ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳಿಸೋಣ ಬನ್ನಿ ಚಿಕ್ಕಬಾಣಾವರ ಕೆರೆಯನ್ನು

Last Updated 13 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಹೆಸರುಘಟ್ಟ ಕೆರೆ ಪರಿಸರವನ್ನು ಸಂರಕ್ಷಿತ ಪ್ರದೇಶವೆಂದು ಪರಿಗಣಿಸಲು ರಾಜ್ಯ ಸರ್ಕಾರ ಉದ್ದೇಶಿಸಿರುವುದು ಅಭಿನಂದನೀಯ ಸಂಗತಿಯಾಗಿದೆ. ಬೆಂಗಳೂರು ಸುತ್ತಲಿನ ಅನೇಕ ಪ್ರಮುಖ ಕೆರೆಗಳು ಇಂದು ನಾಮಾವಶೇಷವಾಗಿವೆ. ಆದರೂ, ಪರಿಸರ ಹಿತ ಚಿಂತಕರ ತೀವ್ರ ಪ್ರಯತ್ನಗಳಿಂದಾಗಿ, ಸರ್ಕಾರವೂ ಮನಸ್ಸು ಮಾಡಿದ್ದರಿಂದಾಗಿ ಅಲ್ಲಲ್ಲಿ ಕೆಲವಾದರೂ ಕೆರೆಗಳು ಶುಚಿಗೊಂಡು, ನವೀಕರಣಗೊಂಡು ಹೊಸ ಹುಟ್ಟು ಪಡೆದಂತೆ ಜೀವಮುಖಿಯಾಗಿವೆ.

ವಿಷಾದನೀಯ ಸಂಗತಿ ಎಂದರೆ, ಇನ್ನೂ ಅದೆಷ್ಟೋ ಕೆರೆಗಳು ಅನಾಥ ಮಕ್ಕಳಂತೆ ನಿರ್ಲಕ್ಷ್ಯಕ್ಕೊಳಗಾಗಿ, ಸಾವಿನ ಹಾದಿ ಹಿಡಿದಿವೆ. ಉದ್ದಿಮೆದಾರರು, ಭೂಗಳ್ಳರು, ಒತ್ತುವರಿದಾರರು ತಮ್ಮ ಕಸವನ್ನೆಲ್ಲಾ ಕೆರೆಯೊಡಲಿಗೆ ಸುರಿದು, ಬಲವಂತವಾಗಿ ಕೆರೆಗಳ ಜೀವ ತೆಗೆಯುತ್ತಿದ್ದಾರೆ. ಬತ್ತಿಸಿದ ಕೆರೆ ಪರಿಸರದಲ್ಲಿ ದೊಡ್ಡ ದೊಡ್ಡ ವಸತಿ, ಮಾರುಕಟ್ಟೆ ಸಮುಚ್ಚಯಗಳಾಗುತ್ತಿವೆ. ಸರ್ಕಾರದ ಅಧಿಕಾರಿಗಳು ಸಾಕಷ್ಟು ನಿಗಾ ವಹಿಸಿ ಕ್ರಮ ಕೈಗೊಳ್ಳದಿದ್ದರೆ, ಇತಿಹಾಸದ ನೆನಪಿನಲ್ಲೂ ಇರದಂತೆ ಮಾಯವಾಗಿಬಿಡುವ ಕೆರೆಗಳ ಸಾಲಿಗೆ ಮಹಾನಗರ ಪಾಲಿಕೆ ಅಂಚಿನ ಚಿಕ್ಕಬಾಣಾವರ ಕೆರೆಯೂ ಸೇರಲಿದೆ.

ಅರ್ಕಾವತಿ ಕೆರೆಗೆ ಬಲ ಕೊಡುವ ಜಲಮೂಲಗಳಲ್ಲಿ ಒಂದಾದ ಈ ಕೆರೆ ಕೆಲವೇ ವರ್ಷಗಳ ಹಿಂದೆ ಸಾಕಷ್ಟು ವಿಶಾಲವಾಗಿ ಮೈ ಚಾಚಿಕೊಂಡಿತ್ತು. ಈಚೆಗೆ, ಕೆರೆಯ ಸುತ್ತಲೂ ಪೈಪೋಟಿಯಲ್ಲಿ ಎಂಬಂತೆ ಮುಗಿಲೆತ್ತರ ತಲೆ ಎತ್ತಿ ನಿಂತಿರುವ ಹಲವು ವಸತಿ ಸಂಕೀರ್ಣಗಳಿಂದಾಗಿ ಅವುಗಳ ಕೊಳಚೆ, ಕಾರ್ಖಾನೆ, ಹೋಟೆಲ್, ಆಸ್ಪತ್ರೆ, ಕೋಳಿಯಂಗಡಿ ಮೊದಲಾದುವು ತಂದು ಸುರಿಯುತ್ತಿರುವ ಅಪಾರ ಪ್ರಮಾಣದ ತ್ಯಾಜ್ಯಗಳಿಂದಾಗಿ ಚಿಕ್ಕಬಾಣಾವರ ಕೆರೆ ‘ಮೈದುಂಬು’ತ್ತಾ, ಕಿರಿದಾಗುತ್ತಾ ಬಂದಿದೆ.

ಇದೆಲ್ಲದರ ಕೇಡು ಪರಿಣಾಮಗಳಿಂದಾಗಿ ಕೆರೆ ನೀರು ಹಲವು ವರ್ಷಗಳಿಂದ ಕೊಳೆತು ದುರ್ನಾತ ಸೂಸುತ್ತಿದೆ. ಹೊರ ತ್ಯಾಜ್ಯಗಳಿಂದಾಗಿ ಹಾಗೂ ಸರಿಯಾದ ನಿರ್ವಹಣೆ ಇಲ್ಲದ್ದರಿಂದಾಗಿ ಕೆರೆ ತುಂಬಾ ಜೊಂಡು ಮತ್ತಿತರ ಜಲ ಸಸ್ಯರಾಶಿ ವಿಪರೀತ ಬೆಳೆದುಕೊಂಡಿದೆ. ಇದರ ಜೊತೆಗೆ ಬಟ್ಟೆ ಒಗೆಯುವವರು, ಗಣೇಶನನ್ನು ಎಸೆದು ಹೋಗುವವರೂ ತಮ್ಮ ಕೈಲಾದ ಮಟ್ಟಿಗೆ ಕೆರೆಯ ಅಧೋಗತಿಗೆ ಕಾರಣರಾಗುತ್ತಿದ್ದಾರೆ.

ಇದೆಲ್ಲದರಿಂದಾಗಿ, ಇಲ್ಲಿನ ನೀರನ್ನು ನಂಬಿದ್ದ ಮತ್ಸ್ಯರಾಶಿಗೆ, ಅನೇಕ ಬಗೆಯ ಪಕ್ಷಿಗಳಿಗೆ ಹೆಚ್ಚಿನ ವಿಪತ್ತು ಬಂದೆರಗಿದಂತಾಗಿದೆ. ಈ ಕೆರೆಯ ಪರಿಸರ ಇಷ್ಟೊಂದು ಅಧೋಗತಿಗೆ ಇಳಿದು, ಮನುಷ್ಯರ, ನಿಸರ್ಗದ ಹಾಗೂ ಜೀವ ಜಂತುಗಳ ಆರೋಗ್ಯಕ್ಕೆ ಮಾರಕವಾಗಿದ್ದರೂ, ಇದರಲ್ಲಿ ಟನ್ನುಗಟ್ಟಳೆ ಮೀನುಗಳನ್ನು ಹಿಡಿದು ಮಾರುವವರು, ಅವನ್ನು ಉಪ್ಪು ಖಾರ ಹಚ್ಚಿ ‘ಬಾಟಲಿ ದ್ರಾವಣ’ದೊಂದಿಗೆ ನೆಂಚಿಕೆಕೆ ಕೊಡುವವರು ಹಾಗೂ ಖುಷಿಯಾಗಿ ತಿನ್ನುವವರು ಕಡಿಮೆ ಏನೂ ಇಲ್ಲ.

ಕೆರೆ ಇನ್ನೂ ಹಾಳಾಗಿ, ಕೊಳೆತು ನಾರುವುದರಿಂದ ತಲೆದೋರಲಿರುವ ಪಿಡುಗುಗಳ ಕಾರಣಗಳಿಂದಾದರೂ ಸರ್ಕಾರ ಎಚ್ಚೆತ್ತು ಕೆರೆ ಸಂರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಹೆಸರುಘಟ್ಟ ಕೆರೆಯ ಹಾಗೇ ಚಿಕ್ಕಬಾಣಾವರ ಕೆರೆಯನ್ನೂ ಸಂರಕ್ಷಿತ ಪ್ರದೇಶವೆಂದು ಘೋಷಿಸಲು ಸರ್ಕಾರ ಮುಂದಾಗುವುದು ಅತ್ಯಗತ್ಯವಾಗಿದೆ.

ಚಿಕ್ಕ ಬಾಣಾವರ ಕೆರೆಯು ಅಪರೂಪದ ಪಕ್ಷಿಗಳ ಆವಾಸ ಸ್ಥಾನವೂ ಆಗಿದೆ. ಇಲ್ಲಿ ಯಾವ್ಯಾವ ಜಾತಿಯ ಎಷ್ಟೆಲ್ಲಾ ಪಕ್ಷಿಗಳು ಬರುತ್ತಿವೆ ಎಂಬುದು ಪಕ್ಷಿ ವೀಕ್ಷಕರಿಗೆ ಚೆನ್ನಾಗಿ ಅರಿವಾಗಿದೆ. ಅಂಥ ಪಕ್ಷಿಗಳ ಆರೋಗ್ಯ ಮತ್ತು ರಕ್ಷಣೆಯ ಹಿತ ದೃಷ್ಟಿಯಿಂದಲಾದರೂ ಸರ್ಕಾರವು ಈ ಕೆರೆ ಸಂರಕ್ಷಣೆಗೆ ಆದ್ಯತೆ ಕೊಡಬೇಕಾಗಿದೆ. ಪರಿಸರ ಹಿತ ಚಿಂತಕರು ಈ ಸಂಬಂಧ ಜಾಗೃತರಾಗುವುದೂ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT