ಶುಕ್ರವಾರ, ಡಿಸೆಂಬರ್ 6, 2019
20 °C

ಸಂತ್ರಸ್ತರಿಗೆ ‘ಮಹಿಳಾ ಕೋರ್ಟ್‌’ ಅಭಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ‘ಅತ್ಯಾಚಾರದ ಆರೋಪ ಹೊತ್ತವರಿಗೆ ರಾಜಕೀಯ ಪಕ್ಷಗಳು ಟಿಕೆಟ್‌ ನೀಡಬಾರದು, ಪೋಕ್ಸೊ ಕಾಯ್ದೆಯ ಪ್ರಕರಣಗಳು ಒಂದು ವರ್ಷದಲ್ಲಿಯೇ ಇತ್ಯರ್ಥವಾಗಬೇಕು, ಅತ್ಯಾಚಾರದ ಫಲವಾಗಿ ಜನಿಸುವ ಮಕ್ಕಳ ಹಿತರಕ್ಷಣೆಗೆ ಪರಿಪೂರ್ಣ ಕಾನೂನು ರೂಪಿಸಬೇಕು...’

ನಗರದಲ್ಲಿ ಭಾನುವಾರ ‘ಮಹಿಳಾ ಮುನ್ನಡೆ’ ಸಂಘಟನೆ ಹಮ್ಮಿಕೊಂಡಿದ್ದ ‘ಮಹಿಳಾ ನ್ಯಾಯಾಲಯ’ ಕಾರ್ಯ
ಕ್ರಮದಲ್ಲಿ  ‘ನ್ಯಾಯಮಂಡಳಿ’ ಮಾಡಿದ ಪ್ರಮುಖ ಶಿಫಾರಸುಗಳು ಇವು.

‘ಸರ್ಕಾರದ ಉಸ್ತುವಾರಿಯಲ್ಲಿ ಮಹಿಳೆಯರಿಗೆ ಕೈಗೆಟಕುವಂತಹ ಸುರಕ್ಷಿತ ನೆಲೆಗಳನ್ನು ಸ್ಥಾಪಿಸಬೇಕು, ಸಂತ್ರಸ್ತರಿಗೆ ಪರಿಹಾರ ವಿತರಣೆ ನಿಯಮಾವಳಿಯನ್ನು ಸರಳಗೊಳಿಸಬೇಕು’ ಎಂದೂ ‘ನ್ಯಾಯಮಂಡಳಿ’ ಒತ್ತಾಯಿಸಿತು.

‘ನ್ಯಾಯಮಂಡಳಿ’ಯ ಅಧ್ಯಕ್ಷರಾಗಿದ್ದ ರಂಗಕರ್ಮಿ ವಿಜಯಮ್ಮ ಶಿಫಾರಸುಗಳು ಇನ್ನಷ್ಟು ವಿಸ್ತಾರವಾಗಿರಬೇಕಿತ್ತು ಎಂದು
ಅಭಿಪ್ರಾಯಪಟ್ಟರು.

‘ದ್ರೌಪದಿ ನಾಟಕವೊಂದರಲ್ಲಿ ನಾನು ಪೂರ್ತಿ ಬೆತ್ತಲೆಯಾಗುವವರೆಗೂ ಯಾಕೆ ನೀನು ಸೀರೆ ಕೊಡಲಿಲ್ಲ ಎಂದು ಕೃಷ್ಣನನ್ನು ಪ್ರಶ್ನಿಸುತ್ತಾಳೆ. ಅಂತೆಯೇ ನಮ್ಮ ನಡುವೆಯೂ ಪ್ರಶ್ನಿಸಬೇಕಾದ ಅನೇಕ ಸಂಗತಿಗಳಿವೆ. ಅಲ್ಲದೆ ಮನುಷ್ಯ
ನೊಳಗಿನ ತರತಮಗಳಿಗೆ ಉತ್ತರ ಹುಡುಕಬೇಕಿದೆ’ ಎಂದು ಹೇಳಿದರು.

ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ರೂಮಿ ಹರೀಶ್‌ ಮಾತನಾಡಿ, ‘ಕಾನೂನು ಕೂಡ ಲೈಂಗಿಕ ಅಲ್ಪಸಂಖ್ಯಾತರ ದೇಹಗಳನ್ನು ಗೌರವಿಸುವುದಿಲ್ಲ. ನಿರ್ಭಯ ಪ್ರಕರಣದ ಮಾದರಿಯಲ್ಲಿಯೇ ಪುಣೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರೊಬ್ಬರ ಮೇಲೆ ಅತ್ಯಾಚಾರ ನಡೆಸಲಾಗಿತ್ತು. ಅದನ್ನು ಪ್ರಶ್ನಿಸಿ ಕೋರ್ಟ್‌ಗೆ ಹೋದರೆ ನ್ಯಾಯಾಧೀಶರೇ ನೀನು ಹೆಣ್ಣಲ್ಲ ಎಂದು ಹೇಳಿದ್ದರು. ಕಾನೂನು ಕೇವಲ ಗಂಡು–ಹೆಣ್ಣನ್ನಷ್ಟೇ ನೋಡುತ್ತದೆ’ ಎಂದು ಭಾವುಕರಾದರು.

ವಿವಿಧ ಜಿಲ್ಲೆಗಳಿಂದ ಬಂದ ಸಂತ್ರಸ್ತರ ಕುಟುಂಬಸ್ಥರು ಮಾತನಾಡಿದರು.

‘ನನ್ನ ಮಗಳಿಗೆ ಅನ್ಯಾಯವಾಗಿ ಒಂದು ವರ್ಷ ಕಳೆದರೂ ನ್ಯಾಯ ಸಿಕ್ಕಿಲ್ಲ. ಆರೋಪಿಗಳು ಹೊರಗಡೆಯೇ ಓಡಾಡಿಕೊಂಡು ಇದ್ದಾರೆ. ಸರ್ಕಾರದಿಂದ ನನಗೆ ಯಾವುದೇ ಪರಿಹಾರ ಬೇಡ ನ್ಯಾಯ ಕೊಡಿಸಿ’ ಎಂದು ವಿಜಯಪುರದ ಹನುಮಂತ ಶಹಾಪುರ
ಗದ್ಗದಿತರಾದರು.

‘ನನ್ನ ಪಾಪುವಿಗೆ ಆದ ಅನ್ಯಾಯ ಬೇರೆ ಯಾರಿಗೂ ಆಗಬಾರದು. ಅದಕ್ಕಾಗಿ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ಮಂಡ್ಯದ ಮುಬೀನಾ ಆಗ್ರಹಿಸಿದರು.

‘2014ರಲ್ಲಿ ನನ್ನ ಮೇಲಾದ ಲೈಂಗಿಕ ದೌರ್ಜನ್ಯದ ಕುರಿತು ಕುಂದಾಪುರದಲ್ಲಿ ಪ್ರಕರಣ ದಾಖಲಿಸಿದೆ. ಡಿಎನ್‌ಎ ಪರೀಕ್ಷೆಗೆ ಒಳಪಡಿಸಬೇಕು ಎಂದರು. ಅದಕ್ಕೂ ಒಪ್ಪಿ ಪರೀಕ್ಷೆಗೊಳಪಟ್ಟೆ. ವರದಿ ಬಂದಿದ್ದರೂ ಇನ್ನೂ ನ್ಯಾಯ ಸಿಕ್ಕಿಲ್ಲ’ ಎಂದು ಕುಂದಾಪುರದಿಂದ ಬಂದ ಮಹಿಳೆಯೊಬ್ಬರು ಹೇಳಿದರು.

ಮಹಿಳೆಯರು ಹಾಗೂ ಮಕ್ಕಳ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಕುರಿತಾದ ‘ನಾವು ಶರಣಾಗುವುದಿಲ್ಲ’ ಎನ್ನುವ ಸತ್ಯಶೋಧನಾ ವರದಿಯನ್ನು ಕಾರ್ಯಕ್ರಮದಲ್ಲಿ  ಬಿಡುಗಡೆ ಮಾಡಲಾಯಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು