ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌದೆ ಒಲೆ ಪಿಜ್ಜಾ

Last Updated 11 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಬೆಳಗೆ ಏಳುವುದರಿಂದ ಶುರುವಾಗಿ ರಾತ್ರಿ ಮಲಗುವವರೆಗೂ ಬೆಂಗಳೂರಿಗರದ್ದು ತರಾತುರಿಯ ಬದುಕು. ಜೊತೆ ಜೊತೆಗೆ ಜನರ ಆಯ್ಕೆ ಅಭಿರುಚಿಗಳೂ ಬದಲಾಗುತ್ತಿದೆ. ಇದರಿಂದ ಆಹಾರ ಪದ್ಧತಿಯೂ ಹೊರತಾಗಿಲ್ಲ. ಕೆಲಸದ ಒತ್ತಡ, ಬಿಡುವಿನ ಕೊರತೆಯಿಂದಾಗಿ ಜನರು ಪಿಜ್ಜಾ, ಕೆಫೆ, ರೆಸ್ಟೋರೆಂಟ್‌ಗಳ ಮೊರೆ ಹೋಗುತ್ತಿದ್ದಾರೆ. ಅದಕ್ಕೆ ತಕ್ಕಂತೆ ಗಲ್ಲಿಗೊಂದು ರೆಸ್ಟೋರೆಂಟ್‌ಗಳೂ ತಲೆ ಎತ್ತುತ್ತಿವೆ. ನಗರದ ಪಡ್ಡೆ ಹುಡುಗರಿಗಂತೂ ಇವು ಕಾಲಕಳೆಯುವ ‘ಅಡ್ಡೆ’.

ಆಹಾರ ಪದಾರ್ಥದೆಡೆಗಿನ ಅಭಿರುಚಿ ಬದಲಾದರೂ ಅದರಲ್ಲಿ ಸಾಂಪ್ರದಾಯಿಕ ಅಡುಗೆಯ ರುಚಿ ಬೇಕು ಎಂಬ ಹಂಬಲ ಜನರಲ್ಲಿ ಇದ್ದೇ ಇದೆ. ಅದಕ್ಕೆಂದೇ ಜಯನಗರ 4ನೇ ಬ್ಲಾಕ್‌ನ ವಿಜಯಾ ಪದವಿ ಪೂರ್ವ ಕಾಲೇಜಿನ ಮುಂಭಾಗದಲ್ಲಿರುವ ‘ಕೆಫೆ ಪಾಸ್ಕುಚ್ಚಿ’ ಹಳೆಯ ಕಾಲದ ಅಡುಗೆಯ ರುಚಿ ಮತ್ತು ಸುವಾಸನೆಯನ್ನು ನೆನಪಿಸುವ ಸೌದೆ ಒಲೆಯಲ್ಲಿ ತಯಾರಿಸುವ ಹೊಸ ಬಗೆಯ ಪಿಜ್ಜಾವನ್ನು ಪರಿಚಯಿಸಿದೆ.

ಇತರೆ ಪಿಜ್ಜಾಗಳಿಗಿಂತ ತೆಳುವಾಗಿರುವ ಈ ಪಿಜ್ಜಾವನ್ನು ಸ್ಥಳದಲ್ಲಿಯೇ ಸೌದೆ ಒಲೆಯಲ್ಲಿ ಬೇಯಿಸಿ ತಯಾರಿಸಲಾಗುತ್ತದೆ. ಎಲೆಕ್ಟ್ರಿಕ್ ಓವನ್‌ಗಳಲ್ಲಿ ಐದು ನಿಮಿಷಕ್ಕೆ ಪಿಜ್ಜಾ ತಯಾರಿಸಬಹುದು. ಇದರಲ್ಲಿ ಹತ್ತರಿಂದ ಹದಿನೈದು ನಿಮಿಷ ಬೇಕಾಗುತ್ತದೆ. ಆದರೆ ಕಟ್ಟಿಗೆ ಒಲೆಯಲ್ಲಿ ತಯಾರಿಸಿದ್ದರ ಸ್ವಾದ ಸಾಮಾನ್ಯ ಪಿಜ್ಜಾಕ್ಕಿಂತ ತುಂಬ ವಿಭಿನ್ನವಾಗಿರುತ್ತದೆ.

ಇಟಾಲಿಯನ್ ಆಹಾರ ತಿನಿಸುಗಳಿಗೆ ಹೆಸರುವಾಸಿಯಾದ ಕೆಫೆ ಪಾಸ್ಕುಚ್ಚಿ ಈ ಮಾದರಿಯ ಪಿಜ್ಜಾ ತಯಾರಿಕೆಗೆ ಇಟಲಿ ತಂತ್ರಜ್ಞಾನದಲ್ಲಿ ನಿರ್ಮಿಸಲಾದ ಒಲೆಯನ್ನು ಆಮದು ಮಾಡಿಕೊಂಡಿದೆ. ಪಿಜ್ಜಾಕ್ಕೆ ಬಳಸುವ ತರಕಾರಿಗಳನ್ನು ಹೊರತುಪಡಿಸಿ ಉಳಿದ ಪದಾರ್ಥಗಳು ಅಪ್ಪಟ ಇಟಲಿಯದ್ದು. ಒಲೆಗೆ ಬೇಕಾದ ಸೌದೆಯನ್ನು ನಗರದ ಕೆಲವು ಕಡೆಗಳಿಂದ ಮತ್ತು ಚಿಕ್ಕಮಗಳೂರಿನಿಂದ ತರಿಸಿಕೊಳ್ಳಲಾಗುತ್ತಿದೆ.

ಸದ್ಯಕ್ಕೆ ಜಯನಗರದಲ್ಲಿ ಈ ಬಗೆಯ ಪಿಜ್ಜಾ ತಯಾರಿಕೆ ಪ್ರಾರಂಭಿಸಿರುವ ಕೆಫೆ ಪಾಸ್ಕುಚ್ಚಿ ತನ್ನ ಎಂಜಿ ರಸ್ತೆ, ಇಂದಿರಾನಗರ, ಮಂತ್ರಿ ಮಾಲ್ ಶಾಖೆಗಳಲ್ಲಿಯೂ ಶೀಘ್ರದಲ್ಲಿಯೇ ಇದನ್ನು ಆರಂಭಿಸಲಿದೆ. ಬೇಸಿಗೆಯಲ್ಲಿ ತಂಪು ನೀಡುವ ವಿಶಿಷ್ಟ ಬಗೆಯ ‘ಕಾಫಿ ಸೋಡಾ’ ಹೆಸರಿನ ಪಾನೀಯವನ್ನೂ ಇಲ್ಲಿ ಪರಿಚಯಿಸಲಾಗಿದೆ. ಜೊತೆಗೆ ಐಸ್ ಕ್ರೀಂ ಮಾದರಿಯ ಕಾಫಿ  ಮತ್ತು ಚಾಕೊಲೇಟ್ ಫ್ಲೇವರ್‌ಗಳ ತಿನಿಸು ಸಹ ಇಲ್ಲಿನ ವಿಶೇಷ.

‘ಸೌದೆ ಒಲೆಯಲ್ಲಿ ಪಿಜ್ಜಾ ತಯಾರಿಸಲು ಹೆಚ್ಚು ಸಮಯ ಬೇಕಾಗುವುದರಿಂದ ಗ್ರಾಹಕರಿಗೆ ಸ್ವಲ್ಪ ಹೊತ್ತು ಕಾಯಬೇಕೆಂದು ಮೊದಲೇ ತಿಳಿಸುತ್ತೇವೆ. ತಯಾರಿಸುವ ವಿಧಾನವನ್ನೂ ಗ್ರಾಹಕರು ಪ್ರತ್ಯಕ್ಷವಾಗಿ ನೋಡಬಹುದು. ಇದರಿಂದ ನಾವು ಅನುಸರಿಸುವ ಸ್ವಚ್ಛತೆ ಬಗ್ಗೆ ಅವರಲ್ಲಿ ವಿಶ್ವಾಸ ಮೂಡುತ್ತದೆ’ ಎನ್ನುತ್ತಾರೆ ವ್ಯವಸ್ಥಾಪಕ ಶ್ರೀನಿವಾಸನ್. ಕೆಫೆ ಪಾಸ್ಕುಚ್ಚಿಯ ಕಾಯಂ ಗ್ರಾಹಕ ಕೌಶಿಕ್ ‘ಸೌದೆ ಒಲೆಯಲ್ಲಿ ಬೇಯಿಸಿದ ಪಿಜ್ಜಾ ಹಳ್ಳಿಯ ರೊಟ್ಟಿಯನ್ನು ನೆನಪಿಸುತ್ತದೆ. ಇದು ಆರೋಗ್ಯಕ್ಕೂ ಉತ್ತಮ. ವೈವಿಧ್ಯಮಯ ಕಾಫಿ ಬಗೆಗಳು, ಪಿಜ್ಜಾ ಮತ್ತಿತರ ತಿನಿಸುಗಳು ಇಲ್ಲಿ ಕಡಿಮೆ ಬೆಲೆಗೆ ದೊರಕುವುದರಿಂದ ಲಾಭದಾಯಕವೂ ಹೌದು’ ಎಂದು ಪ್ರಶಂಸೆ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT