ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಲ್ಲೂ ಹೊಂಜು..

Last Updated 26 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಇನ್ನೇನು ನವೆಂಬರ್‌ ಮುಗಿದು ಡಿಸೆಂಬರ್‌ ತಿಂಗಳು ಶುರುವಾಗಲಿದೆ. ಅಂದರೆ ಇನ್ನು ಜನವರಿವರೆಗೆ ಚಳಿಗಾಲ ತೀವ್ರಗೊಳ್ಳುತ್ತ ಹೋಗುವ ಅವಧಿ. ನವೆಂಬರ್‌ ತಿಂಗಳ ಅಂತ್ಯದಲ್ಲಿ ಬೆಳಿಗ್ಗೆ ಎಂಟು ಗಂಟೆಯವರೆಗೆ ನಗರದ ಕೆಲವು ಪ್ರದೇಶಗಳಲ್ಲಿ ದಟ್ಟ ಹೊಗೆಯಂಥ ದೃಶ್ಯ ಸಾಮಾನ್ಯವಾಗುತ್ತಿದೆ. ಮಂಜು ಮುಸುಕಿದ ವಾತಾವರಣ. ಆದರೆ ಇದು ದೂಳಿನಿಂದ ಕೂಡಿದ ದಟ್ಟ ಹೊಗೆಯಂತೆಯೂ ಭಾಸವಾಗುತ್ತದೆ.

ಕಳೆದ ಶನಿವಾರ ಬೆಳಿಗ್ಗೆ 6.30ರಿಂದ ಗೆಳೆಯರೊಂದಿಗೆ ಕಾರಿನಲ್ಲಿ ನಾಗವಾರ ಜಂಕ್ಷನ್‌ನಿಂದ ನಮ್ಮ ಓಡಾಟ ಶುರುವಾಯಿತು. ಹೆಣ್ಣೂರು, ಕೆ.ಆರ್‌. ಪುರ, ಟಿನ್‌ ಫ್ಯಾಕ್ಟರಿ ಜಂಕ್ಷನ್‌, ವೈಟ್‌ಫೀಲ್ಡ್‌, ಹೊಸಕೋಟೆ ಸಮೀಪದ ಟೋಲ್‌ಗೇಟ್‌ ಮತ್ತು ಆ ಮೂಲಕ ಚಿಂತಾಮಣಿಯತ್ತ ನಮ್ಮ ಸವಾರಿ ಸಾಗಿತು. ಉದ್ದಕ್ಕೂ ಎಲ್ಲ ಜಂಕ್ಷನ್‌ಗಳಲ್ಲಿ ದಟ್ಟ ಹೊಗೆಯಂಥ ವಾತಾವರಣ ಕಾಣಿಸಿತು.

ಹೊಸಕೋಟೆ ಟೋಲ್‌ ಗೇಟ್‌ ಹತ್ತಿರ ಬರುತ್ತಿದ್ದಂತೆ ಅಕ್ಷರಶಃ ಎದುರಿನ ವಾಹನ ಕಾಣಿಸದಂಥ ಸ್ಥಿತಿ. ಆಗಲೇ ಬೆಳಿಗ್ಗೆ 7.50 ಆಗಿತ್ತು. ಸೂರ್ಯನ ಉದಯ ಕೂಡ ಆಗಿತ್ತು. ಆದರೂ ಟೋಲ್‌ ಗೇಟ್‌ ಹತ್ತಿರದ ವಾಹನಗಳು ಕಣ್ಣಿಗೆ ಕಾಣಿಸುತ್ತಲೇ ಇರಲಿಲ್ಲ. ದಟ್ಟ ಹೊಗೆಯಂಥ ವಾತಾವರಣ ಎಲ್ಲೆಡೆ ಕಾಣಿಸಿತು. ಒಂದಷ್ಟು ಹೊತ್ತು ಟೋಲ್‌ ಗೇಟ್‌ ಸಮೀಪದ ಒಂದು ದರ್ಶಿನಿಯಲ್ಲಿ ತಂಗಿ ಮುಂದೆ ಚಿಂತಾಮಣಿಯತ್ತ ಸಾಗಿದೆವು. ಹೊಸಕೋಟೆ ಟೋಲ್‌ ಗೇಟ್‌ವರೆಗಿನ ನಗರ ಪ್ರದೇಶದ ಪ್ರಯಾಣದಲ್ಲಿ ಒಂದೂವರೆ ಗಂಟೆಗೂ ಹೆಚ್ಚು ಸಮಯ ದಟ್ಟ ಹೊಗೆಯಂಥದೇ ವಾತಾವರಣವಿತ್ತು.

ಈ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಸಂಪರ್ಕಿಸಿದಾಗ ಅವರು ನೀಡಿದ ಅಂಕಿ ಅಂಶಗಳು ಸಮಾಧಾನಕರ ಸ್ಥಿತಿಯನ್ನು ಒತ್ತಿ ಹೇಳುವಂತಿದ್ದವು. ವೈಜ್ಞಾನಿಕ ಅಂಕಿ ಅಂಶಗಳು ಅಳತೆಯ ಪ್ರಮಾಣವನ್ನು ಸಮಾಧಾನಕರ ಸ್ಥಿತಿ ಎಂದು ಸೂಚಿಸುವಂತಿದ್ದವು.

ಏನಿದು ಸರ್‌ ಇಂಥ ವಾತಾವರಣ? ನವದೆಹಲಿಯಲ್ಲಿ ಉಸಿರಾಟಕ್ಕೂ ಕಷ್ಟವಾಗುವಂಥ ಸ್ಥಿತಿ ಇದೆ ಎನ್ನುತ್ತಾರೆ. ಬೆಂಗಳೂರಿಗೂ ಆ ಸ್ಥಿತಿ ಬರುತ್ತಿದೆಯಾ ಎನ್ನುವ ಆತಂಕ ಎಲ್ಲರಲ್ಲೂ ಮನೆ ಮಾಡಿದೆ ಏನಂತೀರಾ?

ಕೂಲ್‌ ಆಗಿ ನಕ್ಕ ಇಲಾಖೆಯ ಅಧಿಕಾರಿಯೊಬ್ಬರು ಹಾಗೆ ಆತಂಕ ಪಡುವ ಅಗತ್ಯವಿಲ್ಲ. ಅಂಥ ಸ್ಥಿತಿಗೆ ಬೆಂಗಳೂರು ತಲುಪುವುದು ಸಾಧ್ಯವಿಲ್ಲ. ಭೌಗೋಳಿಕ ಅನುಕೂಲಗಳ ಕಾರಣದಿಂದ ದೆಹಲಿಯ ಸ್ಥಿತಿ ಬೆಂಗಳೂರಿಗೆ ಬಾರದು. ಅಂಥ ಯಾವುದೇ ಅಪಾಯಕಾರಿ ಎನ್ನಿಸುವಂಥ ವಾತಾವರಣ ಸದ್ಯಕ್ಕೆ ಇಲ್ಲ. ಆದರೆ, ಬೆಳಿಗ್ಗೆ, ಸಂಜೆ ಮತ್ತು ರಾತ್ರಿಯ ಸಮಯದಲ್ಲಿ ಉಷ್ಣಾಂಶ ಕಮ್ಮಿ ಇರುವುದರಿಂದ ಏರ್‌ ಕ್ವಾಲಿಟಿ ಇಂಡೆಕ್ಸ್‌ ಸ್ಕೋರ್‌ ಹೆಚ್ಚಿರುತ್ತದೆ. ಹೊರಗೆ ಮಂಜು ಕವಿದಂಥ ಅಥವಾ ದಟ್ಟ ಹೊಗೆಯಂಥ ವಾತಾವರಣ ಕಣ್ಣಿಗೆ ಕಾಣಿಸುವುದುಂಟು. ವೈಜ್ಞಾನಿಕವಾಗಿ ಪರಿಸರದ ವಾಯುಗುಣಮಟ್ಟ ಪರೀಕ್ಷಿಸುವಾಗ ಅಂಥ ಯಾವ ಅಪಾಯಕಾರಿ ಸ್ಥಿತಿಯನ್ನು ನಮ್ಮ ಅಂಕಿ ಅಂಶಗಳು ಸೂಚಿಸುವುದಿಲ್ಲ ಎಂದರು.

ನಗರದಲ್ಲಿ ಎಂಟು ಪ್ಯಾರಾಮೀಟರ್‌ (ಮಲಿನ ಕಾರಕಗಳು) ಇಟ್ಟುಕೊಂಡು ಏರ್‌ ಕ್ವಾಲಿಟಿ ಇಂಡೆಕ್ಸ್‌ ಸಿದ್ಧಪಡಿಸಲಾಗುತ್ತದೆ. ಏರ್‌ ಕ್ವಾಲಿಟಿ ಇಂಡೆಕ್ಸ್‌ನಲ್ಲಿ ಮುಖ್ಯವಾಗಿ ಸಾರಜನಕ ಆಕ್ಸೈಡ್‌ (NO2), ಗಂಧಕದ ಡೈಆಕ್ಸೈಡ್‌ (SO2), ದೂಳಿನ ಕಣಗಳು (PM10), (PM2.5), ಅಮೋನಿಯ (NH3), ಓಜೋನ್‌ (O3), ಸೀಸ ಮತ್ತು ಇಂಗಾಲದ ಮೊನಾಕ್ಸೈಡ್‌ (CO) ಇವುಗಳ ಪ್ರಮಾಣ ನಿಗದಿ ಪಡಿಸಲಾಗಿದ್ದು ಈ ಮಾನಕಗಳ ಮಾಪನದ ಆಧಾರದಲ್ಲಿ ವಾಯುಮಾಲಿನ್ಯದ ಗುಣಮಟ್ಟ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ.

ಪೊಲುಟಂಟ್ಸ್‌ (PM10), (PM2.5) ಇವು ಮುಖ್ಯವಾಗಿ ಪಾರ್ಟಿಕ್ಯುಲೇಟ್‌ ಮ್ಯಾಟರ್‌. (PM2.5) ದೂಳಿನ ಕಣಗಳು ತುಂಬ ಮೃದುವಾದ ಸಣ್ಣ ಪೌಡರ್‌ ತರಹದಲ್ಲಿದ್ದು ನಮ್ಮ ಶ್ವಾಸಕೋಶಗಳಲ್ಲಿ ಮೆತ್ತಿಕೊಳ್ಳುವಂತಿರುತ್ತವೆ. ವಾಹನಗಳ ಹೊಗೆಯಿಂದ ಮತ್ತು ಅವು ಸಂಚರಿಸುವಾಗ ಏಳುವ ದೂಳಿನ ಕಣಗಳು ಒಂದಷ್ಟು ತೊಂದರೆಯನ್ನುಂಟು ಮಾಡಬಹುದು. ಸಿಗ್ನಲ್‌ಗಳ ಬಳಿ ವಾಹನಗಳು ಗುಂಪಾಗಿ ನಿಲ್ಲುವುದರಿಂದ ಅವುಗಳ ಹೊಗೆ ಸಾಂದ್ರಗೊಳ್ಳುತ್ತದೆ. ನಗರದಲ್ಲಿ ಎಲ್ಲೆಂದರಲ್ಲಿ ಫ್ಲೈಓವರ್‌, ಮೆಟ್ರೊ, ಕಟ್ಟಡಗಳ ಕಾಮಗಾರಿ ನಡೆಯುವುದರಿಂದ ಅವುಗಳಿಂದ ಹೊಮ್ಮುವ ದೂಳಿನ ಕಣಗಳು ವಾತಾವರಣ ಸೇರಿಕೊಳ್ಳುವುದು ಹೆಚ್ಚು. ಸದ್ಯಕ್ಕೆ ಏರ್‌ ಕ್ವಾಲಿಟಿ ಇಂಡೆಕ್ಸ್‌ ಸ್ಕೋರ್‌ ಪ್ರಕಾರ ನಗರ ಸೇಫ್‌ ಆಗಿದೆ. ನಗರದ ಸಿಟಿ ರೈಲ್ವೆ ಸ್ಟೇಷನ್‌ ಪ್ರದೇಶ ಬಿಟ್ಟರೆ ಉಳಿದೆಲ್ಲ ಪ್ರದೇಶಗಳಲ್ಲಿ ಏರ್‌ ಕ್ವಾಲಿಟಿ ಇಂಡೆಕ್ಸ್‌ ಸ್ಕೋರ್‌ ಸ್ಯಾಟಿಸ್ಫ್ಯಾಕ್ಟರಿ ಆಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಈಗ ನಗರದಲ್ಲಿ ಮೆಟ್ರೊ ಸಂಚಾರ ಆರಂಭಗೊಂಡಿದ್ದರಿಂದ ಅನುಕೂಲವಾಗಿದೆ. ಕೆಲವೆಡೆ ಸಿಗ್ನಲ್‌ ಫ್ರೀ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಉದಾಹರಣೆಗೆ– ವೆಸ್ಟ್‌ಆಫ್‌ ಕಾರ್ಡ್‌ ರಸ್ತೆಯಿಂದ ವಿಜಯನಗರದವರೆಗೆ ಬಹುತೇಕ ಸಿಗ್ನಲ್‌ ಫ್ರೀ ಸಂಚಾರದ ಅನುಕೂಲವಿದೆ. ಇಂಥ ವ್ಯವಸ್ಥೆ ಎಲ್ಲೆಡೆ ಬಂದರೆ ಹೆಚ್ಚು ಅನುಕೂಲವಾಗಬಲ್ಲದು. ಅಲ್ಲದೇ ಅಟೊಗಳಿಗೆ ಪೆಟ್ರೋಲ್‌ ಬದಲಿಗೆ ಗ್ಯಾಸ್‌ ಅಳವಡಿಸಿದ್ದರಿಂದ ಒಂದಷ್ಟು ವಾಯು ಮಾಲಿನ್ಯ ತಡೆಗೆ ಸಹಕಾರಿ. ದೆಹಲಿ ಮಾದರಿಯಂತೆ ನಮ್ಮಲ್ಲೂ ಸಿಎನ್‌ಜಿ ಬಸ್‌ ಓಡಾಟ ಶುರು ಮಾಡಿದರೆ ಒಳ್ಳೆಯದು. ಇದು ಇನ್ನಷ್ಟು ವ್ಯವಸ್ಥಿತಗೊಂಡರೆ ನಗರದ ಪೊಲುಷನ್‌ ಹೆಚ್ಚು ನಿಯಂತ್ರಣಕ್ಕೆ ಬರಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.

ಸಾರಿಗೆ ಇಲಾಖೆ ನಗರದಲ್ಲಿ ಸಾರ್ವಜನಿಕ ಎಲೆಕ್ಟ್ರಿಕ್‌ ವಾಹನಗಳನ್ನು ಬಳಸುವುದಾಗಿ ಹೇಳುತ್ತಿದೆ. ಆದರೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಿಎನ್‌ಜಿ ಬಸ್‌ ವ್ಯವಸ್ಥೆ ರೂಪಿಸುವಂತೆ ಸಲಹೆ ನೀಡಿದೆ. ಈ ಬಗ್ಗೆ ಇನ್ನೂ ಚರ್ಚೆಯ ಹಂತದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT