ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರತ್ವ ಕಾಯ್ದೆ ಪ್ರತಿಭಟನೆ Live | ಪ್ರಜೆಗಳ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗದಿರಲಿ: ಹೈಕೋರ್ಟ್‌
LIVE

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳು ಶುಕ್ರವಾರ 2ನೇ ದಿನಕ್ಕೆ ಕಾಲಿಟ್ಟಿವೆ. ಮಂಗಳೂರಿನಲ್ಲಿ ಲಾಠಿ ಚಾರ್ಜ್ ಹಾಗೂ ಬಂಧನ ಪರ್ವ ಮುಂದುವರಿದಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಉಳಿದೆಲ್ಲೆಡೆ ಶಾಂತಿಯುತ ವಾತಾವರಣ ನೆಲೆಸಿದ್ದು, ಮಧ್ಯಾಹ್ನದ ನಂತರ ಪ್ರತಿಭಟನೆಗಳ ಕಾವು ಹೆಚ್ಚಾಗಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.
Last Updated 20 ಡಿಸೆಂಬರ್ 2019, 12:32 IST
ಅಕ್ಷರ ಗಾತ್ರ
11:5920 Dec 2019

ಬೆಂಗಳೂರಿನಲ್ಲಿ ವಿಧಿಸಿರುವ ನಿಷೇಧಾಜ್ಞೆ ಅಬಾಧಿತ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿದ ಪ್ರತಿಭಟನೆಗಳಿಗೆ ನೀಡಿದ್ದ ಅನುಮತಿ ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್‌. 

ಸಿ ಆರ್ ಪಿಸಿ ಕಲಂ 144 ರಡಿ ಹೊರಡಿಸಿರುವ ಆದೇಶದ ಬಗ್ಗೆ ವಿಸ್ತೃತ ವಿಚಾರಣೆ ಅಗತ್ಯ ವಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ.

"ಅರ್ಜಿದಾರರು  ಪ್ರತಿಭಟನೆಗೆ ಅನುಮತಿ ಕೋರಿ ಹೊಸದಾಗಿ ಅರ್ಜಿ ಸಲ್ಲಿಸಬೇಕು, ಆ ಅರ್ಜಿಗಳನ್ನು ಮೂರು ದಿನಗಳಲ್ಲಿ ವಿಲೇವಾರಿ ಮಾಡಬೇಕು. ಆಗ ಮೂಲಭೂತ ಹಕ್ಕುಗಳಿಗೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು. ಅನುಮತಿ ನೀಡುವ ಮುನ್ನ ಕಾನೂನು ಪ್ರಕಾರ ಪ್ರಕ್ರಿಯೆ ಅನುಸರಿಸಬೇಕು" ಎಂದು ವಿಭಾಗೀಯ ನ್ಯಾಯಪೀಠದ ನಿರ್ದೇಶನ.

ವಿಚಾರಣೆಯನ್ನು ಜನವರಿ 7ಕ್ಕೆ ಮುಂದೂಡಿಕೆ. ನಾಳೆ ರಾತ್ರಿ ನಿಷೇಧಾಜ್ಞೆ ಮುಕ್ತಾಯದ ನಂತರ ಅದನ್ನು ವಿಸ್ತರಣೆ ಮಾಡುವ ಶಂಕೆ ವ್ಯಕ್ತಪಡಿಸಿದ್ದಾರೆ, ಹಾಗಾಗಿ ನಿಷೇಧಾಜ್ಞೆ ಮುಂದುವರಿಸುವುದಾದರೆ ಅಭಿಪ್ರಾಯ ಸಂಗ್ರಹದ ನಂತರ ಆದೇಶ ಮಾಡಬೇಕು ಎಂದು ಹೈಕೋರ್ಟ್‌ ಆದೇಶ.

11:5020 Dec 2019

ಕೇರಳದ ಪತ್ರಕರ್ತರ ಬಿಡುಗಡೆ

ಮಂಗಳೂರಿನಲ್ಲಿ ಪೌರತ್ವ ಕಾಯ್ದೆ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ವರದಿ ಮಾಡಲು ಬಂದು ಬಂಧನಕ್ಕೀಡಾಗಿದ್ದ ಕೇರಳದ ಪತ್ರಕರ್ತರನ್ನು ಬಿಡುಗಡೆ ಮಾಡಲಾಗಿದೆ. 

11:2420 Dec 2019

ಸರಕಾರ ಇರುವುದು ಪ್ರಜೆಗಳ ರಕ್ಷಣೆಗೆ: ದೇವೇಗೌಡ ಟ್ವೀಟ್‌

ಮಂಗಳೂರಿನಲ್ಲಿ ನಡೆದಿರುವ ಘಟನೆ ದುರದೃಷ್ಟಕರ. ಅಮಾಯಕ ಯುವಕರಿಬ್ವರು ಪೊಲೀಸರ ಗೋಲಿಬಾರ್ ಗೆ ಬಲಿಯಾಗಿದ್ದಾರೆ. ಸರ್ಕಾರದ ಸಚಿವರುಗಳೇ ಗಲಭೆಗೆ ಕುಮ್ಮಕ್ಕು ಕೊಡುವಂತಹ ಹೇಳಿಕೆ ನೀಡಿ ಜನರನ್ನು ಪ್ರಚೋದಿಸುತ್ತಿರುವುದು ಖಂಡನಾರ್ಹ.

ನಾನು ಕೇರಳದಲ್ಲಿ ಚಿಕಿತ್ಸೆಯಲ್ಲಿದ್ದೇನೆ. ಪಕ್ಷದ ರಾಷ್ಟ್ರೀಯ ನಾಯಕರಾದ ಬಿಎಂ ಫಾರೂಕ್ ಅವರು ಮಂಗಳೂರಿನಲ್ಲಿದ್ದು ಜನರಿಗೆ ನೆರವಾಗುತ್ತಿದ್ದಾರೆ. ಅಲ್ಲಿಂದ ಎಲ್ಲ ಮಾಹಿತಿಗಳನ್ನೂ ನನಗೆ ತಿಳಿಸಿದ್ದಾರೆ. ಜನರು ಶಾಂತಿ ಕಾಪಾಡಬೇಕು. ಸರ್ಕಾರ ಕೂಡಾ ಶಾಂತಿ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು.

ಎನ್ ಆರ್ ಸಿ ಮತ್ತು ಸಿಎಎ ಬಗ್ಗೆ ಸಾರ್ವಜನಿಕರಲ್ಲಿ ಸಂಶಯ ಇರುವುದನ್ನು ನಿವಾರಿಸುವುದು ಸರ್ಕಾರದ ಕರ್ತವ್ಯ. ಅದನ್ನು ಅಧಿಕಾರಿಗಳ ಮೂಲಕ ಮಾಡುವುದು ಬಿಟ್ಟು ಪೊಲೀಸ್ ಬಲ ಪ್ರಯೋಗಿಸಿ ಜನರನ್ನು ಹೆದರಿಸಿ ಸೆಕ್ಷನ್ ವಿಧಿಸಿ ನಾಗರಿಕರ ಪ್ರತಿಭಟನೆಯ ಹಕ್ಕು ಕಸಿದುಕೊಳ್ಳಬೇಡಿ. ಸರಕಾರ ಇರುವುದು ಪ್ರಜೆಗಳ ರಕ್ಷಣೆಗೆ.

ಕಾನೂನು ಶಿಸ್ತು ಪರಿಸ್ಥಿತಿ ಕಾಪಾಡಲು ಆದ್ಯತೆ ನೀಡಿ.ಶಾಂತಿ ಕದಡುವವರನ್ನು ಗುರುತಿಸಿ ಬಂಧಿಸಿ. ಆದರೆ ಅಮಾಯಕರನ್ನು ಕೊಲ್ಲಬೇಡಿ.
ಸಾರ್ವಜನಿಕರು ಪ್ರಚೋದನೆಗೆ ಒಳಗಾಗದೆ ಶಾಂತಿ ಕಾಪಾಡಬೇಕು ಎಂದು ಮನವಿ ಮಾಡುತ್ತೇನೆ. ಮೃತರಾದವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.

ಮೃತರಾದವರ ಅಂತ್ಯಸಂಸ್ಕಾರವನ್ನು ಗೌರವಯುತವಾಗಿ ನಡೆಸಲು ಸರ್ಕಾರ ಸೂಕ್ತ ಬಂದೋಬಸ್ತ್ ಒದಗಿಸಬೇಕು.

11:1720 Dec 2019

ಪ್ರತಿಭಟನೆಗೆ ಅನುಮತಿ ನಿರಾಕರಣೆ: ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ

ದಾವಣಗೆರೆ: ನಿಷೇಧಾಜ್ಞೆ ನಡುವೆಯೂ ಪೌರತ್ವ (ತಿದ್ದುಪಡಿ) ವಿರೋಧಿಸಿ ಇಲ್ಲಿನ ‘ಸಂವಿಧಾನ ಉಳಿಸಿ ವೇದಿಕೆ’ಯಿಂದ ಆಜಾದ್‌ನಗರ ಠಾಣೆ ಎದುರು ಶಾಂತಿಯುತ ಪ್ರತಿಭಟನೆ ನಡೆಯಿತು.

ಪ್ರತಿಭಟನೆ ನಡೆಸು ಉದ್ದೇಶದಿಂದ ಅನುಮತಿ ಪಡೆಯಲು ಮುಸ್ಲಿಂ ಸಮಾಜದ ಮುಖಂಡರು ಠಾಣೆಗೆ ಬಂದಿದ್ದರು. ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಪೊಲೀಸರು ಅನುಮತಿ ನಿರಾಕರಿಸಿದರು. ಇದರಿಂದ ಠಾಣೆಯ ಎದುರೇ ಕುಳಿತು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಆ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸ್ಥಳಕ್ಕೆ ಬಂದು ಪೊಲೀಸ್ ಬಂದೋಬಸ್ತ್‌ ಕೈಗೊಂಡರು.

ಮಧ್ಯಾಹ್ನದ ವೇಳೆ ಠಾಣೆಯ ಎದುರೇ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು ಜಿಲ್ಲಾಧಿಕಾರಿ ಬರುವವರೆಗೂ ಠಾಣೆಯ ಎದುರೇ ಕಾದು ಕುಳಿತರು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿದ್ದಂತೆ ಪೊಲೀಸರು ಠಾಣೆಯ ಗೇಟಿನ ಎದುರು ಬ್ಯಾರಿಕೇಡ್ ಅಳವಡಿಸಿ ಪ್ರತಿಭಟನಕಾರರನ್ನು ನಿಯಂತ್ರಿಸಿದರು.

‘ಈ ದೇಶ ನಮ್ಮದು, ಸ್ವಾಂತಂತ್ರ್ಯ ಬೇಕು’ ‘ನಮ್ಮಲ್ಲಿ ಯಾವ ಧರ್ಮದ ರಕ್ತವೂ ಅಲ್ಲ. ಮಾನವ ಕೆಂಪು ರಕ್ತ ಒಂದೇ’, ‘ಹಿಂದೂ –ಮುಸ್ಲಿಂ ಶತ್ರುಗಳಲ್ಲ’ ಎಂದು ರಾಷ್ಟ್ರಧ್ವಜ ಪ್ರದರ್ಶಿಸಿ ಘೋಷಣೆ ಕೂಗಿದರು.

ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮನವಿ ಸ್ವೀಕರಿಸಿ, ‘ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಪ್ರತಿಭಟನೆಗೆ ಅನುಮತಿ ಸಾಧ್ಯವಿಲ್ಲ. ನಿಷೇಧಾಜ್ಞೆ ಮುಗಿದ ನಂತರ ಎಸ್‌ಪಿಯವರಿಗೆ ಮನವಿ ನೀಡಿ. ಶಾಂತಿಯುತವಾಗಿ ಸ್ಪಂದಿಸಿದಕ್ಕೆ ಮುಸ್ಲಿಂ ಸಮಾಜದ ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಹೇಳಿದರು.

ಆ ವೇಳೆ ಜಿಲ್ಲಾಧಿಕಾರಿ ರಾಷ್ಟ್ರಗೀತೆ ಹಾಡಲು ಹೇಳಿದರು. ಎಲ್ಲರೂ ರಾಷ್ಟ್ರಗೀತೆಗೆ ಧ್ವನಿಗೂಡಿಸಿದರು. ನಂತರ ಶಾಂತಿಯುತವಾಗಿ ಮನೆಗೆ ತೆರಳಿದರು. ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.

10:5620 Dec 2019

ಪ್ರತಿ ಹೋರಾಟಗಳನ್ನೂ ತಡೆಯಲು ಸರ್ಕಾರಕ್ಕೆ ಸಾಧ್ಯವಿದೆಯೇ? ಹೈಕೋರ್ಟ್‌ ಪ್ರಶ್ನೆ

ರಾಜ್ಯದಲ್ಲಿ ಸೆಕ್ಷನ್‌ 144 ಜಾರಿ ಮಾಡಿರುವುದರ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿರುವ ಹೈಕೋರ್ಟ್‌, ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಕೇಳಿದೆ. 
‘ಪ್ರತಿಭಟನೆ ನಡೆಸಲು ಕೆಲ ಸಂಘಟನೆಗಳಿಗೆ ಅವಕಾಶ ನೀಡುವ ಸರ್ಕಾರ ರಾತ್ರೋರಾತ್ರಿ ಅವಕಾಶ ನಿರಾಕರಿಸಿರುವುದು ಏಕೆ.  ಪ್ರತಿಭಟನೆಗೆ ನೀಡಿರುವ ಅವಕಾಶವನ್ನು ಸೆಕ್ಷನ್‌ 144 ಜಾರಿಯಾಗುತ್ತಲೇ ರದ್ದು ಮಾಡಲು ಸಾಧ್ಯವೇ?  ಶಾಲೆಯ ವಿದ್ಯಾರ್ಥಿಗಳನ್ನೂ ನೀವು ಠಾಣೆಗಳಿಗೆ ಕರೆದೊಯ್ಯುವಿರೇ?  ಎಲ್ಲ ಪ್ರತಿಭಟನೆಗಳೂ ಶಾಂತಿ ಭಂಗ ಉಂಟು ಮಾಡುತ್ತವೆ ಎಂದು ಸರ್ಕಾರವೇನಾದರೂ ಭಾವಿಸಿಕೊಂಡಿದೆಯೇ?  ಪ್ರತಿ ಹೋರಾಟಗಳನ್ನೂ ತಡೆಯಲು ಸರ್ಕಾರಕ್ಕೆ ಸಾಧ್ಯವಿದೆಯೇ? ಪ್ರತಿಭಟನೆಗೆ ನೀಡಿದ ಅವಕಾಶವನ್ನು ಏಕಾಏಕಿ ರದ್ದು ಮಾಡಲು ಹೇಗೆ ಸಾಧ್ಯ? ಎಂದು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌ ಓಕಾ ಅವರು ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ. 

10:2320 Dec 2019

ಕೇರಳ ಪತ್ರಕರ್ತರ ಬಂಧನ ಕುರಿತು ಬಿಎಸ್‌ವೈಗೆ ಪತ್ರ ಬರೆದ ಪಿಣರಾಯಿ ವಿಜಯನ್‌

ಪ್ರತಿಭಟನೆಯ ವರದಿ ಮಾಡಲು ಮಂಗಳೂರಿಗೆ ಬಂದಿದ್ದ ಕೇರಳದ ಪತ್ರಕರ್ತರನ್ನು ಪೊಲೀಸರು ಬಂಧಿಸಿದ್ದರ ಕುರಿತು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಶುಕ್ರವಾರ ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.  

ಕೇರಳ ಪತ್ರಕರ್ತರ ಬಂಧನದ ವಿಚಾರದಲ್ಲಿ ತಾವು ಕೂಡಲೇ ಮಧ್ಯಪ್ರವೇಶ ಮಾಡಬೇಕು. ಆದಷ್ಟು ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು. ಆ ಮೂಲಕ ಅವರ ಕರ್ತವ್ಯ ನಿಭಾಯಿಸಲು ಮುಕ್ತ ವಾತಾವರಣ ಕಲ್ಪಿಸಬೇಕು ಎಂದು ಅವರು ತಮ್ಮ ಪತ್ರದಲ್ಲಿ ಬರೆದಿದ್ದಾರೆ. 

10:0620 Dec 2019

ಹೋರಾಟದ ಸ್ಥಳಕ್ಕೇ ತೆರಳಿ ಮನವಿ ಸ್ವೀಕರಿಸಿದ ಮಂಡ್ಯ ಜಿಲ್ಲಾಧಿಕಾರಿ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮೆರವಣಿ ನಡೆಸಲು ನಿರ್ಧರಿಸಿದ್ದ ಮುಸ್ಲಿಂ ಮುಖಂಡರಿಗೆ ಮಂಡ್ಯ ಜಿಲ್ಲಾಧಿಕಾರಿ ಡಾ. ಎಂ.ವಿ ವೆಂಕಟೇಶ್‌ ಅವರು ಅನುಮತಿ ನಿರಾಕರಿಸಿದರು. ಆದರೆ,  ಹೋರಾಟ ನಡೆಯುತ್ತಿದ್ದ ಮಂಡ್ಯ ಈದ್ಗಾ ಮೈದಾನಕ್ಕೇ ತೆರಳಿದ ಜಿಲ್ಲಾಧಿಕಾರಿ ಅಲ್ಲಿಯೇ ಅವರ ಮನವಿ ಸ್ವೀಕರಿಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಈದ್ಗಾ ಮೈದಾನದ ಸುತ್ತ ಬಿಗಿ ಭದ್ರತೆ ಒದಗಿಸಲಾಗಿದೆ. 

09:5120 Dec 2019

ಪ್ರತಿಭಟನೆಯಲ್ಲಿ ಮೃತಪಟ್ಟಿದ್ದವರ ಶವಗಳು ಕುಟುಂಬಸ್ಥರಿಗೆ ಹಸ್ತಾಂತರ

09:4920 Dec 2019

ಬಿಎಸ್‌ವೈ ತಮ್ಮ ಹೋರಾಟದ ಹಿನ್ನೆಲೆ ಮರೆತು ಪ್ರತಿಭಟನೆ ಹತ್ತಿಕ್ಕುತ್ತಿದ್ದಾರೆ

09:4120 Dec 2019

ಗೋಲೀಬಾರ್‌ನಲ್ಲಿ ಮೃತಪಟ್ಟವರ ಶವಪರೀಕ್ಷೆ ಪೂರ್ಣ; ಇಂದೇ ಅಂತ್ಯಕ್ರಿಯೆ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ಸಂದರ್ಭ ನಡೆದ ಗೋಲೀಬಾರ್‌ನಲ್ಲಿ ಮೃತಪಟ್ಟ ನೌಸೀನ್ (23) ಮತ್ತು ಜಲೀಲ್ ಕುದ್ರೋಳಿ (49) ಶವಪರೀಕ್ಷೆಗೆ ಪೂರ್ಣಗೊಂಡಿದ್ದು, ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. 

ಇವತ್ತೇ ಅಂತ್ಯಕ್ರಿಯೆ ನಡೆಯಲಿದೆ. ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಕುಟುಂಬದವರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ. ಆದರೆ, ಈವರೆಗೂ ಪೊಲೀಸರು ಯಾವುದೇ ನಿರ್ಧಾರ ತಿಳಿಸಿಲ್ಲ. ಕುದ್ರೋಳಿಯ ಮಸೀದಿಯಲ್ಲಿ ನೌಸೀನ್‌ ಅಂತ್ಯಕ್ರಿಯೆ ಹಾಗೂ ಬಂದರ್ ಕಂದಕ್‌ ಮಸೀದಿಯಲ್ಲಿ ಜಲೀಲ್‌ ಅಂತ್ಯಕ್ರಿಯೆ ನಡೆಯಲಿದೆ.