ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಗಾದಿ ಪರ್ವದಲ್ಲಿ ‘ಪಂಚಾಂಗ ಶ್ರವಣ’

Last Updated 27 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಸಂಗೀತ ಪಿತಾಮಹ ಪುರಂದರದಾಸರು ‘ಧರ್ಮಾ ಶ್ರವಣ ವೇತಕೆ..’ ಎಂಬ ಹಾಡನ್ನು ‘ದುರ್ಗಾ’ ರಾಗದಲ್ಲಿ ಸಂಯೋಜಿಸಿ ಧರ್ಮದ ಬಗ್ಗೆ ಉತ್ತಮ ಸಂದೇಶವನ್ನು ಜನರಿಗೆ ತಲುಪಿಸಿದ್ದಾರೆ. ಮೇಳಕರ್ತ ರಾಗ ‘ಖರಹರಪ್ರಿಯ’ದಲ್ಲಿ ಜನ್ಯರಾಗವಾದ ‘ದುರ್ಗಾ’ ರಾಗದಲ್ಲಿ ಈ ಕೃತಿಯನ್ನು ಕೇಳುವುದೇ ಶ್ರವಣಾನಂದಕರ.

ಇದು ಧರ್ಮ, ನಂಬಿಕೆ, ಆಚರಣೆಗಳ ಮೇಲಿರುವ ರಚನೆಯಾಗಿದ್ದು, ಹೊಸ ಸಂವತ್ಸರದ ಹೊಸ್ತಿಲಲ್ಲಿ ನಿಂತಿರುವ ನಮಗೆ ನಿಜಕ್ಕೂ ದಾರಿದೀಪದಂತಿದೆ. ಆ ಮೂಲಕ ಧಾರ್ಮಿಕ ಶ್ರದ್ಧೆ, ಸಾಂಪ್ರದಾಯಿಕತೆಯ ಚೆಲುವು ಅದ್ಭುತ ಸಂದೇಶ, ಸಾಮಾಜಿಕ ಕಳಕಳಿಯ ಆಶಯ ಇಂದಿಗೂ ಜೀವಂತವಾಗಿದೆ. 

ಚೈತ್ರ ಮಾಸದ ಮೊದಲ ದಿನ ಬರುವ ಯುಗಾದಿ ಹಬ್ಬ ಧಾರ್ಮಿಕ, ಸಾಂಸ್ಕೃತಿಕ, ಸಾಂಪ್ರದಾಯಿಕತೆಗಳ ಸಮಾಗಮ. ಹೀಗಾಗಿ ದಾಸರ ಪದಕ್ಕೂ ಧರ್ಮ ಶ್ರವಣಕ್ಕೂ ತಾಳೆಯಾಗುವಂತಿದೆ.

ಹತ್ತಾರು ಧರ್ಮ, ಸಂಸ್ಕೃತಿ, ಪ್ರಾದೇಶಿಕತೆಗಳ ವೈವಿಧ್ಯವನ್ನು ತುಂಬಿಕೊಂಡಿರುವ ನಮ್ಮಲ್ಲಿ ಸಂಸ್ಕೃತಿಯ ಜತೆಗೆ ಧಾರ್ಮಿಕ ನಂಬಿಕೆ ಇಂದಿಗೂ ಉಳಿದುಕೊಂಡಿದೆ. ಧರ್ಮ ಗ್ರಂಥಗಳ ಪಾರಾಯಣ, ಪಂಚಾಂಗ ಶ್ರವಣ ಸಂಸ್ಕೃತಿಯ ಒಂದು ಭಾಗ. ತಲೆತಲಾಂತರಗಳಿಂದಲೂ ಹಬ್ಬದ ದಿನ ಪಂಚಾಂಗ ಶ್ರವಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು.

ಹೇವಿಳಂಬಿ ಸಂವತ್ಸರಕ್ಕೆ ನಾಂದಿ ಹಾಡುವ ಈ ಯುಗಾದಿ ಮತ್ತೆ ಸಿಹಿ ಕಹಿಗಳ ಸಮಾಗಮದೊಂದಿಗೆ ಬಂದಿದೆ. ಬದುಕೆಂಬುದು ಬೇವು ಬೆಲ್ಲದ ಸಮ್ಮಿಶ್ರಣ, ಇದು ಹಸನಾಗಬೇಕಾದರೆ ಭವಿಷ್ಯತ್ತಿನ ರೂಪುರೇಷೆಗಳ ಅರಿವು ನಮಗಿರಬೇಕು ಎಂಬುದು ತಜ್ಞರ ಅಭಿಮತ.

ಹಳೆ ಮೈಸೂರು ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಯುಗಾದಿ ಹಬ್ಬದ ದಿನ ‘ಪಂಚಾಂಗ ಶ್ರವಣ’ ಮಾಡುತ್ತಾರೆ. ಆಲದ ಕಟ್ಟೆಯ ಮೇಲೆಯೋ, ಸಭಾಂಗಣಗಳಲ್ಲೋ ಈ ಶ್ರವಣ ಕಾರ್ಯಕ್ರಮ ನಡೆಯುತ್ತದೆ. ಸಂಜೆಯ ತಂಗಾಳಿಗೆ ತಿಥಿ, ನಕ್ಷತ್ರ, ಸೂರ್ಯನ ಚಲನೆ, ಚಂದ್ರನ ಸ್ಥಾನ, ವಿವಿಧ ರಾಶಿ, ಗ್ರಹಗಳ ಸ್ಥಿತಿಗತಿ ಮುಂತಾದ ವಿಷಯಗಳ ಜತೆಗೆ ಧರ್ಮದ ಬಗೆಗಿನ, ಭಗವದ್ಗೀತೆಯ, ಪುರಾಣಗಳ ಸಾರವನ್ನು ತಿಳಿಸುವ ಅದ್ಭುತ ಕಾರ್ಯಕ್ರಮವೇ ಈ ಪಂಚಾಂಗ ಶ್ರವಣ.

ಸಾಂಪ್ರದಾಯಿಕ ನೆಲೆಗಟ್ಟು
ಧಾರ್ಮಿಕ ಬೆಡಗು, ಸಾಂಸ್ಕೃತಿಕ ಸೊಗಡಿನೊಂದಿಗೆ ನಾಂದಿ ಹಾಡುವ ಸಮಯದಲ್ಲಿ ಶ್ರವಣಾನಂದಕರವಾದ ಸಂಗೀತ, ಪುರಾಣ, ಉಪನಿಷತ್ತುಗಳ ಅರ್ಥಸಹಿತ ವ್ಯಾಖ್ಯಾನ ಕೂಡ ಸುಂದರ ಬದುಕಿಗೆ ಬೇಕು. ಧಾರ್ಮಿಕತೆ ಮತ್ತು ಸಂಸ್ಕೃತಿಯ ಸಂಗಮ ಪಂಚಾಂಗ ಶ್ರವಣದಿಂದ ಜನರನ್ನು ತಲುಪಬೇಕಾಗಿದೆ. ಇದಕ್ಕಾಗಿಯೇ ಯುಗಾದಿ ಹಬ್ಬದಂದು ಬೆಳಗ್ಗಿನಿಂದಲೇ ಸಂಭ್ರಮ.

ಮಾವಿನ–ಬೇವಿನ ಸಮಾಗಮದ ನಂತರ ಪುಷ್ಕಳ ಭೋಜನ. ಸಂಜೆಯ ಹೊತ್ತು ಜೋಕಾಲಿ ಜೀಕುವುದು, ಹಾಡುವುದು.. ಎಲ್ಲ ಆದ ಮೇಲೆ ಆಚಾರ್ಯರಿಂದ ಹೊಸ ವರ್ಷದ ಬಗ್ಗೆ ಮಾಹಿತಿ ನೀಡುವ ಪಂಚಾಂಗ ಶ್ರವಣ.. ಎಲ್ಲವೂ ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿ ನಡೆಯುತ್ತದೆ.

‘ಪಂಚಾಂಗ ಶ್ರವಣದಲ್ಲಿ ಭವಿಷ್ಯದ ವಿಚಾರವನ್ನು ರಾಶಿ ಫಲದ ಆಧಾರದಲ್ಲಿ ಯೋಗ, ಕರಣ, ವಾರ, ತಿಥಿಯನ್ನು ಆಧರಿಸಿ ಪಂಚಾಂಗವನ್ನು ಅಧ್ಯಯನ ಮಾಡುವ ಮೂಲಕ ಕೇಳುಗರಿಗೆ, ಜನರಿಗೆ ಆಚಾರ್ಯರು, ಪುರೋಹಿತರು ಮಾಹಿತಿ ನೀಡುತ್ತಾರೆ.

ಹೊಸ ವರ್ಷದ ಮಳೆ, ಬೆಳೆ ವಿಚಾರ, ಜನರ ಬದುಕಿನ ವಿಚಾರ, ಊರಿಗೆ ಒಳ್ಳೆಯದಾಗುತ್ತೋ ಕೆಟ್ಟದಾಗುತ್ತೋ ಎಂಬ ವಿಚಾರ ಮುಂತಾದವು ಶುಭ ನುಡಿಗಳೊಂದಿಗೆ ಮಿಳಿತಗೊಳ್ಳುತ್ತವೆ ಅಲ್ಲದೆ ಅದು ಭವಿಷ್ಯದಲ್ಲಿ ಹೊಸ ಭರವಸೆಗೆ, ಆಶಾದಾಯಕ ಬದುಕಿಗೆ ನಾಂದಿ ಹಾಡುತ್ತದೆ’ ಎಂದು ಹೇಳುತ್ತಾರೆ ಕರ್ನಾಟಕ ಶಾಸ್ತ್ರೀಯ ಸಂಗೀತದ ಹಿರಿಯ ಗಾಯಕರಾದ ವಿದ್ವಾನ್‌ ಎಸ್‌. ಶಂಕರ್‌.

‘ಗುರುವಿನ ಆರಾಧನೆ, ಹರಕೆ, ಆಚರಣೆ, ಸಂಪ್ರದಾಯಗಳ ಸಂಯೋಜನೆ, ಕಲಾವಂತಿಕೆ, ಬದುಕು–ಭವಿಷ್ಯಗಳ ತಿಳಿವಳಿಕೆಯ ಆಗರ ಈ ಪಂಚಾಂಗ ಶ್ರವಣದಲ್ಲಿರುತ್ತದೆ. ಅಂದಿನಿಂದ ಆರಂಭವಾಗುವ ನೂತನ ಸಂವತ್ಸರದ ಒಳಿತು ಕೆಡುಕುಗಳ ಬಗೆಗಿನ ಭವಿಷ್ಯವನ್ನು ವಿಶೇಷ ರೀತಿಯಲ್ಲಿ ಪಂಚಾಂಗದ ಆಧಾರವಾಗಿಟ್ಟುಕೊಂಡು ಜನರಿಗೆ ತಜ್ಞರು ಮಾಹಿತಿ ನೀಡುವರು’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT