ಮಂಗಳವಾರ, ಜೂನ್ 28, 2022
25 °C

ಹಾಯಿದೋಣಿ | ಗಂಡು, ಹೆಣ್ಣು ಎರಡೂ ಆಗಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾನು ದೇವರು ಸೃಷ್ಟಿಸಿದ ಪವಾಡ. ಒಬ್ಬ ಮಗನಾಗಿ, ಕುಟುಂಬದ ಜವಾಬ್ದಾರಿಗಳನ್ನು ಪೂರೈಸಿದೆ. ಈಗ ಒಬ್ಬ ಮಗಳಾಗಿ ಕುಟುಂಬವನ್ನು ನೋಡಿಕೊಳ್ಳುತ್ತಿದ್ದೇನೆ. ಇದು ಪವಾಡವಲ್ಲವೇ?

ಗದಗದಲ್ಲಿ ನಾನು ಜನಿಸಿದೆ. ಮಂಜುನಾಥ ಎಂಬುದು ನನ್ನ ಜನ್ಮನಾಮ. 2004ರಲ್ಲಿ, 7ನೇ ತರಗತಿಯಲ್ಲಿದ್ದಾಗ ನನಗೆ ಏನೋ ಆತಂಕ, ಕಸಿವಿಸಿಯ ಅನುಭವ ಆಗುತ್ತಿತ್ತು. ನನ್ನದೇ ಶರೀರದೊಳಗೆ ನಾನು ಬಂದಿಯಾಗಿದ್ದೇನೆ ಎಂಬ ಭಾವನೆ ಮೂಡುತ್ತಿತ್ತು. ಪ್ರೌಢಾವಸ್ಥೆಯಲ್ಲಿ ನನ್ನ ಸ್ನೇಹಿತರೆಲ್ಲರೂ ಹುಡುಗಿಯರ ಕನಸು ಕಾಣುತ್ತಿದ್ದರೆ, ನನಗೆ ಕಾಡಿಗೆ ಹಚ್ಚುವುದು, ಮೇಕಪ್‌ ಮಾಡಿಕೊಳ್ಳುವುದು, ಒಳ್ಳೆಯ ಬಟ್ಟೆ ಧರಿಸುವುದೇ ಮುಂತಾಗಿ ಹುಡುಗಿಯರು ಮಾಡುವ ಕೆಲಸಗಳೇ ಇಷ್ಟವಾಗುತ್ತಿದ್ದವು. ಮನೆಯವರಿಂದ ತಿರಸ್ಕೃತನಾಗಬಹುದು, ಶಾಲೆಯಲ್ಲಿ ಅಪಹಾಸ್ಯಕ್ಕೆ ಒಳಗಾಗಬಹುದೆಂಬ ಭಯದಿಂದ ಅದನ್ನು ಮುಕ್ತವಾಗಿ ಹೇಳಿಕೊಳ್ಳಲಿಲ್ಲ.

ಶಿಕ್ಷಣಕ್ಕಾಗಿ ಮತ್ತು ನನ್ನಂಥ ಇನ್ನಷ್ಟು ಜನರು ಸಿಗಬಹುದೆಂಬ ನಿರೀಕ್ಷೆಯಿಂದ 2009ರಲ್ಲಿ ನಾನು ಬೆಂಗಳೂರಿಗೆ ಹೋದೆ. ನನ್ನಲ್ಲಿ ಒಂದು ಗೊಂದಲವಿತ್ತು. ನಾನೊಬ್ಬ ಸಲಿಂಗಕಾಮಿ ಎಂದು ಮೊದಮೊದಲು ಭಾವಿಸಿದ್ದೆ. ನಾನು ಪುರುಷರಿಂದ ಮಾತ್ರ ಆಕರ್ಷಿತನಾಗುತ್ತಿದ್ದೆ. ಮಹಿಳೆಯಂತೆ ಬಟ್ಟೆ ಧರಿಸುವುದು ನನಗೆ ಇಷ್ಟವಾಗುತ್ತಿತ್ತು. ‘ನಾನು ಸಲಿಂಗಕಾಮಿಯಲ್ಲ, ಬದಲಿಗೆ ಮಹಿಳೆಯಾಗಲು ಬಯಸುತ್ತಿದ್ದೆ’ ಎಂಬುದು 2010ರಲ್ಲಿ ಮನವರಿಕೆಯಾಯಿತು. ಆದರೆ, ಅದನ್ನು ಗೌಪ್ಯವಾಗಿಟ್ಟಿದ್ದೆ. ಕೊನೆಗೊಂದುದಿನ ನನ್ನ ಸ್ನೇಹಿತನೊಬ್ಬನಿಗೆ ಇದನ್ನು ತಿಳಿಸಿದೆ. ಒಂದು ವೃತ್ತಿಯನ್ನು ಕೈಗೆತ್ತಿಕೊಂಡು, ಒಂದಿಷ್ಟು ಹಣ ಸಂಪಾದಿಸಿದ ನಂತರವೇ ಈ ವಿಚಾರವನ್ನು ಜಗತ್ತಿಗೆ ತಿಳಿಸುವಂತೆ ಆತ ಸಲಹೆ ನೀಡಿದ. ಯಶಸ್ವಿ ವ್ಯಕ್ತಿಯನ್ನು ಯಾರೂ ಪ್ರಶ್ನಿಸುವುದಿಲ್ಲ ಅಲ್ಲವೇ? ನಾನು ಒಪ್ಪಿದೆ.

ಪದವಿಯ ನಂತರ ನಾನು ಕಾರ್ಯಕ್ರಮ ಸಂಘಟಕನಾಗಿ ಕೆಲಸ ಆರಂಭಿಸಿದೆ. ಆನಂತರ ಟ್ಯಾಟೂ ಹಾಕುವ ವೃತ್ತಿಗೆ ಇಳಿದೆ. ನನ್ನದೇ ಆದ ಟ್ಯಾಟೂ ಪಾರ್ಲರ್‌ ಆರಂಭಿಸಿದೆ. ನಾನು ಮಹಿಳೆಯಾಗಬೇಕು ಎಂಬುದನ್ನು ಇದೇ ಸಂದರ್ಭದಲ್ಲಿ ನಿರ್ಧರಿಸಿದೆ. ಆದರೆ ಮಗನಾಗಿ ನನ್ನ ಕರ್ತವ್ಯಗಳನ್ನು ಪೂರೈಸಿದ ನಂತರ ಆ ನಿರ್ಧಾರ ಜಾರಿಮಾಡಲು ತೀರ್ಮಾನಿಸಿದೆ. ವಿಧವೆಯಾಗಿದ್ದ ನನ್ನ ಸಹೋದರಿಗಾಗಿ ಒಂದು ಬ್ಯೂಟಿ ಪಾರ್ಲರ್‌ ಮತ್ತು ಅಡುಗೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಅಮ್ಮನಿಗಾಗಿ ಒಂದು ಹೋಟೆಲ್‌ ಆರಂಭಿಸಿಕೊಟ್ಟೆ.

2017ರಲ್ಲಿ ನಾನು ‘ಮಿಸ್‌ ಟ್ರಾನ್ಸ್‌ ಡೈಮಂಡ್‌’ ಸ್ಪರ್ಧೆಯಲ್ಲಿ ಪಾಲ್ಗೊಂಡು ಬಹುಮಾನವನ್ನೂ ಗೆದ್ದೆ. ನನ್ನ ಸಹೋದರಿಗೆ ವಿಚಾರವನ್ನು ತಿಳಿಸಿದ್ದು ಆಗಲೇ. ಆಕೆ ಕುಸಿದುಹೋದಳು. ‘ಇತರ ಲಿಂಗಪರಿವರ್ತಿತರಂತೆ ಆಗಬಾರದು, ಘನತೆಯಿಂದ ಬಾಳಬೇಕು’ ಎಂಬ ಷರತ್ತಿನೊಂದಿಗೆ ಆಕೆ ವಾಸ್ತವವನ್ನು ಸ್ವೀಕರಿಸಿದಳು.

ಇದಾದ ನಂತರ ತಾಯಿಗೆ ತಿಳಿಸಲು ತೀರ್ಮಾನಿಸಿದೆ. ಮಹಿಳೆಯ ಉಡು‍ಪು ತೊಟ್ಟು, ಗೆದ್ದಿದ್ದ ಬಹುಮಾನದೊಂದಿಗೆ ಅಮ್ಮನ ಮುಂದೆ ಬಂದು ನಿಂತಾಗ ಆಕೆ ಅತಿಯಾಗಿ ಸಂತಸಪಟ್ಟಳು. ಛದ್ಮವೇಷದಲ್ಲಿ ನಾನು ಬಹುಮಾನ ಗೆದ್ದಿದ್ದೆ ಎಂದೇ ಅವಳು ಭಾವಿಸಿದ್ದಳು. ನಿಜವನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಅವಳು ಇರಲಿಲ್ಲ. ನಾನು ಬೀದಿಯಲ್ಲಿ ಭಿಕ್ಷೆ ಬೇಡಲು ಆರಂಭಿಸಬಹುದೆಂದು ಆಕೆ ಭಾವಿಸಿದ್ದಳು. ಅಮ್ಮನಿಗೆ ನನ್ನ ಸಹೋದರ ಸತ್ಯವನ್ನು ಮನವರಿಕೆ ಮಾಡಿಕೊಟ್ಟ. ನನ್ನ ಇಡೀ ಕುಟುಂಬ ನನ್ನನ್ನು ಸ್ವೀಕರಿಸಿತು. ತುಂಬು ಹೃದಯದಿಂದ ಅಲ್ಲದಿದ್ದರೂ ತಂದೆಯೂ ಒಪ್ಪಿಕೊಂಡರು.

2017ರಲ್ಲಿ ನಾನು ಲಿಂಗಪರಿವರ್ತನೆಯ ಶಸ್ತ್ರಚಿಕಿತ್ಸೆಗೆ ಒಳಗಾದೆ. 2019ರಲ್ಲಿ ‘ಮಿಸ್‌ ಟ್ರಾನ್ಸ್‌ ಕ್ವೀನ್‌’ ಸ್ಪರ್ಧೆಯನ್ನು ಗೆದ್ದೆ. 2020ರಲ್ಲಿ ‘ಮಿಸ್‌ ಇಂಟರ್‌ನ್ಯಾಷನಲ್‌ ಕ್ವೀನ್‌’ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರೂ ವಿನ್ಯಾಸಕರು ಮತ್ತು ಪ್ರಾಯೋಜಕರ ಕೊರತೆ ಕಾಡಿತು.

ನನ್ನ ಬದುಕು ಕಷ್ಟದ ಕನಸುಗಳನ್ನು ಈಡೇರಿಸಿಕೊಳ್ಳಲು ಕಠಿಣ ಶ್ರಮವಹಿಸುವ ಹೋರಾಟದ ಹಾದಿಯಾಗಿತ್ತು. ಒಬ ವ್ಯಕ್ತಿಯಾಗಿ ಬೆಳೆಯುವ, ಲಿಂಗಪರಿವರ್ತಿತ ಸಮುದಾಯ ಮಾತ್ರವಲ್ಲ ಒಟ್ಟಾರೆ ಸಮಾಜದ ಅಭಿವೃದ್ಧಿಗೆ ಕಾಣಿಕೆ ನೀಡುವ ದಿಕ್ಕಿನಲ್ಲಿ ಪ್ರತಿದಿನವೂ ಹೊಸ ಕಲಿಕೆ, ಹೊಸ ಅನುಭವವನ್ನು ಕೊಟ್ಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.