ಮರ ಮಾರಮ್ಮ

ಮಂಗಳವಾರ, ಜೂನ್ 25, 2019
27 °C

ಮರ ಮಾರಮ್ಮ

Published:
Updated:
Prajavani

ಆದೊಡ್ಡ ಮರದ ಕೆಳಗೆ ಇರಿಸಿದ್ದ ಬಣ್ಣ-ಬಣ್ಣದ ವಿಗ್ರಹಗಳನ್ನು ನೋಡಿ ಅಚ್ಚರಿಯಾಯಿತು. ದೂರದಿಂದ ಎರಡು ಮಾತ್ರ ಕಾಣುತ್ತಿದ್ದವು, ಆದರೆ ಹತ್ತಿರ ಹೋದಾಗ ಮರದ ಬುಡದಲ್ಲಿ ಐದಾರು ಇದ್ದುದು ಕಂಡುಬಂತು. ಆಳೆತ್ತರದ, ದೊಡ್ಡದಾಗಿ ಕಣ್ಣು ಬಿಟ್ಟು ಕಿರೀಟ ತೊಟ್ಟ, ನಾಲ್ಕು ಕೈಗಳ ಆಯುಧಧಾರಿ ಮಾರಮ್ಮನ ವಿಗ್ರಹಗಳು. ಮಳೆಗಾಳಿಗೆ ಸಿಲುಕಿ, ಗೆದ್ದಲು ತಿಂದು ಕೆಲವು ಮುಕ್ಕಾಲು ಭಾಗ ಕರಗಿದ್ದರೆ ಉಳಿದವು ಅರೆ-ಬರೆ ಕರಗುವ ಸ್ಥಿತಿಯಲ್ಲಿದ್ದವು. ಲಂಟಾನಾ ಗಿಡಗಳು ಕೆಲ ವಿಗ್ರಹಗಳ ಮೇಲೆ ಹಬ್ಬಿ ಮುಚ್ಚಿ ಹಾಕಿದ್ದವು. ಮಣ್ಣಿನಲ್ಲಿ ಬೆರೆತು, ಅಲ್ಲೇ ಕಳಿತು ಗೊಬ್ಬರವಾಗುವ ಪ್ರಕ್ರಿಯೆ ನಡೆಯುತ್ತಿತ್ತು.

ಅಯ್ಯೋ ದೇವರಿಗೂ ಈ ಸ್ಥಿತಿಯೇ ಎಂದುಕೊಳ್ಳುವಾಗ ಪಕ್ಕದಲ್ಲಿದ್ದ ನಾಗತಿಬೆಳಗಲು ಚನ್ನಬಸಪ್ಪ, ‘ಇದು ಈ ಭಾಗದಲ್ಲಿ ತಾತನ ಕಾಲದಿಂದಲೂ ನಡೆದು ಬಂದ ಪದ್ಧತಿ’ ಎಂದರು. ಪ್ಲಾಸ್ಟರ್‌ ಆಫ್ ಪ್ಯಾರಿಸ್ ಬಳಸಿ ವಿಗ್ರಹಗಳನ್ನು ಮಾಡಿ ಅವನ್ನು ಕೆರೆ, ಕಲ್ಯಾಣಿ, ಬಾವಿ ಇತ್ಯಾದಿ ಜಲಮೂಲಗಳಿಗೆ ವಿಸರ್ಜಿಸಿ ಮಣ್ಣು, ನೀರನ್ನು ಮಲಿನಗೊಳಿಸುವ ಆಧುನಿಕ ಉತ್ಸವಗಳಿಗಿಂತ ಭಿನ್ನವಾಗಿತ್ತು ಈ ಭಕ್ತಿ ಪರಂಪರೆ.

ಶಿವಮೊಗ್ಗ, ಭದ್ರಾವತಿ ಭಾಗಗಳಲ್ಲಿ ಊರಮಾರಮ್ಮನ ಜಾತ್ರೆಗಳು ಪ್ರಸಿದ್ಧ. ಎರಡು, ಮೂರು ಅಥವಾ ಐದು ವರ್ಷಕ್ಕೊಮ್ಮೆ ನಡೆಯುತ್ತವೆ. ಒಂದು ವಾರ ಕಾಲ ನಡೆಯುವ ಜಾತ್ರೆಗೆ ಪ್ರತಿ ಸಲವೂ ಹೊಸದಾಗಿ ಮಾರಮ್ಮನ ವಿಗ್ರಹ ಮಾಡುವುದು ಈ ಜಾತ್ರೆಗಳ ವೈಶಿಷ್ಟ್ಯ. ಆದರೆ ಈ ವಿಗ್ರಹಗಳನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್, ಥರ್ಮಾ ಕೋಲ್ ಇತ್ಯಾದಿ ಕಚ್ಚಾ ವಸ್ತುಗಳಿಂದ ತಯಾರಿಸುವುದಿಲ್ಲ. ಬದಲಿಗೆ ಮರ ಅಥವಾ ಕಟ್ಟಿಗೆ ಬಳಸುತ್ತಾರೆ.

ದೊಡ್ಡತೊಪ್ಪೆ ಮರ ಅಥವಾ ತೆಪ್ಪೆ ಮರ ಎಂದು ಸ್ಥಳೀಯವಾಗಿ ಕರೆಯುವ ಮರವನ್ನು ಬಳಸುವುದು ರೂಢಿ. ಮೃದುಕಾಂಡ ಹೊಂದಿರುವ ‘ಈ ಮರದ ಬೊಡ್ಡೆಗಳು ಕೆತ್ತನೆ ಕೆಲಸಕ್ಕೆ ತುಂಬಾ ಸೂಕ್ತ’ ಎನ್ನುತ್ತಾರೆ ಭದ್ರಾವತಿ ಬಳಿಯ ಅರೆಬಿಳಚಿ ಗ್ರಾಮದ ನಂಜುಂಡಸ್ವಾಮಿ. ಜಾತ್ರೆ ಹತ್ತಿರವಾದಂತೆ ನಿಗದಿತ ದಿನದಂದು ಹತ್ತಿರದ ಕಾಡು ಅಥವಾ ಹಳ್ಳದ ದಡದಲ್ಲಿ ಬಲಿತ ಮರವನ್ನು ಗುರುತಿಸಿ ಕಡಿದು ತರುತ್ತಾರೆ. ತಿಂಗಳುಗಟ್ಟಲೆ ಅದನ್ನು ಕೆತ್ತಿ ವಿಗ್ರಹರೂಪ ನೀಡಲಾಗುತ್ತದೆ.

ಉತ್ಸವ ಹಾಗೂ ಮೆರವಣಿಗೆ ಮುಗಿದ ನಂತರ ಊರ ಹೊರಗಿನ ಮರದ ಬುಡಕ್ಕೆ ಸಾಗಿಸಿ ಅಲ್ಲಿ ಇಡುವುದು ವಾಡಿಕೆ. ‘ಅಮ್ಮನ ವನ’ ಎಂದು ಕರೆಯಲ್ಪಡುವ ಈ ಸ್ಥಳವು ಪೂಜನೀಯ. ಅವು ಕ್ರಮೇಣ ಅಲ್ಲೇ ಕರಗಿ ಮಣ್ಣಿಗೆ ಸೇರುತ್ತವೆ.

ಇಡೀ ಆಚರಣೆಯ ಪ್ರಕ್ರಿಯೆಯಲ್ಲಿ ಅನೇಕ ಪರಿಸರ ಪಾಠಗಳಿವೆ. ಒಂದು ಮಾರಮ್ಮನನ್ನು ಕೆತ್ತಲು ಬಳಸುವುದರಿಂದ ದೊಡ್ಡ ತೊಪ್ಪೆಮರವನ್ನು ಯಾರೂ ಕಡಿಯುವುದಿಲ್ಲ. ಜಾತ್ರೆಯ ನಂತರ ಈ ವಿಗ್ರಹಗಳನ್ನು ಇಡುವ ‘ಅಮ್ಮನ ವನ’ ಗಳು ಪವಿತ್ರ ಸ್ಥಳವಾದ್ದರಿಂದ ಅಲ್ಲಿನ ಮರಗಳು ಕಡಿತದಿಂದ ಮುಕ್ತ, ಹಾಗೂ ಆ ಸ್ಥಳಕ್ಕೆ ಒತ್ತುವರಿ ಇತ್ಯಾದಿ ಆತಂಕವಿಲ್ಲ. ಮಾರಮ್ಮನ ಅಲಂಕಾರಕ್ಕೆ ಬಳಸುವ ಬಹುತೇಕ ಅಲಂಕಾರಿಕ ವಸ್ತುಗಳು ಪರಿಸರ ಸ್ನೇಹಿ. ಹೊಸ ತಲೆಮಾರಿಗೂ ಈ ಪಾಠಗಳು ಆಚರಣೆಯ ನೆಪದಲ್ಲಿ ತಲುಪುತ್ತವೆ.

ಕಾಡು ಸಂರಕ್ಷಣೆಗೆ ಮುಂದಾಗುವ ಅರಣ್ಯ ಇಲಾಖೆಯವರು ಇಂಥ ಆಚರಣೆಗಳ ಜಾಡು ಹಿಡಿಯಬೇಕು. ಆಗ ಮರ ಬೆಳೆಸುವಲ್ಲಿ ಸಮುದಾಯವನ್ನು ಒಳಗೊಳ್ಳುವುದು ಸಲೀಸು.

ಆದರೆ ಆಚರಣೆಗಾಗಿ ಮರ ಕಡಿಯುತ್ತಾ ಹೋದಂತೆ ಇವೂ ನಾಶವಾಗುವ ಸಂಭವ ಇದೆ. ಹಾಗಾಗಿ ಈ ಮರಗಳನ್ನು ಬೆಳೆಸುವ ಜವಾಬ್ದಾರಿಯನ್ನು ಸಮುದಾಯ
ಗಳೇ ಹೊರುವುದು ಉತ್ತಮ. ಆಗ ಈ ಪರಿಸರ ಪೂರಕ ಭಕ್ತಿ ಪರಂಪರೆಗೆ ಮತ್ತಷ್ಟು ಮೌಲ್ಯ ಬರಲಿದೆ.

ಚಿತ್ರಗಳು: ಲೇಖಕರವು

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !