ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತ್ತಲೆಯಿಂದ ಬೆಳಕಿನೆಡೆಗೆ...

Last Updated 24 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಪ್ರತಿಯೊಬ್ಬ ಮಾನವನೂ ಸೃಷ್ಟಿಯ ಪರಿಪೂರ್ಣ ಭಾಗ. ಸೃಷ್ಟಿಯಲ್ಲಿರುವ ಎಲ್ಲ ಶಕ್ತಿಗಳು ಮಾನವನಲ್ಲಿ ಇರುತ್ತವೆ. ಆದರೆ, ಮಾನವರಲ್ಲಿರುವ ರಜೋ ಗುಣದಿಂದಾಗಿ ಈ ಶಕ್ತಿಗಳು ನಿರ್ಬಂಧಕ್ಕೆ ಒಳಗಾಗುತ್ತವೆ.

ನಾನು, ಇದನ್ನು ಉದಾಹರಣೆಯೊಂದಿಗೆ ವಿವರಿಸುತ್ತೇನೆ. ನಾಳೆ ಬೆಳಗಾದರೆ ದೀಪಾವಳಿ. ಎಲ್ಲರೂ ಹೊಸ ವಸ್ತು, ಬಟ್ಟೆ, ಆಭರಣ ಖರೀದಿಯಲ್ಲಿ, ಉಡುಗೊರೆ ಕೊಡುವುದರಲ್ಲಿ, ಸಂಭ್ರಮದಲ್ಲಿ ಮುಳುಗಿ ಹೋಗಿದ್ದಾರೆ. ದೀಪಾವಳಿಯ ದಿನ ಪ್ರತಿಯೊಬ್ಬರು ಲಕ್ಷ್ಮಿ ತಮ್ಮ ಮನೆಗೆ ಬರಲಿ, ಆಶೀರ್ವದಿಸಲಿ, ಸಮೃದ್ಧಿ ತರಲಿ ಎಂದು ಕಾಯುತ್ತಾರೆ.

ಲಕ್ಷ್ಮಿ ಅಂದರೆ ನಿಮ್ಮ ಅಲಂಕೃತ ಮನೆಯ ತೆರೆದ ಬಾಗಿಲ ಮೂಲಕ ಚಿನ್ನದ ಕೊಡ ಹೊತ್ತು ಬರುವ ಮಹಿಳೆಯಲ್ಲ. ಆಕೆ ಸೃಷ್ಟಿಯ ಶಕ್ತಿ. ಆ ಶಕ್ತಿಯನ್ನು ಬರ ಮಾಡಿಕೊಳ್ಳಲು ಗುರುವಿನ ಮಾರ್ಗದರ್ಶನದಲ್ಲಿ ಕಟ್ಟುನಿಟ್ಟಾಗಿ ಸಂಯಮ ಆಚರಿಸಬೇಕು. ತಪಸ್ಸಿನ ಮಾದರಿಯಲ್ಲಿ ಪೂಜಿಸಬೇಕು. ದೀಪಾವಳಿಯ ಮುಂಚಿನ ದಿನಗಳಲ್ಲಿ ಐಷಾರಾಮದಲ್ಲಿ, ದುಂದು ವೆಚ್ಚದಲ್ಲಿ ಮುಳುಗಬಾರದು. ಮಾನಸಿಕ, ದೈಹಿಕ ಪರಿಶುದ್ಧತೆ ಆಚರಿಸಬೇಕು.

ಅಮಾವಾಸ್ಯೆಯ ರಾತ್ರಿ ವರ್ಷದ ಅತ್ಯಂತ ಕತ್ತಲು ತುಂಬಿದ ರಾತ್ರಿಯಾಗಿರುತ್ತದೆ. ಅದು ಅತ್ಯಂತ ಪ್ರಬಲ ರಾತ್ರಿಯಾಗುತ್ತದೆ. ಹೊಸದರ ಆರಂಭ ಸೂಚಿಸುತ್ತದೆ. ಗುರುವಿನ ಸಾನಿಧ್ಯದಲ್ಲಿ ಮಂತ್ರ ಸಾಧನೆ, ಹವನದ ಮೂಲಕ ಈ ರಾತ್ರಿ ಆಚರಿಸಬೇಕು. ಕಟ್ಟುನಿಟ್ಟಿನ ಶಿಸ್ತನ್ನು ಆಚರಿಸಿದ ಸಾಧಕರು ಲಕ್ಷ್ಮಿಯ ಶಕ್ತಿಯನ್ನು ಪಡೆಯಲು ಸಾಧ್ಯವಾಗುತ್ತದೆ.

ಆದರೆ, ಇದರ ಉದ್ದೇಶ ಸ್ವಯಂ ತೃಪ್ತಿಯಲ್ಲ. ಲಕ್ಷ್ಮಿ ಅಂದರೆ ಲೌಕಿಕ ಮತ್ತು ಆಧ್ಯಾತ್ಮಿಕ ಸಂಪತ್ತಿನ ದೇವತೆ. ಸೃಷ್ಟಿ ಸರಿಯಾಗಿ ಕಾರ್ಯನಿರ್ವಹಿಸಲು ಸಂಪತ್ತನ್ನು ಹಂಚುವುದು ಆಕೆಯ ಉದ್ದೇಶ. ಲಕ್ಷ್ಮಿಯನ್ನು ನಮ್ಮಳಗೆ ಬರ ಮಾಡಿಕೊಳ್ಳುವುದು, ಆಕೆಯ ಶಕ್ತಿಯನ್ನು ಸ್ವೀಕರಿಸುವುದು ಎಂದರೆ ಆಕೆಯ ಗುಣವಾದ ಸ್ಥಿತಪ್ರಜ್ಞತೆ, ನಿಸ್ವಾರ್ಥವನ್ನು ಮೈಗೂಡಿಸಿಕೊಳ್ಳುವುದು.

ದೀಪಾವಳಿಯ ಮೂಲ ಉದ್ದೇಶ ದುಬಾರಿ ಬಟ್ಟೆ ಕೊಳ್ಳುವುದು, ಮನೆ ಅಲಂಕರಿಸುವುದು ಅಥವಾ ಮೃಷ್ಟಾನ್ನ ಭೋಜನ ಸೇವಿಸುವುದು ಅಲ್ಲ. ಲಕ್ಷ್ಮಿಯ ಶಕ್ತಿಯನ್ನು ನಾವು ಮೈಗೂಡಿಸಿಕೊಂಡು ಅಗತ್ಯ ಇರುವವರಿಗೆ ದಾನ, ಧರ್ಮ ಮಾಡುವುದು. ರಾಮ, ಲಕ್ಷ್ಮಣ, ಸೀತೆ ಅಯೋಧ್ಯೆಗೆ ಮರಳಿದಾಗ ಎಲ್ಲ ಮನೆಗಳಲ್ಲೂ ದೀಪ ಬೆಳಗಲಾಯಿತು.
 
ಕೃತಕ ದೀಪಗಳಿಂದ ಮನೆ ಬೆಳಗಬೇಕು, ಲಕ್ಷ್ಮಿಯನ್ನು ಆಕರ್ಷಿಸಬೇಕು ಎಂಬ ಸಂದೇಶ ಇದರಲ್ಲಿ ಅಡಗಿಲ್ಲ. ದೈವಿಕತೆಯನ್ನು ಆಕರ್ಷಿಸುವ, ಅಯೋಧ್ಯೆಯನ್ನು ಸೃಷ್ಟಿಸುವ ದೀಪ ನಮ್ಮಳಗೆ ಬೆಳಗಬೇಕು ಎಂಬುದು ಇಲ್ಲಿ ಅಡಗಿರುವ ಸತ್ಯ.
ಓಂ ತಮಸೋಮಾ ಜ್ಯೋತಿರ್ಗಮಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT