ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪೂರ್ವ ಸಾಧಕ ಕದ್ರಿ

Last Updated 13 ಮೇ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು ವಿಶ್ವವಿದ್ಯಾಲಯ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಸಾಂಸ್ಕೃತಿಕ ಚಿಂತನ-ಮಂಥನದಲ್ಲೂ ಮುಂದುವರೆಯುವ ಪ್ರಯತ್ನ ಮಾಡುತ್ತಿದೆ. ಈ ನಿಟ್ಟಿನಲ್ಲಿ ಕುಲಪತಿ  ಎನ್. ಪ್ರಭುದೇವ್ ಅವರ ಮುಂದಾಳತ್ವದಲ್ಲಿ  ಸಂಸ್ಕೃತಿ ಚಿಂತನ ಎಂಬ ಹೊಸ ಕಾರ್ಯಕ್ರಮ ಪ್ರಾರಂಭವಾಗಿದೆ. ಇದರಲ್ಲಿ ಪ್ರತಿ ತಿಂಗಳು ಸಾಂಸ್ಕೃತಿಕ ಕ್ಷೇತ್ರದ ಹಿರಿಯ ಸಾಧಕರೊಬ್ಬರನ್ನು  ಅವರ ಜೀವಮಾನದ ಸಾಧನೆಗಾಗಿ ಸನ್ಮಾನಿಸಲಾಗುವುದು. ಅದಕ್ಕಾಗೇ ಈ ಮಾಲೆಗೆ ‘ಅಪೂರ್ವ ಸಾಧಕರು’  ಎಂಬ ನಾಮಕರಣ.

ಈ ಮಾಲೆಯ ಅಡಿ ಶನಿವಾರ ಗೌರವ ಸ್ವೀಕರಿಸಲಿರುವ ಪದ್ಮಶ್ರೀ ಪುರಸ್ಕೃತ ಡಾ. ಕದ್ರಿ ಗೋಪಾಲನಾಥ್ ಸರಳ, ನಿಗರ್ವಿ. ದಕ್ಷಿಣ ಕನ್ನಡ ಜಿಲ್ಲೆಯ ಕಲಾವಿದರ ಕುಟುಂಬದಲ್ಲಿ ಜನಿಸಿ (1950) ಅಂತರರಾಷ್ಟ್ರೀಯ ಖ್ಯಾತಿ ಪಡೆದ ಕಲಾವಿದ. ಮೈಸೂರು ಅರಮನೆಯ ವಾದ್ಯಗೋಷ್ಠಿಯಲ್ಲಿ ಕೇಳಿದ ಸ್ಯಾಕ್ಸೋಫೋನ್‌ನಿಂದ ಆಕರ್ಷಿತರಾದ ಅವರು ಎರಡು ದಶಕಗಳ ಕಠಿಣ ಸಾಧನೆಯಿಂದ ವಾದ್ಯದ ಮೇಲೆ ಪ್ರಭುತ್ವ ಗಳಿಸಿದ್ದಾರೆ. ಭಾರತೀಯ ಸಂಗೀತ ಜಾಯಮಾನಕ್ಕೆ ಹೊಂದುವಂತೆ ಕೆಲ ಬದಲಾವಣೆಗಳನ್ನೂ ವಾದ್ಯದಲ್ಲಿ ಮಾಡಿಕೊಂಡಿದ್ದಾರೆ.

ಕದ್ರಿಯವರ ವಾದನ ಸದಾ ಕಾವಿನಿಂದ ಕೂಡಿರುವಂಥದು. ಅವರ ಕಛೇರಿ ಮೊದಲಿನಿಂದ ಕೊನೆಯವರೆಗೂ ರಂಜನೀಯ; ಸುನಾದದ ಅಲೆ! ಚೇತೋಹಾರಿ ವಿನಿಕೆ.

ಕದ್ರಿ ಅವರಿಗೆ ಇಡೀ ಲೋಕವೇ ಒಂದು ವೇದಿಕೆ. ಪ್ರಪಂಚದ ಎಲ್ಲ ಕಡೆಗಳಿಂದ ಅವರಿಗೆ ಆಹ್ವಾನಗಳು ಬರುತ್ತವೆ. ತನಿಯಾಗಿ ಕರ್ನಾಟಕ ಸಂಗೀತ, ಹಿಂದುಸ್ತಾನಿ ಕಲಾವಿದರೊಂದಿಗೆ ಜುಗಲ್‌ಬಂದಿ, ಪಾಶ್ಚಾತ್ಯ ವಾದ್ಯಗಳೊಂದಿಗೆ ಜಾಸ್, ಫ್ಯೂಷನ್ ಕಾರ್ಯಕ್ರಮ ನೀಡಿದ್ದಾರೆ, ನೀಡುತ್ತಿದ್ದಾರೆ. ಹೀಗಾಗಿ ಅವರದ್ದು ಭಿನ್ನ ರುಚಿಯ ಸಂಗೀತ ಔತಣ.

ಫ್ರಾಗ್ ಜಾಸ್ ಫೆಸ್ಟಿವಲ್, ಬರ್ಲಿನ್ ಸಂಗೀತೋತ್ಸವ, ಮೆಕ್ಸಿಕೋದ ಸೆರ್ವಾಂಟಿನೊ ಉತ್ಸವ, ಲಂಡನ್‌ನ ಪ್ರೊಮೆನಾಡೊ, ಪ್ಯಾರಿಸ್‌ನ ಹೈಲ್ ಫೆಸ್ಟಿವಲ್ ಹೀಗೆ ವಿಶ್ವ ಸಮ್ಮೇಳನ, ಸಭೆಗಳಲ್ಲಿ ಕದ್ರಿಯವರ ಸ್ಯಾಕ್ಸೋಫೋನ್ ಮೊಳಗಿದೆ. ಸ್ವಿಜರ್‌ಲೆಂಡ್, ಬ್ರಿಟನ್, ಅಮೆರಿಕ, ಕೆನಡಾ, ಆಸ್ಟ್ರೇಲಿಯ, ಜರ್ಮನಿ, ಸಿಂಗಪುರ, ಬಹರೈನ್, ಕಟಾರ್, ಮಲೇಷಿಯ  ಹೀಗೆ ಅವರ ವಾದ್ಯ ನಿನಾದಿಸಿರುವ ರಾಷ್ಟ್ರಗಳ ದೊಡ್ಡ ಪಟ್ಟಿಯೇ ಉಂಟು.

ಸಂಸ್ಕೃತಿ ಚಿಂತನ
ಬೆಂಗಳೂರು ವಿವಿ: ಶನಿವಾರ ಅಪೂರ್ವ ಸಾಧಕರು  ಮಾಲೆಯಲ್ಲಿ ಡಾ. ಕದ್ರಿ ಗೋಪಾಲನಾಥ್ ಅವರಿಗೆ ಗೌರವಾರ್ಪಣೆ. ವಿವಿ ಮತ್ತು ಸಂಯೋಜಿತ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ. ಅಧ್ಯಕ್ಷತೆ: ಕುಲಪತಿ ಎನ್. ಪ್ರಭುದೇವ್. ಅತಿಥಿ: ಪ್ರೊ. ಮೈಸೂರು ವಿ. ಸುಬ್ರಹ್ಮಣ್ಯ .
ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು ಆವರಣ, ಅರಮನೆ ರಸ್ತೆ. ಸಂಜೆ 5.



ಇಂದು ವಿದೇಶಿ ಮೂಲದ ವಾದ್ಯ ಸ್ಯಾಕ್ಸೋಫೋನ್‌ಗೆ ಶಾಸ್ತ್ರೀಯ ಸಂಗೀತದ ವೇದಿಕೆಯ ಮೇಲೆ ಒಂದು ಗೌರವಾನ್ವಿತ ಸ್ಥಾನ ದೊರಕಿರುವುದು ಅವರ ಪ್ರತಿಭೆ, ಪರಿಶ್ರಮಗಳಿಂದಲೇ. ಹಾಗಾಗಿ ಸ್ಯಾಕ್ಸೋಫೋನ್‌ಗೆ ಇನ್ನೊಂದು ಹೆಸರೇ ಕದ್ರಿ ಗೋಪಾಲನಾಥ್. ಬೆಂಗಳೂರು ವಿವಿ ನೀಡುತ್ತಿರುವ  ಅಪೂರ್ವ ಸಾಧಕರ  ಪ್ರಶಸ್ತಿ ಕನ್ನಡಿಗರೆಲ್ಲ ಒಕ್ಕೊರಲಿನ ಗೌರವ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT