ಕಲಾವಿದನಾಗಬೇಕು ಎಂಬ ಹೆಬ್ಬಯಕೆಯಿಂದ ನಾನು 1966ರ ಅಕ್ಟೋಬರ್ 23ರಂದು ದೇವನಹಳ್ಳಿ ತೊರೆದು ಬೆಂಗಳೂರಿಗೆ ಬಂದೆ. ಅ.ನ.ಸುಬ್ಬರಾಯರು ತುಂಬಿದ್ದ ಧೈರ್ಯವೇ ನನ್ನನ್ನು ಇಲ್ಲಿಗೆ ಎಳೆದು ತಂದಿತ್ತು. ಈ ನಗರಕ್ಕೆ ಬಂದ ವೇಳೆ ನನ್ನ ಜೊತೆ ಇದ್ದುದು ಒಂದು ಜೊತೆ ಬಟ್ಟೆ ಮಾತ್ರ.

ಬೆಂಗಳೂರಿಗೆ ಬಂದಾಗ ನಾನು ಮೊದಲು ನೋಡಿದ್ದು ಕಲಾಮಂದಿರವನ್ನು. ಮುಂದೆ ಅದೇ ನನ್ನ ವಾಸಸ್ಥಳವೂ ಆಯಿತು. ಆಗ ಬಸವನಗುಡಿಯ ಬ್ಯೂಗಲ್ರಾಕ್ ಬಳಿ ದೊಡ್ಡದೊಂದು ಕೊಳವಿತ್ತು. ಅಲ್ಲೇ ಮುಖಮಜ್ಜನ ಮಾಡಿ ಕಲಾಮಂದಿರಕ್ಕೆ ಹೋಗುತ್ತಿದ್ದೆ. ಆಗ ನನ್ನ ಜೊತೆಯಲ್ಲಿ ಬಿ.ಕೆ.ಎಸ್. ವರ್ಮ ಕೂಡ ಇರುತ್ತಿದ್ದರು. ಕಲಾವಿದನಾಗಬೇಕು ಎನ್ನುವ ಆಸೆ ನನ್ನಲ್ಲಿ ಚಿಗುರಿದ್ದು ಯಾವಾಗ? ನನ್ನ ಮತ್ತು ವರ್ಮ ಪರಿಚಯ ಹೇಗಾಯಿತು? ಅ.ನ.ಸುಬ್ಬರಾಯರು ನನಗೆ ನೀಡಿದ ಧೈರ್ಯ ಎಂತಹದ್ದು? ಇವುಗಳ ಹಿಂದೆ ಒಂದು ಪುಟ್ಟ ಫ್ಲಾಷ್ಬ್ಲಾಕ್ ಇದೆ.

ನನ್ನ ತಂದೆ ಚಿಕ್ಕಬಳ್ಳಾಪುರದವರು. ಅಮ್ಮ ದೇವನಹಳ್ಳಿಯವರು. ನನಗೆ ಅಪ್ಪ–ಅಮ್ಮನ ಒಡನಾಟಕ್ಕಿಂತಲೂ ಅಜ್ಜಿಯ ಪ್ರೀತಿಯೇ ಅಕ್ಷಯವೆನಿಸಿತ್ತು. ಹಾಗಾಗಿ ಅಜ್ಜಿ ಊರಿನಲ್ಲೇ ಬೆಳೆಯುತ್ತಿದ್ದೆ. ನಮ್ಮ ಶಾಲೆಯ ಪಕ್ಕದಲ್ಲಿಯೇ ಶಿಲ್ಪಿ ಹನುಮಂತಾಚಾರ್ ಅವರ ಮನೆಯಿತ್ತು. ಅಲ್ಲಿ ಅವರು ಆಗಾಗ್ಗೆ ಶಿಲ್ಪಗಳನ್ನು ಪ್ರದರ್ಶಿಸುತ್ತಿದ್ದರು. ವಯೋಸಹಜ ಕುತೂಹಲದಿಂದ ನನ್ನ ಮನಸ್ಸು ಆ ಶಿಲ್ಪಗಳತ್ತ ಆಕರ್ಷಿತಗೊಳ್ಳುತ್ತಿತ್ತು. ಹೋಗಿ, ಬರುವಾಗಲೆಲ್ಲ ಹನುಮಂತಾಚಾರ್ ಅವರ ಶಿಲ್ಪ ಕಲಾಕೃತಿಗಳನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದೆ. ನನ್ನ ಕುತೂಹಲ ಗಮನಿಸಿದ ಅವರು ಒಂದು ದಿನ ನನ್ನನ್ನು ಉದ್ದೇಶಿಸಿ, ‘ಕಲಿಯಲು ಆಸಕ್ತಿ ಇದೆಯೇ?’ ಅಂದರು. ನಾನು ‘ಹ್ಞೂಂ’ ಎಂದು ಗೋಣು ಆಡಿಸಿದೆ. ನನ್ನ ಮನಸ್ಸಿನಲ್ಲಿ ಕಲಾವಿದನಾಗಬೇಕು ಎನ್ನುವ ಆಸೆ ಚಿಗುರೊಡೆದಿದ್ದು ಆಗಲೇ.

ಬಿಡುವಿನ ವೇಳೆಯನ್ನು ಹನುಮಂತಾಚಾರ್ ಅವರ ಸಂಗಡ ಕಳೆಯುತ್ತಿದ್ದೆ. ನಾನು ಎಸ್ಎಸ್ಎಲ್ಸಿಯಲ್ಲಿದ್ದಾಗ ಕಲೆ ಕುರಿತಾದ ಆರು ತಿಂಗಳ ಟ್ರೈನಿಂಗ್ ಒಂದಕ್ಕೆ ಸೇರಿಕೊಳ್ಳುವಂತೆ ಅವರು ಸೂಚಿಸಿದರು. ನಾನು ಆ ತರಬೇತಿ ಪಡೆಯುವ ಸಂದರ್ಭದಲ್ಲಿ ಅಲ್ಲಿಗೆ ವರ್ಮ ಬಂದಿದ್ದರು. ಆ ವೇಳೆ ಬಿಡುವು ಸಿಕ್ಕಾಗ ನಾನು ಅವರನ್ನು ದೇವನಹಳ್ಳಿಯನ್ನೆಲ್ಲಾ ಸುತ್ತಿಸುತ್ತಿದ್ದೆ. ಹೀಗೆ ವರ್ಮ ನನಗೆ ಹತ್ತಿರವಾದರು.

ನನ್ನ ಕಲಾಸಕ್ತಿಯನ್ನು ಕಂಡು ಅವರೇ ಅ.ನ.ಸುಬ್ಬರಾಯರನ್ನು ಸಂಪರ್ಕಿಸುವಂತೆ ಸೂಚಿಸಿದರು. ಆಗಲೇ ನನ್ನ ಅಭಿಲಾಷೆಯನ್ನು ದಾಖಲಿಸಿ ಸುಬ್ಬರಾಯರಿಗೆ ಒಂದು ಪತ್ರ ಬರೆದೆ. ‘ಧೈರ್ಯ ಮಾಡಿ ಬೆಂಗಳೂರಿಗೆ ಬಂದುಬಿಡು’ ಎಂಬ ಉತ್ತರ ಅವರಿಂದ ಬಂತು. ಅವರ ಮಾತಿನ ಮೇಲೆ ನಂಬಿಕೆಯಿಟ್ಟು ಬೆಂಗಳೂರಿಗೆ ಬಂದೆ.

ನಾನು ದೇವನಹಳ್ಳಿಯಿಂದ ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ಈ ಊರು ನನಗೆ ವನದೇವತೆಯ ಪ್ರೀತಿಯ ಮಗಳಂತೆ ಕಂಡಿತ್ತು. ಎಲ್ಲಿ ನೋಡಿದರೂ ಹಸಿರು ನಗುತ್ತಿತ್ತು. ತಂಗಾಳಿ ಬೀಸುತ್ತಿತ್ತು. ಚಳಿಗಾಲದಲ್ಲಿ ಮನೆಯೊಳಗಿದ್ದರೂ ಥರಥರ ನಡುಗುವಂತಹ ವಾತಾವರಣ. ಬಿಸಿಲು ಕಾಯಿಸಿಕೊಳ್ಳಲು ಕಬ್ಬನ್ ಉದ್ಯಾನಕ್ಕೆ ಬಂದು ಕುಳಿತುಕೊಳ್ಳುತ್ತಿದ್ದ ನೆನಪು ಈಗಲೂ ಹಸಿರಾಗಿದೆ. ಇಂತಿಪ್ಪ ಊರಿನಲ್ಲಿ ನನಗೆ ತುಂಬ ಅಚ್ಚುಮೆಚ್ಚಾಗುವ ಸ್ಥಳವೆಂದರೆ ವಿಶ್ವೇಶ್ವರಯ್ಯ ಮ್ಯೂಸಿಯಂ. ಕಣ್ಣತುಂಬ ಕನಸುಗಳನ್ನು ಹೊತ್ತುಕೊಂಡು ಬಂದ ಒಬ್ಬ ಸಾಮಾನ್ಯ ಹುಡುಗನನ್ನು ಬೆಂಗಳೂರು ಪೊರೆದಂತೆ; ನನ್ನ ಅಷ್ಟೂ ಕನಸುಗಳನ್ನು, ಆಸೆಗಳನ್ನು ಈಡೇರಿಸಿದ್ದು ಮ್ಯೂಸಿಯಂ.

ಬದುಕು ಅರಸಿಕೊಂಡು ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ಕಲಾಮಂದಿರದಲ್ಲೇ ಇದ್ದುಕೊಂಡು ಕಲಾಭ್ಯಾಸದ ಜೊತೆಗೆ ಹಲವು ಕೆಲಸಗಳನ್ನು ಮಾಡಿದೆ. ಕಲಾ ವಿಷಯದಲ್ಲಿ ಮೊದಲು ಹೈಯರ್ ಗ್ರೇಡ್ ಮಾಡಿದೆ. ಆಮೇಲೆ ಕಲಾ ಪ್ರಥಮ, ಮಧ್ಯಮ ಪಾಸು ಮಾಡಿಕೊಂಡೆ. ಅದೇ ವೇಳೆ ಬಟ್ಟೆ ಡಿಸೈನ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದೆ. ಆ ಕೆಲಸ ನನಗೆ ಒಗ್ಗಿಬರದ ಕಾರಣ ಬಿಟ್ಟುಬಿಟ್ಟೆ.

ಆಮೇಲೆ ವಾಯುಸೇನೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಸ್ನೇಹಿತ ಜನಾರ್ದನ ರಾವ್ ಅವರ ಶಿಫಾರಸ್ಸಿನ ಮೇರೆಗೆ ವಿಶ್ವೇಶ್ವರಯ್ಯ ಮ್ಯೂಸಿಯಂನಲ್ಲಿ ದಿನಗೂಲಿ ನೌಕರನಾಗಿ ಕೆಲಸಕ್ಕೆ ಸೇರಿಕೊಂಡೆ. ನನ್ನ ದಿನದ ಸಂಬಳ ಎರಡೂವರೆ ರೂಪಾಯಿ. ಆಗ ನನ್ನ ಮನಸ್ಸಿನಲ್ಲಿ ಇದ್ದುದು ಕಲಿಯುವ ಉದ್ದೇಶವೊಂದೇ. ಅ.ನ.ಸುಬ್ಬರಾಯರು ಸೇರಿದಂತೆ ನನ್ನ ಹಿತೈಷಿಗಳ ಮಾತನ್ನು ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಪಾಲಿಸುತ್ತಿದ್ದೆ. ಮ್ಯೂಸಿಯಂನಲ್ಲಿ ಕೆಲಸ ಮಾಡಿಕೊಂಡೇ ನನ್ನ ಕಲೆಯನ್ನೂ ಬೆಳೆಸುತ್ತಾ ಬಂದೆ. 1972ರಲ್ಲಿ ಡಿಪ್ಲೊಮಾ ಮುಗಿಸಿಕೊಂಡ ನಂತರ ನನ್ನ ಉದ್ಯೋಗ ಕಾಯಂ ಆಯ್ತು. ಅದು ನನ್ನ ಬದುಕಿನ ಮತ್ತೊಂದು ಕವಲು.

ಉದ್ಯೋಗ ಕಾಯಂ ಆದ ಸಂದರ್ಭದಲ್ಲಿ ನಾನು ಹನುಮಂತನಗರದಲ್ಲಿ ವಾಸವಿದ್ದೆ. ಅಲ್ಲಿಂದ ಕಸ್ತೂರಬಾ ರಸ್ತೆಗೆ ಹತ್ತು ನಿಮಿಷದಲ್ಲಿ ತಲುಪಿಕೊಳ್ಳುತ್ತಿದ್ದೆ. ಈಗಿನಂತೆ ಆಗ ಜನಜಂಗುಳಿಯಾಗಲೀ ಮಾಲಿನ್ಯವಾಗಲೀ ಇರಲಿಲ್ಲ. ಕಸ್ತೂರಬಾ ರಸ್ತೆಯಲ್ಲಿ ಜನಸಂಚಾರವೇ ತುಂಬ ಕಡಿಮೆ ಇತ್ತು. ಸ್ವಚ್ಛ ಸುಂದರ ವಾತಾವರಣವಿತ್ತು. ಮ್ಯೂಸಿಯಂ ಪಕ್ಕದಲ್ಲೇ ವೆಂಕಟಪ್ಪ ಆರ್ಟ್ ಗ್ಯಾಲರಿ ಇತ್ತು. ಸುತ್ತಲಿನ ವಾತಾವರಣವೆಲ್ಲ ನನ್ನ ಕಲಿಕೆಯನ್ನು ಪ್ರೇರೇಪಿಸಲೇ ಸೃಷ್ಟಿಯಾಗಿದೆಯೇನೋ ಎಂಬಂತೆ ಇತ್ತು.

1979, 80 ಮತ್ತು 81ನೇ ವರ್ಷವನ್ನು ಕಲಾ ವಲಯದ ಚೇತನ ಸಮಯ ಎಂದು ಬಣ್ಣಿಸಬಹುದು. ಈ ಮೂರು ವರ್ಷ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾಗಿ ಹೆಬ್ಬಾರ್ ಇದ್ದರು. ಯುವ ಕಲಾವಿದರನ್ನು ಹುರಿದುಂಬಿಸಲು ಅವರು ತಮ್ಮ ಅಧಿಕಾರಾವಧಿಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು. ಕಸ್ತೂರಬಾ ರಸ್ತೆಯ ಕೊನೆಯಲ್ಲಿದ್ದ ಸಿರಾಜ್ ಹೋಟೆಲ್ನಲ್ಲಿ ಅವರು ಅಖಿಲ ಭಾರತ ಮಟ್ಟದ ಕಲಾವಿದರ ಕ್ಯಾಂಪ್ ಆಯೋಜಿಸಿ, ದೇಶದ ಎಲ್ಲ ಪ್ರಖ್ಯಾತ ಕಲಾವಿದರೂ ಒಂದೆಡೆ ಸೇರುವಂತೆ ಮಾಡಿದರು.

ಅದುವರೆಗೂ ಆ ಬಗೆಯ ಪ್ರಯತ್ನಗಳು ನಡೆದಿರಲಿಲ್ಲ. ಹಾಗೆಯೇ, ಪ್ರತಿಭಾವಂತ ಯುವ ಕಲಾವಿದರನ್ನು ಬರೋಡ, ಶಾಂತಿನಿಕೇತನಕ್ಕೆ ಕಳುಹಿಸಿ ಅವರು ಕಲಾವಲಯದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯುವಂತೆ ಪ್ರೋತ್ಸಾಹಿಸಿದರು. ಹೆಬ್ಬಾರ್ ಅವರ ದೊಡ್ಡ ಗುಣದಿಂದಾಗಿಯೇ ಅನೇಕ ಕಲಾವಿದರು ರೂಪುಗೊಂಡರು. ಯುವ ಕಲಾವಿದರೂ ರಾಷ್ಟ್ರಮಟ್ಟದ ಪ್ರದರ್ಶನಗಳಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು.

ಮ್ಯೂಸಿಯಂನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನಗೆ ಹಲವು ರೀತಿಯಲ್ಲಿ ಅನುಕೂಲ ಆಯಿತು. ಇಲ್ಲಿದ್ದುಕೊಂಡೇ ಫೈಬರ್ ಗ್ಲಾಸ್, ಸೆರಾಮಿಕ್ಸ್ ಮ್ಯೂರಲ್ಸ್, ಟೆರಾಕೋಟಾ ಮ್ಯೂರಲ್ಸ್ ಬಗ್ಗೆ ಕಲಿಯುವ ಅವಕಾಶ ಸಿಕ್ಕಿತು. ಅಂದಾನಿ, ಶಂಕರ್ ಪಾಟೀಲ್, ಹಿರೇಗೌಡರ್ ಅವರಂತಹ ದೊಡ್ಡ ದೊಡ್ಡ ಕಲಾವಿದರ ಒಡನಾಟ ಲಭಿಸಿತು. ಕಲೆಯ ಸಲುವಾಗಿ ಆಗಾಗ್ಗೆ ಬೇರೆ ಬೇರೆ ಊರುಗಳಿಗೆ ಪ್ರವಾಸ ಮಾಡುವ ಅವಕಾಶ ಸಿಗುತ್ತಿತ್ತು. ಈ ಎಲ್ಲ ಅವಕಾಶಗಳೂ ನನ್ನ ಕಲೆಯನ್ನು ಬೆಳೆಸುತ್ತಾ ಹೋದವು.

ಬೆಂಗಳೂರು ನನಗೆ ಬದುಕು ಕೊಟ್ಟ ಹಾಗೆ ಒಳ್ಳೆಯ ಗೆಳೆಯರನ್ನೂ ಕೊಟ್ಟಿದೆ. ಉಡುಪ, ಕೃಷ್ಣಪ್ಪ, ಮನು ಪಾಟೀಲ್ ಅವರಂತಹ ಅದ್ಭುತ ವ್ಯಕ್ತಿಗಳ ಗೆಳೆತನವನ್ನು ಒದಗಿಸಿಕೊಟ್ಟಿದೆ. ಉಡುಪ ಅವರು ತುಂಬ ಶಿಸ್ತಿನ ಮನುಷ್ಯ. ಹಾಗೆಯೇ ತುಂಬ ಚೆಂದವಾಗಿ ಲ್ಯಾಂಡ್ಸ್ಕೇಪ್ ರಚಿಸುತ್ತಿದ್ದರು. ಆರಂಭದ ದಿನಗಳಲ್ಲಿ ನಾನು ಊಟಕ್ಕೂ ಒದ್ದಾಡುತ್ತಿದ್ದೆ. ಅಂತಹ ಸಂದರ್ಭದಲ್ಲಿ ಗೆಳೆಯ ಕೃಷ್ಣಪ್ಪ ಅವರ ತಾಯಿ ಕೈತುತ್ತು ನೀಡಿದರು.

ಜಾಹೀರಾತು ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಕುಲಕರ್ಣಿ ಅವರಿಂದ ನನಗೆ ಅನೇಕ ದೊಡ್ಡ ವ್ಯಕ್ತಿಗಳ ಸಂಪರ್ಕ ಸಿಕ್ಕಿತು. ಪ್ರೆಸ್ ಇಟ್ಟುಕೊಂಡಿದ್ದ ಮನು ಪಾಟೀಲ್, ಟಾಟಾ ಇನ್ಸ್ಟಿಟ್ಯೂಟ್ನ ಮೃತ್ಯುಂಜಯ ಅವರ ಜೊತೆಗಿನ ಬಾಂಧವ್ಯ ಇನ್ನೂ ಗಟ್ಟಿಯಾಗಿದೆ. ವಿದ್ಯಾರ್ಥಿ ಭವನಕ್ಕೆ ಹೋದಾಗೆಲ್ಲ ದೋಸೆ ನೀಡುತ್ತಿದ್ದ ಸು.ವಿ.ಮೂರ್ತಿ ಅವರನ್ನು ಮರೆಯಲು ಸಾಧ್ಯವೇ ಇಲ್ಲ. ನನ್ನ ಶಿಲ್ಪಕಲಾಭ್ಯಾಸ ರಂಗಭೂಮಿಯೊಂದಿಗೂ ನಂಟು ಬೆಸೆಯಿತು. ನಾಟಕಕ್ಕೆ ಬೇಕಿದ್ದ ಸ್ಟೇಜ್ ಮಾಡೆಲ್, ಮುಖವಾಡಗಳು ಮೊದಲಾದವುಗಳನ್ನು ಮಾಡಿಕೊಟ್ಟಿದ್ದೇನೆ. 11–12 ವರ್ಷಗಳ ರಂಗಭೂಮಿ ಒಡನಾಟ ನನಗೆ ಪ್ರಸನ್ನ, ಸಿ.ಆರ್.ಸಿಂಹ, ನಾಗೇಶ್ ಅವರಂತಹ ಸಹೃದಯಿ ಗೆಳೆಯರನ್ನು ಕೊಟ್ಟಿದೆ.

ಇಲ್ಲಿ ಸಿಕ್ಕ ಅನೇಕ ಗೆಳೆಯರು ಇಂದಿಗೂ ನನ್ನ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಆಗಾಗ ನಾವೆಲ್ಲರೂ ಒಂದು ಕಡೆ ಸೇರುತ್ತಿರುತ್ತೇವೆ. ಕಲೆಯ ಜೊತೆಗೆ ನನಗೆ ಸಂಗೀತದ ಮೇಲೂ ಆಸಕ್ತಿ ಇತ್ತು. ಅದೇ ಹುಮ್ಮಸ್ಸಿನಲ್ಲಿ ಶೇಷಾದ್ರಿ ಗವಾಯಿ ಅವರ ಬಳಿ ತಬಲಾ ಕಲಿಯಲು ಹೋಗುತ್ತಿದ್ದೆ. ಆದರೆ, ಸಮಯ ಹೊಂದಾಣಿಕೆ ಆಗದ ಕಾರಣ ಹೆಚ್ಚು ಕಲಿಯಲು ಸಾಧ್ಯವಾಗಲಿಲ್ಲ.

1999ರಲ್ಲಿ ವೈಯಕ್ತಿಕ ಕಾರಣಗಳಿಂದಾಗಿ ನಾನು ಕೆಲಸದಿಂದ ಸ್ವಯಂ ನಿವೃತ್ತಿ ಪಡೆದು, ಫ್ರೀಲಾನ್ಸರ್ ಆಗಿ ಹೊಸ ಬದುಕು ಪ್ರಾರಂಭಿಸಿದೆ. ಅದು ನನಗೆ ಮತ್ತೊಂದು ರೀತಿಯಲ್ಲಿ ವರವಾಗಿ ಪರಿಣಮಿಸಿತು. ಉದ್ಯೋಗ ಬಿಟ್ಟ ನಂತರ ಮತ್ತಷ್ಟು ಸ್ವತಂತ್ರವಾಗಿ ಕೆಲಸ ಮಾಡತೊಡಗಿದೆ. ಹಲವು ಪ್ರದರ್ಶನಗಳಲ್ಲಿ ಪಾಲ್ಗೊಂಡೆ. ಹಲವಾರು ಗಣ್ಯರ ಪೋಟ್ರೇಟ್ಗಳನ್ನು ಮಾಡಿದೆ. ಆದರೆ, ಮ್ಯೂಸಿಯಂನಲ್ಲಿ ಕೆಲಸ ಮಾಡುವ ಅವಕಾಶ ಪಡೆದ ನಾನು ಅಲ್ಲಿ ಪಡೆದುಕೊಂಡ ಉತ್ತಮ ಅನುಭವಗಳ ಸಂಖ್ಯೆ ಅಗಣಿತ. ಒಳ್ಳೆ ಗೆಳೆಯರು, ಹಲವಾರು ಪ್ರಶಸ್ತಿ ಸಮ್ಮಾನಗಳು ಇವೆಲ್ಲ ಲಭಿಸಿದ್ದು ಮ್ಯೂಸಿಯಂನ ಸ್ಥಳ ಮಹಿಮೆಯಿಂದ. ಹಾಗಾಗಿ, ಈ ಜಾಗದ ಮೇಲೆ ನನಗೆ ವಿಶೇಷ ಪ್ರೀತಿ, ಅಭಿಮಾನ.

ಒಟ್ಟಾರೆಯಾಗಿ, ಒಬ್ಬಂಟಿಯಾಗಿ ಬೆಂಗಳೂರಿಗೆ ಬಂದ ನನ್ನ ಜೀವನವನ್ನು ಈ ಊರು ಸುಂದರ ಶಿಲ್ಪದಂತೆ ಕಡೆಯಿತು. ನನ್ನ ಬಯಕೆ ತೋಟದ ಕನಸು, ಕನವರಿಕೆಗಳನ್ನೆಲ್ಲಾ ಈಡೇರಿಸಿತು. ಆಗಿನ ಜನರಲ್ಲಿ ಪ್ರಾಮಾಣಿಕತೆ, ಶ್ರದ್ಧೆ ಇತ್ತು. ಹಿರಿಯರನ್ನು ಗೌರವಿಸುತ್ತಿದ್ದರು. ಕಾಸಿಗಾಗಿ ಅವರು ಎಂದೂ ಕೆಲಸ ಮಾಡುತ್ತಿರಲಿಲ್ಲ. ಕಡಿಮೆ ಸಂಬಳ ಬಂದರೂ ನೆಮ್ಮದಿಯಿಂದ ಬದುಕುತ್ತಿದ್ದರು. ಈಗ ಕಾಲ ಬದಲಾಗಿದೆ. ಆ ಬದಲಾವಣೆಗೆ ಬೆಂಗಳೂರೂ ತೆರೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.