ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಚಿಕೇತ ಚೇತನ

Last Updated 12 ಡಿಸೆಂಬರ್ 2011, 19:30 IST
ಅಕ್ಷರ ಗಾತ್ರ

ಇರುಳಾದಾಗ ದೀಪ ಬೆಳಗಿಸಿ ಕತ್ತಲು ಕಳೆವಂತೆ ಮಾಡಬೇಕೇ ಹೊರತು, ಕತ್ತಲನ್ನು ದೂಷಿಸುವದು ಜಾಣತನವಲ್ಲ. ಈ ತತ್ವವನ್ನು ಆಧರಿಸಿ ಬುದ್ಧಿಮಾಂದ್ಯರ ಬಾಳಿಗೆ ಬೆಳಕು ನೀಡುತ್ತಿರುವ ಸಂಸ್ಥೆ `ನಚಿಕೇತ~.

ಬುದ್ಧಿಮಾಂದ್ಯತೆ ಸಾಮಾನ್ಯವಾಗಿ ಹುಟ್ಟಿನೊಂದಿಗೆ, ಕೆಲವೊಮ್ಮೆ ತೀವ್ರ ಜ್ವರ ಇತ್ಯಾದಿಗಳಿಂದ ಬರುವ ನ್ಯೂನತೆ. ಇಂತಹ ಮಗು ಸಹಜ ಮಕ್ಕಳಂತೆ ಅಲ್ಲ. ಇವುಗಳ ಚಟುವಟಿಕೆಗಳೇ ಭಿನ್ನ. ಜೀವನ ಪರ್ಯಂತ ಈ ಮಕ್ಕಳೊಡನೆ ಬದುಕಬೇಕಾದ ಅನಿವಾರ್ಯತೆಯಿಂದ ಹೆತ್ತವರು ಮಾನಸಿಕ ಯಾತನೆಗೆ ಒಳಗಾಗುತ್ತಾರೆ. ಭವಿಷ್ಯದ ಕತ್ತಲೆಯ ಬದುಕಿನ ಕಲ್ಪನೆಯೇ ಅವರನ್ನು ಹತಾಶರನ್ನಾಗಿ ಮಾಡುತ್ತದೆ. ಸಮಾಜದ ನಿಂದನೆ, ಕೀಳರಿಮೆ, ಕರುಣೆ- ಈ ಎಲ್ಲವನ್ನೂ ಎದುರಿಸಲು ಸಿದ್ದರಿರಬೇಕು.

ಇಂದಿನ ಧಾವಂತದ ಬದುಕಿನಲ್ಲಿ, ತಮ್ಮ ಕುಟುಂಬದವರೊಂದಿಗೆ ಬೆರೆಯುವದಕ್ಕೇ ಸಮಯದ ಅಭಾವವಿರುವಾಗ ವಿಶೇಷ ಕಾಳಜಿ ಬೇಕಾಗುವ ಇಂತಹ ಮಕ್ಕಳೊಂದಿಗೆ ಬೆರೆಯಲು ಎಷ್ಟು ಜನರಿಗೆ ವ್ಯವಧಾನವಿದ್ದೀತು?

ಇಂತಹ ಮಕ್ಕಳ ಯೋಗಕ್ಷೇಮದ ಜವಾಬ್ದಾರಿ ಹೊತ್ತು ಹೆತ್ತವರ ಹೊರೆಯನ್ನು ಹಗುರಗೊಳಿಸಿ ಭದ್ರತೆಯನ್ನು ನೀಡುತ್ತಿರುವ ನೆಲೆಯೇ ಸಂಸ್ಥೆ `ನಚಿಕೇತ ಮನೋ ವಿಕಾಸಕೇಂದ್ರ~. `ನಮ್ಮನ್ನು ನೋಡಿ ನಗಬೇಡಿ. ನಮ್ಮಂದಿಗೆ ನಗಾಡಿ~ ಎನ್ನುವ ಧ್ಯೇಯ ವಾಕ್ಯವನ್ನು ಹೊತ್ತ ಈ ಕೇಂದ್ರದಲ್ಲಿ ಅಸಹಾಯಕತೆಯ ಮಾತೇ ಇಲ್ಲ, ಸಾಂತ್ವನ ಕರುಣೆಗಳ ನಿರೀಕ್ಷೆ ಇಲ್ಲ. ಸಮಾಜದ ನಿರ್ಲಕ್ಷ್ಯಕ್ಕೆ ಒಳಗಾಗುವ ಅವರ ಕೀಳರಿಮೆ ಹೋಗಲಾಡಿಸಿ ಮುಖ್ಯವಾಹಿನಿಯಲ್ಲಿ ಒಂದಾಗಿಸುವ ಪ್ರಾಮಾಣಿಕ ಪ್ರಯತ್ನ ಮಾತ್ರ ಇದೆ.

ಯಾವುದಾದರೂ ಮನ ಕಲಕುವ ಘಟನೆ ನಮಗೆದುರಾದಾಗ ತಕ್ಷಣ ಸ್ಪಂದಿಸಿ ಮರೆತುಬಿಡುತ್ತೇವೆ. ಆದರೆ ಕೆಲವೊಬ್ಬರು ಮಾತ್ರ ಆ ವಿಷಯದ ಆಳಕ್ಕಿಳಿದು ತಮ್ಮೆಲ್ಲಾ ವೇಳೆಯನ್ನು ಅದಕ್ಕೆ ವಿನಿಯೋಗಿಸಿ ಮನಕಲಕುವಿಕೆಗೊಂದು ನಿರಂತರ ಸ್ಪಂದನವನ್ನು ಕಂಡುಕೊಳ್ಳುತ್ತಾರೆ. ಜೊತೆಗೆ ಸಮಾಜದ ಸಕಾರಾತ್ಮಕ ಸ್ಪಂದನವನ್ನೂ ಎಲ್ಲರಲ್ಲಿ ಬಡಿದೆಬ್ಬಿಸುತ್ತಾರೆ.

ಅಂತಹ ಅಪರೂಪದ ವ್ಯಕ್ತಿತ್ವಕ್ಕೊಂದು ಉದಾಹರಣೆ `ನಚಿಕೇತ ಮನೋವಿಕಾಸ ಕೇಂದ್ರ~ದ ರೂವಾರಿ ನರಸಿಂಹ ಶೆಣೈ ಅವರು. 25 ವರ್ಷಗಳ ಹಿಂದೆ ಬೆಂಗಳೂರಿನ ಬಸ್‌ಗಳಲ್ಲಿ ಗಿಜಿಗುಡುವ ಜನರ ನಡುವೆ ನಿತ್ಯ ಬುದ್ಧಿಮಾಂದ್ಯ ಮಕ್ಕಳೂ ಪ್ರಯಾಣಿಸುತ್ತಿದ್ದರು. ಸ್ವಲ್ಪ ವಿಶೇಷ ಕಾಳಜಿಯ ಅಗತ್ಯವಿರುವ ಈ ಮಕ್ಕಳನ್ನು ಕರೆದೊಯ್ಯಲು ಪೋಷಕರು ಹೆಣಗಾಡುತ್ತಿದ್ದರು. ಅವರುಗಳನ್ನೇ ಗಮನಿಸುತ್ತಿದ್ದ ಶೆಣೈಯವರಿಗೆ ಆ ಕ್ಷಣದಲ್ಲಿ ಮೂಡಿ ಬಂದ ಆಲೋಚನೆಯೇ ಇಂದು ನಚಿಕೇತ~ದ ರೂಪದಲ್ಲಿ ಹೆಮ್ಮರವಾಗಿ ಬೆಳೆಯುತ್ತಿದೆ. ಇವರ ಸ್ವಾರ್ಥ ರಹಿತ ಸೇವೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಕೈ ಜೋಡಿಸಿವೆ. ಬೆಂಗಳೂರು ನಗರ ಪಾಲಿಕೆ ಬೃಹತ್ ಕಟ್ಟಡವನ್ನು ನಿರ್ಮಿಸಿಕೊಟ್ಟಿದೆ. `ಪದ್ಮಶ್ರೀ ಫಿಸಿಯೋಥೆರಪಿ ಸಂಸ್ಥೆ~ ಉಚಿತವಾಗಿ ಚಿಕಿತ್ಸೆ ನೀಡುತ್ತಿದೆ. ದಾನಿಗಳು ಫಿಸಿಯೋಥೆರಪಿ ಸಲಕರಣೆಗಳಿಗೆ ದೇಣಿಗೆ ನೀಡಿದ್ದಾರೆ.

ಈ ಸಂಸ್ಥೆಯಲ್ಲಿ ಆಗಾಗ್ಗೆ ವೈದ್ಯಕೀಯ ಶಿಬಿರಗಳು ನಡೆಯುತ್ತಿರುತ್ತವೆ. ದಂತ ತಪಾಸಣೆ, ಸ್ಪೀಚ್ ಥೆರಪಿ, ಬಿಹೇವಿಯರಲ್ ಥೆರಪಿ, ಕಿವಿ, ಮೂಗು ಗಂಟಲು ತಜ್ಞರ ಶಿಬಿರ ಇತ್ಯಾದಿಗಳನ್ನು ಆಯೋಜಿಸಲಾಗುತ್ತದೆ. ಕೇವಲ ಕೇಂದ್ರದ ವಿದ್ಯಾರ್ಥಿಗಳಲ್ಲದೆ ಸಾರ್ವಜನಿಕರೂ ಇದರ ಉಪಯೋಗವನ್ನು ಪಡೆದುಕೊಳ್ಳುವ ವ್ಯವಸ್ಥೆ ಇಲ್ಲಿದೆ.
ಇನ್ನು ಇಲ್ಲಿಯ ಶಿಕ್ಷಕಿಯರ ಸೇವಾ ಮನೋಭಾವ, ತಾಳ್ಮೆ, ಸಹನೆ ಪ್ರಶಂಸನೀಯ. ದ್ಧಿಮಾಂದ್ಯರಿಗೆ ಶೌಚ ಪ್ರಜ್ಞೆ, ಬಟ್ಟೆ ಧರಿಸಿಕೊಳ್ಳಲು ಕಲಿಸುವದು, ಹಲ್ಲುಜ್ಜಲು, ಮುಖ ತೊಳೆಯಲು, ತಲೆ ಬಾಚಿಕೊಳ್ಳಲು, ಪುಟ್ಟ ಪುಟ್ಟ ಪದಗಳನ್ನು ಮಾತನಾಡಲು, ಹಾಡು ನೃತ್ಯವನ್ನು ಕೂಡಾ ಕಲಿಸುತ್ತಾರೆ.  ಅದೆಲ್ಲಕ್ಕಿಂತಲೂ ಹೆಚ್ಚಾಗಿ ಸ್ವಲ್ಪಮಟ್ಟಿಗಾದರೂ ಸ್ವತಂತ್ರವಾಗಿ ಬದುಕುವಂತೆ, ಅವರವರ ತಿಳಿವಳಿಕೆಗೆ ತಕ್ಕಂತೆ ಸೃಜನಶೀಲರನ್ನಾಗಿ ತಯಾರು ಮಾಡುತ್ತಾರೆ.

ಪೇಪರ್ ಕವರ್ ಮಾಡಿಸುವದು, ಕ್ಯಾಂಡಲ್ ತಯಾರಿಸಲು ಕಲಿಸುವದು, ಗ್ರೀಟಿಂಗ್ ಕಾರ್ಡ್, ಚಿತ್ರ ಬಿಡಿಸುವದು, ಸ್ಕ್ರೀನ್ ಪ್ರಿಂಟಿಂಗ್, ಬಟ್ಟೆ ಹೊಲೆಯುವದು ಮುಂತಾದ್ದವನ್ನು ಕಲಿಸಿ ಈ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುತ್ತಾರೆ. ವರ್ಷಕ್ಕೊಮ್ಮೆ ಪ್ರವಾಸ ಕರೆದೊಯ್ಯುತ್ತಾರೆ. ಪ್ರಾಣಿಸಂಗ್ರಹಾಲಯಕ್ಕೆ ಕರೆದೊಯ್ದೊಗ ಪ್ರಾಣಿಗಳನ್ನು ಗುರುತಿಸುವುದನ್ನು ತಿಳಿಸಿಕೊಡುತ್ತಾರೆ.

`ಈ ರೀತಿಯ ಸರಳ, ಸಹಜ ಶಿಕ್ಷಣ ಬುದ್ಧಿಮಾಂದ್ಯರ ಬೌದ್ಧಿಕ ಮಟ್ಟವನ್ನು ಹೆಚ್ಚಿಸುತ್ತದೆ~ ಎನ್ನುತ್ತಾರೆ ಶೆಣೈ.

ಇಲ್ಲಿ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕಿ ಶಾಂತಾ ಅವರ ಸೇವೆಯನ್ನು  ಗೌರವಿಸಿ ಬೆಂಗಳೂರು ಲಯನ್ಸ್ ಸಂಸ್ಥೆ ಸನ್ಮಾನಿಸಿದೆ.

ಈ ಸಂಸ್ಥೆಯ ಜನಪ್ರಿಯತೆಯ ಹಿಂದೆ ನರಸಿಂಹ ಶೆಣೈ ಅವರ ಅವಿರತ ಪರಿಶ್ರಮವಿದೆ. ಕೆನರಾ ಬ್ಯಾಂಕ್ ಉದ್ಯೋಗಿ, ಸಂಸಾರವಂದಿಗರೂ ಆಗಿದ್ದುಕೊಂಡೇ ಇದಕ್ಕಾಗಿ ಅವಿರತ ದುಡಿಯುತ್ತಿದ್ದಾರೆ.

ಜನರನ್ನು ಸಮಾಜ ಸೇವೆಯತ್ತ ಪ್ರೇರೇಪಿಸುವದು ಕಷ್ಟದ ಕೆಲಸ. ಆ ನಿಟ್ಟಿನ ಪ್ರಯತ್ನ ಒಂದು ವಿಶಿಷ್ಟ ರೀತಿಯಲ್ಲಿ ಆದ ಬಗೆಯನ್ನು ಅವರು ಹೀಗೆ ವಿವರಿಸುತ್ತಾರೆ.

~ರೊಹಿತರೊಬ್ಬರು ತಮ್ಮ ಮಗಳ ಹುಟ್ಟು ಹಬ್ಬವನ್ನು ಈ ಮಕ್ಕಳೊಂದಿಗೆ ಆಚರಿಸಿದರು. ಇಲ್ಲಿನ ಕೆಲಸಗಳಿಂದ ಎಷ್ಟರಮಟ್ಟಿಗೆ ಪ್ರಭಾವಿತರಾಗಿದ್ದಾರೆ ಎಂದರೆ, ಯಾರಾದರೂ ತಮ್ಮ ಸಮಸ್ಯೆಗಳನ್ನು ಅವರ ಬಳಿ ಹೇಳಿಕೊಂಡರೆ ನಚಿಕೇತದಲ್ಲಿ ಸೇವೆ ಮಾಡಿ. ನಿಮ್ಮ ಸಮಸ್ಯೆ ಪರಿಹಾರವಾಗುತ್ತದೆ ಎನ್ನುತ್ತಾರೆ. ಇದೇ ನನ್ನ ಬದುಕಿನ ಸಾರ್ಥಕತೆ~ ಎನ್ನುವಾಗ ಶೆಣೈ ಅವರ ಮುಖದಲ್ಲಿ ತೃಪ್ತ ಭಾವ ವ್ಯಕ್ತವಾಗುತ್ತದೆ.

ಅವರು ಆಗಾಗ ಬುದ್ಧಿಮಾಂದ್ಯ ಮಕ್ಕಳ ಮನೆಗಳಿಗೂ ಭೇಟಿ ನೀಡಿ ಕುಟುಂಬದವರಿಗೂ ತಿಳಿವಳಿಕೆ ನೀಡುತ್ತಾರೆ. ಆ ಮಕ್ಕಳಿಗೆ ಪ್ರೀತಿ ವಾತ್ಸಲ್ಯಗಳ ಮಳೆಗರೆಯುತ್ತಾರೆ. ಅವರ ಚಟುವಟಿಕೆಗಳಲ್ಲಿ ಒಂದಾಗಿ ಬೆರೆತುಬಿಡುತ್ತಾರೆ.

ಸಹೃದಯರು ತಮ್ಮ ಮತ್ತು ಕುಟುಂಬದವರ ಜನ್ಮದಿನ. ವಿವಾಹ ವಾರ್ಷಿಕೋತ್ಸವ ಅಥವಾ ಯಾವುದೇ ಸಂತೋಷ ಸಮಾರಂಭವನ್ನು ನಚಿಕೇತದ  ಮಕ್ಕಳೊಂದಿಗೆ ಆಚರಿಸಬಹುದು. ಒಂದು ಮಗುವಿಗೆ ತಗಲುವ ವಾರ್ಷಿಕ ವೆಚ್ಚವನ್ನು ಭರಿಸಬಹುದು ಅಥವಾ ಇನ್ಯಾವದೇ ರೀತಿಯಲ್ಲಿ ಸಹಾಯ ಹಸ್ತ ನೀಡಬಹುದು.

ಸಂಪರ್ಕಕ್ಕೆ: ನಚಿಕೇತ ಮನೋವಿಕಾಸ ಕೇಂದ್ರ ಟ್ರಸ್ಟ್, 13ನೇ ಮುಖ್ಯ ರಸ್ತೆ, ಎಂ. ಸಿ. ಲೇಔಟ್, ವಿಜಯನಗರ. ದೂ: 2311 0286, 98453 70934.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT