ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸದ ಮೇಲೆ ಮಾರ್ಷಲ್‌ಗಳ ಹದ್ದಿನ ಕಣ್ಣು!

Last Updated 17 ಜೂನ್ 2019, 19:30 IST
ಅಕ್ಷರ ಗಾತ್ರ

ಇನ್ನು ಮುಂದೆ ನಗರದ ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ಕಸ ಎಸೆಯುವಂತಿಲ್ಲ. ಏಕೆಂದರೆ ಕಸ ಎಸೆಯುವವರ ಮೇಲೆ ಮಾರ್ಷಲ್‌ಗಳ ಹದ್ದಿನ ಕಣ್ಣಿರುತ್ತದೆ.

ನಗರವನ್ನು ಕಾಡುತ್ತಿರುವ ಕಸದ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಯತ್ನವಾಗಿ ಬೃಹತ್‌ ಬೆಂಗಳುರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾರ್ಷಲ್‌ಗಳನ್ನು ನೇಮಕ ಮಾಡಲಿದೆ. ಈ ಸಂಬಂಧ ಬಿಬಿಎಂಪಿ ಕಳೆದ ವರ್ಷ ಕಳಿಸಿದ್ದ ಪ್ರಸ್ತಾಪಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ.

ನಗರದಲ್ಲಿ ಬೇಕಾಬಿಟ್ಟಿಯಾಗಿ ಕಸ ಚೆಲ್ಲುವುದನ್ನು ತಡೆಯಲು ಬಿಬಿಎಂಪಿ ತಿಂಗಳ ಒಳಗಾಗಿ 240 ಮಾರ್ಷಲ್‌ಗಳನ್ನು ನೇಮಕ ಮಾಡಲಿದೆ. ಕರ್ನಾಟಕ ನಿವೃತ್ತ ಸೈನಿಕರ ಕಲ್ಯಾಣ ಸಂಘ (ಕೆಇಡಬ್ಲ್ಯೂಎಸ್) ಮೂಲಕ ಸೇನೆಯ ನಿವೃತ್ತ ಸಿಬ್ಬಂದಿಯನ್ನು ಮಾರ್ಷಲ್‌ಗಳಾಗಿ ನೇಮಕ ಮಾಡಲಿದೆ.

ಪ್ರತಿ ದಿನ 198 ಮಾರ್ಷಲ್‌ಗಳನ್ನು ವಾರ್ಡ್‌ಗಳಿಗೆ ನಿಯೋಜಿಸಲಾಗುವುದು. ಒಂದು ವೇಳೆ ಮಾರ್ಷಲ್‌ಗಳು ರಜೆ ಹೋದರೆ, ಹುಷಾರು ತಪ್ಪಿದರೆ ಉಳಿದ 42 ಹೆಚ್ಚುವರಿ ಸಿಬ್ಬಂದಿಯನ್ನು ಅವರ ಸ್ಥಳದಲ್ಲಿ ನಿಯೋಜಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ‘ಮೆಟ್ರೊ’ಗೆ ತಿಳಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಕಸ ಚೆಲ್ಲುವ ಜನರು, ಹೋಟೆಲ್, ಆಸ್ಪತ್ರೆಗಳಿಗೆ ಮಾರ್ಷಲ್‌ಗಳು ದಂಡ ವಿಧಿಸುವ ಅಧಿಕಾರ ನೀಡಲಾಗುವುದು. ಇದಕ್ಕಾಗಿ ಕರ್ನಾಟಕ ಮುನ್ಸಿಪಲ್‌ ಕೌನ್ಸಿಲ್‌ (ಕೆಎಂಸಿ) ಕಾಯ್ದೆಗೆ ತಿದ್ದುಪಡಿ ತರಲಾಗುವುದು.

ದಂಡ ವಸೂಲಿಗೆ ರಶೀದಿ

ದಂಡ ವಸೂಲಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಟ್ರಾಫಿಕ್‌ ಪೊಲೀಸರ ನೀಡಿದಂತೆ ಪ್ರತಿ ಮಾರ್ಷಲ್‌ಗಳಿಗೂ ಜಿಪಿಎಸ್‌ ಆಧಾರಿತ ಡಿಜಿಟಲ್‌ ಸಾಧನ ನೀಡಲಾಗುವುದು. ದಂಡ ಪಾವತಿಸುವ ನಾಗರಿಕರಿಗೆ ಮಾರ್ಷಲ್‌ಗಳು ಈ ಯಂತ್ರದಿಂದ ರಶೀದಿ ನೀಡುತ್ತಾರೆ.

ಐದು ಪಟ್ಟು ದಂಡ

ಸಾರ್ವಜನಿಕ ಸ್ಥಳಗಳಲ್ಲಿ ಬೇಕಾಬಿಟ್ಟಿ ಕಸ ಚೆಲ್ಲುವ ಪ್ರವೃತ್ತಿಗೆ ಕಡಿವಾಣ ಹಾಕಲು ಮನೆ, ಆಸ್ಪತ್ರೆ ಮತ್ತು ಹೋಟೆಲ್‌ಗಳಲ್ಲಿ ಕಸವನ್ನು ಹಸಿ ಮತ್ತು ಒಣ ಕಸಗಳೆಂದು ವಿಂಗಡಿಸಿ ನೀಡಲು ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ತಪ್ಪಿದರೆ ಐದು ಪಟ್ಟು ದಂಡ ವಿಧಿಸಲು ಚಿಂತನೆ ನಡೆದಿದೆ ಎಂದು ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ ಹೇಳಿದ್ದಾರೆ.

ನಗರದ ನೈರ್ಮಲ್ಯ, ಶುಚಿತ್ವ ಮತ್ತು ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡುವ ನಿಟ್ಟಿನಲ್ಲಿ ಕಸ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ಲಾಸ್ಟಿಕ್‌ ಬ್ಯಾಗ್‌ ಬಳಕೆ ಮೇಲೆ ದಂಡದ ಪ್ರಮಾಣ ಹೆಚ್ಚಿಸಲು ಮತ್ತು ಪ್ರಕರಣ ದಾಖಲಿಸಿಕೊಳ್ಳಲುಚಿಂತನೆ ನಡೆದಿದೆ ಎಂದರು.

ತ್ಯಾಜ್ಯ ವಿಂಗಡಣೆ, ನಿರ್ವಹಣೆ ನಿಟ್ಟಿನಲ್ಲಿ ಇದೊಂದು ವಿನೂತನ ಹೆಜ್ಜೆ. ಕಸದ ಸಮಸ್ಯೆಗೆ ಮಾರ್ಷಲ್‌ಗಳ ನಿಯೋಜನೆ ಉತ್ತಮ ಪರಿಹಾರ ದೊರೆಯುವ ಇದೆ.ಡಿ.

ರಣದೀಪ್‌, ಹೆಚ್ಚುವರಿ ಆಯುಕ್ತ (ಘನತಾಜ್ಯ ನಿರ್ವಹಣೆ), ಬಿಬಿಎಂಪಿ

***

ಮಾರ್ಷಲ್‌ಗಳ ನೇಮಕಕ್ಕೆ ಸರ್ಕಾರದ ಒಪ್ಪಿಗೆ ದೊರೆತಿದ್ದು ತಿಂಗಳೊಳಗೆ ನೇಮಕಾತಿ ನಡೆಯಲಿದೆ. ಕರ್ನಾಟಕ ಪೌರಾಡಳಿತ ಕಾಯ್ದೆಗೆ ತಿದ್ದುಪಡಿ ತರಲಾಗುವುದು

– ಎನ್‌. ಮಂಜುನಾಥ್‌ ಪ್ರಸಾದ್‌, ಆಯುಕ್ತ, ಬಿಬಿಎಂಪಿ

***

l ಮಾರ್ಷಲ್‌ಗಳ ಸಂಬಳ, ಸಮವಸ್ತ್ರ, ತರಬೇತಿ ಹಾಗೂ ಇತರ ವೆಚ್ಚಕ್ಕೆ ಬಿಬಿಎಂಪಿ ಮೇಲೆ ಪ್ರತಿ ವರ್ಷ ₹8.48 ಕೋಟಿ ಹೊರೆ

lಈ ಮೊದಲು ಬೆಲ್ಲಹಳ್ಳಿ, ಬೆಲ್ಲಂದೂರು ಮತ್ತು ವರ್ತೂರು ಕೆರೆಗಳಲ್ಲಿ ತಾಜ್ಯ ಸುರಿಯುವುದನ್ನು ತಡೆಯಲು ಮಾರ್ಷಲ್‌ಗಳ ನೇಮಕ ಮಾಡಿದ್ದ ಬಿಬಿಎಂಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT