ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಧ್ವನಿ ಮಾಯೆ’ಯ ಇಂದುಶ್ರೀ

Last Updated 24 ಅಕ್ಟೋಬರ್ 2018, 19:30 IST
ಅಕ್ಷರ ಗಾತ್ರ

ಎರಡನೇ ತರಗತಿಯಲ್ಲಿದ್ದಾಗ ಮನೆಗೆ ಬಂದ ಜಾದೂಗಾರರೊಬ್ಬರು ತೋರಿದ ಜಾದೂವಿನಿಂದ ಪ್ರಭಾವಿತರಾದ ಇಂದುಶ್ರೀ ಅದರಲ್ಲೇ ಆಸಕ್ತಿ ಬೆಳೆಸಿಕೊಂಡರು. ಮುಂದೆ ಅದೇ ಆಸಕ್ತಿ ಶಾಲೆಯಲ್ಲಿ ಕಾರ್ಯಕ್ರಮ ನೀಡುವಷ್ಟು ಬೆಳೆಯಿತು. ಅಂದಿನಿಂದ ಶುರುವಾದ ಮಾತನಾಡುವ ಗೊಂಬೆಗಳ ಒಡನಾಟ ಇಂದಿಗೂ ಮುಂದುವರಿದೆ.

ಸಿಟಿ ಕೇಬಲ್‌ನಲ್ಲಿ ಮಕ್ಕಳ ದಿನಾಚರಣೆಗೆಂದು ಜಾದೂ ಪ್ರದರ್ಶನ ನೀಡುತ್ತಿದ್ದ ಇಂದುಶ್ರೀ ಸತತ ಮೂರು ವರ್ಷಗಳ ಕಾಲ ‘ಡಿಂಕು’ ಜತೆ ಮಾತುಕತೆ ನಡೆಸಿದ ಹೆಗ್ಗಳಿಕೆ ಹೊಂದಿದ್ದಾರೆ. ಡಿಂಕುಗೆ ಬೇರೆಬೇರೆ ವೇಷ ಹಾಕಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಜನರು ಆಶ್ಚರ್ಯ ಚಕಿತರಾಗಿ ನೋಡುತ್ತಿದ್ದನ್ನು ಈಗಲೂ ಅವರು ನೆನಪಿಸಿಕೊಳ್ಳುತ್ತಾರೆ. ‘ಸುಧಾ’ ವಾರಪತ್ರಿಕೆಯ ಅಂಕಣಕಾರ, ಚಿಕ್ಕಪ್ಪ ಎನ್. ರಾಮನಾಥ್ ಅವರಿಂದಾಗಿ ಹಾಸ್ಯಪ್ರಜ್ಞೆ ಬೆಳೆಸಿಕೊಂಡ ಇಂದುಶ್ರೀ ಪ್ರಸಕ್ತ ಸಂದರ್ಭಗಳಿಗೆ ತಕ್ಕಂತೆ ‘ಧ್ವನಿ ಮಾಯೆ’ ಕಲೆಯನ್ನು ಬಳಸುವುದನ್ನು ಅಭ್ಯಾಸ ಮಾಡಿಕೊಂಡರು.

ಸಿಟಿ ಕೇಬಲ್‌ನಲ್ಲಿ ಪಿಎಸ್‌ಎಲ್‌ವಿ ರಾಕೆಟ್ ಉಡ್ಡಯನ ಕುರಿತು ಡಿಂಕುಗೆ ಮಾಡಿದ ವೇಷಭೂಷಣ ಬಹಳ ತೃಪ್ತಿಕೊಟ್ಟ ಸಂಗತಿ ಎಂದು ನೆನೆಯುವ ಅವರು, ಗೊಂಬೆಗಳಿಗಾಗಿ ಸಾವಿರಾರು ರೂಪಾಯಿ ವೆಚ್ಚ ಮಾಡಿದ್ದಾರೆ. ಸಣ್ಣ ಅವಧಿಯಲ್ಲೇ ಸೃಜನಾತ್ಮಕವಾಗಿ ಪ್ರೇಕ್ಷಕರ ಮನ ಸೆಳೆಯುವಂತೆ ಕಲೆಯನ್ನು ರೂಢಿಸಿಕೊಂಡಿರುವ ಅವರು, ‘ಡಿಂಕು’ ಗೊಂಬೆಯಾಟದಿಂದಾಗಿ ಪುಟಾಣಿಗಳಿಂದ ಹಿಡಿದು ವಯೋವೃದ್ಧರ ತನಕ ಪ್ರೇಕ್ಷಕರ ಮನ ಗೆದ್ದಿದ್ದಾರೆ.

ಬರೀ ಮನರಂಜನೆಯಷ್ಟೇ ಅಲ್ಲ ಡೆಂಗಿ, ಎಚ್1ಎನ್1, ಏಡ್ಸ್‌ ಕಾಯಿಲೆ ಕುರಿತು ಜನಜಾಗೃತಿ, ರಸ್ತೆ ನಿಯಮಗಳ ಪಾಲನೆ, ಶಾಂತಿಯ ಮಹತ್ವ ಸಾರುವ ಅನೇಕ ಸಾಮಾಜಿಕ ಸಂದೇಶಗಳನ್ನು ‘ಡಿಂಕು’ ಮೂಲಕ ಜಾಗೃತಿ ಮೂಡಿಸಿದ್ದಾರೆ. ಮನರಂಜನೆಯ ಜತೆಗೆ ಸಾಮಾಜಿಕ ಸಂದೇಶ ನೀಡುವುದು ತಮ್ಮ ‘ಧ್ವನಿ ಮಾಯೆ’ಯ ವಿಶೇಷ ಅನ್ನುತ್ತಾರೆ ಅವರು.

ವಿಜ್ಞಾನಿಯಾಗಬೇಕೆಂದು ಕನಸು ಕಂಡಿದ್ದ ಇಂದುಶ್ರೀ ಎಂ.ಎಸ್. (ಕಮ್ಯುನಿಕೇಷನ್) ಪದವೀಧರೆ. ವಿಜ್ಞಾನಿ ಯಾರೂ ಬೇಕಾದರೂ ಆಗಬಹುದು. ಯಾರೂ ಮಾಡದ ಸಾಧನೆ ಮಾಡಬೇಕೆಂದು ಅದು ವಿಭಿನ್ನವಾಗಿರಬೇಕೆಂದು ‘ಧ್ವನಿ ಮಾಯೆ’ಯ ಕಲಾವಿದೆಯಾದವರು ಅವರು. ಅಂದುಕೊಂಡಿರದ ಕ್ಷೇತ್ರ ಪ್ರವೇಶಿಸಿ, ಅಲ್ಲಿಯೇ ಅಪಾರ ಸಾಧನೆ ಮಾಡಿರುವ ಇಂದುಶ್ರೀಗೆ ಜನವರಿ 20, 2018ರಂದು ಹೊಸದಿಲ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳು ಭಾರತೀಯ ಮಹಿಳಾ ಸಾಧಕಿ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ತಂದೆ ಆರ್ಯನ್ ರವೀಂದ್ರ, ತಾಯಿ ಮಂಜುಳಾ ರವೀಂದ್ರ, ಚಿಕ್ಕಪ್ಪ ಎನ್. ರಾಮನಾಥ, ಗಂಡ ಅಶ್ವತ್ಥ ಬೇರಿಕೆ ಅವರ ಸಹಕಾರ ಪ್ರೋತ್ಸಾಹದಿಂದಲೇ ತಾವು ಇದುವರೆಗೆ ಇಷ್ಟು ಸಾಧನೆ ಮಾಡಲು ಸಾಧ್ಯವಾಗಿದೆ ಎನ್ನುತ್ತಾರೆ ಇಂದುಶ್ರೀ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪ್ರೇಕ್ಷಕರ ಯೋಚನಾ ಲಹರಿ, ಕಾರ್ಯಕ್ರಮ ಆಯೋಜಕರ ಮನಸ್ಥಿತಿ, ನಿತ್ಯದ ಬದುಕಿನ ಆಗು–ಹೋಗುಗಳು, ಪ್ರಸಕ್ತ ರಾಜಕೀಯ–ಸಾಮಾಜಿಕ ಸ್ಥಿತಿಗತಿಗಳನ್ನು ಆಳವಾಗಿ ಅರಿಯುವ ಇಂದುಶ್ರೀ ಅದಕ್ಕೆ ತಕ್ಕಂತೆ ತಮ್ಮ ಷೋಗಳ ರೂಪರೇಷೆಗಳನ್ನು ತಯಾರಿಸಿಕೊಳ್ಳುತ್ತಾರೆ.

ಇಷ್ಟು ವರ್ಷಗಳ ಕಾಲ ನಿರಂತರವಾಗಿ ‘ಧ್ವನಿ ಮಾಯೆ’ ಗೊಂಬೆಯಾಟ ನಡೆಸುವುದು ಕಷ್ಟಕರ. ಮಿದುಳಿನಿಂದ ಹಿಡಿದು ಕಾಲಿನ ಉಂಗುಷ್ಠದವರೆಗೆ ಇಡೀ ದೇಹವನ್ನು ಬಳಸಿಕೊಂಡು ಈ ಕಲೆಯನ್ನು ನಿಭಾಯಿಸಬೇಕು. ಇದು ನಿಜಕ್ಕೂ ಸವಾಲಿನ ವಿಷಯ. ಕೆಲವರು ಧ್ವನಿಮುದ್ರಿತ ಕ್ಯಾಸೆಟ್ ಬಳಸ್ತೀರಾ, ಚಿಪ್ ಹಾಕ್ತೀರಾ ಹೀಗೆಲ್ಲಾ ಪ್ರಶ್ನಿಸುತ್ತಾರೆ ಅದರೆ, ಇದ್ಯಾವುದನ್ನೂ ಬಳಸದೇ ಸ್ವಂತ ದನಿಯನ್ನೇ ನೇರವಾಗಿ ಬಳಸುವುದು ನನ್ನ ‘ಧ್ವನಿಮಾಯೆ’ ಕಲೆಯ ವೈಶಿಷ್ಟ್ಯ ಎನ್ನುವುದು ಇಂದುಶ್ರೀ ಅವರ ವಿವರಣೆ. ಈ ಅಪರೂಪದ ಕಲೆಗಾಗಿ ತುಪ್ಪ, ಮೊಸರು ಸೇರಿದಂತೆ ಗಂಟಲಿಗೆ ಕಿರಿಕಿರಿಯಾಗುವ ಆಹಾರವನ್ನು ಹಿತಮಿತವಾಗಿ ಸೇವಿಸುವ ಇಂದುಶ್ರೀ ಷೋ ಇದ್ದ ಸಮಯದಲ್ಲಿ ಇಷ್ಟದ ತಿನಿಸುಗಳಿಂದ ಹರದಾರಿ ದೂರವಿರುತ್ತಾರಂತೆ. ಇತ್ತೀಚೆಗಷ್ಟೇ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಸರಾ ಪ್ರಯುಕ್ತ ‘ಧ್ವನಿ ಮಾಯೆ’ಯ ಆಟ ಪ್ರದರ್ಶಿಸಿರುವ ಇಂದುಶ್ರೀ ಐದು ಬಾರಿ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಮುಂಬರುವ ದಿನಗಳಲ್ಲಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್‌ನಲ್ಲಿ ಸ್ಥಾನ ಪಡೆಯಬೇಕೆನ್ನುವುದು ಅವರ ಕನಸು.

‘ಡಿಂಕು’ ರೂಪುಗೊಂಡ ಬಗೆ...

ಗೊಂಬೆ ‘ಡಿಂಕು’ ಇಂದುಶ್ರೀ ಮನೆಯ ಸದಸ್ಯನಾಗಿದ್ದಾನೆ. ಅವರ ಮನೆಯ ಹೆಸರು ಕೂಡಾ ‘ಡಿಂಕು ಮನೆ’. ಇಂದುಶ್ರೀ ಮೊದಲ ಬಾರಿಗೆ ಕಾರು ತಗೊಂಡಾಗ ಕೀ ಪಡೆದದ್ದು ಡಿಂಕುನೇ. ಅವರ ಮದುವೆಯಲ್ಲೂ ಡಿಂಕುವಿನ ಉಪಸ್ಥಿತಿ ಇತ್ತು. ಮನೆಯ ಸದಸ್ಯರಿಗೆ ಡಿಂಕು ಬರೀ ಗೊಂಬೆಯಲ್ಲ. ಜೀವಂತವಾಗಿರುವ ವ್ಯಕ್ತಿ.

ಪರಿಚಿತ ಜಾದೂಗಾರರೊಬ್ಬರಿಂದ ‘ಡಿಂಕು’ವನ್ನು ಖರೀದಿಸಿದ್ದ ಇಂದುಶ್ರೀ ಅದನ್ನು ಮನೆಯ ಮುಂಬಾಗಿಲಲ್ಲಿ ಕೂರಿಸಿದ್ದರಂತೆ. ಹೊರಗಿನಿಂದ ಬಂದ ಇಂದುಶ್ರೀ ಅವರ ಅಮ್ಮ ವಿಕಾರವಾಗಿದ್ದ ‘ಡಿಂಕು’ವನ್ನು ನೋಡಿ ಕಿಟಾರನೇ ಕಿರುಚಿಕೊಂಡು ಓಡಿಹೋಗಿದ್ದರಂತೆ. ನಿಜಕ್ಕೂ ಅದನ್ನು ನೋಡಿದವರು ಭಯಪಡುವಂತಿತ್ತು. ಆದರೆ, ನಿಧಾನವಾಗಿ ಡಿಂಕುವಿನ ಮೈಬಣ್ಣ, ವೇಷಭೂಷಣ ಬದಲಾಯಿಸಿ ಷೋ ಕೊಡಲಾರಂಭಿಸಿದ ಮೇಲೆ ಎಲ್ಲರೂ ‘ಡಿಂಕು’ವನ್ನು ಇಷ್ಟಪಡಲಾರಂಭಿಸಿದರು. ಈಗ ’ಡಿಂಕು’ವಿನ ಜತೆಗೆ ಅಜ್ಜ–ಅಜ್ಜಿ, ಮೊಮ್ಮಗನೂ ಇಂದುಶ್ರೀ ಕುಟುಂಬದ ಸದಸ್ಯರಾಗಿ ಸೇರ್ಪಡೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT