ಮಂಗಳವಾರ, ಡಿಸೆಂಬರ್ 10, 2019
19 °C

ದೆಹಲಿಯಲ್ಲೂ ಅಮ್ಮನ ಕೈರುಚಿ

Published:
Updated:

ನೀವು ಎಲ್ಲೇ ಇರಿ. ಅಮ್ಮನ ಕೈ ಅಡುಗೆ ಮಿಸ್‌ ಆಗುತ್ತಲ್ಲಾ ಎಂದು ಇನ್ನು ಬೇಸರಿಸಬೇಕಿಲ್ಲ. ಜಸ್ಟ್‌ಮೈರೂಟ್ಸ್‌(Justmyroots) ಎಂಬ ಫುಡ್‌ ಆ್ಯಪ್‌ ಈಗ ಮನೆಯಿಂದ ನೇರ(ಡೈರೆಕ್ಟ್‌ ಫ್ರಂ ಹೋಮ್‌) ಸೇವೆಯನ್ನು ಆರಂಭಿಸಿದ್ದು, ಊರಿನ ಮನೆಯಲ್ಲಿ ಅಮ್ಮ ಮಾಡಿದ ಅಡುಗೆಯನ್ನು ನಾವಿರುವ ಸ್ಥಳಕ್ಕೆ ತಲುಪಿಸುತ್ತದೆ.

ಹೈದರಾಬಾದ್‌, ಕೋಲ್ಕತ್ತ, ಮುಂಬೈ, ದೆಹಲಿ ಹೀಗೆ ಯಾವ ಸ್ಥಳದಲ್ಲಿದ್ದರೂ ಮನೆಯಲ್ಲಿ ಅಮ್ಮ ಮಾಡಿದ ಅಡುಗೆಯನ್ನು ಈ ಆ್ಯಪ್‌ ಮೂಲಕ ಬುಕ್‌ ಮಾಡಿ ನಾವಿದ್ದ ಸ್ಥಳಕ್ಕೆ ತರಿಸಿಕೊಳ್ಳಬಹುದು. ನಮ್ಮ ಮನೆಗೆ ಬಂದು ಅಮ್ಮ ಮಾಡಿದ ಅಡುಗೆಯನ್ನು ‘ಜಸ್ಟ್‌ಮೈರೂಟ್ಸ್‌’ ತಂಡ ಪಿಕ್‌ ಮಾಡಿಕೊಳ್ಳುತ್ತದೆ. ಕಂಟೇನರ್‌ನಲ್ಲಿ ಭದ್ರವಾಗಿ, ಸುರಕ್ಷಿತವಾಗಿ ಪ್ಯಾಕ್‌ ಮಾಡುತ್ತದೆ. ನಂತರ ದೂರದ ಸ್ಥಳದಲ್ಲಿದ್ದ ನಿಮಗೆ ತಲುಪಿಸುತ್ತದೆ. ಅಮ್ಮನ ಕೈರುಚಿಯನ್ನು ದೂರದಲ್ಲಿಯೂ ಕುಳಿತು ಸವಿಯಬಹುದು

ಆ್ಯಪ್‌ ಹುಟ್ಟಿದ್ದು

ಜಸ್ಟ್‌ಮೈರೂಟ್ಸ್‌ ಆ್ಯಪ್‌ ಆರಂಭಿಸಿದವರು ಪಶ್ಚಿಮಬಂಗಾಳ ಮೂಲದ ಪ್ರಮೀತಾ ಸೇನ್‌ಗುಪ್ತಾ ಹಾಗೂ ಸಮಿರನ್‌ ಸೇನ್‌ಗುಪ್ತಾ. ಪ್ರಮೀಟಾ ಮೊದಲು ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಟೆಕ್ನಾಲಜಿ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಅವರು ತಮ್ಮದೇ ಆದ ಕಂಪನಿಯೊಂದನ್ನು ಆರಂಭಿಸಿದರು. ಈ ಕಂಪನಿಯ ಕೆಲಸಕ್ಕಾಗಿ ಅವರು ಹೊಸ ಹೊಸ ಜನರನ್ನು ಭೇಟಿಯಾಗುತ್ತಿದ್ದರು. ಆಗ ಮಾತುಕತೆ ಸಂದರ್ಭದಲ್ಲಿ ಎಲ್ಲರೂ ದೂರದ ಸ್ಥಳದಲ್ಲಿ, ತಮ್ಮೂರಿನ ರುಚಿಯನ್ನು ಮಿಸ್‌ ಮಾಡಿಕೊಳ್ಳುತ್ತಿರುವುದರ ಬಗ್ಗೆ, ಆಹಾರ ಅಭಿರುಚಿ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿದ್ದರು. ಇದೇ ‘ಜಸ್ಟ್‌ಮೈರೂಟ್ಸ್‌’ ಆ್ಯಪ್‌ ಕಂಡುಹಿಡಿಯಲು ಕಾರಣವಾಯಿತಂತೆ.

2006ರಲ್ಲಿ ‘ಜಸ್ಟ್‌ಮೈರೂಟ್ಸ್‌’  ಆರಂಭವಾಯಿತು. ಒಂದು ವರ್ಷಗಳ ಕಾಲ ಬೇರೆ ಬೇರೆ ಜನರನ್ನು ಭೇಟಿ ಮಾಡಿ ಆ್ಯಪ್‌ ಸುಧಾರಣೆ ಮಾಡಿದ್ದಾರೆ. ಈಗ 10 ಸಾವಿರಕ್ಕೂ ಹೆಚ್ಚು ಜನರು ಈ ಆ್ಯಪ್‌ ಬಳಸುತ್ತಿದ್ದಾರೆ ಎಂದು ಮಾಹಿತಿ ನೀಡುತ್ತಾರೆ ಪ್ರಮೀತಾ.

5 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸುರಕ್ಷಿತ

ಅಷ್ಟು ದೂರದ ಊರುಗಳಿಗೆ ಆಹಾರ ಹೇಗೆ ಕಳುಹಿಸುತ್ತಾರೆ ಎಂಬ ಅನುಮಾನ ಸಹಜ. ಆಹಾರವನ್ನು ಪ್ಯಾಕ್ ಮಾಡಿದ ನಂತರ 5ರಿಂದ 8 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿ ಇಡಲಾಗುತ್ತದೆ. ರೊಟ್ಟಿ, ಗಟ್ಟಿ ಪದಾರ್ಥ, ರೋಲ್‌ಗಳು, ಸಿಹಿತಿಂಡಿ, ಚಟ್ನಿ ಮೊದಲಾದ ಒಂದೆರಡು ದಿನಗಳಲ್ಲಿ ಕೆಡದಂತಹ ಆಹಾರಗಳನ್ನು ಇಲ್ಲಿ ಪೂರೈಸಲಾಗುತ್ತದೆ. ‘ನಾವು ಬೇಗ ಕೆಡಬಹುದಾಂತಹ ಆಹಾರಗಳನ್ನು ಕೊಂಡೊಯ್ಯವುದಿಲ್ಲ. ಸಿಹಿತಿಂಡಿ ಪೊಟ್ಟಣ, ತರಕಾರಿ, ಹಣ್ಣುಗಳನ್ನು ಸಹ ಕಳುಹಿಸಬಹುದು’ ಎನ್ನುತ್ತಾರೆ ಪ್ರಮೀತಾ.

ವಾರದಲ್ಲಿ ಎರಡು ದಿನ

ಸದ್ಯ ವಾರದಲ್ಲಿ ಎರಡು ದಿನ ಮಾತ್ರ ಈ ಸೇವೆಯನ್ನು ಬೆಂಗಳೂರಿನಲ್ಲಿ ಆರಂಭಿಸಲಾಗಿದೆ. ಬುಧವಾರ ಹಾಗೂ ಶುಕ್ರವಾರ ಮಾತ್ರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಬುಧವಾರ ಆಹಾರ ಪ್ಯಾಕ್‌ ಮಾಡಿ ಕಳುಹಿಸಿದರೆ, ಗುರುವಾರ ಸಂಬಂಧಿಸಿದವರಿಗೆ ತಲುಪಿಸಲಾಗುತ್ತದೆ. ಶುಕ್ರವಾರ ಕಳುಹಿಸಿದ ಆಹಾರ ಪೊಟ್ಟಣ ಶನಿವಾರ ಕೈ ಸೇರುತ್ತದೆ. 18ರಿಂದ 24 ಗಂಟೆಯೊಳಗೆ ಆಹಾರವನ್ನು ತಲುಪಿಸಲಾಗುತ್ತದೆ. ಆಹಾರ ಕೆಡದಂತೆ ಇರಲು ಯಾವುದೇ ರಾಸಾಯನಿಕ ಬಳಸುವುದಿಲ್ಲ ಎನ್ನುತ್ತಾರೆ ಪ್ರಮೀತಾ.

‘ಡೈರೆಕ್ಟ್‌ ಫ್ರಂ ಹೋಮ್‌’ ಸೇವೆಯು ಸದ್ಯ ದೆಹಲಿ, ಕೋಲ್ಕತ್ತ, ಜೈಪುರ, ಬೆಂಗಳೂರು, ಚೆನ್ನೈ, ಹೈದರಾಬಾದ್‌, ಮುಂಬೈ, ಪುಣೆ, ಅಹಮದಾಬಾದ್‌ ಹಾಗೂ ಚಂಡೀಗಡದಲ್ಲಿ ಲಭ್ಯ. ಈ ಆ್ಯಪ್‌ ಮೂಲಕ ಹೋಮ್‌ಟೌನ್‌ ರೆಸ್ಟೊರೆಂಟ್‌ಗಳಿಂದಲೂ ಆಹಾರ ಆರ್ಡರ್‌ ಮಾಡಬಹುದು. 1000 ಕಿ. ಮೀ ದೂರದಲ್ಲಿದ್ದರೂ ಜಸ್ಟ್‌ಮೈರೂಟ್ಸ್‌ ಆ್ಯಪ್‌ ಮೂಲಕ ಹೋಮ್‌ ಡೆಲಿವರಿ ನೀಡುತ್ತದೆ.

ಆ್ಯಪ್‌ ಡೌನ್‌ಲೋಡ್‌ಗೆ

ಗೂಗಲ್‌ ಪ್ಲೇಸ್ಟೋರ್‌ ಅಥವಾ ಆ್ಯಪ್‌ಸ್ಟೋರ್‌ನಲ್ಲಿ ‘Justmyroots’ ಆ್ಯಪ್‌ ಮಾಡಿಕೊಳ್ಳಬಹುದು. ಸಂಪರ್ಕಕ್ಕೆ +91 7042059800.

ವಿವರಗಳಿಗೆ– https://justmyroots.com/

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು