ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್.ಎಂ.ಎಸ್. ನಿವೃತ್ತರ ಮಧುರ ಮಿಲನ

Last Updated 30 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಸರ್ಕಾರಿ ನೌಕರರಿಗೆ ನಿವೃತ್ತಿ ಎಂಬುದು ಹುಟ್ಟಿದ ಮನುಷ್ಯನಿಗೆ ಸಾವು ಇರುವಷ್ಟೇ ಖಚಿತ. ಎಷ್ಟೇ ಉತ್ತಮ ಕೆಲಸಗಾರನಾದರೂ ನಿವೃತ್ತಿಯ ದಿನ ಹೊರ ಹೋಗಲೇಬೇಕು. ಹಾಗೆ ನೋಡಿದರೆ ನಿವೃತ್ತಿಯ ದಿನ ಯಾರಿಗೆಲ್ಲಾ ಗುಡ್ ಬೈ ಹೇಳುವುದು? ಸಹದ್ಯೋಗಿಗಳಿಗೆ, ಕೆಲಸ ಮಾಡಿದ ಟೇಬಲುಗಳಿಗೆ, ಕುಳಿತ ಕುರ್ಚಿಗಳಿಗೆ, ಆಫೀಸಿನ ಗೋಡೆಗಳಿಗೆ ಎಲ್ಲಕ್ಕೂ ಎಲ್ಲರಿಗೂ ಬೈ ಬೈ.

ವೃತ್ತಿಯಲ್ಲಿದ್ದಾಗ ‘ಸಾಕಪ್ಪಾ ಈ ಕೆಲಸ, ಈ ಟೆನ್‌ಷನ್’ ಅನಿಸಿದ್ದು ನಿವೃತ್ತಿಯ ನಂತರ ಬರುವ ಪರ್ಮನೆಂಟ್ ರೆಸ್ಟ್ ಶೂನ್ಯದತ್ತ ದೂಡಿಬಿಡುತ್ತದೆ. ಅಧಿಕಾರ ಚಲಾಯಿಸಿ, ಜಬರ್ದಸ್ತಿನಿಂದ ನಡೆದುಕೊಂಡ ಎಷ್ಟೋ ಜನ ನಿವೃತ್ತಿಯ ದಿನದ ನಂತರ ಸೊನ್ನೆಯಾಗಿಬಿಡುತ್ತಾರೆ.

ಬೆಂಗಳೂರು ನಗರದಲ್ಲಿ ನಿವೃತ್ತರಾದ ಆರ್.ಎಂ.ಎಸ್. (ರೈಲ್ವೆ ಮೇಲ್ ಸರ್ವೀಸ್) ಅಧಿಕಾರಿಗಳು, ನೌಕರರು ವರ್ಷದ ಆರಂಭದ ಮೊದಲ ಭಾನುವಾರ ಸಂಜಯ್ ನಗರದ ರಘೋತ್ತಮನ್ ಸ್ಮಾರಕ ಭವನದಲ್ಲಿ ಸೇರುತ್ತಾರೆ. ಇದಕ್ಕೊಂದು ಸಿಹಿಯಾದ ಹೆಸರೂ ಇದೆ. ಅದೇ ‘ಮಧುರ ಮಿಲನ’.  ಹನ್ನೆರಡು ವರ್ಷಗಳ ಹಿಂದೆ ಪ್ರಾರಂಭವಾದ ಈ ಸ್ನೇಹ ಮಿಲನ ಬರುವ ಜನವರಿ 3ರಂದು ಹದಿಮೂರನೆಯ ವರ್ಷಕ್ಕೆ ಕಾಲಿಡುತ್ತಿದೆ. 

ನಿವೃತ್ತ ಐ.ಪಿ.ಎಸ್. ಆಫೀಸರ್ ಗಳಿಂದ ಹಿರಿ–ಕಿರಿಯ ನೌಕರರವರೆಗಿನವರು ಈ ಸಮಾರಂಭದಲ್ಲಿ ತಪ್ಪದೆ ಪಾಲ್ಗೊಳ್ಳುತ್ತಾರೆ. ಅಧಿಕಾರದಲ್ಲಿ ಇರುವವರು ಯಾರೂ ಇಲ್ಲ, ಎಲ್ಲಾ ನಿವೃತ್ತರೇ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಹೊಸ ವರ್ಷದ ಶುಭಾಶಯಗಳನ್ನು ವಿನಿಮಯ ಮಾಡುತ್ತಾ ತಾನಿನ್ನೂ ಇದ್ದೇನೆ ಎಂದು ಸಾಬೀತುಪಡಿಸುವ ಸುಸಂದರ್ಭ. 60ರಿಂದ 85ರ ಹರೆಯದ ‘ಯುವಕರು’, ವೃದ್ಧರು ಎಲ್ಲರ ಸಮಾಗಮ ಈ ಸಮಾರಂಭ. ಏನಿದ್ದರೂ ನಿವೃತ್ತಿಯ ನಂತರದ ಬದುಕಿನ ಘಟನೆಗಳನ್ನು ಪರಸ್ಪರ ಹಂಚಿಕೊಳ್ಳುತ್ತಾರೆ.

ಹಳೆಯ ಗೆಳೆಯರನ್ನು ಕಂಡಾಗ ಹೊಸ ಚೈತನ್ಯ ಪುಟಿಯುತ್ತದೆ. ವಯಸ್ಸಿನ ಭಾರ, ಅನಾರೋಗ್ಯ ಮರೆಯಾಗಿ ಉಲ್ಲಾಸದ ಬುಗ್ಗೆಗಳಾಗಿರುತ್ತಾರೆ. ಅರಳು ಮರಳಾದವರು ಇಲ್ಲಿ ಮರಳಿ ಅರಳುತ್ತಾರೆ. ಸೇವೆಯಲ್ಲಿದ್ದಾಗ ಜಗಳವಾಡಿದವರು, ಬೈದವರು, ಬೈಸಿಕೊಂಡವರು, ಪನಿಷ್‌ಮೆಂಟ್ ಕೊಟ್ಟವರು, ತೆಗೆದುಕೊಂಡವರು ಇಲ್ಲಿ ಮುಖಾಮುಖಿಯಾಗುತ್ತಾರೆ. ಕಾಲನ ಕರೆಗೆ ಕಾದು ಕುಳಿತು ಕಾಲ ಕಳೆಯುವವರಿಗೆ ಜೀವನೋತ್ಸಾಹ ಮರುಕಳಿಸುತ್ತದೆ. ಹೊಸ ವರ್ಷಕ್ಕೆ ಕ್ಯಾಂಡಲ್ ಹಚ್ಚಿ, ಕೇಕು ಕತ್ತರಿಸಿ ಎಲ್ಲರಿಗೂ ಹಂಚಿ ಸಂಭ್ರಮಿಸುತ್ತಾರೆ.

ಆರ್.ಎಂ.ಎಸ್. ಮಧುರ ಮಿಲನ ಸಮಾರಂಭದ ಮತ್ತೊಂದು ವಿಶೇಷವೆಂದರೆ ಸನ್ಮಾನಗಳು. 70 ಮತ್ತು 80 ವರ್ಷ ವಯಸ್ಸಾಸವರಿಗೆ ಶಾಲು ಹೊದಿಸಿ ಸನ್ಮಾನ ಮಾಡಲಾಗುತ್ತದೆ. 80 ವರ್ಷದವರಿಗೆ ಹೆಚ್ಚುವರಿಯಾಗಿ ಒಂದು ವಾಕಿಂಗ್ ಸ್ಟಿಕ್ ನೀಡಲಾಗುತ್ತದೆ. ಮೇಲು, ಕೀಳು, ಜಾತಿ ಮತಗಳ ಭೇದವಿಲ್ಲದೆ ಇಲ್ಲಿ ಎಲ್ಲರಿಗೂ ಅಭಿನಂದನೆ ಸಲ್ಲುತ್ತದೆ. ತಮ್ಮ ಮನೆಯ ಹಿರಿಯರ ಮುಖ ಅರಳುವುದನ್ನು ಕಾಣಲು ಮನೆಯ ಎಳೆಯರೂ  ಇಲ್ಲಿಗೆ ಬರುತ್ತಾರೆ. ನಂತರ ಒಂದಷ್ಟು ಮಂದಿ ಭಾಷಣ ಬಿಗಿಯುತ್ತಾರೆ. ಕೆಲವರು ಹಾಡುತ್ತಾರೆ, ಜೋಕ್‌ಗಳನ್ನು ಉದುರಿಸುತ್ತಾರೆ. ವಯಸ್ಸಾದವರ ಈ ಮಿಲನದಲ್ಲಿ ಎಲ್ಲೆಲ್ಲೂ ಉಲ್ಲಾಸದ ಮುಗುಳ್ನಗೆ ಕಾಣಿಸುತ್ತದೆ. ಕೊನೆಗೆ ಊಟದ ವ್ಯವಸ್ಥೆ ಇರುತ್ತದೆ. ಮಧುರ ಮಿಲನದ ಸಿಹಿ ನೆನಪಿಗೆ ಒಂದು ಸಿಹಿ ತಿಂಡಿಯು ಜೊತೆಗಿರುತ್ತದೆ.

ಇದಕ್ಕೆಲ್ಲಾ ಹಣ ಎಲ್ಲಿಂದ ಬರಬೇಕು ಎಂಬ ಪ್ರಶ್ನೆ ಏಳುವುದು ಸಹಜ. ಹಣ ಹಾಕುವವರು ಇವರೇ. ಕನಿಷ್ಠ ಇನ್ನೂರರಿಂದ ಎರಡು ಸಾವಿರ ರೂಪಾಯಿವರೆಗೂ ಈ ಉತ್ಸವಕ್ಕೆ  ವಂತಿಗೆ ನೀಡುತ್ತಾರೆ. ಹಣ ಉಳಿದರೆ ನಂತರದ ವರ್ಷದ ಮಧುರ ಮಿಲನಕ್ಕೆ ಎಫ್. ಡಿ. ಮಾಡಲಾಗುತ್ತದೆ. ಅರ್ಧ ದಿನದ ಈ ಕಾರ್ಯಕ್ರಮ ಮುಗಿಯುವುದೇ ತಿಳಿಯುವುದಿಲ್ಲ. ಊಟ ಮುಗಿಸಿ ಮನೆಯ ದಾರಿ ಹಿಡಿಯುವಾಗ  ಎಲ್ಲರ ಮನಸ್ಸುಗಳು ಪಿಸುಗುಟ್ಟುತ್ತವೆ: ‘ಮುಂದಿನ ವರ್ಷದ ಮಧುರ ಮಿಲನಕ್ಕೆ ನಾನಿರುತ್ತೇನೆಯೆ?’

ಈ ಸಲದ ಮಿಲನಕ್ಕೆ ಆರ್.ಎಂ. ಎಸ್.ನಲ್ಲಿ ವೃತ್ತಿ ಜೀವನ ಪ್ರಾರಂಭಿಸಿ ಬೇರೆ ಕ್ಷೇತ್ರದಲ್ಲಿ ಖ್ಯಾತರಾದ ಎ. ಚಂದ್ರಶೇಖರ್ (ಫಿಲ್ಮ್ ಸೆನ್ಸಾರ್ ಬೋರ್ಡ್‌ನ ಮಾಜಿ  ಅಧ್ಯಕ್ಷರು), ಪ್ರೊ. ಬಿ. ಗಂಗಾಧರ್ ಮೂರ್ತಿ (ಚಿಂತಕ ಮತ್ತು ವಿಚಾರವಾದಿ), ಸಿರಿಮನೆ ನಾಗರಾಜ್ (ಮಾಜಿ ನಕ್ಸಲ್ ನಾಯಕ) ಮತ್ತು  ರಂಗಭೂಮಿ–ಕಿರುತೆರೆ–ಹಿರಿತೆರೆ ನಟ ವಿ.ಸುಂದರ್ ರಾಜ್ ಪಾಲ್ಗೊಳ್ಳುವ ನಿರಿಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT