ಶುಕ್ರವಾರ, ಜುಲೈ 1, 2022
23 °C
smart fan

ಸ್ಮಾರ್ಟ್‌ ಫ್ಯಾನ್‌ಗಳ ಹವಾ !

ಸುಬ್ರಮಣ್ಯ ಎಚ್‌.ಎಂ. Updated:

ಅಕ್ಷರ ಗಾತ್ರ : | |

Prajavani

ಈ ಫ್ಯಾನ್‌ಗಳು ಗಾಳಿ ಬೀಸುತ್ತಲೇ ಇಂಪಾದ ಸಂಗೀತ ಕೇಳಿಸುತ್ತವೆ. ಮಕ್ಕಳು ನಿದ್ರೆಗೆ ಜಾರಲು ಲಾಲಿ ಪದಗಳನ್ನು ಹಾಡುತ್ತವೆ!.. ಹೌದು; ಈ ಅತ್ಯಾಧುನಿಕ ಫ್ಯಾನ್‌ಗಳನ್ನು ಜನರ ಅಭಿರುಚಿಗೆ ತಕ್ಕಂತೆ ರೂಪಿಸಲಾಗಿದೆ. ತಂಪಾದ ಹವೆ ಸೃಷ್ಟಿಸುವ ಈ ಕಲಾತ್ಮಕ ಫ್ಯಾನ್‌ಗಳ ಬಿನ್ನಾಣ, ಬೆರುಗು ಅತ್ಯಾಕರ್ಷಕ ಮತ್ತು ಮನಮೋಹಕ.

ಈ ಫ್ಯಾನ್‌ಗಳ ಇರುವಿಕೆಯಿಂದ ಕೋಣೆ ಸುಂದರ, ಸುಮಧುರ ಅನುಭವ ನೀಡುತ್ತದೆ. ಚಳಿಗಾಲದಲ್ಲಿ ಬೆಚ್ಚಗೆಯೂ, ಬೇಸಿಗೆಯಲ್ಲಿ ತಂಪು ಸೂಸುವುದು ಇವುಗಳ ವಿನ್ಯಾಸದ ವೈಶಿಷ್ಟ್ಯ. ವೃತ್ತಾಕಾರ, ಗೋಳಾಕಾರ, ಬಾಗಿದ ಆಕಾರದ‌ಲ್ಲೂ ತಿರುಗಬಲ್ಲ ತಂತ್ರಜ್ಞಾನ ಇದರ ವಿಶೇಷತೆ.

ಥೀಮ್ ಗ್ರೂಪ್‌ ಕಂಪನಿಯಾದ ‘ಫ್ಯಾನ್ಜ್‌ಆರ್ಟ್‌‘ (Fanzart) ನಾವೀನ್ಯ ಫ್ಯಾನ್‌ಗಳನ್ನು ಆವಿಷ್ಕಾರಗೊಳಿಸಿದೆ. ಇಂದಿರಾನಗರದಲ್ಲಿ ಇದರ ಕಚೇರಿ ಇದೆ. ಡಿಸೈನರ್ ಮನೆಗಳಿಗಾಗಿಯೇ ‘ಡಿಸೈನರ್ ಫ್ಯಾನ್’ ಎನ್ನುವುದು ಇದರ ಟ್ಯಾಗ್‌ಲೈನ್. 

ಮನೆ ಅಲಂಕಾರಕ್ಕೆ ಮಾತ್ರವಲ್ಲದೆ ಹೋಟೆಲ್‌, ಕಚೇರಿ ಸ್ಥಳಗಳಿಗೂ ಸರಿ ಹೊಂದುವ ಇವುಗಳ ವಿನ್ಯಾಸ ನೋಡುಗರ ಗಮನ ಸೆಳೆಯುತ್ತವೆ. ಮಿಸ್ಟ್ ಫ್ಯಾನ್, ಅಕ್ವಾಜೆಟ್, ರಿಸ್ಸೆಡ್ ಫಾಲ್ಸ್ ಸೀಲಿಂಗ್ ಫ್ಯಾನ್, ದಿ ಇನ್‌ವೆಂಟೊ ಇದಕ್ಕೆ ಉತ್ತಮ ಉದಾಹರಣೆ.

ಸ್ಮಾರ್ಟ್‌ ಫ್ಯಾನ್‌ಗಳ ಹವಾ: ಇತರ ಸ್ಮಾರ್ಟ್‌ ಎಲೆಕ್ಟ್ರಾನಿಕ್‌ ವಸ್ತುಗಳಂತೆಯೇ ಕಾರ್ಯ ನಿರ್ವಹಿಸುತ್ತವೆ. ಈ ಫ್ಯಾನ್‌ಗಳಲ್ಲಿ ವಾತಾವರಣದ ಶುಷ್ಕತೆ ಹಾಗೂ ಉಷ್ಣತೆ ಪತ್ತೆ ಮಾಡುವ ಸೆನ್ಸರ್‌ಗಳಿವೆ. ಈ ಸೆನ್ಸರ್‌ಗಳ ಮೂಲಕ ಕೊಠಡಿ ಉಷ್ಣತೆಗೆ ಅನುಗುಣವಾಗಿ ವೇಗ ಹೆಚ್ಚಿಸುವ ಮತ್ತು ತಗ್ಗಿಸುವ ಸ್ವಯಂಚಾಲಿತ ವ್ಯವಸ್ಥೆಯೂ ಇದೆ. 

ಸಾಧಾರಣ ಫ್ಯಾನ್‌ಗಿಂತ ದುಬಾರಿ: ಸ್ಮಾರ್ಟ್‌ ಫ್ಯಾನ್‌ಗಳು ಪ್ರಸ್ತುತ ಇರುವ ಸೀಲಿಂಗ್‌ ಫ್ಯಾನ್‌ನ ಸುಧಾರಿತ ರೂಪ. ಹಾಸಿಗೆಯಿಂದ ಎದ್ದು ಸ್ವಿಚ್‌ ಹಾಕುವ ಕೆಲಸ ಇರುವುದಿಲ್ಲ. ಇದರ ಬೆಲೆ ಸೀಲಿಂಗ್‌ ಫ್ಯಾನ್‌ಗಿಂತ ದುಪ್ಪಟ್ಟು. ₹10ಸಾವಿರದಿಂದ ಆರಂಭವಾಗಿ ‌₹10ಲಕ್ಷವರೆಗೂ ಇದೆ.

ಈ ಸ್ಮಾರ್ಟ್‌ ಫ್ಯಾನ್‌ಗಳನ್ನು ಮನೆಯ ಒಂದು ಕಡೆ ಕುಳಿತು ಮೊಬೈಲ್‌ ಮೂಲಕ ನಿಯಂತ್ರಿಸಬಹುದು. ಮಲಗುವ ಹಾಸಿಗೆ ಬಳಿಯಲ್ಲೇ ಮೊಬೈಲ್‌ ಫೋನ್‌ ಇದ್ದರೆ ಅಲ್ಲಿಂದಲೇ ಫ್ಯಾನ್‌ ವೇಗ ಹೆಚ್ಚು, ಕಡಿಮೆ ಮಾಡಬಹುದು. ಮನೆಯ ಯಾವುದೇ ಕೊಠಡಿಗಳಲ್ಲಿರುವ ಫ್ಯಾನ್‌ಗಳನ್ನೂ ಬ್ಲೂ ಟೂತ್‌ ಸಂಪರ್ಕದ ಆ್ಯಪ್‌ ಮೂಲಕವೂ ನಿಭಾಯಿಸಬಹುದು.

ಈ ಫ್ಯಾನ್‌ಗಳ ಉಪಯೋಗ: ಸಾಧಾರಣ ಫ್ಯಾನ್‌ಗಳಿಗಿಂತ ಈ ಸ್ಮಾರ್ಟ್‌ ಫ್ಯಾನ್‌ಗಳ ಉಪಯೋಗ ಹೆಚ್ಚು. ಮನೆಯಿಂದ ಹೊರಬಂದಾಗ ಅಥವಾ ಬೀಗ ಹಾಕಿದ ನಂತರ ಮರೆತಿದ್ದರೆ ಎಲ್ಲ ಫ್ಯಾನ್‌ಗಳನ್ನೂ ಏಕಕಾಲದಲ್ಲಿ ಆ್ಯಪ್‌ ಮೂಲಕ ಹೊರಗಿನಿಂದಲೇ ನಿಯಂತ್ರಿಸಬಹುದು.

80ಕ್ಕೂ ಹೆಚ್ಚು ಹೊಸ ಬಗೆಯ ಡಿಸೈನರ್ ಫ್ಯಾನ್‌ಗಳು ಇಲ್ಲಿ ಮಾರಾಟಕ್ಕಿವೆ. ಆನ್‌ಲೈನ್‌ನಲ್ಲಿಯೂ ಖರೀದಿಸಬಹುದು. ಬೇಸಿಗೆ ಆರಂಭವಾಗಿದೆ. ಸುಖ ನಿದ್ರೆಗೆ ಫ್ಯಾನ್‌ ಅವಶ್ಯ. ಉತ್ತಮ ಹಾಗೂ ಗ್ರಾಹಕಸ್ನೇಹಿ ಫ್ಯಾನ್‌ಗಳ ಆವಿಷ್ಕಾರ ಅವಶ್ಯ ಎನ್ನುತ್ತಾರೆ ಈ ಕಂಪನಿ ನಿರ್ದೇಶಕ ತರುಣ್‌ ಲಾಲಾ. ಮಾರುಕಟ್ಟೆಯಲ್ಲಿ ಎಲ್ಲವೂ ಸ್ಮಾರ್ಟ್‌ ಆಗಿರುವ ಕಾಲದಲ್ಲಿ ಈಗ ಬೀಸುವ ಫ್ಯಾನ್‌ಗಳು ಕೂಡ ಸ್ಮಾರ್ಟ್‌ ಆಗುತ್ತಿವೆ. ಹೊಸತನಕ್ಕೆ ಒಗ್ಗಿಕೊಂಡರೆ ಮಾತ್ರ ಬದುಕಲು ಸಾಧ್ಯ ಎನ್ನುವ ಸರಳ ಸಿದ್ಧಾಂತ ಅವರದ್ದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.