ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಭಾರತ ಆಹಾರಪ್ರಿಯ ವಿಕ್ಕಿ

ಬೆಂಗಳೂರಿನ ಅತಿಥಿ
Last Updated 26 ಜೂನ್ 2014, 19:30 IST
ಅಕ್ಷರ ಗಾತ್ರ

‘ಬಾಯಲ್ಲಿ ನೀರೂರಿಸುವ ರುಚಿಕರ ಖಾದ್ಯಗಳನ್ನು ಸಿದ್ಧಪಡಿಸಲು ಯಾವ ಕಾಲೇಜಿನಲ್ಲೂ ತರಬೇತಿ ಪಡೆಯುವ ಅಗತ್ಯ ಇಲ್ಲ. ಸ್ವಾದಿಷ್ಟವಾದ ಅಡುಗೆ ಮಾಡುವುದು ಒಂದು ಕಲೆ. ಅದಕ್ಕೆ ಖುಷಿಯಾದ ಮನಸ್ಸು, ಪ್ರೀತಿಯಿಂದ ಇಷ್ಟಪಟ್ಟು ಅಡುಗೆ ಮಾಡುವ ಗುಣ ಇದ್ದರೆ ಸಾಕು’– ಇದು ಸೆಲೆಬ್ರಿಟಿ ಶೆಫ್‌ ವಿಕ್ಕಿ ರತ್ನಾನಿ ಅವರ ಅನುಭವದ ಮಾತು.

ಕನಸಿನ ನಗರಿ ಮುಂಬೈನಲ್ಲಿ ಹುಟ್ಟಿ ಬೆಳೆದ ವಿಕ್ಕಿ ಅವರಿಗೆ ರುಚಿ ರುಚಿಯಾದ ಖಾದ್ಯಗಳನ್ನು ಸವಿಯುವುದೆಂದರೆ ಬಲು ಪ್ರೀತಿ. ಇದು ಸಣ್ಣ ವಯಸ್ಸಿನಿಂದಲೇ ಬೆಳೆಸಿಕೊಂಡ ಹವ್ಯಾಸ. ಎಲ್ಲೆಲ್ಲಿ ರುಚಿಕರ ತಿಂಡಿಗಳು ಸಿಗುತ್ತವೆಯೋ ಅಲ್ಲಿಗೆ ಹೋಗಿ ಅವುಗಳನ್ನು ಸವಿಯುವುದು ಇವರ ಮೊದಲ ಕೆಲಸ.

ಅಷ್ಟೇ ಅಲ್ಲದೆ ಶಾಲೆಯಿಂದ ಬಂದ ಕೂಡಲೇ ಮನೆಯಲ್ಲಿ ತಾವೇ ಪಾಕ ಪ್ರಯೋಗಕ್ಕೆ ನಿಂತು ಬಿಡುತ್ತಿದ್ದರು. ಹೀಗಾಗಿಯೇ ಯಾವುದೇ ಕಾಲೇಜಿನಲ್ಲಿ ಅಡುಗೆ ಮಾಡಲು ತರಬೇತಿ ಪಡೆಯದ ಇವರು ಈಗ ಸೆಲೆಬ್ರಿಟಿ ಶೆಫ್‌ ಆಗಿ ಸಾವಿರಾರು ಯುವ ಬಾಣಸಿಗರಿಗೆ ತರಬೇತಿ ನೀಡುತ್ತಿದ್ದಾರೆ.  ಸದಾ ಒಂದಲ್ಲಾ ಒಂದು ಕೆಲಸದಲ್ಲಿ ತೊಡಗಿರುವ ವಿಕ್ಕಿ ವಿದೇಶಿ ಖಾದ್ಯಗಳ ಕುರಿತು ಬೆಂಗಳೂರಿನ ಯುವ ಬಾಣಸಿಗರಿಗೆ ತರಬೇತಿ ನೀಡಲು ಬಂದಾಗ ‘ಮೆಟ್ರೊ’ ತಂಡದೊಂದಿಗೆ ತಮ್ಮ ಅನುಭವದ ಮಾತುಗಳನ್ನು ಹಂಚಿಕೊಂಡರು.

*ಬಾಣಸಿರಾಗಲು ಯಾರು ಕಾರಣ?
ನನ್ನ ಶಾಲೆ ಹಾಗೂ ಕಾಲೇಜಿನ ಪ್ರಾಧ್ಯಾಪಕರು ನನಗೆ ಬಾಣಸಿಗನಾಗುವಂತೆ ಸಲಹೆ ನೀಡಿ, ಪ್ರೋತ್ಸಾಹಿಸಿದರು. ರುಚಿಕರ ಖಾದ್ಯಗಳನ್ನು ಸವಿಯುವುದು ಹಾಗೂ ಮನೆಯಲ್ಲೇ ಹೊಸ ರುಚಿಗಳನ್ನು ತಯಾರಿಸುವುದು ನನ್ನ ಹವ್ಯಾಸ. ಹೀಗೆ ತಯಾರಿಸಿದ್ದನ್ನು ಶಾಲೆ ಹಾಗೂ ಕಾಲೇಜಿಗೆ ತೆಗೆದುಕೊಂಡು ಹೋಗುತ್ತಿದ್ದೆ. ಅಲ್ಲಿ ಎಲ್ಲ ಸ್ನೇಹಿತರಿಗೆ ಮತ್ತು ಶಿಕ್ಷಕರಿಗೆ ಕೊಟ್ಟು ಖುಷಿ ಪಡುತ್ತಿದ್ದೆ. ನಾನು ಮಾಡಿದ ಅಡುಗೆಯನ್ನು ಸವಿಯುತ್ತಿದ್ದ ನನ್ನ ಶಿಕ್ಷಕರು ನಿನಗೆ ಶೆಫ್‌ ಆಗುವ ಎಲ್ಲ ಅರ್ಹತೆಗಳಿವೆ ಎಂದು ನನಗೆ ಪ್ರೋತ್ಸಾಹ ನೀಡಿದರು. ಅದರ ಫಲವೇ ಇದು.

*ವಿಶ್ವದಲ್ಲಿ ಯಾವ ಭಾಗದ ಆಹಾರ ಪದ್ಥತಿ ನಿಮಗೆ ತುಂಬಾ ಇಷ್ಟ?
ಒಂದೊಂದು ದೇಶದಲ್ಲಿ ಅಲ್ಲಿನ ಜೀವಶೈಲಿಗೆ ತಕ್ಕಂತೆ ಆಹಾರ ಪದ್ಥತಿಗಳಿವೆ. ದಕ್ಷಿಣ ಭಾರತದ ಆಹಾರ ಶೈಲಿ ನಿಜಕ್ಕೂ ವಿಭಿನ್ನವಾಗಿದೆ. ಆಂಧ್ರ ಶೈಲಿ, ಕೇರಳ ಶೈಲಿ, ಕರ್ನಾಟಕದಲ್ಲಿ ಉತ್ತರ ಮತ್ತು ದಕ್ಷಿಣ ಭಾಗದ ಶೈಲಿ, ಕರಾವಳಿ ಶೈಲಿ ಹಾಗೂ ತಮಿಳುನಾಡಿನಲ್ಲಿ ತನ್ನದೇ ಆಹಾರ ಆಹಾರ ಪದ್ಧತಿಗಳಿವೆ. ಇಷ್ಟು ಬಗೆಯ ಶೈಲಿಗಳನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಹಾಗಾಗಿ ದಕ್ಷಿಣ ಭಾರತದ ಆಹಾರ ಪದ್ಧತಿ ತುಂಬಾ ಇಷ್ಟ.

*ವಿದೇಶಗಳಲ್ಲಿ ಭಾರತೀಯ ಶೈಲಿ ಆಹಾರಕ್ಕೆ ಬೇಡಿಕೆ ಹೇಗಿದೆ?
ವಿದೇಶೀಯರು ತಮ್ಮ ಆಹಾರದಲ್ಲಿ ಹೆಚ್ಚಾಗಿ ಮಸಾಲೆ ಮತ್ತು ಖಾರ ಬಳಸುವುದಿಲ್ಲ. ಆದರೆ ಭಾರತೀಯ ಆಹಾರ ಪದ್ಧತಿಯಲ್ಲಿ ಖಾರ, ಮಸಾಲೆ ಜಾಸ್ತಿ ಇರುತ್ತದೆ. ಆದರೂ ವಿದೇಶಿಯರು ಈಗ ಭಾರತೀಯ ಆಹಾರ ಪದ್ಧತಿಯನ್ನು ಇಷ್ಟಪಡುತ್ತಿದ್ದಾರೆ. ಭಾರತದ ಸಾಂಬಾರು ಪದಾರ್ಥಗಳನ್ನು ಬಳಸಿ ಅಡುಗೆ ಮಾಡಲು ಪ್ರಾರಂಭಿಸಿದ್ದಾರೆ.

* ಬಾಣಸಿಗರಾಗಲು ಇರಬೇಕಾದ ಅರ್ಹತೆಗಳೇನು?
ಅಡುಗೆ ಮಾಡುವುದು ಒಂದು ಕಲೆ. ಇದನ್ನು ಕರಗತ ಮಾಡಿಕೊಳ್ಳಲು ಏಕಾಗ್ರತೆ, ಮಾಡುವ ಕೆಲಸದ ಬಗ್ಗೆ ಪ್ರೀತಿ, ಹಾಗೂ ಹಂಚುವ ಮನೋಭಾವ ಇರಬೇಕು. ಇಷ್ಟಿದ್ದರೆ ಯಾವ ಕಾಲೇಜಿನಲ್ಲಿಯೂ ತರಬೇತಿ ಪಡೆಯುವ ಅಗತ್ಯವೇ ಇಲ್ಲ.   
 
* ಬಾಣಸಿಗ ವೃತ್ತಿಯ ಟ್ರೆಂಡ್‌ ಹೇಗಿದೆ?
ಜನರ ಬದಲಾಗುತ್ತಿರುವ ಜೀವನಶೈಲಿ ಹಾಗೂ ಹವ್ಯಾಸಗಳಿಂದಾಗಿ ಹೋಟೆಲ್‌ ಮತ್ತು ರೆಸ್ಟೋರೆಂಟ್‌ ಉದ್ಯಮದ ನಡುವೆ ಸ್ಪರ್ಧೆ ಹೆಚ್ಚಾಗಿದೆ. ರುಚಿಕರ ಖಾದ್ಯ ಸಣ್ಣ ಸಣ್ಣ ರೆಸ್ಟೋರೆಂಟ್‌ಗಳಲ್ಲಿ ದೊರೆತರೂ ಜನ ಅಲ್ಲಿಗೆ ಹೆಚ್ಚಾಗಿ ಭೇಟಿ ನೀಡುತ್ತಾರೆ. ಹೀಗಾಗಿ ಕಾಲೇಜಿನಲ್ಲಿ ತರಬೇತಿ ಮುಗಿಸಿ ಬರುವ ಯುವ ಬಾಣಸಿಗರು ಹೋಟೆಲ್‌ಗಳಿಗಿಂತ ಸಣ್ಣ ಸಣ್ಣ ರೆಸ್ಟೋರೆಂಟ್‌ಗಳಲ್ಲಿ ಹೆಚ್ಚಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದಾರೆ.    
   
*ನಿಮಗೆ ಇಷ್ಟವಾದ ಅಡುಗೆ?
ಮನೆಯಲ್ಲಿ ಅಮ್ಮ ಮತ್ತು ಅತ್ತೆ ಮಾಡುವ ಎಲ್ಲ ರೀತಿಯ ಅಡುಗೆ ನನಗೆ ಇಷ್ಟ. ಮುಂಬೈನಲ್ಲಿ ಎರಡು ಹೋಟೆಲ್‌ಗಳು ಇವೆ. ಅಲ್ಲಿ ಎಲ್ಲ ರೀತಿಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಆದರೂ ನಿತ್ಯ ನಾನು ಮನೆಯಲ್ಲೇ ಊಟ ಮಾಡುತ್ತೇನೆ. 
    
* ಮಳೆಗಾಲದಲ್ಲಿ ಯಾವ ರೀತಿಯ ಆಹಾರ ಸೇವನೆ ಉತ್ತಮ?

ಸಸ್ಯಹಾರಿಗಳು ಮಳೆಗಾಲದಲ್ಲಿ ಹೆಚ್ಚಾಗಿ ಹಸಿ ತರಕಾರಿ, ತರಕಾರಿ ಸೂಪ್‌, ದಾಲ್‌ ಹಾಗೂ ಬ್ರೌನ್‌ ರೈಸ್‌ ಅನ್ನು ಸೇವಿಸುವುದು ಒಳ್ಳೆಯದು. ಮಾಂಸಾಹಾರಿಗಳು ಸಲಾಡ್‌, ಗ್ರಿಲ್ಡ್‌ ಚಿಕನ್‌ ವಿಥೌಟ್‌ ಸ್ಕಿನ್‌, ಹಾಗೂ ಮೀನನ್ನು ಸೇವಿಸಬಹುದು. ಯಾವುದೇ ಋತುವಿನಲ್ಲಾದರೂ ಮಾಡುವ ಕೆಲಸ, ಓಡಾಟ ಹಾಗೂ ಜೀವನ ಶೈಲಿಯ ಆಧಾರದ ಮೇಲೆ ಆಹಾರದ ಪ್ರಮಾಣವನ್ನು ನಿರ್ಧರಿಸಬಹುದು.  

* ಗೃಹಿಣಿಯರಿಗೆ ನಿಮ್ಮ ಕಿವಿಮಾತು?
ಅಡುಗೆಯನ್ನು ರುಚಿಕರವಾಗಿಯೂ ಸ್ವಾದಿಷ್ಟವಾಗಿಯೂ ಮಾಡಲು ಕ್ರೀಂ ಹಾಗೂ ಬೆಣ್ಣೆಯನ್ನು ಬಳಸುವ ಅಗತ್ಯ ಇಲ್ಲ. ಭಾರತೀಯ ಸಾಂಬಾರು ಪದಾರ್ಥಗಳಿಂದಲೇ ಅಡುಗೆ ಸಾಕಷ್ಟು ರುಚಿಕರ ಹಾಗೂ ಒಳ್ಳೆಯ ಪರಿಮಳದಿಂದ ಕೂಡಿರುತ್ತದೆ. ಮಕ್ಕಳು ಸೇವಿಸುವ ಆಹಾರಕ್ಕೆ ಕ್ರೀಂ ಹಾಗೂ ಬೆಣ್ಣೆಯನ್ನು ಕಡಿಮೆ ಬಳಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT