳ ಉದ್ಘಾಟನೆಗೂ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ರಾಹುಕಾಲ- ಗುಳಿಕಕಾಲ ನೋಡಲಾಗುತ್ತಿದೆ. ನಮ್ಮ ಮಂತ್ರಿಗಳಿಗೆ ಅಂಬೇಡ್ಕರ್‌ರ ಈ ನಡೆ ಆದರ್ಶವಾಗುವುದು ಯಾವಾಗ?

–ರಘೋತ್ತಮ ಹೊ.ಬ., ಮೈಸೂರು

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.