ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮ, ಭಕ್ತಿಗಳ ಕೃಷ್ಣ ಜನ್ಮಾಷ್ಟಮಿ

Last Updated 22 ಆಗಸ್ಟ್ 2019, 14:22 IST
ಅಕ್ಷರ ಗಾತ್ರ

ಕೃ ಷ್ಣ ಜನ್ಮಾಷ್ಟಮಿ ಪ್ರಯುಕ್ತಇಸ್ಕಾನ್‌ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಭರ್ಜರಿ ಸಿದ್ಧತೆ ನಡೆದಿದೆ. ಮೊಸರು ಕುಡಿಕೆ ಒಡೆಯುವ ಸ್ಪರ್ಧೆ, ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆ, ಗಾಯನ, ನೃತ್ಯ, ಪಾರಾಯಣ, ಭಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇಸ್ಕಾನ್‌, ಗೋಪಾಲಕೃಷ್ಣ, ವೇಣುಗೋಪಾಲ ದೇವಸ್ಥಾನಗಳಲ್ಲಿ ಎರಡು ದಿನ ವಿಶೇಷ ಪೂಜೆ, ಅಲಂಕಾರ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಮುರುಳಿ, ಮಾಧವ, ಮುಕುಂದ, ಗೋಪಾಲ, ಗೋವರ್ಧನ, ಗಿರಿಧರ, ನೀಲಮೇಘಶ್ಯಾಮ, ನವನೀತಚೋರ ಮುಂತಾದವು ಕೃಷ್ಣನ ವಿವಿಧ ಹೆಸರು. ಕೃಷ್ಣ ಅವತಾರಗಳಿಗೆ ತಳುಕು ಹಾಕಿಕೊಂಡಿರುವ ಈ ಹೆಸರುಗಳಿಗೆ ತಕ್ಕಂತೆ ಹಲವು ಭಾವ, ಭಂಗಿಗಳ ಆಕರ್ಷಕ ಮೂರ್ತಿಗಳು ಮಾರುಕಟ್ಟೆಗೆ ಬಂದಿವೆ. ಮುರುಳಿಲೋಲ, ಮುದ್ದುಕೃಷ್ಣ, ರಾಧಾಕೃಷ್ಣರ ಮೂರ್ತಿಗಳು ಕಣ್ಣು ಕುಕ್ಕುತ್ತಿವೆ. ಆ ಪೈಕಿ ರಾಧಾ–ಕೃಷ್ಣ ಶೃಂಗಾರ ಮತ್ತು ಬೆಣ್ಣೆ ಕುಡಿಕೆ ಜತೆ ಕುಳಿತ ಬಾಲಕೃಷ್ಣನ ಮೂರ್ತಿಗಳನ್ನು ಗ್ರಾಹಕರು ಇಷ್ಟ ಪಟ್ಟು ಕೊಂಡೊಯ್ಯುತ್ತಿದ್ದಾರೆ.

ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಾರುಕಟ್ಟೆಗೆ ಹೂವು, ಹಣ್ಣು ಖರೀದಿಸಲು ಕುಟುಂಬ ಸಮೇತ ಬಂದಿದ್ದ ಮಲ್ಲೇಶ್ವರದ ಉಷಾ ಶೆಣೈ ಅವರು ಮೂರ್ತಿ ಕೊಳ್ಳಲು ಚೌಕಾಸಿ ನಡೆಸಿದ್ದರು. ‘ಮಾರುಕಟ್ಟೆಯಿಂದ ಖರೀದಿಸಿದಮೂರ್ತಿಗಳನ್ನು ಪೂಜೆ ಮಾಡುವುದಿಲ್ಲ. ಮನೆಯಲ್ಲಿರುವ ಲೋಹದ ವಿಗ್ರಹಕ್ಕೆ ಪೂಜೆ ಮಾಡುತ್ತೇವೆ. ಅದರ ಬಳಿ ಈ ಮೂರ್ತಿಗಳನ್ನು ಅಲಂಕಾರಕ್ಕೆ ಇಡುತ್ತೇವೆ. ರಂಗು, ರಂಗಿನ ಕೃಷ್ಣ ಮೂರ್ತಿ ಕಂಡರೆ ಮಕ್ಕಳಿಗೆ ಇಷ್ಟ’ ಎಂದು ಸಂಭ್ರಮ ಹಂಚಿಕೊಂಡರು.

ಗೋಕಾಲಷ್ಟಮಿಗೂ ಮೊದಲೇ ಪೋಷಕರು ಮುದ್ದು ಕಂದಮ್ಮಗಳಿಗೆ ಕೃಷ್ಣನ ವೇಷ ತೊಡಿಸಿ ಸಂಭ್ರಮಿಸುತ್ತಿದ್ದಾರೆ. ಮೈಯಿಗೆ ನೀಲಿಬಣ್ಣ, ಬಾಯಿಗೆ ಬೆಣ್ಣೆ ಮೆತ್ತಿಕೊಂಡು ಕೈಯಲ್ಲಿ ಕೊಳಲು ಹಿಡಿದ ಗುಂಡು, ಗುಂಡಾದ ಪುಟಾಣಿಗಳನ್ನು ಕೃಷ್ಣನ ವೇಷದಲ್ಲಿ ನೋಡುವುದೇ ಚೆಂದ. ಬಸವನಗುಡಿ, ಚಿಕ್ಕಪೇಟೆ, ಮಲ್ಲೇಶ್ವರ, ಜಯನಗರ, ಗಿರಿನಗರ, ಚಾಮರಾಜಪೇಟೆ, ಹನುಮಂತನಗರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್‌ ಸೇರಿದಂತೆ ನಗರದ ನಾನಾ ಭಾಗಗಳಲ್ಲಿ ಕೃಷ್ಣನ ವೇಷಕ್ಕೆ ಬೇಕಾದ ವಸ್ತ್ರ, ಪರಿಕರ ಬಾಡಿಗೆ ಕೊಡುವ ಅಂಗಡಿಗಳಿವೆ.

ಮೊದಲಾದರೆ ಕೃಷ್ಣಾಸ್ಟಮಿ ಬಂದರೆ ಫೋಟೊ ಸ್ಟುಡಿಯೊಗಳಿಗೆ ಸುಗ್ಗಿ. ಮುದ್ದು ಕೃಷ್ಣನ ವೇಷ ತೊಟ್ಟ ಮಕ್ಕಳ ಫೋಟೊ ಕ್ಲಿಕ್ಕಿಸಲು ಸ್ಟುಡಿಯೊಗಳಿಗೆ ಕರೆದೊಯ್ಯುತ್ತಿದ್ದರು. ಈಗ ಪೋಷಕರೇ ತಮ್ಮ ಮೊಬೈಲ್‌ಗಳಲ್ಲಿ ಫೋಟೊ ಸೆರೆ ಹಿಡಿಯುತ್ತಿದ್ದಾರೆ.

ಗೋಕುಲಾಷ್ಟಮಿಗೂ ಮುನ್ನಾದಿನವಾದ ಗುರುವಾರ ಮಾರುಕಟ್ಟೆ ಕಳೆಗಟ್ಟಿದ್ದವು. ಮಳೆ ಬಿಡುವು ನೀಡಿದ ಕಾರಣ ಹೂವು, ಹಣ್ಣುಗಳ ವ್ಯಾಪಾರ, ಸಿಹಿ ತಿಂಡಿ, ತಿನಿಸು ಖರೀದಿ ಭರಾಟೆಯಿಂದ ನಡೆದಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಗಗನಕ್ಕೇರಿದ್ದ ಹೂವು, ಹಣ್ಣುಗಳ ಬೆಲೆ ಸಹಜ ಸ್ಥಿತಿಗೆ ಬಂದಿವೆ. ಇದು ಗ್ರಾಹಕರಿಗೆ ಕೊಂಚ ಮಟ್ಟಿನ ನೆಮ್ಮದಿ ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT