ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿ ಪ್ರೇರಕ ಶಕ್ತಿಯಿದೆ

Last Updated 4 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಎಲೆಕ್ಟ್ರಾನಿಕ್ ಮ್ಯೂಸಿಕ್ ಎಂದಾಕ್ಷಣ ನೆನಪಿಗೆ ಬರುವ ಲಂಡನ್‌ನ ಪ್ರಸಿದ್ಧ ಡಿಜೆ ಮತಾನ್‌ ಜೋಹರ್‌ ಇತ್ತೀಚೆಗಷ್ಟೆ ನಗರಕ್ಕೆ ಬಂದಿದ್ದರು. ಎಲೆಕ್ಟ್ರಾನಿಕ್ ವಾದನ, ಸಂಗೀತ ಶೈಲಿ, ನೃತ್ಯ ಸಂಗೀತ ಹೀಗೆ ಸಂಗೀತಕ್ಕೆ ಸಂಬಂಧ ಪಟ್ಟ ಹಲವು ವಿಷಯಗಳ ಕುರಿತು ಒಂದಷ್ಟು ಸಮಯ ಮಾತು ವಿನಿಮಯ ಮಾಡಿಕೊಂಡರು.

‘ಡ್ಯಾಮೇಜ್‌ ಕಂಟ್ರೋಲ್‌’ ಎಂಬ ತಮ್ಮ ಮೊದಲ ಆಲ್ಬಂ ಬಿಡುಗಡೆಗೆ ಬಂದಿದ್ದ ಮತಾನ್ ಸದಾ ಪ್ರಯೋಗಕ್ಕೆ ಒಡ್ಡಿಕೊಳ್ಳುವ ಡಿಜೆ . ಮ್ಯಾಟ್ ಝೋ ಎಂದೇ ಇವರು ಪರಿಚಿತರು. ಲಂಡನ್‌ ಮೂಲದ ನಿರ್ಮಾಪಕರೂ ಆಗಿರುವ ಮ್ಯಾಟ್‌, ಟ್ರಾನ್ಸ್‌, ಡ್ರಮ್‌ ಮತ್ತು ಬಾಸ್‌ ಸಂಗೀತ ಶೈಲಿಯನ್ನು ನೃತ್ಯಕ್ಕೆ ಒಗ್ಗಿಸಿಕೊಂಡವರು.

ಈ ಕುರಿತು ಮಾತನಾಡಿದ ಮ್ಯಾಟ್‌, ‘ನನಗೆ ಟ್ರಾನ್ಸ್‌ ಶೈಲಿ ತುಂಬಾ ಇಷ್ಟ. ಇದರೊಂದಿಗೆ ಡ್ರಮ್ಸ್‌ ಮತ್ತು ಬಾಸ್‌ ಕೂಡ ನುಡಿಸುತ್ತೇನೆ. ಏಕೆಂದರೆ ಅದೊಂದು ಹೊಸ ಶಬ್ದದಂತೆ ಅನುಭವ ನೀಡುತ್ತದೆ. ನನ್ನ ಜೀವನದಲ್ಲಿ ಈವರೆಗೆ ಇದಕ್ಕೇ ಕಾಯುತ್ತಿದ್ದೆನೇನೋ ಎನಿಸುವಷ್ಟು ಆಪ್ತವೆನಿಸುತ್ತದೆ. ಆದರೆ ಇದೇ ಅತ್ಯುತ್ತಮ ಎನ್ನಲಾಗುವುದಿಲ್ಲ’ ಎಂದರು.

ಹುಟ್ಟಿನಿಂದಲೇ ಸಂಗೀತ ಮ್ಯಾಟ್‌ ಜೊತೆಗಿತ್ತು. ಮ್ಯಾಟ್‌ ತಾಯಿ ವಯಲಿನ್‌ ವಾದಕಿ ಹಾಗೂ ಅಣ್ಣ ಇಸ್ರೇಲ್ ಗಾಯಕ. ಅಮೆರಿಕದಲ್ಲಿದ್ದ ಮ್ಯಾಟ್‌ ಕುಟುಂಬ ಲಂಡನ್‌ಗೆ ತೆರಳಿತ್ತು. ಅಲ್ಲಿಯೇ ಮ್ಯಾಟ್‌ಗೆ ಎಲೆಕ್ಟ್ರಾನಿಕ್‌ ಡಾನ್ಸ್‌ ಮ್ಯೂಸಿಕ್‌ ಬಗ್ಗೆ ಆಸಕ್ತಿ ಬಂದಿದ್ದು. ಆ ಚಿಕ್ಕ ವಯಸ್ಸಿನಲ್ಲೇ ಮ್ಯಾಟ್‌ ಸಂಗೀತದ ಮೋಹಕ್ಕೆ ಬಿದ್ದರು.

‘ನನಗೆ ಹದಿಮೂರು ವಯಸ್ಸಿರುವಾಗಲೇ ನಿರ್ಮಾಣ ಮಾಡಿದ್ದು. ನೃತ್ಯ ಸಂಗೀತ ವ್ಯಾಪಕವಾಗಿ ಹರಡುತ್ತಿದ್ದ ಸಂದರ್ಭದಲ್ಲೇ ನಾವೆಲ್ಲಾ ಲಂಡನ್‌ಗೆ ತೆರಳಿದ್ದು. ಆದ್ದರಿಂದಲೇ  ನನ್ನ ಸಂಗೀತ ಶೈಲಿಯೂ ಬದಲಾವಣೆಗೆ ಒಡ್ಡಿಕೊಂಡಿತು. ನಾನು ಟ್ರಾನ್ಸ್‌ ಕಡೆ ಪ್ರಭಾವಿತನಾದೆ. ಆ ಸಮಯದಲ್ಲಿ ಜನ ನನ್ನಿಂದ ಏನು ಬಯಸುತ್ತಿದ್ದರು ಎಂದು ನನಗೆ ತಿಳಿಯುತ್ತಿರಲಿಲ್ಲ. ಆದರೆ ಈಗ ನಾನು ಕೊಟ್ಟಿದ್ದನ್ನು ಅವರು ಬಯಸುತ್ತಿದ್ದಾರೆ ಎಂಬುದೇ ಸಂತಸದ ವಿಷಯ’ ಎಂದು ನಕ್ಕರು ಮ್ಯಾಟ್‌.

ತಮ್ಮ ‘ಸೌಂಡ್‌’ ಅರ್ಥಾತ್ ಶಬ್ದದ ಬಗ್ಗೆ ಕೇಳಿದಾಗ ನಗುತ್ತಾ ಉತ್ತರಿಸಿದ ಮ್ಯಾಟ್‌, ‘ನನ್ನ ಸಂಗೀತ ಕ್ಷಣಕ್ಷಣಕ್ಕೂ ಬದಲಾಗುತ್ತಿರುತ್ತದೆ. ಅದು ಯಾವ ದಿಕ್ಕಿನೆಡೆಗೆ ಹೋಗುತ್ತಿದೆ ಎಂಬುದನ್ನು ಅರ್ಥೈಸಿಕೊಳ್ಳಲು ಹೆಚ್ಚೇ ಪ್ರಯತ್ನಿಸುತ್ತಿದ್ದೇನೆ. ಆ ಬದಲಾವಣೆಯ ಪ್ರತಿನಿಧಿಯೇ ಮೊದಲ ಆಲ್ಬಂ ‘ಡ್ಯಾಮೇಜ್‌ ಕಂಟ್ರೋಲ್‌’ ಎಂದೂ ಮಾಹಿತಿ ನೀಡಿದರು.

ಎಲೆಕ್ಟ್ರಾನಿಕ್‌ ಸಂಗೀತ ಇನ್ನಿತರ ಸಂಗೀತ ಪ್ರಕಾರಗಳ ಉದ್ದೇಶದಂತೆಯೇ ಕೇಳುಗರಿಗೆ ಹತ್ತಿರವಾಗಲು ತುಡಿಯುತ್ತಿರುತ್ತದೆ ಎನ್ನುವುದು ಅವರ ಸಂಗೀತದ ವ್ಯಾಖ್ಯಾನ. ಇನ್ನು ಗೀತರಚನೆಯ ಕುರಿತು ಮ್ಯಾಟ್ ಸ್ವಲ್ಪ ಗಂಭೀರ.

ಗೀತ ರಚನೆ, ಸಂಗೀತ ಸೃಷ್ಟಿ ಅವರವರ ಮನಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದಂತೆ. ಕೆಲವೊಮ್ಮೆ ಗಾಯನದೊಂದಿಗೆ ಶುರುವಾದರೆ, ಕೆಲವೊಮ್ಮೆ ಡ್ರಮ್ಮಿನ ಜೋರು ಶಬ್ದದೊಂದಿಗೆ ಸಂಗೀತ ಆರಂಭವಾಗಿರುತ್ತದಂತೆ.

ಆಲ್ಬಂ ಮಾಡಲು ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಮ್ಯಾಟ್‌ ಇದ್ದಕ್ಕಿದ್ದಂತೆ ಡಿಜೆ ವೃತ್ತಿ ಕೈಬಿಟ್ಟು, ಭಾರತದಲ್ಲಿ ನೆಲೆಸಿ, ತುಪ್ಪದಲ್ಲಿ ಅದ್ದಿದಂತಹ ತಿಂಡಿ ತಯಾರಿಸುವ ಮನಸ್ಸಾಗಿದೆ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದರು. ಭಾರತ, ಅದರಲ್ಲೂ ಬೆಂಗಳೂರೆಂದರೆ ತಮಗೆ ತುಂಬಾ ಪ್ರೀತಿ ಎಂಬುದನ್ನು ಮ್ಯಾಟ್‌ ಒಪ್ಪಿಕೊಳ್ಳುತ್ತಾರೆ.

‘ಭಾರತದಲ್ಲಿ ಬೆಂಗಳೂರು ನನ್ನಿಷ್ಟದ ಸ್ಥಳ. ಇಲ್ಲಿಗೆ ಬಂದರೆ ಅದೇನೋ  ಒಂದು ರೀತಿಯ ಶಕ್ತಿ ಮೈಗೂಡುತ್ತದೆ. ಇಲ್ಲಿನ ಜನರೂ ಹಾಗೇ ಇದ್ದಾರೆ’ ಎನ್ನುತ್ತಾ ನಗರದ ಬಗೆಗಿನ ಪ್ರೀತಿಯನ್ನು ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT