ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡುಗೀತೆಗಳ ಗಮ್ಮತ್ತು!

Last Updated 6 ಆಗಸ್ಟ್ 2013, 14:18 IST
ಅಕ್ಷರ ಗಾತ್ರ

ದೇವಾ,
ನೀನು ಕುಡಿಯಲಿಲ್ಲ
ಇತರರಿಗೂ ಕುಡಿಸಲಿಲ್ಲ
ಹಾಗಿದ್ದ ಮೇಲೆ
ಸ್ವರ್ಗಲೋಕದಲ್ಲಿರುವ
ನಿನ್ನ ಮಧುರಸಕ್ಕೆ
ಪಾವಿತ್ರ್ಯ ಎಲ್ಲಿಂದ ಬಂತು?

ಹೀಗೆಂದು ಬರೆದಾತ ಭಾರತದ ವಿಕ್ಷಿಪ್ತ ಕವಿಗಳಲ್ಲೊಬ್ಬನಾದ ಸರ್ ಮಿರ್ಜಾ ಗಾಲಿಬ್. ಇದು ಬರವಣಿಗೆಗೂ ಮಧುರಸಕ್ಕೂ ಇರುವ ಪುರಾತನ ನಂಟಿನ ಕುರುಹೆಂದೇ ಪರಿಭಾವಿಸಬಹುದು. ಹಾಗೆ ನೋಡಿದರೆ, ಬರಹಕ್ಕೂ ಬಾರ್‌ಗೂ ಇರುವ ಸಂಬಂಧ ಹಳೆಯದು.

ಸಾರಾಯಿ ದುಕಾನುಗಳ ಕಾಲದಿಂದ ಈ ಬಂಧನ ಇಂದಿನವರೆಗೂ ನಿರಾಯಾಸವಾಗಿ ಉಳಿದಕೊಂಡು ಬಂದಿದೆ. ಅದು ಕನ್ನಡ ಸಿನೆಮಾ ಗೀತ ಸಾಹಿತ್ಯಕ್ಕೂ ವ್ಯಾಪಿಸಿ ದಶಕಗಳೇ ಕಳೆದಿವೆ. ಇದೀಗ ಯೋಗರಾಜ ಭಟ್ಟರು `ಹಳೇ ಕ್ವಾಟ್ರು ಬಾಟ್ಲಿ'ಗೆ ಹೊಸ ಮದ್ಯ ಬಗ್ಗಿಸಿ ಪಡ್ಡೆ ಹೈಕಳ ಎದೆಗೆ ಸುರಿದಿದ್ದಾರೆ!

ಶರಣ್ ನಾಯಕತ್ವದ `ವಿ' ಸಿಂಬಲ್ಲಿನ ಚಿತ್ರಕ್ಕೆ ಭಟ್ಟರು ಬರೆದಿರುವ `ಖಾಲಿ ಕ್ವಾಟ್ರು ಬಾಟ್ಲಿಯಂಗೆ ಲೈಫು, ಆಚೆಗಾಕವ್ಳೆ ವೈಫು' ಹಾಡೀಗ ವಿಜಯ್ ಪ್ರಕಾಶ್ ಧ್ವನಿಯಲ್ಲಿ ಎಲ್ಲೆಡೆ ಹರಿದಾಡುತ್ತಿದೆ. ಅದು ಆಡಿಯೋ ರಿಲೀಸ್ ಆದ ಒಪ್ಪತ್ತಿನಲ್ಲಿಯೇ ಸೂಪರ್ ಹಿಟ್. ಈ `ಎಣ್ಣೆ' ಹಾಡಿನ ಮೊದಲ ಆವೃತ್ತಿಯನ್ನು ಕೇಳಿದ ಚಿತ್ರರಂಗದ ಘಟಾನುಘಟಿಗಳನೇಕರು ಇದು ಕುಡುಕರ ರಾಷ್ಟ್ರಗೀತೆಯಾಗುತ್ತದೆಂದು ಭವಿಷ್ಯ ನುಡಿದಿದ್ದರು. ಆದರೀಗ ಆ ಹಾಡು ಕುಡಿತದ ವಾಸನೆ ಗೊತ್ತಿಲ್ಲದ ಮಂದಿಗೂ ಹತ್ತಿರವಾಗಿದೆ. `ನಿಜವಾಗ್ಲೂ ಬಾರು ಗಂಡ್ಮಕ್ಳ ತವರು' ಎಂಬ ಸಾಲು ಬಹುತೇಕ ಪಡ್ಡೆ ಹುಡುಗರ ಬದುಕಿನ ಟ್ಯಾಗ್‌ಲೈನ್ ಆಗಿಬಿಟ್ಟಿದೆ.

ಕನ್ನಡ ಚಿತ್ರರಂಗಕ್ಕೆ ನಶೆಯ ಹಾಡುಗಳು ಒಂದಷ್ಟು ಹುಮ್ಮಸ್ಸು ತುಂಬಿರುವುದನ್ನು ಮದ್ಯಪಾನ ವಿರೋಧಿಗಳೂ ಒಪ್ಪಿಕೊಳ್ಳಬೇಕಾಗುತ್ತದೆ. ಇದುವರೆಗೆ ಕನ್ನಡದಲ್ಲಿ ಬಂದ ಇಂತಹ ಹಾಡುಗಳನ್ನು ಜಾಲಾಡಿದರೆ ರಂಗುರಂಗಿನ ಅಧ್ಯಾಯಗಳೇ ತೆರೆದುಕೊಳ್ಳುತ್ತವೆ. ಕುಡಿತವನ್ನು ವಸ್ತುವಾಗಿ ಉಳ್ಳ ಅನೇಕ ಹಾಡುಗಳು ಗೆದ್ದಿವೆ.

ಬಗೆಬಗೆ ಭಾವ
ನಶೆ ತುಂಬಿದ ಹಾಡುಗಳು ಇತರ ಪ್ರಕಾರದ ಗೀತೆಗಳಿಗಿಂತಲೂ ಬೇಗನೆ ಪ್ರಸಿದ್ಧಿ ಪಡೆಯುತ್ತವೆ. ಅವು ಪಡ್ಡೆ ಹುಡುಗರು ಸೇರಿದಂತೆ ವಿವಿಧ ವಯೋಮಾನದ ಜನರ ನಡುವೆಯೂ ಚರ್ಚೆ, ರೋಮಾಂಚನ ಎಬ್ಬಿಸುತ್ತವೆ. ಅಂಥ ಹಾಡುಗಳ ಸಾಹಿತ್ಯದಲ್ಲಿನ ತುಂಟತನ, ಸಮಾಜದ ಸಾತ್ವಿಕ ಗೆರೆಗಳನ್ನು ಮೀರುವ ಹುಂಬತನ, ಅಡಗಿರುವ ವೇದಾಂತ, ವೈರಾಗ್ಯ, ಕೈತಪ್ಪಿದ ಪ್ರೀತಿ, ಕಡು ವಿರಹ... ಇಂಥ ಅನೇಕ ಭಾವಗಳು ಏಕತ್ರಗೊಂಡ ಹಾಡುಗಳು ಅವು. ಅದೇ ಈ ಕುಡುಕರ ಗೀತೆಗಳ ಯಶಸ್ಸಿಗೆ ಕಾರಣವಾಗಿದ್ದರೂ ಇರಬಹುದು.

ಸ್ಯಾಂಡಲ್‌ವುಡ್‌ನಲ್ಲಿ ಆರಂಭದಿಂದಲೂ ಬೇರೆ ಬೇರೆ ರೀತಿಯಲ್ಲಿ ಇಂಥಾ `ಎಣ್ಣೆ ಸಾಂಗು'ಗಳು ಚಾಲ್ತಿಗೆ ಬರುತ್ತಿದ್ದವು. ಆದರೆ ಅದಕ್ಕೊಂದು ವ್ಯಾಪಕ ಜನಪ್ರಿಯತೆ ಮತ್ತು ವಿಭಿನ್ನ ಆಯಾಮ ಕೊಟ್ಟವರು ಸಂಗೀತ ಸಂಯೋಜಕರೂ ಆದ ಚಿತ್ರಸಾಹಿತಿ ಹಂಸಲೇಖ. `ನಂಜುಂಡಿ ಕಲ್ಯಾಣ' ಚಿತ್ರಕ್ಕೆ ಭಂಗೀ ರಂಗ ಬರೆದ ಚಿತ್ರಕ್ಕೆ, ಉಪೇಂದ್ರ ಅವರು ಸಂಗೀತ ಸಂಯೋಜನೆಯನ್ನೂ ಮಾಡಿದ್ದರು. ಪೂರ್ತಿ `ಫ್ರೆಶ್' ಅನ್ನಿಸುವಂತೆ ಮೂಡಿಬಂದ ಆ ಹಾಡಿನಲ್ಲಿ ನಾಯಕಿಯ ಕೈಗೆ ಬಾಟ್ಲಿ ಕೊಡಲಾಗಿತ್ತು. ಆ ಗುಂಡಿನ ಹಾಡಿಗೆ ಮಾಲಾಶ್ರಿ ಗಮನ ಸೆಳೆಯುವ ಲಯದಲ್ಲಿ ಓಲಾಡಿದ್ದರು. ಆ ಕಾಲದ `ಒಳಗೆ ಸೇರಿದರೆ ಗುಂಡು, ಹುಡುಗಿಯಾಗುವಳು ಗಂಡು...' ಹಾಡಿಗೆ ಪಡ್ಡೆಗಳು ಹುಚ್ಚೆದ್ದು ತಲೆದೂಗಿದ್ದರು. ಮಡಿವಂತಿಕೆ ಅಧಿಕವಾಗಿದ್ದ ಆ ಕಾಲದಲ್ಲಿ ಸಭ್ಯತೆಯ ಪರಿಧಿ ಮೀರದೆ, ಹೆಣ್ಮಗಳ ಕೈಗೆ ಸಾರಾಯಿ ಬಾಟ್ಲಿ ಕೊಟ್ಟು ಕುಣಿಸಿದ್ದು ಸಂಚಲನವನ್ನೇ ಮೂಡಿಸಿತ್ತು. `ಯುದ್ಧಕಾಂಡ' ಚಿತ್ರಕ್ಕೆ ಹಂಸಲೇಖ ಅವರೇ ಸಂಗೀತ ಸಂಯೋಜಿಸಿದ್ದ `ಕುಡಿಯೋದೆ ನನ್ ವೀಕ್ನೆಸ್ಸು, ಆದರೆ ನ್ಯಾಯಕೆ ದುಡಿಯೋದೇ ನನ್ ಬ್ಯುಸಿನೆಸ್ಸು' ಹಾಡಂತೂ ಆ ಕಾಲದ ಯುವಕರ ಮನಸೆಳೆದಿತ್ತು.

ಸಾರಾಯಿ ಸೀಸೆಯ ದೇವಿ
ಭಗ್ನಪ್ರೇಮದ ಯಾತನೆಯನ್ನ ನಶೆಯ ಪರಿಧಿಗೆ ತಂದು ತೇಲಾಡಿಸುವ ಪ್ರಯತ್ನವೂ ಮೆಲ್ಲಗೆ ಚಾಲ್ತಿಗೆ ಬಂದಿತು. ಅದಕ್ಕೆ ಚಾಲನೆ ನೀಡಿದವರು ಎಸ್. ನಾರಾಯಣ್. `ಮಾಂಗಲ್ಯ ಸಾಕ್ಷಿ' ಚಿತ್ರಕ್ಕಾಗಿ ನಾರಾಯಣ್ `ಸಾರಾಯಿ ಸೀಸೆಯಲಿ ನನ್ನ ದೇವಿ ಕಾಣುವಳು... ` ಎಂಬ ಹಾಡು ಬರೆದರು. ಎಸ್.ಪಿ. ಬಾಲಸುಬ್ರಮಣ್ಯಂ ಅದನ್ನು ಭಗ್ನಪ್ರೇಮಿಯೊಬ್ಬನ ತಾಕಲಾಟಗಳನ್ನು ಆವಾಹಿಸಿಕೊಂಡಂತೆ ಹಾಡಿದ್ದರು. `ಕುಡುಕರ ಹಾಡಿನ ಮೆನು'ವಿನಲ್ಲಿ ಸ್ಥಾನ ಪಡೆದಿರುವ ಈ ಹಾಡು ಎಲ್ಲಾ ಭಾವುಕರನ್ನೂ ಕಾಡಿತ್ತು. ಲೆಕ್ಕವಿರದಷ್ಟು ಮಂದಿ ಆ ಹಾಡಿನ ಭಾವದೊಂದಿಗೆ ತಮ್ಮನ್ನು ಕಲ್ಪಿಸಿಕೊಂಡು ತೇಲಾಡಿದ್ದರು. ಈ ಹಾಡೂ ಈವತ್ತಿಗೂ ಜನಪ್ರಿಯತೆ ಕಳೆದುಕೊಂಡಿಲ್ಲ. ಅದೇ ಹಾಡನ್ನು ಯೋಗೀಶ್ ಅಭಿನಯದ `ದೇವದಾಸ್' ಚಿತ್ರದಲ್ಲಿ ಮತ್ತೆ ಬಳಸಿಕೊಳ್ಳಲಾಗಿತ್ತು. ಆ ಹಾಡನ್ನು `ನಶೆಯ ವಿರಹಗೀತೆ' ಎಂದು ಗುರುತಿಸಬಹುದೇನೋ!

ಇನ್ನುಳಿದಂತೆ ಹೊಸ ತಲೆಮಾರಿನವರೂ ಅದೇ ಹಾದಿಯಲ್ಲಿ ಭಿನ್ನ ಪ್ರಯೋಗಗಳನ್ನು ಮಾಡುತ್ತಾ ಸಾಗಿದ್ದಾರೆ. ಉಪೇಂದ್ರ ಕೂಡ ತಮ್ಮ 'ಎ' ಹೆಸರಿನ ಚಿತ್ರದಲ್ಲಿ `ಹೇಳ್ಕೊಳಕ್ಕೊಂದೂರು, ತಲೆಮ್ಯೋಲೆ ಒಂದ್ಸೂರು, ಮಲಗಾಕೆ ಭೂಮ್ತೋಯಿ ಮಂಚ...' ಹಾಡು ಬಳಸಿ ಹುಚ್ಚೆಬ್ಬಿಸಿದ್ದರು. `ರಂಗ ಎಸ್‌ಎಸ್ ಎಲ್‌ಸಿ' ಚಿತ್ರಕ್ಕೆ ವಿ. ನಾಗೇಂದ್ರಪ್ರಸಾದ್ ರಚಿಸಿದ್ದ `ಭೂಮಿ ಯಾಕೆ ತಿರುಗುತೈತೆ, ಎಣ್ಣೆ ಹೊಡೆದೈತೆ...'  ಎಂಬ ಹಾಡೂ ಫೇಮಸ್ಸಾಗಿತ್ತು. ಸುದೀಪ್ ಅಭಿನಯದ `ಚಂದು' ಚಿತ್ರದ `...ಸೊಂಟಕ್ಕಿಂತ ವಾಸಿ ಕಣೋ ಗುಂಡಿನ ದಾಸ್ಯ...' ಗೀತೆ ಈಗಲೂ ಪಡ್ಡೆ ಹುಡುಗರ ಬಾಯಲ್ಲಿ ನಲಿದಾಡುತ್ತಿದೆ. `ಗೋಕರ್ಣ' ಸಿನಿಮಾದ, ಗುರುಕಿರಣ್ ಸಂಗೀತ ಸಂಯೋಜಿಸಿದ್ದ `ಬ್ರಹ್ಮ ನಿಂಗೆ ಜೋಡಿಸ್ತೀನಿ ಹೆಂಡ ಮುಟ್ಟಿದ್ ಕೈನ', `ಎದ್ದೇಳು ಮಂಜುನಾಥ' ಚಿತ್ರದ   `ಪ್ರಪಂಚವೇ ದೇವರು ಮಾಡಿರೋ ಬಾರು', ಕಥೆಯೇ ಹೆಂಡದಲ್ಲಿ ತೋಯ್ದಂತಿರುವ `ಇಂತಿ ನಿನ್ನ ಪ್ರೀತಿಯ' ಸಿನಿಮಾದ ಹಾಡುಗಳು- ಹೀಗೆ ಬಣ್ಣದ ಲೋಕವನ್ನು ಹೆಂಡದ ಹಾಡುಗಳು ಪರಿ ಪರಿಯಾಗಿ ಆವರಿಸಿಕೊಂಡಿವೆ.

ಆರ್ಕೇಸ್ಟ್ರಾಗಳಿಗೂ ಮೆಚ್ಚು
ಬಿ.ಸಿ ಪಾಟೀಲ್ ಅಭಿನಯದ `ಕೌರವ' ಚಿತ್ರದ `ಹುಡುಗೀರಂದ್ರೆ ಡೇಂಜರಪ್ಪೊ ಹುಷಾರಾಗಿರ‌್ರಪ್ಪೊ' ಹಾಡು ಕೂಡ ಇಂದಿಗೂ ಹಳೇ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಇಂಥ ಹಾಡುಗಳು ಆರ್ಕೇಸ್ಟ್ರಾ ತಂಡಗಳಿಗೂ ಬಂಪರ್ ಇದ್ದಂತೆ. ಅಲ್ಲಿ ಹೆಂಡದ ಹಾಡುಗಳಿಗೆ ಬೇಡಿಕೆ ಇದ್ದೇ ಇದೆ. ದಶಕಗಳ ಹಿಂದೆ ಎಲ್ಲಿಯೇ ಆರ್ಕೆಸ್ಟ್ರಾಗಳು ನಡೆದರೂ ಇಂಥಾ ನಶೆಯ ಹಾಡುಗಳಿಗೆ `ಒನ್ಸ್‌ಮೋರ್' ಎಂಬ ಬೇಡಿಕೆ ಬರುತ್ತಿತ್ತು. ಈ ಹಾಡಿಗಾಗಿಯೇ ಕುಡುಕರು, ಕುಡಿಯದವರೂ ದಾಂಧಲೆ ಎಬ್ಬಿಸಿದ್ದ ಉದಾಹರಣೆಗಳಿವೆ.

ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳ ಚಿತ್ರಗೀತೆಗಳೂ ಹೆಂಡದ ನಶೆಯೇರಿಸಿಕೊಂಡಿವೆ. ಹಿಂದಿ, ತಮಿಳು, ತೆಲುಗು ಸೇರಿದಂತೆ ಬಹುತೇಕ ಭಾಷೆಗಳಲ್ಲಿ ಹೆಂಡದ ಹಾಡಿನ ಜನಪ್ರಿಯತೆ ಹೆಚ್ಚಾಗಿದೆ. ತಮಿಳು ಮತ್ತು ಹಿಂದಿಯಲ್ಲಿ ಹೆಂಡ-ಹೆಣ್ಣು ಮತ್ತದರ ಅಮಲನ್ನು ಕುರಿತಾಗಿ ಅಸಂಖ್ಯ ಚಿತ್ರಗೀತೆಗಳು ಜನ್ಮತಾಳಿವೆ. ತಮಿಳಿನಲ್ಲಿ ತೆರೆಕಂಡಿದ್ದ `3' ಚಿತ್ರದ `ಕೊಲೆವೆರಿ ಡಿ' ಹಾಡು ದೇಶದಾದ್ಯಂತ ಸಂಚಲನ ಎಬ್ಬಿಸಿತ್ತು. ಧನುಶ್ ಸ್ವತಃ ಅದನ್ನು ಹಾಡಿದ್ದರು.

ಈಗ ಯೋಗರಾಜ ಭಟ್ ಖಾಲಿ ಕ್ವಾಟ್ರು ಬಾಟ್ಲಿಗಳನ್ನು ಉರುಳಿಸಿದ್ದಾರೆ. ಇನ್ನು ಮುಂದೆ ಬರುವ ಚಿತ್ರಗಳಲ್ಲಿ ಇದೇ ಮಾದರಿಯ ಒಂದು ಹೆಂಡದ ಸಾಂಗು ಕಡ್ಡಾಯ ಎಂಬಂತಾದರೂ ಅಚ್ಚರಿಯಿಲ್ಲ. ಕಥೆಗೆ ಪೂರಕವಾಗಿ ಸಭ್ಯತೆಯ ಎಲ್ಲೆ ಮೀರದೆ ಕ್ರೀಯಾಶೀಲ ಪ್ರಯತ್ನಗಳು ನಡೆದರೆ ಕನ್ನಡ ಚಿತ್ರರಂಗದ ಹೆಂಡದ ಹಾಡುಗಳ ಯಾದಿಗೆ ಮತ್ತಷ್ಟು ಗೀತೆಗಳು ಸೇರಿಕೊಂಡಾವು.

ಇದು `ರಾ ವಾಯ್ಸ' ಕಾಲ

ಪ್ರತಿ ಹಾಡು ಸಿನಿಮಾದ ಸಂದರ್ಭಕ್ಕೆ ತಕ್ಕಹಾಗೆ ಸೃಷ್ಟಿಯಾಗಿರುತ್ತದೆ. `ನಂಜುಂಡಿ ಕಲ್ಯಾಣ' ಚಿತ್ರಕ್ಕೆ ಹಾಡಿದ ಹಾಡು ಕೂಡ ಚಿತ್ರದ ಸಂದರ್ಭಕ್ಕೆ ರಚನೆಯಾದ ಹಾಡಾಗಿತ್ತು. ಆದರೆ ಅದರಲ್ಲಿ ಅಶ್ಲೀಲ ರೀತಿಯ ಸಾಹಿತ್ಯ ಇರಲಿಲ್ಲ. ಕೇಳುಗರಿಗೆ ಮುಜುಗರ ಉಂಟು ಮಾಡುವ ಸನ್ನಿವೇಶವೂ ಇರಲಿಲ್ಲ. ಆದರೆ ಇಂದಿನ ಕುಡಿತದ ಹಾಡುಗಳ ಸಾಹಿತ್ಯ ಅರ್ಥವೇ ಆಗುವುದಿಲ್ಲ. ಆ ಹಾಡುಗಳನ್ನು ಹಾಡುವುದರಲ್ಲಿಯೂ ಯಾವುದೇ ನಿಯಮ, ನಿಬಂಧನೆಗಳಿಲ್ಲ. ಶೃತಿಯೇ ಇಲ್ಲದೆಯೂ ಹಾಡುಗಳನ್ನು ಹಾಡುತ್ತಿರುವುದನ್ನು ಇಂದು ನೋಡಬಹುದು. ಕೇವಲ ರಾಗವಷ್ಟೇ ಇಲ್ಲಿ ಮುಖ್ಯವಾಗುತ್ತಿದೆ. `ರಾ ವಾಯ್ಸ' ಎಂಬುದೊಂದೇ ಇಲ್ಲಿ ಬೇಕಾಗಿರುವುದು ಎಂಬಂತೆಯೂ ಕಾಣುತ್ತಿದೆ. 
-ಮಂಜುಳಾ ಗುರುರಾಜ್, ಹಿನ್ನೆಲೆ ಗಾಯಕಿ

ಫಿಲಾಸಫಿ ಹೇಳಬೇಕು

ಯಾವುದೇ ಗೀತ ಸಾಹಿತ್ಯ ರಚನೆಯಾಗೋವಾಗ ಆ ಸಂದರ್ಭ, ಅದರ ಪಾತ್ರದ ಪರಕಾಯ ಪ್ರವೇಶ ಮಾಡಿಯೇ ಹಾಡುಗಳನ್ನು ಬರೆಯಬೇಕಾಗುತ್ತದೆ. ಹೆಂಡದ ಹಾಡುಗಳನ್ನು ಬರೆಯುವಾಗಲೂ ಕುಡುಕರ ಕಾಯವನ್ನು ಪ್ರವೇಶಿಸಿ ಆ ಅಮಲನ್ನು ಮೈಗೇರಿಸಿಕೊಂಡಂತೆಯೇ ಭಾವಿಸಿ ಬರೆಯಬೇಕಾಗುತ್ತದೆ. ನನಗೆ ಅನ್ನಿಸೋದೇನಂದ್ರೆ ಕುಡಿತದ ಹಾಡಿದ್ರೂ ಅದರಲ್ಲಿ ದುಃಖ ಇರಬಾರದು. ಹೆಂಡದ ಹಾಡುಗಳು ಜಾಲಿಯಾಗಿದ್ರೆ ಅಥವಾ ಫಿಲಾಸಫಿಯನ್ನು ಹೇಳುವಂತಿದ್ರೆ ಸುಂದರವಾಗಿರುತ್ತವೆ.
-ಕೆ. ಕಲ್ಯಾಣ್, ಗೀತ ರಚನೆಕಾರ ಹಾಗೂ ಸಂಗೀತ ನಿರ್ದೇಶಕ

ಬಾರ್ ಬಾರ್ ಗೀತರಚನಕಾರ

ಗೀತ ರಚನಾಕಾರರು ಹಾಡುಗಳ ರಚನೆ ಮಾಡುತ್ತಾರೆ, ನಿಜ. ಆದರೆ ಪ್ರತಿ ಬಾರ್‌ನಲ್ಲೂ ಒಬ್ಬೊಬ್ಬ ಗೀತರಚನಾಕಾರ ಇರುತ್ತಾನೆ. ನಾವು ಬರೆದ ಹಾಡಿನ ಸಾಹಿತ್ಯವನ್ನೇ ಬದಲಿಸಿ ಇನ್ನಷ್ಟು ನೋವಿನಿಂದಲೋ ಅಥವಾ ಪೋಲಿಯಾಗಿಯೋ ಹಾಡುವ ಬಹಳಷ್ಟು ಕುಡುಕರು ಇದ್ದಾರೆ. ಹೆಂಡದ ಹಾಡುಗಳನ್ನು ಬರೆಯುವಾಗ ಮೊದಲು ನಾವು ನಿರ್ದೇಶಕರನ್ನು ಕೇಳೋದು, ಹಾಡಿನಲ್ಲಿ ನಟಿಸುವವರ ಕುಡಿತದ ಪರ್ಸಂಟೇಜ್ ಎಷ್ಟಿರುತ್ತದೆ ಎಂದು. ಅದನ್ನರಿತಾಗ ಹಾಡಿನಲ್ಲಿ ಎಷ್ಟು ಅಮಲನ್ನ ಸೇರಿಸಬೇಕು ಅನ್ನೋದು ಸ್ಪಷ್ಟವಾಗುತ್ತದೆ. ಕೆಲವು ಹಾಡುಗಳು ನೋವಿನ ಭಾವನೆಯನ್ನು ಹೊಂದಿದ್ದರೆ, ಮತ್ತೆ ಕೆಲವು ಮನೋಲ್ಲಾಸಕ್ಕೆ ಹಾಡುವ ಕೆಟಗರಿಯವು. ಇನ್ನು ಕೆಲವು ದೀರ್ಘವಾದ ಫಿಲಾಸಫಿಯನ್ನೇ ಹೇಳುವಂತಿರುತ್ತವೆ. ಒಟ್ಟಾರೆ ಚಿತ್ರದ ಸಂದರ್ಭಕ್ಕೆ ತಕ್ಕಹಾಗೆ ಗೀತರಚನೆ ಮಾಡಬೇಕಾಗುತ್ತದೆ.
-ಡಾ.ನಾಗೇಂದ್ರ ಪ್ರಸಾದ್, ಗೀತ ರಚನೆಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT