ಶನಿವಾರ, ಡಿಸೆಂಬರ್ 14, 2019
25 °C

ವಿಶ್ವ ಅಂಗವಿಕಲರ ದಿನ: ಇಲ್ಲಿ ಯಾರೂ ಅಸಹಾಯಕರಲ್ಲ..

ಪೃಥ್ವಿರಾಜ್‌ ಎಂ.ಎಚ್‌–ಶರತ್ ಹೆಗ್ಡೆ Updated:

ಅಕ್ಷರ ಗಾತ್ರ : | |

ಇಂದು (ಡಿ.3) ಅಂಗವಿಕಲ ವ್ಯಕ್ತಿಗಳ ಅಂತರರಾಷ್ಟ್ರೀಯ ದಿನ (ಇಂಟರ್‌ನ್ಯಾಷನಲ್‌ ಡೇ ಆಫ್‌ ಪರ್ಸನ್ಸ್‌ ವಿತ್‌ ಡಿಸೆಬಿಲಿಟೀಸ್‌). ಹೊಸ ತಾಂತ್ರಿಕ ಜಗತ್ತು ಅಂಗವೈಕಲ್ಯ ಹೊಂದಿರುವವರ ಬದುಕನ್ನು ಬದಲಿಸಿಕೊಳ್ಳಲು ಸುಲಭದ ವಿಧಾನ ಮತ್ತು ಸಾಧನಗಳ ಆವಿಷ್ಕಾರ ಮಾಡಿದೆ. ಈ ಬಗ್ಗೆ ವಿವಿಧ ಮೂಲಗಳಿಂದ ಹೆಕ್ಕಿದ ಮಾಹಿತಿಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ.

ಅಂಗವೈಕಲ್ಯ ಹೊಂದಿದವರು ತಮ್ಮನ್ನು ಅಸಹಾಯಕರು ಎಂದು ತಿಳಿದುಕೊಳ್ಳಲೇಬೇಕಿಲ್ಲ. ಅವರಿಗೂ ವಿಶೇಷ ಶಿಕ್ಷಣ, ಉದ್ಯೋಗಾವಕಾಶಗಳಿವೆ. ಅದರಾಚೆಯೂ ಸ್ವತಂತ್ರ, ಸ್ವಾವಲಂಬಿ ಬದುಕನ್ನು ಆಯ್ಕೆ ಮಾಡುಕೊಳ್ಳುವವರಿಗೆ ಹೊಸ ತಾಂತ್ರಿಕ ಆವಿಷ್ಕಾರಗಳು ಅಗತ್ಯ ನೆರವು ನೀಡಿ ಮುನ್ನಡೆಸಲಿವೆ.

ಎಲೆಕ್ಟ್ರಿಕಲ್‌ ಸ್ಟಿಮ್ಯೂಲೇಶನ್‌ನಿಂದ ನಡೆಯಬಹುದು...

ಪಾರ್ಶ್ವವಾಯು ಮತ್ತು ಬೆನ್ನುಹುರಿ ಸಮಸ್ಯೆಯಿಂದ ಕಾಲುಗಳಲ್ಲಿ ಸ್ವಾಧೀನ ಕಳೆದುಕೊಂಡವರು ಕೇವಲ ವೀಲ್‌ಚೇರ್‌ಗಳನ್ನು ನೆಚ್ಚಿಕೊಂಡು ಇರಬೇಕಾಗಿತ್ತು. ಇದೀಗ ವೀಲ್‌ಚೇರ್‌ಗಳ ಅನ್ನು ವಾಕರ್‌ ರೀತಿಯಲ್ಲಿ ಬಳಕೆ ಮಾಡಿಕೊಂಡು ಎಲೆಕ್ಟ್ರಿಕಲ್‌ ಸ್ಟಿಮ್ಯೂಲೇಶನ್‌ ತಂತ್ರಜ್ಞಾನದ ಮೂಲಕ ಸುಲಭವಾಗಿ ನಡೆಯಬಹುದು. ಡೇವಿಡ್‌ ಮೀ ಎಂಬುವರು ಈ ತಂತ್ರಜ್ಞಾನದ ಮೂಲಕ 360 ಮೀಟರ್‌ ನಡೆದು ದಾಖಲೆ ಬರೆದಿದ್ದಾರೆ. ಜಿಮ್ನಾಸ್ಟಿಕ್‌ ಆಟಗಾರರಾದ ಡೇವಿಡ್‌ ಮೀಸ್ವಿಸ್‌ನಲ್ಲಿ ಪ್ರಾಯೋಗಿಕವಾಗಿ ನಡೆದಿದ್ದಾರೆ. ಎಲೆಕ್ಟ್ರಿಕಲ್‌ ಸ್ಟಿಮ್ಯೂಲೇಶನ್‌ ಮೂಲಕ ನರಗಳಿಗೆ ಮತ್ತು ಕಾಲಿನ ಮೂಳೆಗಳಿಗೆ ಶಕ್ತಿ ತುಂಬಲಾಗುವುದು ಎನ್ನಲಾಗಿದೆ. ಇನ್ನು ಪ್ರಯೋಗ ಹಂತದಲ್ಲಿರುವ ಈ ತಂತ್ರಜ್ಞಾನವನ್ನು 2021ರಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗುವುದು ಎನ್ನಲಾಗಿದೆ.

ಮೆಟ್ಟಿಲೇರುವ ಗಾಲಿ ಕುರ್ಚಿಗಳು

ಮೆಟ್ಟಿಲುಗಳನ್ನು ಏರುವ ಸ್ವಯಂ ಸಮತೋಲನ ಹೊಂದಿದ ಗಾಲಿ ಕುರ್ಚಿಗಳು ಅಂಗವಿಕಲರನ್ನು ಸ್ವತಂತ್ರ ರನ್ನಾಗಿಸುವಲ್ಲಿ ಬಹುದೊಡ್ಡ ಪಾತ್ರ ವಹಿಸಬಲ್ಲವು. ಈಗಲೂ ಬಹುತೇಕ ಕಟ್ಟಡಗಳಲ್ಲಿ ರ್‍ಯಾಂಪ್‍ಗಳಿಲ್ಲ. ಮೆಟ್ಟಿಲುಗಳೇ ಇವೆ. ಅಂಥ ಕಡೆಗಳಲ್ಲಿ ಈ ಕುರ್ಚಿಗಳು ನಿಜಕ್ಕೂ ಉಪಕಾರಿ ಆಗಬಲ್ಲವು.

ಈಗಾಗಲೇ ಬಳಕೆಯಲ್ಲಿರುವ ಯಂತ್ರಚಾಲಿತ ಎರಡು ಚಕ್ರಗಳ ಗಾಲಿ ಕುರ್ಚಿ(ಸೆಗ್ವೆ)ಗಳ ಮೂಲ ವಿನ್ಯಾಸವನ್ನೇ ಆಧರಿಸಿ ಇವನ್ನು ರೂಪಿಸಲಾಗಿದೆ.ಇದನ್ನು ಗಾಲಿ ಕುರ್ಚಿ ಪ್ರಪಂಚದ ಎಟಿವಿ (ಆಲ್‍ ಟರೈನ್‍ ವೆಹಿಕಲ್‍- ಎಲ್ಲ ಸ್ವರೂಪದ ನೆಲದಲ್ಲಿ ಓಡುವ ವಾಹನ) ಎಂದೇ ಬಣ್ಣಿಸಲಾಗಿದೆ.

ಚಾಲಕ ರಹಿತ ಗೂಗಲ್‍ ಕಾರು

ಈ ಕಾರು ಅಂಧರಿಗೆ ಮಾತ್ರವಲ್ಲ ದೈಹಿಕ ಅಥವಾ ಮಾನಸಿಕ ಭಿನ್ನ ಸಾಮರ್ಥ್ಯ ಹೊಂದಿರುವವರಿಗೂ ಸುರಕ್ಷಿತ ಸಾರಿಗೆ ವ್ಯವಸ್ಥೆಯನ್ನು ಒದಗಿಸುತ್ತದೆ. ಇದರಲ್ಲಿರುವ ಕೃತಕ ಬುದ್ಧಿಮತ್ತೆ, ಗೂಗಲ್ ಸ್ಟ್ರೀಟ್‍ ವ್ಯೂ (ರಸ್ತೆ ನೋಟದ ತಂತ್ರಾಂಶ), ಕಾರಿನ ಮೇಲೆ ಅಳವಡಿಸಲಾದ ಸಂವೇದಕಗಳು (ಸೆನ್ಸರ್ಸ್‌), ಕ್ಯಾಮೆರಾ ಗಳು ಚಾಲನೆಯ ಹಾದಿಯನ್ನು ಸುಗಮಗೊಳಿಸಲಿವೆ.

ಅಂಧರಿಗೆ ಸೆನ್ಸಾರ್‌ ಹೆಲ್ಮೆಟ್‌...

ರಸ್ತೆದಾಟುವಾಗ, ಟ್ರಾಫಿಕ್‌ ಸಿಗ್ನಲ್‌ಗಳು ಹಾಗೂ ಎದುರಿನಲ್ಲಿ ಇರುವ ವಸ್ತುಗಳನ್ನು ಗುರುತಿಸಲು ಅಂಧರಿಗೆ ಯಾರಾದರೊಬ್ಬರು ಸಹಾಯ ಮಾಡಬೇಕಿತ್ತು. ಇದೀಗ ಯಾರ ನೆರವು ಇಲ್ಲದೇ ಅವರು ಸುಲಭವಾಗಿ ರಸ್ತೆ ದಾಟಬಹುದು. ಎದುರಿನಲ್ಲಿರುವ ವಸ್ತುಗಳನ್ನು ಗುರುತಿಸಬಹುದಾದ ಸಾಧನವನ್ನು ಚೀನಾದಲ್ಲಿ ಆವಿಷ್ಕಾರ ಮಾಡಲಾಗಿದೆ. ಇದಕ್ಕೆ ಸೆನ್ಸಾರ್‌ ಹೆಲ್ಮೆಟ್‌ ಎಂದು ಹೆಸರಿಡಲಾಗಿದೆ. ಕ್ಲೌಡ್‌ ಮೈಂಡ್ಸ್‌ ಎಂಬ ಸಂಸ್ಥೆ ಇದನ್ನು ಅನ್ವೇಷಣೆ ಮಾಡಿದೆ. ಅಂಧರು ಇದನ್ನು ಧರಿಸಿ ರಸ್ತೆಗೆ ಇಳಿದರೆ ಸಾಕು ಸೆನ್ಸಾರ್‌ ತಂತ್ರಜ್ಞಾನದ ಮೂಲಕ ಈ ಸಾಧನ ಮಾರ್ಗದರ್ಶನ ನೀಡುತ್ತದೆ. ಎದುರಿಗೆ ಗೋಡೆ ಇದೆ, ರಸ್ತೆಯಲ್ಲಿ ಬಸ್ಸು, ಕಾರುಗಳು ಬರುತ್ತಿವೆ, ಟ್ರಾಫಿಕ್‌ ಸಿಗ್ನಲ್‌ ಬಿದ್ದಿದೆ ಎಂದು ಅದು ಹೇಳುತ್ತದೆ. ತಮ್ಮ ಸುತ್ತಲಿನ ವಾತಾವರಣವನ್ನು (20 ಮೀಟರ್‌ ಅಂತರ) ಈ ಸೆನ್ಸಾರ್‌ ಹೆಲ್ಮೆಟ್‌ ಗ್ರಹಿಸಿ, ಧ್ವನಿಯ ಮೂಲಕ ಸಂದೇಶವನ್ನು ರವಾನಿಸಲಿದೆ. ಈ ಸೆನ್ಸಾರ್‌ ಹೆಲ್ಮೆಟ್‌ 2020ರಲ್ಲಿ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳಿವೆ.

ಹೊಸ ತಲೆಮಾರಿನ ಶ್ರವಣ ಸಾಧನ...

ಕಿವುಡುತನ ನಿವಾರಣೆಗಾಗಿ ಹೊಸ ತಲೆಮಾರಿನ ಶ್ರವಣ ಸಾಧನವನ್ನು ಅಭಿವೃದ್ಧಿಪಡಿಸಲಾಗಿದೆ. ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಕೊಲಂಬಿಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಸಾಧನವನ್ನು ಕಂಡುಹಿಡಿದಿದ್ದಾರೆ. ಸೂಜಿ ಬಿದ್ದರೂ ಹೊರಡುವ ಸದ್ದನ್ನು ಈ ಸಾಧನ ಗ್ರಹಿಸಲಿದೆ ಎಂದು ಅನ್ವೇಷಕರು ಹೇಳಿದ್ದಾರೆ. ಪ್ರಸ್ತುತ ಬಳಕೆಯಲ್ಲಿರುವ ಸಾಧನಗಳಿಗಿಂತಲೂ ಈ ಸಾಧನ ಪರಿಣಾಮಕಾರಿ ಯಾಗಿದೆ ಎನ್ನಲಾಗಿದೆ. ಈ ಸಾಧನ ಧರಿಸುವ ವ್ಯಕ್ತಿಯ ಸುತ್ತಲಿನ ಶಬ್ಧವನ್ನು ಇದು ಗ್ರಹಿಸಲಿದೆ. ಮ್ಯಾಗ್ನೆಟಿಕ್‌, ಸಿಲಿಕಾನ್‌ ಚಿಪ್‌ಗಳಿಂದ ಇದನ್ನು ತಯಾರಿಸಲಾಗಿದೆ. ಹೊಸ ತಲೆಮಾರಿನ ಈ ಸಾಧನ ಪ್ರಾಯೋಗಿಕ ಹಂತದಲ್ಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಸುಧಾರಿತ ಕಾಕ್ಲಿಯರ್ ಇಂಪ್ಲಾಂಟ್ಸ್‌

ಕಿವಿಯೊಳಗಿಡುವ ಅಥವಾ ಶಸ್ತ್ರಚಿಕಿತ್ಸೆ ಮೂಲಕ ಕಿವಿಯೊಳಗೆ ಅಳವಡಿಸಬಹುದಾದ ಶ್ರವಣ ಸಾಧನಗಳು (ಕಾಕ್ಲಿಯರ್ ಇಂಪ್ಲಾಂಟ್‌ಗಳು) ಶ್ರವಣದೋಷವುಳ್ಳವರಿಗೆ ವರದಾನ. ಈಗಿನ ಸುಧಾರಿತ ಕಾಕ್ಲಿಯರ್ ಇಂಪ್ಲಾಂಟ್ ಮೈಕ್ರೊಫೋನ್ ಮೂಲಕ ಧ್ವನಿಯನ್ನು ಗ್ರಹಿಸುತ್ತದೆ. ಎತ್ತಿಕೊಳ್ಳುತ್ತದೆ ಮತ್ತು ಅದನ್ನು ಕಿವಿಯ ಹಿಂದೆ ಇರಿಸಿದ ಸಣ್ಣ ಸಾಧನಕ್ಕೆ ಕಳುಹಿಸುತ್ತದೆ. ಈ ಸಂಕೇತವನ್ನು ಡಿಜಿಟಲ್‌ ರೂಪಾಂತರ ಮಾಡಿ ಇಂಪ್ಲಾಂಟ್‍ ಸಾಧನಕ್ಕೆ ಕಳುಹಿಸುತ್ತದೆ. ಈ ಸಂಕೇತ ಸ್ವೀಕರಿಸಿದಾಗ ಸಾಧನವು ಸ್ಪಷ್ಟ ಧ್ವನಿ ಕೇಳಿಸಲು ಕಿವಿಯ ನರಗಳನ್ನು ಉತ್ತೇಜಿಸುತ್ತದೆ.

ಅಂಧ ಚಾಲಕರಿಗಾಗಿ ಕಾರುಗಳು

ಅಂಧ ಚಾಲಕರಿಗಾಗಿ ಎಂಜಿನಿಯರ್‌ ಡೆನ್ನಿಸ್‍ ಹಾಂಗ್‍ ವಿಶೇಷ ಕಾರಿನ ವಿನ್ಯಾಸ ಮಾಡಿದ್ದಾರೆ. ಕ್ಯಾಮೆರಾ, ಸಂವೇದಕಗಳು ಮತ್ತು ಬಹು ಕಂಪ್ಯೂಟರ್‌ಗಳ ಏಕೀಕೃತ ವ್ಯವಸ್ಥೆಯ ನೆರವಿನಿಂದ ಈ ಕಾರು ಓಡುತ್ತದೆ.

ಇದನ್ನೂ ಓದಿ: ಸಾಧನೆಗೆ ನ್ಯೂನತೆ ಅಡ್ಡಿಯಾಗದು

ಇದರ ತಾಂತ್ರಿಕ ವ್ಯವಸ್ಥೆ ಸುತ್ತಮುತ್ತಲಿನ ಪ್ರದೇಶಗಳನ್ನು ಗಮನಿಸಲು ಮತ್ತು ಚಾಲಕನಿಗೆ ಮಾರ್ಗದರ್ಶನ ನೀಡಲು ಪರ್ಯಾಯ ಸಂವೇದನೆಯ ಬಗ್ಗೆ ಮಾಹಿತಿ ಪೂರೈಸಲು ಸಮರ್ಥವಾಗಿದೆ. ಎಚ್ಚರಿಕೆ ನೀಡುವ ಅಲಾರಾಂ, ಆಸನ ಅಥವಾ ಕೈಗವಸುಗಳ ಮೂಲಕ ಕಂಪನ ಸಂಕೇತ ರವಾನಿಸುತ್ತದೆ. ಇದು ಅಂಧರಿಗೆ ಪ್ರಾಯೋಗಿಕವಾಗಿ ಅತ್ಯಂತ ಸುರಕ್ಷಿತ ವಾಹನವಾಗಿ ಬಳಕೆಗೆ ಬರಲಿದೆ.

ರೋಬೋಟಿಕ್‍ ಪ್ರಾಸ್ಥೆಟಿಕ್‍ ತೋಳು

ಯುದ್ಧಭೂಮಿಯಲ್ಲಿ ಗಾಯಗೊಂಡ ಸೈನಿಕರು ಅಥವಾ ಜನಸಾಮಾನ್ಯರು ಅಪಘಾತದಲ್ಲಿ ಅಂಗ ಛೇದನಕ್ಕೊಳಗಾದಲ್ಲಿ ಅಂಥವರಿಗೆ ನೆರವಾಗಲು ರೋಬೋಟಿಕ್‍ ತೋಳುಗಳು ಮಾರುಕಟ್ಟೆಗೆ ಬಂದಿವೆ. ಹಗುರವಾಗಿರುವ, ನೈಜ ತೋಳಿನಂತೆ ಬಳಸಬಹುದಾದ, ಬೇಕಾದಂತೆ ಸಜ್ಜುಗೊಳಿಸಬಹುದಾದ ಈ ತೋಳುಗಳು ಅತ್ಯಾಧುನಿಕ ಸೌಲಭ್ಯಗಳನ್ನು ಅಳವಡಿಸಿಕೊಂಡು ಬಂದಿವೆ. ಸಂವೇದನೆಗೆ ಪ್ರತಿಕ್ರಿಯಿಸುವ ವ್ಯವಸ್ಥೆಯನ್ನೂ ಹೊಂದಿವೆ. ಇದನ್ನು ಸಾಮಾನ್ಯ ತೋಳಿನಂತೆಯೇ ಬಳಸಬಹುದು.

ವೈಯಕ್ತಿಕ ದಿಕ್ಸೂಚಿ ಸಾಧನಗಳು

ದೃಷ್ಟಿಹೀನರಿಗೆ, ಏಕಾಂಗಿ ಪ್ರಯಾಣ ಸವಾಲಿನ ಸಂಗತಿ. ಎಲ್ಲೋ ಹೋಗುವಾಗ ವಸ್ತುಗಳು ಅಥವಾ ಜನರಿಗೆ ತಾಗುವ, ಡಿಕ್ಕಿಯಾಗುವ ಅಥವಾ ದಾರಿ ತಪ್ಪುವ ಸಂದರ್ಭವನ್ನು ಈ ದಿಕ್ಸೂಚಿ ಸಾಧನ ತಪ್ಪಿಸಲಿದೆ. ವ್ಯಕ್ತಿಯ ಮೇಲೆ ಸಣ್ಣ ಜಿಪಿಎಸ್ ಸಾಧನವನ್ನು ಇರಿಸಿದರೆ, ಅದು ಸ್ಥಳ ಮತ್ತು ನಿರ್ದೇಶನದೊಂದಿಗೆ ಧ್ವನಿ ಮಾಹಿತಿಯನ್ನು ರಚಿಸುತ್ತದೆ. ಮುಂದೆ ಹೋಗುವ ದಾರಿಗಾಗಿ ಸ್ಥಳ ಹಾಗೂ ಮಾರ್ಗಸೂಚಿಯನ್ನು ಈ ವ್ಯವಸ್ಥೆಯಲ್ಲಿ ಉಳಿಸಿಕೊಂಡು ನಿರಂತರ ಬಳಸಬಹುದು.

ಐ ಟ್ರ‍್ಯಾಕಿಂಗ್ ಸ್ಪೀಚ್ ಸಿಸ್ಟಮ್‌

ತೀವ್ರತರವಾದ ಅಂಗವಿಕಲತೆಯಿಂದ ಬಳಲು ವವರಿಗೆ ಡೈನಾವಾಕ್ಸ್ ಐಮ್ಯಾಕ್ಸ್‌ನಂತಹ ವ್ಯವಸ್ಥೆಯಿಂದ ಕಣ್ಣಿನ ಚಲನೆಯನ್ನು ಗುರುತಿಸಿಕೊಂಡು ಭಾಷಣ ಅಥವಾ ಮಾತು ಆಲಿಸುವ ಸೌಲಭ್ಯ ಮಾಡಿಕೊಳ್ಳಬಹುದು. ಸೆರೆಬ್ರಲ್ ಪಾಲ್ಸಿ, ಪಾರ್ಶ್ವವಾಯು ಮತ್ತು ಪಾರ್ಶ್ವವಾಯು ಸಂಬಂಧಿಸಿದ ಸಮಸ್ಯೆ ಪೀಡಿತ ವ್ಯಕ್ತಿಗಳಿಗೆ ಸಾಧನ ಸೂಕ್ತ.

ಈ ವ್ಯವಸ್ಥೆಯು ಪದಗಳು, ನುಡಿಗಟ್ಟುಗಳು ಮತ್ತು ವಾಕ್ಯಗಳನ್ನು ರಚಿಸಲು ಕಣ್ಣಿನ ಚಲನೆಯನ್ನು ಬಳಸುತ್ತದೆ. ಸಂವಹನದ ಜಾಡು ಹಿಡಿಯುವ ವ್ಯವಸ್ಥೆಗಳೊಂದಿಗೆ, ಬಳಕೆದಾರರು ಅನುವಾದಿತ ಭಾಷಣದೊಂದಿಗೆ ಸಂವಹನ ನಡೆಸಬಹುದು. ಈ ವ್ಯವಸ್ಥೆಯು ಸಾಮಾನ್ಯ ಪದಗಳು, ಪದಗುಚ್ಛಗಳ ಮಾಹಿತಿ ಭಂಡಾರವನ್ನೇ ಅಗತ್ಯಬಿದ್ದಾಗ ಬಳಕೆದಾರರು ವ್ಯವಸ್ಥೆಗೆ ಆದೇಶ (ಕಮಾಂಡ್‍) ನೀಡಿದಾಗ ಬಳಕೆಗೆ ಲಭ್ಯವಾಗುತ್ತದೆ.

ಮಾಹಿತಿ ಸಂಗ್ರಹ: ಶರತ್‌ ಹೆಗ್ಡೆ/ಪೃಥ್ವಿರಾಜ್‌ ಎಂ.ಎಚ್‌

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು