ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂದೆಯಂತೆ ಮಗ

ಕ್ಯಾಂಪಸ್‌ ಕಲರವ
Last Updated 15 ಫೆಬ್ರುವರಿ 2016, 19:55 IST
ಅಕ್ಷರ ಗಾತ್ರ

1974–75ರಲ್ಲಿ ಧಾರವಾಡದ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದಲ್ಲಿ ಓದುತ್ತಿದ್ದಾಗ ನಾನು ಧರಿಸಿದ ದಿರಸಿನ ಬಗ್ಗೆ ನನ್ನ ಗುರುಗಳು ಆಂಗ್ಲಭಾಷೆಯ  ‘Chip of the old Block’ ನಾಣ್ಣುಡಿ  ಬಳಸಿದರು. ಅದನ್ನು ಬಳಸಿ ಅವರು ನುಡಿದ ಮಾತನ್ನು ತಪ್ಪಾಗಿ ಗ್ರಹಿಸಿದೆ. ಶಿಕ್ಷಕರೊಂದಿಗೆ ಜಗಳವಾಡಲು ಹೊರಟ ನನಗೆ ನನ್ನ ಮಿತ್ರ ನಾಣ್ಣುಡಿಯ ಅರ್ಥವನ್ನು ಸಮಯೋಚಿತವಾಗಿ ತಿಳಿಸಿ, ಆಗಬಹುದಾಗಿದ್ದ ಅವಾಂತರ ತಪ್ಪಿಸಿದ್ದು ಇನ್ನೂ ಮನದಾಳದಲ್ಲಿ ಹಸಿರಾಗಿದೆ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದಲ್ಲಿ ನನ್ನ ತಂದೆ ದಿ. ಪ್ರೊ. ಪಿ.ಕೆ. ಹುಡೇದಗಡ್ಡಿ ಪ್ರಾಧ್ಯಾಪಕರಾಗಿದ್ದರು. 1970ರ ದಶಕದಲ್ಲಿ ವಿಶ್ವವಿದ್ಯಾಲಯದ ಶಿಕ್ಷಕರು ಸೂಟ್‌ ಧರಿಸುವ ಸಂಪ್ರದಾಯ ಚಾಲ್ತಿಯಲ್ಲಿತ್ತು. ನನ್ನ ತಂದೆಯವರು ‘ಸೂಟು’ ಸಂಪ್ರದಾಯಕ್ಕೆ ಬದಲಾಗಿ ಖಾದಿ ಪ್ಯಾಂಟು, ಶರ್ಟ್‌ ಧರಿಸುತ್ತಿದ್ದರು. ಜನವರಿ 26, ಆಗಸ್ಟ್ 15, ಅಕ್ಟೋಬರ್‌ 2ರಂದು ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಿಗೆ ನನ್ನ ತಂದೆ ಖಾದಿ ಧೋತರ, ನೆಹರೂ ಶರ್ಟ್‌ ಮತ್ತು ಟೋಪಿ ಧರಿಸಿಕೊಂಡು ಹೋಗುತ್ತಿದ್ದರು.

1974–75ರಲ್ಲಿ ನಾನು ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದಲ್ಲಿ ಬಿ.ಎಸ್‌ಸಿ. ಅಂತಿಮ ವರ್ಷದಲ್ಲಿ ಓದುತ್ತಿದ್ದೆ. ಕಾಲೇಜಿನ ವಿದ್ಯಾರ್ಥಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ವಿದ್ಯಾರ್ಥಿ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದೆ. ನನ್ನ ತಂದೆಯಿಂದ ಪ್ರಭಾವಿತನಾದ ನಾನು 1975ರ ಜನವರಿ 26ರಂದು ನಡೆದ ಗಣರಾಜ್ಯೋತ್ಸವ ಸಮಾರಂಭಕ್ಕೆ ಖಾದಿ ಧೋತರ, ಶರ್ಟ್‌, ಟೋಪಿ ಧರಿಸಿಕೊಂಡು ಹೋಗಿದ್ದೆ. ಆಗ ನನ್ನನ್ನು ಗಮನಿಸಿದ ನನ್ನ ತಂದೆಯ ಮಿತ್ರರಾಗಿದ್ದ ನಮ್ಮ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ನನ್ನ ಗುರು ಪ್ರೊ. ಆರ್‌.ಬಿ. ಕಂಠಿಯವರು ನನ್ನನ್ನು ನೋಡಿ ಹಸನ್ಮುಖಿಯಾಗಿ ನಗುತ್ತ ಆಂಗ್ಲ ಭಾಷೆಯಲ್ಲಿ ‘Chip of the old Block’ ಎಂದು ನುಡಿದರು.

ಆಂಗ್ಲ ಭಾಷೆಯಲ್ಲಿ ಅವರು ಹೇಳಿದ ನಾಣ್ಣುಡಿಯ ಅರ್ಥ ಗೊತ್ತಿಲ್ಲದ ನನಗೆ ಅವರು ಆಡಿದ ಮಾತುಗಳು ಅರ್ಥವಾಗದೆ Chip ಅಂದರೆ ‘ತುಣುಕು’ ಎಂಬ ಹಾಗೂ old Block ಅಂದರೆ ಹಳೆ ಬೊಡ್ಡೆಯೆಂದು ಅಪಾರ್ಥ ಮಾಡಿಕೊಂಡು ಅವರು ಹೇಳಿದ ಮಾತಿನ ಅರ್ಥ ‘ಹಳೆ ತುಣುಕು’ ಎಂದು ಭಾವಿಸಿದೆ. ಅವರು ನನಗೆ ಮಿತ್ರರ ಮುಂದೆ ಅಪಹಾಸ್ಯ ಮಾಡಿದ್ದಾರೆ ಎಂಬ ಭಾವನೆ ಬಂತು. ಅದರಿಂದ ನನಗೆ ಅಪಮಾನವಾದಂತಾಗಿ ನನ್ನ ಮುಖ ಕಳಾಹೀನವಾಯಿತು. ನನ್ನ ಗುರುಗಳನ್ನು ಆ ಕುರಿತು ಕೇಳಿ ಜಗಳವಾಡಲು ಹೊರಟೆ.

ನನ್ನಲ್ಲಿ ಆದ ಬದಲಾವಣೆ ಗಮನಿಸಿದ ಮಿತ್ರರಲ್ಲಿ ಒಬ್ಬ ಆ ಕುರಿತು ನನ್ನನ್ನು ಕೇಳಿದಾಗ, ‘ನನಗೆ ಗುರುಗಳು ಹಳೆ ತುಣುಕು’ ಎಂದು ನಿಮ್ಮೆದುರಿಗೆ ಅಪಹಾಸ್ಯ ಮಾಡಿ ಅವಮಾನಿಸಿದ್ದಾರೆ ಎಂದು ರೋಷದಿಂದ ಹೇಳಿದೆ. ನನ್ನ ರೋಷದ ಮಾತು ಕೇಳಿ ಅವನು ನಗತೊಡಗಿದ. ಅವನು ನಕ್ಕ ವಿಷಯವನ್ನು ಕೇಳಿದಾಗ ಅವನು ಕಂಠಿ ಗುರುಗಳು ಹೇಳಿದ, “Chip of the old Block” ಆಂಗ್ಲ ನಾಣ್ಣುಡಿಯ ಅರ್ಥ ‘ತಂದೆಯಂತೆ ಮಗ’ ಎಂಬುದಾಗಿ ತಿಳಿಸಿದ.

ಅಂದರೆ ನಿನ್ನ ತಂದೆಯವರು ಧರಿಸುವಂತಹ ಬಟ್ಟೆಗಳನ್ನು ಇಂದು ನೀನು ಧರಿಸಿದ್ದಕ್ಕೆ ಅವರು ಅಭಿಮಾನದಿಂದ ನುಡಿದ ಹೆಮ್ಮೆಯ ಮಾತುಗಳು ಎಂದು ಹೇಳಿದಾಗ ನನ್ನ ಮನದಲ್ಲಿದ್ದ ರೋಷ ಮಾಯವಾಗಿ, ಕಂಠಿ ಗುರುಗಳ ಬಗ್ಗೆ ಅಭಿಮಾನ ಹುಟ್ಟಿತು. ಘಟನೆ ನಡೆದು 40 ವರ್ಷಗಳೇ ಕಳೆದರೂ ಅಂದಿನಿಂದ ಆಂಗ್ಲ ಮತ್ತು ಇತರೆ ಭಾಷೆಗಳ ನಾಣ್ಣುಡಿಗಳ ಅರ್ಥವನ್ನು ಸರಿಯಾಗಿ ತಿಳಿಯುವ ಮೂಲಕ ನನ್ನ ಮನದಲ್ಲಿ ಅದು ಇನ್ನೂ ಹಸಿರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT