ತರಕಾರಿ ದರ ಹೆಚ್ಚಳ: ಹೂವು ಇಳಿಕೆ

ಸೋಮವಾರ, ಜೂಲೈ 22, 2019
23 °C
ಮಾಂಸ ಮಾರುಕಟ್ಟೆಯಲ್ಲಿ ಧಾರಣೆ ಯಥಾಸ್ಥಿತಿ ಮುಂದುವರಿಕೆ

ತರಕಾರಿ ದರ ಹೆಚ್ಚಳ: ಹೂವು ಇಳಿಕೆ

Published:
Updated:
Prajavani

ಚಾಮರಾಜನಗರ: ಮಾರುಕಟ್ಟೆಯಲ್ಲಿ ಈ ವಾರ ಕೆಲ ತರಕಾರಿಗಳ ಬೆಲೆ ಹೆಚ್ಚಳವಾಗಿದೆ. ಹೂವುಗಳ ದರ ಗಣನೀಯ ಇಳಿಕೆ ಕಂಡಿದೆ. ಮಾಂಸ ಮಾರುಕಟ್ಟೆಯಲ್ಲಿ ಧಾರಣೆ ಯಥಾಸ್ಥಿತಿ ಮುಂದುವರಿದಿದೆ.

ಆಷಾಢ ಮಾಸ ಆರಂಭದಿಂದ ಸೋಮವಾರ ಮತ್ತು ಶುಕ್ರವಾರದ ಹಿಂದಿನ ದಿನದಂದು ಮಾತ್ರವೇ ಹೂವಿನ ಬೆಲೆ ಕೊಂಚ ಏರಿಕೆಯಾಗುತ್ತದೆ. ಶುಭ ಕಾರ್ಯಗಳು ಹೆಚ್ಚು ನಡೆಯದೆ ಇರುವುದರಿಂದ ಪೂಜಾ ಕೈಂಕರ್ಯಗಳಿಗೆ ಬಳಕೆಯಾಗುವ ಹೂವುಗಳ ದರ ಕಡಿಮೆಯಾಗಿದೆ ಎಂದು ಹೇಳುತ್ತಾರೆ ಹೂವಿನ ವ್ಯಾಪಾರಿಗಳು.

ತರಕಾರಿಗಳ ಪೈಕಿ ಟೊಮೆಟೊ, ಕ್ಯಾರೆಟ್‌, ಮೂಲಂಗಿ, ಹಸಿಮೆಣಸಿನಕಾಯಿ, ಬೀಟ್‌ರೂಟ್‌, ಗೋರಿಕಾಯಿ ತುಟ್ಟಿಯಾಗಿವೆ. ಹಸಿ ಬಟಾಣಿ ಬೆಲೆ ಕಡಿಮೆಯಾಗಿದೆ. 

ಕಳೆದ ವಾರದಿಂದ ಮಾರುಕಟ್ಟೆಗೆ ತರಕಾರಿಗಳು ಕಡಿಮೆ ಪ್ರಮಾಣದಲ್ಲಿ ಬರುತ್ತಿವೆ. ವ್ಯಾಪಾರಿಗಳು ಮಾರುಕಟ್ಟೆಯಿಂದ ತರುವಾಗಲೇ ತರಕಾರಿಗಳನ್ನು ಕಡಿಮೆ ಪ್ರಮಾಣದಲ್ಲಿ ತರುತ್ತಿದ್ದಾರೆ.

‘ಖಾಲಿಯಾದ ಬಳಿಕವೇ ಮತ್ತೆ ಮಾರುಕಟ್ಟೆಯಲ್ಲಿ ಖರೀದಿ ಮಾಡುತ್ತೇವೆ. ಹೀಗಾಗಿ ಮಾರುಕಟ್ಟೆಯಲ್ಲಿಯೇ ಕೆಲ ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿದೆ’ ಎಂದು ಹಾಪ್‌ಕಾಮ್ಸ್‌ ಮಾರಾಟಗಾರ ಮಧು ‘ಪ್ರಜಾವಾಣಿ’ಗೆ ತಿಳಿಸಿದರು.

ಹಣ್ಣುಗಳ ಪೈಕಿ ಅನನಾಸ್‌, ದಾಳಿಂಬೆ ಬೆಲೆ ಹೆಚ್ಚಳವಾಗಿದೆ. ಉಳಿದ ಹಣ್ಣುಗಳ ಬೆಲೆಯಲ್ಲಿ ವ್ಯತ್ಯಾಸ ಕಂಡು ಬಂದಿಲ್ಲ. ಕಳೆದ ವಾರದವರೆಗೆ ಅನಾನಸ್‌ ಕೆಜಿಗೆ ₹ 40 ಇತ್ತು. ಈ ವಾರ ₹ 50 ಆಗಿದೆ. ದಾಳಿಂಬೆ ಕಳೆದ ವಾರ ₹ 80 ಇತ್ತು. ಈ ವಾರ ₹ 100 ಇದೆ. 

ಮೊಟ್ಟೆ, ಮಾಂಸ ಯಥಾಸ್ಥಿತಿ: ಪ್ರತಿ ಮೂರು ದಿನಗಳಿಗೊಮ್ಮೆ ಮೊಟ್ಟೆ ಧಾರಣೆ ಬದಲಾಗುತ್ತಿರುತ್ತದೆ. ಕಳೆದ ವಾರ ₹ 5 ಕಡಿಮೆಯಾಗಿತ್ತು. ಸೋಮವಾರ 100 ಮೊಟ್ಟೆಗೆ ₹ 460 ಇತ್ತು. ಮುಂದಿನ ದಿನಗಳಲ್ಲಿ ಬೆಲೆ ಹೆಚ್ಚಳವಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ಮೊಟ್ಟೆ ವ್ಯಾಪಾರಿಗಳು.

ಮಾಂಸ ಮಾರುಕಟ್ಟೆಯಲ್ಲಿ ಚಿಕನ್‌, ಮಟನ್‌ ಹಾಗೂ ಮೀನುಗಳ ಬೆಲೆಯಲ್ಲಿ ಬದಲಾವಣೆ ಕಂಡು ಬಂದಿಲ್ಲ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !