ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆನುಗೊಂಡದ ದೇವಾಲಯಗಳು

ಸುತ್ತಾಣ
Last Updated 21 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರಿನಿಂದ ೧೨೫ ಕಿ.ಮೀ. ಮತ್ತು ಆಂಧ್ರಪ್ರದೇಶದ ಜಿಲ್ಲಾ ಕೇಂದ್ರ ಅನಂತಪುರದರಿಂದ ೭೦ ಕಿ.ಮೀ. ದೂರದಲ್ಲಿ ಬೆಂಗಳೂರು -ಹೈದರಾಬಾದ್ ರಸ್ತೆಯಲ್ಲಿ ಬೆಂಗಳೂರು ಮತ್ತು ಅನಂತಪುರದ ನಡುವೆ ಪೆನುಗೊಂಡ ಇದೆ.

ಒಂದು ಕಾಲಕ್ಕೆ ಇಲ್ಲಿ ೩೬೫ ದೇಗುಲಗಳಿದ್ದು, ವರ್ಷದ ೩೬೫ ದಿನವೂ ದೇವಾತಾ ಕಾರ್ಯಗಳು ವಿಜೃಂಭಣೆಯಿಂದ ನಡೆಯುತ್ತಿದ್ದವೆಂದು ಹೇಳಲಾಗುತ್ತದೆ.
ಅವುಗಳಲ್ಲಿ ಈಗ ಊರಕೋಟೆಯ ಬಾಗಿಲಿನ ಹನುಮನ ದೇವಾಲಯ, ಬೆಟ್ಟದ ಕೋಟೆಯ ಹತ್ತಿರದ ಲಕ್ಮೀ ನರಸಿಂಹ ದೇವಾಲಯ, ಊರೊಳಗಿನ ಶಿವ ದೇವಾಲಯ, ಜೈನಧರ್ಮದ ಪಚ್ಚೆಕಲ್ಲಿನ ಶ್ರೀ ಪಚ್ಚೇಪಾರ್ಶ್ವನಾಥ ಸ್ವಾಮಿ ದೇವಾಲಯ ಮತ್ತು ೧೨ನೇ ಶತಮಾನದ ಸೂಫಿಸಂತ ಹಜರತ್ ಬಾಬಾ ಫಕ್ರುದ್ದೀನ್ ಅವರ ದರ್ಗಾ ಇದೆ.

ವರ್ಷಕ್ಕೊಮ್ಮೆ ನಡೆಯುವ ಈ ಸಂತರ ‘ಉರುಸ್’ ಬಹಳ ಪ್ರಸಿದ್ಧವಾಗಿದ್ದು, ದೇಶದ ವಿವಿಧ ಭಾಗಗಳಿಂದ ಮುಸ್ಲಿಂ ಬಾಂಧವರಲ್ಲದೆ ಇತರ ಮತಸ್ಥರೂ ಅದಕ್ಕಾಗಿಯೇ ಬರುತ್ತಾರೆ. ಈ ದರ್ಗಾ ಮತ್ತು ಇಲ್ಲಿನ ಮಸೀದಿಗಳು ಹಿಂದೆ ದೇವಾಲಯಗಳಾಗಿದ್ದವಾದರೂ ಯಾವ ದೇವಾಲಯ ಯಾವ ಸಮಯದಲ್ಲಿ ಹಾಳಾಯಿತು ಎಂಬುದರ ವಿವರಗಳು ಲಭ್ಯವಿಲ್ಲ.

ಜೈನ ದೇವಾಲಯ ಶ್ರೀ ಪಚ್ಚೇಪಾರ್ಶ್ವನಾಥರ ಪಚ್ಚಿಕಲ್ಲಿನ ವಿಗ್ರಹ ಮೂರ್ತಿ ನೋಡಲು ಬಲು ಆಕರ್ಷಣೀಯ ಮತ್ತು ಮೋಹಕವಾಗಿದ್ದು, ದೇವಾಲಯದಲ್ಲಿ ಹಲವು ಹಳೆಯ ಪಂಚಲೋಹದ ವಿಗ್ರಹಗಳಿವೆ. ಸಂಪೂರ್ಣ ಅರಗಿನಲ್ಲಿ ಮಾಡಿದ ಪದ್ಮಾವತಿ ಅಮ್ಮನವರ ಗೊಂಬೆಗಳು (ಯಕ್ಷಿ) ನೋಡಲು ಸುಂದರವಾಗಿವೆ. ಆಲಯ ನೋಡಲು ಬಂದವರಿಗೆ ಮಧ್ಯಾಹ್ನ ಉಚಿತ ಊಟದ ವ್ಯವಸ್ಥೆ ಇದೆ.

ನಾಲ್ಕು ದಿಕ್ಕಿನ ಕೋಟೆಯ ಪ್ರವೇಶದ್ವಾರಗಳು ಇಂದಿಗೂ ನೋಡಲು ಅದ್ಬುತವಾಗಿವೆ ಮತ್ತು ಊರ ಬಾಗಿಲಿನ ಹನಮನ ಎತ್ತರದ ಮೂರ್ತಿ ಸುಂದರವಾಗಿದೆ. ಹೆದ್ದಾರಿಯಿಂದ ಪೆನುಗೊಂಡಕ್ಕೆ ತಿರುಗುವ ರಸ್ತೆಯಲ್ಲಿ ಶ್ರೀ ಕೃಷ್ಲದೇವರಾಯರ ವಿಗ್ರಹವನ್ನು ಇತ್ತೀಚೆಗೆ ಸ್ಥಾಪಿಸಿದ್ದು, ಪಕ್ಕದ ಮಂಟಪವೂ ಆಕರ್ಷಕವಾಗಿದೆ.

ಇತಿಹಾಸ
ತಾಳಿಕೋಟೆ ಯುದ್ಧದ ನಂತರ (೧೫೬೫) ವಿಜಯನಗರದ ಅರಸರಲ್ಲಿ ಉಳಿದ ತಿರುಮಲರಾಯರು ಸುಮಾರು ೫೫೦ ಆನೆಗಳಲ್ಲಿ ಅಳಿದುಳಿದ ಸಂಪತ್ತನ್ನು ಹೇರಿಕೊಂಡು ಪೆನುಗೊಂಡಕ್ಕೆ ಬಂದರು ಎಂದು ಇತಿಹಾಸಕಾರರು ಹೇಳುತ್ತಾರೆ. ಪೆನುಗೊಂಡದಲ್ಲಿ ಅಂದಿಗೇ ಸುಭದ್ರ ಕೋಟೆ ಇದ್ದು, ಗಗನ ಮಹಲ್ ಎಂಬ ಚಿಕ್ಕ ಅರಮನೆ (ವಿಜಯನಗರ ರಾಜರ ಬೇಸಿಗೆ ಅರಮನೆ) ಇತ್ತು. ಇದು ಹಂಪಿಗೆ ಹತ್ತಿರವಿದ್ದ ಅವರ ಸಾಮ್ರಾಜ್ಯದ ಸಂಸ್ಥಾನವಾಗಿದ್ದರಿಂದ ತಿರುಮಲರಾಯರು ಇಲ್ಲಿಗೆ ಬಂದರು.

ಪೆನುಗೊಂಡ ಬೆಟ್ಟಕ್ಕೆ ಸುಮಾರು ೧೩ ಕಿ.ಮೀ. ಉದ್ದದ ಸುತ್ತನೆಯ ಕೋಟೆ ಇದ್ದು, ಇಂದಿಗೂ ಅದರ ಅವಶೇಷಗಳನ್ನು ಕಾಣಬಹುದು. ಈ ಸುಭದ್ರ ಬೃಹತ್ ಕೋಟೆಯನ್ನು ಒಂದನೇ ಬುಕ್ಕರಾಯರ ಮಗ ವೀರ ವಿರುಪಣ್ಣ ಉದಯಾರ್ ಕಟ್ಟಿಸಿದ್ದ ಎಂದು ಹೇಳಲಾಗುತ್ತದೆ. ಪೆನುಗೊಂಡ ಎಂದರೆ ದೊಡ್ಡ -ಬೆಟ್ಟ. ವಿವಿಧ ಕಾಲಗಳಲ್ಲಿ ಹೊಯ್ಸಳ, ಚಾಲುಕ್ಯ, ವಿಜಯನಗರ, ಮರಾಠ ಮತ್ತು ನವಾಬರ ಆಡಳಿತಗಳಿಗೆ ಅದು ಒಳಪಟ್ಟಿತ್ತು. ೧೬೩೫ರಿಂದ ೧೬೫೨ರವರೆಗೆ ತಿರುಪತಿಯ ಹತ್ತಿರವಿರುವ ವಿಜಯನಗರ ಸಂಸ್ಥಾನಕ್ಕೆ ಸೇರಿತ್ತು. ಆಗ ಈ ‘ಚಂದ್ರಗರಿ’ಯನ್ನು ದಳವಾಯಿ ಕಂಚಿನಾಯ ಅವರ ಮೊಮ್ಮಗ ಕನಕನಾಯ್ಡು ಆಳುತ್ತಿದ್ದನಂತೆ.

ಮುರಳೀರಾವ್ ಎನ್ನುವವರು ನಿಜಾಮರ ಕಾಲದಲ್ಲಿ ಈ ಸಂಸ್ಥಾನದ  ಮುಖ್ಯಸ್ಥರಾಗಿದ್ದರು. ನಂತರ ಹೈದರಾಲಿ, ಟಿಪ್ಪು ಸುಲ್ತಾನ್ ತದ ನಂತರ ಬ್ರಿಟಿಷರ ಅಡಳಿತಕ್ಕೆ ಒಳಪಟ್ಟಿತು ಎಂದು ದಾಖಲೆಗಳು ಹೇಳುತ್ತವೆ. ಬೆಳಗಿನ ಆರು ಗಂಟೆಗೆ ಪ್ರಯಾಣ ಪಾರಂಭಿಸಿದರೆ ಇವುಗಳ ಮಧ್ಯೆ ಇರುವ ಸುಪ್ರಸಿದ್ಧ ಲೇಪಾಕ್ಷಿಗೂ ಭೇಟಿ ನೀಡಬಹುದು ಅಥವಾ ಹತ್ತಿರದ ಸಾಯಿಬಾಬಾರವರ ಪುಟ್ಟಪರ್ತಿಗೂ ಹೋಗಬಹುದು. ಇತಿಹಾಸದ ವಿದ್ಯಾರ್ಥಿಗಳಿಗೆ ಮತ್ತು ಚಾರಣಿಗರಿಗೆ ಸಂತೋಷ ನೀಡುವ ಸ್ಥಳ ಇದು.

ಬೆಂಗಳೂರಿನಿಂದ ಕರ್ನಾಟಕ ಸಾರಿಗೆ, ಆಂಧ್ರಪ್ರದೇಶದ ಸಾರಿಗೆ ವಾಹನಗಳು, ಸಾಕಷ್ಟು ಇದ್ದು ದೇವನಹಳ್ಳಿ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಕೋಡಿಕೊಂಡ ಮಾರ್ಗವಾಗಿ ಹೋಗುತ್ತವೆ. ಸ್ವಂತ ವಾಹನದಲ್ಲಿ ಹೋಗುವವರು ಈ ಎಲ್ಲಾ ಊರಿನ ಬೈಪಾಸ್‌ಗಳಲ್ಲೇ ಹೋಗಬಹುದು (ಎನ್ಎಚ್೭). ರೈಲಿನ ಸೌಕರ್ಯವೂ ಇದೆ. ಪುಟ್ಟಪರ್ತಿಯಲ್ಲಿ ಚಿಕ್ಕ ವಿಮಾನ ನಿಲ್ದಾಣವೂ ಉಂಟು.

ಬೇಸರದ ಸಂಗತಿಯೆಂದರೆ ಸರ್ಕಾರ ಮತ್ತು ಪುರಾತತ್ವ ಇಲಾಖೆ ಇತ್ತ ಸರಿಯಾಗಿ ಗಮನ ಹರಿಸದೆ ಚರಿತ್ರೆ ದಾಖಲಿಸಲು ಇರುವ ಜಾಗವನ್ನೆಲ್ಲಾ ಖಾಸಗಿಯವರು ಅಧೀನಕ್ಕೆ ತೆಗೆದುಕೊಂಡು, ಬಡವರೂ ವಾಸಕ್ಕೆ ಉಪಯೋಗಿಸುತ್ತಿದ್ದಾರೆ. ಗಗನ ಮಹಲಿನ ಮೇಲ್ವಿಚಾರಕ ದಿನಗೂಲಿಯ ನೌಕರನಾಗಿದ್ದು, ಯಾವಾಗಲೂ ಗೇಟಿಗೆ ಬೀಗ ಹಾಕಿ ಕೈಗೆಟುಕದೆ ಇರುತ್ತಾನೆ. ಹೊರಗಡೆಯ ರಸ್ತೆಬದಿಯಿಂದ ಅರಮನೆಯನ್ನು ವೀಕ್ಷಿಸಿ ಹಿಂದಿರುಗಬೇಕಾಗುತ್ತದೆ.  

ಹೀಗೆ ಬನ್ನಿ...
ಬೆಂಗಳೂರಿನಿಂದ ೧೨೫ ಕಿ.ಮೀ. ದೂರದಲ್ಲಿದೆ ಪೆನುಗೊಂಡ. ಬೆಂಗಳೂರಿನಿಂದ  ದೇವನಹಳ್ಳಿ-, ಚಿಕ್ಕಬಳ್ಳಾಪುರ, ಬಾಗೇಪಲ್ಲಿ-, ಕೋಡಿಕೊಂಡ ಮಾರ್ಗವಾಗಿ ಪೆನಗೊಂಡ ತಲುಪಬಹುದು. ಕಾರಿನಲ್ಲಿ ಪ್ರಯಾಣಿಸಿದರೆ ಎರಡು ಗಂಟೆಯ ಹಾದಿ.
–ಬಾಗೇಪಲ್ಲಿ ಕೃಷ್ಣಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT