ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪಿನ ವನ

Last Updated 11 ಜುಲೈ 2011, 19:30 IST
ಅಕ್ಷರ ಗಾತ್ರ

ತಿಪ್ಪಗೊಂಡನಹಳ್ಳಿ ಎಂದ ಕೂಡಲೇ ಕಣ್ಣ ಮುಂದೆ ಬರುವುದು ಬೆಂಗಳೂರಿಗೆ ನೀರು ಪೂರೈಕೆಯಾಗುವ ದೊಡ್ಡ ಜಲಾಶಯ! ಕೆಲವೇ ವರ್ಷದ ಹಿಂದಿನ ವರೆಗೂ ನಗರದ ಬಹುಪಾಲು ದಾಹವನ್ನು ಈ ಜಲಾಶಯವೇ ತೀರಿಸುತ್ತಿತ್ತು.

ಹಿಂದೊಮ್ಮೆ ವಿಶ್ವೇಶ್ವರಯ್ಯನವರು ತಿಪ್ಪಗೊಂಡನಹಳ್ಳಿಯಲ್ಲಿ ಹರಿಯುವ ಅರ್ಕಾವತಿ- ಕುಮುದ್ವತಿ ನದಿಗಳ ಸಂಗಮದ ಸ್ಥಳವನ್ನು ದಿಟ್ಟಿಸುತ್ತಾ `ಇಲ್ಲಿಂದ ಬೆಂಗಳೂರಿಗೆ ನೀರು ಹರಿಸಬಹುದು~ ಎಂದಿದ್ದರಂತೆ. ಅದೇ ನೀರು 35 ಕಿ.ಮಿ. ಹರಿಯುತ್ತಾ ಬೆಂಗಳೂರಿಗೆ ಜೀವ ಜಲವಾಗಿತ್ತು.

ಇದೆಲ್ಲ ಈಗ ಗತಕಾಲದ ಮಾತು. `ಹಿಂದೆ ನೀರಿನ ಹರಿವು ಚೆನ್ನಾಗಿತ್ತು. ಈಗ ಮಳೆ ಬಂದು ಒಂದು ಗಂಟೆ ಕಾಲ ಮಾತ್ರ ನೀರಿನ ಹರಿವು ಇರುತ್ತದೆ~ ಎನ್ನುತ್ತಾರೆ ಸುತ್ತಮುತ್ತಲಿನ ಹಳ್ಳಿಯವರು.

`1992ರಲ್ಲಿ ಜಲಾಶಯ ತುಂಬಿ ಹರಿದಿತ್ತು. ಆ ನಂತರ ನೀರಿನ ಮಟ್ಟ ಕುಸಿಯುತ್ತಾ ಬಂದಿದೆ. ಬೆಂಗಳೂರಿಗರಿಗೆ ಶೇಕಡಾ 2ರಷ್ಟು ಕೂಡಾ ಇಲ್ಲಿಂದ ನೀರು ಪೂರೈಕೆಯಾಗುತ್ತಿಲ್ಲ. ಅರಣ್ಯ ನಾಶವಾಗುತ್ತಿರುವುದು ಒಂದೆಡೆಯಾದರೆ ವ್ಯಾಪಾರಕ್ಕಾಗಿ ಬಂಡೆಗಳನ್ನು ಕಡಿದು ಪರಿಸರ ಮಲಿನಗೊಳಿಸುತ್ತಿರುವುದೂ ಮತ್ತೊಂದು ಕಾರಣ~  ಎನ್ನುತ್ತವೆ ಜಲಮಂಡಳಿಯ ಮೂಲಗಳು.

ಸೊರಗುತ್ತಿರುವ ಜಲಾಶಯ, ಬರಡಾಗುತ್ತಿರುವ ಅರಣ್ಯ, ಜನವಾಸವಿಲ್ಲದೆ ಅವಶೇಷಗಳಂತೆ ಪಾಳುಬಿದ್ದ ಮನೆಗಳು- ಇವು ಇಂದಿನ ತಿಪ್ಪಗೊಂಡನಹಳ್ಳಿಯ ಸ್ಥಿತಿ.
ಆದರೆ ಈ ಮರುಭೂಮಿಯ ನಡುವೆಯೂ ಹಸಿರು ಕ್ರಾಂತಿ ಆರಂಭವಾಗಿದೆ! ಅಲ್ಲಲ್ಲೇ ಹೊಸ ಗಿಡಗಳು ಅವುಗಳ ಬುಡದಲ್ಲಿ ಚಂದ್ರಗುಂಡಿ. ಪಕ್ಕದಲ್ಲಿ ಇಂಗುಗುಂಡಿಗಳು, ಅವುಗಳಲ್ಲಿ ಶೇಖರಣೆಗೊಂಡ ಮಳೆನೀರು ಆಹ್ಲಾದಕರ ಅನುಭವವನ್ನು ನೀಡುತ್ತವೆ.

ನಾಶವಾದ ಅರಣ್ಯ ಮತ್ತೆ ಚಿಗುರಬೇಕು, ಚಿಗುರಿದ ಗಿಡಗಳು ಮರವಾಗಿ ಹಸಿರು ಕಾನನವಾಗಬೇಕು, ದಟ್ಟ ಕಾನನದಿಂದಾಗಿ ಮಳೆ ಸುರಿದು ಜಲಾಶಯ ತುಂಬಬೇಕು, ಅದರ ಉಪಯೋಗ ಮುಂದಿನ ಪೀಳಿಗೆಗೆ ದಕ್ಕಬೇಕು.
 
ಜೊತೆಗೆ ಬೆಂಗಳೂರಿನಲ್ಲಿ ಲಾಲ್‌ಬಾಗ್, ಕಬ್ಬನ್ ಪಾರ್ಕ್ ಬಿಟ್ಟರೆ ಬೇರೆ ಯಾವುದೇ ದೊಡ್ಡ ಮರಗಿಡಗಳ ಪಾರ್ಕ್ ಇಲ್ಲ. ಮುಂದೆ ಇದೊಂದು ಮಾದರಿ ಉದ್ಯಾನವನವಾಗಿ ನಾಗರಿಕರಿಗೆ ಸ್ಫೂರ್ತಿಯಾಗಬೇಕು~ ಎನ್ನುವ ಹಲವು ಪರಿಸರಾಸಕ್ತರ ಸತತ ಚಿಂತನೆ, ನಿರಂತರ ಪ್ರಯತ್ನ, ಆಶಯಗಳ ಫಲವಾಗಿ ಆ ಜಾಗದಲ್ಲಿ ಹೊಸಗಿಡಗಳು ಚಿಗುರಿ `ಸ್ಫೂರ್ತಿ ವನ~ ಎಂದೆನಿಸಿದೆ.

ತಿಪ್ಪಗೊಂಡನಹಳ್ಳಿ ಜಲಾಶಯದ ಸುತ್ತಲಿನ ಸರ್ಕಾರಿ ಹಾಗೂ ಬೆಂಗಳೂರು ಜಲಮಂಡಳಿಗೆ ಸೇರಿದ `ಬರಡು ಭೂಮಿ~ ಯನ್ನು `ಹಸಿರು~ಗೊಳಿಸುವ ಕಾರ್ಯಕ್ರಮ ಆರಂಭವಾಗಿದೆ. 400 ಎಕರೆ ಜಾಗವನ್ನು `ವನ ಅಭಿವದ್ಧಿ~ಗಾಗಿ ಬಳಸಿಕೊಳ್ಳಲಾಗುತ್ತಿದೆ. ಇದೀಗ 100 ಎಕರೆ ಜಾಗಕ್ಕೆ ಬೇಲಿ ಹಾಕಲಾಗಿದ್ದು. ಸದ್ಯಕ್ಕೆ 50 ಎಕರೆ ಪ್ರದೇಶದಲ್ಲಿ ಗಿಡ ನೆಡಲಾಗಿದೆ.

`ನಮ್ಮ ಬದುಕಿನ ಹಲವಾರು ಘಟನೆಗಳು ಸ್ಮರಣೀಯ. ಮದುವೆ, ಮುಂಜಿ, ನಾಮಕರಣ, ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಮುಂತಾದ ಆಚರಣೆಗಳಿಗೆಲ್ಲ ಮಹತ್ವ ನೀಡುತ್ತೇವೆ. ಈ ಸ್ಮರಣೀಯ ನೆನಪುಗಳು ಅವಿಸ್ಮರಣೀಯ ಎನಿಸಬೇಕಾದರೆ ಸ್ಫೂರ್ತಿವನದಲ್ಲೊಂದು ಗಿಡ ನೆಡಿ. ಅದು ಮರವಾಗಿ ಬೆಳೆದು ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ಉಳಿಯುತ್ತದೆ~ ಎನ್ನುತ್ತಾರೆ `ಸ್ಫೂರ್ತಿವನದ~ ಸಂಚಾಲಕ ಈಶ್ವರ  ಪ್ರಸಾದ್.

`ನಾವು ಅನೇಕ ಆಚರಣೆಗಳಿಗೆ ಹಣ ವ್ಯಯಿಸಿ ವೈಭವೀಕರಿಸುತ್ತೇವೆ. ಅದೇ ಹಣದಲ್ಲಿ ಕೇವಲ ಸಾವಿರ ರೂಪಾಯಿ ಕೊಟ್ಟರೆ ನಿಮ್ಮ ಹೆಸರಿನಲ್ಲಿ ನಾವು ಗಿಡ ನೆಡುತ್ತೇವೆ. ನೀರು ಹನಿಸಿ ರಕ್ಷಿಸುತ್ತೇವೆ. ನೀವು ನೆಟ್ಟಿರುವ ಗಿಡಕ್ಕೆ ಕ್ರಮ ಸಂಖ್ಯೆ ಕೊಟ್ಟು ಗುರುತಿನ ಚೀಟಿ ಹಾಗೂ ಪ್ರಮಾಣ ಪತ್ರ ನೀಡುತ್ತೇವೆ.
 
ನೀವು ಇಚ್ಛಿಸಿದಾಗ `ಸ್ಫೂರ್ತಿ ವನ~ಕ್ಕೆ ಹೋಗಿ ನೀವು ನೆಟ್ಟಿರುವ ಗಿಡ ಮರವಾಗುತ್ತಿರುವ ಸಂಭ್ರಮಕ್ಕೆ ಸಾಕ್ಷಿಯಾಗಬಹುದು~ ಎನ್ನುತ್ತಾ ಸಸಿಗಳ ಮೇಲಿನ ನಮ್ಮ ಪ್ರೀತಿಗೆ ಸ್ಫೂರ್ತಿಯಾಗುತ್ತಾರೆ.

ಒಂದು ಅಂದಾಜಿನಂತೆ ಬೆಂಗಳೂರಿನಲ್ಲಿ ಪ್ರತಿ ವರ್ಷ 90,000 ಹುಟ್ಟು ಹಬ್ಬ, 20,000 ಹೊಸ ಮನೆಗಳ ಗೃಹಪ್ರವೇಶ, 10,000 ಮದುವೆ ಮತ್ತು 35,000 ಸಾವುಗಳು ಸಂಭ್ರಮಿಸುತ್ತವೆ. ಇದೆಲ್ಲದರ ಜತೆಗೆ ಒಂದಲ್ಲ ಒಂದು ಧಾರ್ಮಿಕ ಕಾರ್ಯ ಬೆಸೆದುಕೊಂಡಿದೆ.

ಅದರ ಜತೆಗೆ ಹೊಂದಿಕೊಳ್ಳುವಂತೆ ಗಿಡ ನೆಡುವವರಿಗೆ `ಗ್ರೀನ್ ಗಿಫ್ಟ್~ ಚೆಕ್‌ಗಳನ್ನು ಒದಗಿಸುವುದು, ನೂತನ ದಂಪತಿ ಸಸಿ ನೆಡುವುದರ ಮೂಲಕ ವಿವಾಹ ಆಚರಣೆಯನ್ನು  ಅರ್ಥಪೂರ್ಣವಾಗಿಸುವದು, ಶಾಲಾ ಕಾಲೇಜುಗಳಲ್ಲಿ ಇಕೋ ಕ್ಲಬ್‌ಗಳನ್ನು ಆರಂಭಿಸಿ ಇಕಾಲಜಿಯ ಬಗ್ಗೆ ಅರಿವನ್ನು ಮೂಡಿಸುವುದು ಮುಂತಾದ ಉದ್ದೇಶಗಳನ್ನು `ಸ್ಫೂರ್ತಿ ವನ~ ಹೊಂದಿದೆ.

`ಐದು ವರ್ಷಗಳ ಹಿಂದೆ ಆರಂಭವಾದ ಸ್ಫೂರ್ತಿ ವನದ ಈ ಎಲ್ಲ ಸದಾಶಯಗಳ ಹಿಂದೆ ಚಿರಂಜೀವಿ ಸಿಂಗ್, ವಿಜಯ್ ಗೋರೆ, ನಾಗೇಶ ಹೆಗಡೆ, ವಿಜಯ್ ಪಟ್ನಾಯಕ್ ಮುಂತಾದ ಗಣ್ಯರ ಸಲಹೆ, ಬೆಂಬಲ ಹಾಗೂ ನಿರಂತರ ಸಹಕಾರವಿದೆ~ ಎಂದು ಕೃತಜ್ಞತೆಯಿಂದ ಸ್ಮರಿಸುತ್ತಾರೆ ಈಶ್ವರ ಪ್ರಸಾದ್.

ಪುಣೆಯಲ್ಲಿ ಸತ್ತವರ ನೆನಪಿಗಾಗಿ ಮಾತ್ರ ಇರುವ ಪುಟ್ಟ `ಸ್ಮೃತಿ ವನ~ ಒಂದಿದೆ. `ಸ್ಫೂರ್ತಿ ವನ~ ಅದನ್ನೂ ಮೀರಿ ಬದುಕಿನ ಎಲ್ಲ ನೆನಪುಗಳಿಗೂ ಜೀವಂತಿಕೆ ನೀಡಬಲ್ಲ `ಸಂಜೀವಿನಿ~ಯಾಗಿ ದೇಶದಲ್ಲೇ ದೊಡ್ಡ ನೆನಪಿನ ವನವಾಗಿ ಬೆಳೆಯುವ ಮಹೋನ್ನತ ಧ್ಯೇಯವನ್ನು ಹೊಂದಿದೆ.

ಸ್ಫೂರ್ತಿ ವನವನ್ನು ಹಸಿರಾಗಿಸುವ ಪ್ರಯತ್ನದಲ್ಲಿ ಅಡ್ಡಿ ಅಡಚಣೆಗಳು ಹತ್ತು ಹಲವು! ಸುತ್ತಲೂ ಹಾಕಿರುವ ಬೇಲಿಯೊಳಗೆ ನುಸುಳಿ ಮೇಯುವ ಮೇಕೆ ದಂಡು, ಯಾವುದೋ ಕಾರಣವೊಡ್ಡಿ ವನಕ್ಕೆ ಬೆಂಕಿ ಹಚ್ಚುವ ಹಳ್ಳಿಗರು- ಈ ಎಲ್ಲ ತೊಂದರೆಗಳನ್ನು ಎದುರಿಸಿ ಬರಡು ಭೂಮಿ ಹಸಿರಾಗಬೇಕಿದೆ.

ಬೆಂಗಳೂರು ಜಲಮಂಡಳಿ, ವನ ಸಲಹಾ ಸಮಿತಿ, ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ, `ಪರಿಸರ~ ಹಾಗೂ ಜನರ ಸಹಭಾಗಿತ್ವದಲ್ಲಿ ಬೆಳೆಯುತ್ತಿರುವ `ಸ್ಫೂರ್ತಿ ವನ~ಕ್ಕೆ ಬೆಂಗಳೂರಿನ ಪ್ರತಿಯೊಬ್ಬ ನಾಗರಿಕನ ಸ್ವಯಂಪ್ರೇರಿತ ಸಹಕಾರದ ಆಗತ್ಯವಿದೆ.

ನಮಗೆ ನೀರಿನ ಸಮಸ್ಯೆ ಎದುರಾದ ಕೂಡಲೇ ವ್ಯವಸ್ಥೆಯನ್ನು ದೂಷಿಸುತ್ತೇವೆ. ಆದರೆ ನೀರಿನ ಮೂಲವನ್ನು ಉಳಿಸುವತ್ತ ಕಾಡನ್ನು ಸಂರಕ್ಷಿಸುವತ್ತಲೂ ನಮ್ಮ ದೃಷ್ಟಿ ಹರಿದರೆ ನಿಧಾನವಾಗಿ, ಆದರೆ ಖಚಿತವಾಗಿ ಸಮಸ್ಯೆಗೆ ಪರಿಹಾರ ದೊರೆತೀತು.

`ಇಲ್ಲಿ ಬೆಳೆಸಲಾಗುವ ಹಲಸು, ಮಾವು, ನೇರಳೆ, ಹಿಪ್ಪೆ, ಬೇವು, ಹೊಂಗೆ, ಅತ್ತಿ ಹಣ್ಣು, ಕಾಡು ಬಾದಾಮಿ, ಹೂವರಸಿ ನೀರ್ಗಂಜಿ ಮುಂತಾದ ಮರಗಳು ಹಾಗೂ ಹಣ್ಣುಗಳನ್ನು ವ್ಯಾಪಾರಕ್ಕೆ ಬಳಸುವುದಿಲ್ಲ. ಪ್ರಕೃತಿಗೇ ಬಿಟ್ಟು ಬಿಡುತ್ತೇವೆ~ ಎನ್ನುವ ಸ್ಫೂರ್ತಿ ವನದ ಸಂಘಟಕರ ಅಪ್ಪಟ ಪರಿಸರ ಕಾಳಜಿಗೆ ಸಹ ಮನಸ್ಕರ ಸ್ಪಂದನದ ತುರ್ತು ಅವಶ್ಯಕತೆಯಿದೆ.
ಆಸಕ್ತರು ಸಂಪರ್ಕಿಸಬಹುದಾದ ಮೊಬೈಲ್ ಸಂಖ್ಯೆ: 94480 77019.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT