ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಡಗೈ ಬಂಟರ’ ಪೀಕಲಾಟಗಳು...

Last Updated 16 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ನನ್ನ ಮದುವೆ ಊಟದ ಸಂದರ್ಭವದು. ನನ್ನ ತಮ್ಮ ಎಡಗೈನಲ್ಲಿ ಊಟ ಮಾಡುತ್ತಿರುವುದನ್ನು ಕಂಡ ಕೆಲವರು ಅವನನ್ನು ಪ್ರಶ್ನಿಸಿದರು. ಬಲಗೈಯಲ್ಲೇ ಊಟ ಮಾಡಬೇಕೆನ್ನುವುದು ಬಹುಜನರ ಒಪ್ಪಿತ ನಡೆ. ತಮ್ಮ ನನ್ನೆಡೆಗೆ ಕೈ ಮಾಡಿ, ‘ವಧುವಿನ ಆಜ್ಞೆಯಿದು’ ಎಂದು ಜಾಣ ಉತ್ತರ ಕೊಟ್ಟ. ನಾನು ಸಮ್ಮತಿ ಇದೆ ಎನ್ನುವುದು ತಲೆಯಾಡಿಸಿದೆ.

ಸಾಲುಗಟ್ಟಲೆ ಸಂಸ್ಕೃತ ಶ್ಲೋಕಗಳನ್ನು ಕೇಳಿ ಕೆಲವೇ ಘಳಿಗೆಗಳು ಕಳೆದಿದ್ದವು.  ಈಗ ನನ್ನ ತಮ್ಮನ ವಿಚಾರ ಕೇಳಿದವರಿಗೆ ಹೇಳಿದೆ: ‘‘ಸಂಸ್ಕೃತದ ವಿದ್ಯಾರ್ಥಿನಿಯಾಗಿ ನಾನು ಕಲಿತ ಮೊದಲ ಸುಭಾಷಿತದಲ್ಲಿ ‘ಅಂಜಲಿಸ್ಥಾನಿ ಪುಷ್ಪಾಣಿ ವಾಸಯಂತಿ ಕರದ್ವಯಂ. ಅಹೋ, ಸುಮನಸಾಂ ಪ್ರೀತಿಃ ವಾಮದಕ್ಷಿಣಯೋಃ ಸಮಾ’ ಎಂದಿತ್ತು.  ಬೊಗಸೆ ತುಂಬಾ ಹೂವುಗಳು ಎರಡೂ ಕೈಗಳಿಗೀಯುವ ಸಮಾನ ಕಂಪಿನ ಉದಾಹರಣೆಯೊಂದಿಗೆ ಎಡ, ಬಲ ಸಮ ಎನ್ನುವ ಸಂಗತಿಯನ್ನು ಆ ಶ್ಲೋಕ ಅಡಗಿಸಿಟ್ಟುಕೊಂಡಿತ್ತು.’

ಇಂತಹ ಸಮಾನತೆ ನಮ್ಮಲ್ಲಿ ನಿಜಕ್ಕೂ ಇದೆಯೇ? ನಮ್ಮಲ್ಲಿ ಎಡಗೈಯವರ ಬೇಡಿಕೆಗಳಿಗೆ ಕಿವಿಗೊಡುವ ಮನಸ್ಸು ತುಂಬಾ ಕಡಿಮೆ ಜನರಿಗಿದೆ. ಕೆಲವರು, ‘ರೈಟ್‌’ ಅಲ್ಲದ ಈ ಎಡಗೈಯನ್ನು ‘ರಾಂಗ್‌ ಹ್ಯಾಂಡ್‌’ ಎಂದೂ ತಮಾಷೆ ಮಾಡಿದ್ದಿದೆ.

‘ಎಡಗೈಯವರಲ್ಲಿ ಇರ್ಕ್ಕೈಪಟುತ್ವ ಅರ್ಥಾತ್‌ ambidexterity ಇರುತ್ತದೆ. ಎರಡೂ ಕೈಗಳನ್ನು ಸಮರ್ಥವಾಗಿ ಬಳಸುವ ಕೌಶಲ ಇದಲ್ಲವೇ?’ ಗೆಳತಿ ಕೇಳಿದಳು. ನನಗೇಕೋ ಅಲ್ಲವೆಂದೆನಿಸಿತು! ಎಡಚರ ಇರ್ಕ್ಕೈಪಟುತ್ವ ಕೇವಲ ಸಾಮಾಜಿಕ ಗುಣ ಎಂದುಕೊಂಡೆ. ಅವಕಾಶ ಕೊಟ್ಟರೆ ಅವರು ತಮ್ಮ ಬಹುತೇಕ ಎಲ್ಲಾ ಕೆಲಸಗಳನ್ನು ಎಡಗೈಯಿಂದಲೇ ಮಾಡುತ್ತಾರೆ. ಸಮಾಜ ಮಾತ್ರ ಅವರಿಗೆ ಆ ಅವಕಾಶಗಳನ್ನು ಕೊಡಲು ಒಪ್ಪುತ್ತಿಲ್ಲ. ಕೆಲವು ಉದಾಹರಣೆಗಳನ್ನು ಹೊರತುಪಡಿಸಿದರೆ, ಎಡಚರನ್ನು ತಮ್ಮ ಸಹಜ ಗುಣ ತ್ಯಜಿಸಿ ಬಲಗೈಯನ್ನೇ ಬಳಸಲು ಒತ್ತಾಯಿಸುವ, ಇಲ್ಲವೇ ಒಂದು ಹೆಜ್ಜೆ ಮುಂದುವರೆದು, ಬಲಗೈಯವರನ್ನಾಗಿಯೇ ಬದಲಿಸುವ ಪ್ರಸಂಗಗಳೇ ಹೆಚ್ಚಾಗಿವೆ.

‘ಎಡಗೈ ಬಳಕೆ ಸಲ್ಲದು. ಅದು ಸಂಸ್ಕಾರ ವಿಹೀನತೆಯ, ಅಶಿಸ್ತಿನ, ಜೊತೆಗೆ ಮಲಿನತೆಯ ಸಂಕೇತ. ದಿನವೂ ಮಾಡುವ ಊಟದಂತಹ ಕೆಲಸದಿಂದ ಹಿಡಿದು ದೇವರಿಗಿಡುವ ಆರತಿಯಂತಹ ಕಾರ್ಯದ ತನಕ ಎಡಗೈಗೆ ಎಲ್ಲೂ ಪ್ರವೇಶವಿಲ್ಲ. 83 ವರ್ಷ ವಯಸ್ಸಿನ ಅಜ್ಜಿ ನನಗೊಮ್ಮೆ ಅವರ ತಂದೆ ಮಗಳು ತಂದುಕೊಟ್ಟ ಚಾ ಕುಡಿಯಲು ನಿರಾಕರಿಸಿದ್ದನ್ನು ನೆನಪಿಸಿಕೊಂಡಿದ್ದರು.  ಅಜ್ಜಿ ಲೋಟವನ್ನು ಎಡಗೈಯಲ್ಲಿ ಹಿಡಿದು ತಂದಿದ್ದೇ ಅದಕ್ಕೆ ಕಾರಣ.

‘ನಮ್ಮಲ್ಲಿ ಎಡಗೈ ಇರುವುದು ಸ್ವಲ್ಪ ಹೀನ, ತಿರಸ್ಕಾರ ಯೋಗ್ಯ ಕೆಲಸಗಳಿಗೆ ಮಾತ್ರ. ಇಲ್ಲವೇ ಬಲಗೈಯನ್ನು ಬಳಸಲಾಗದ ಸಂದರ್ಭಗಳಲ್ಲಷ್ಟೇ. ಉದಾಹರಣೆಗೆ: ಊಟ ಮಾಡುವಾಗ ಎಂಜಲಾಗಿರುವ ಬಲಗೈಯಿಂದ ಬಡಿಸಿಕೊಳ್ಳುವಂತಿಲ್ಲ. ಅಂತಹ ಸಂದರ್ಭದಲ್ಲಿ ಎಡಗೈಗೆ ವಿಶೇಷ ಅವಕಾಶ’ ಎಂದು ಬಹಳಷ್ಟು ‘ಬಲಗೈ ಬಂಟರು’ ಅಭಿಪ್ರಾಯಪಡುತ್ತಾರೆ. ಮೊದಲ ಪಾಠಶಾಲೆಯಲ್ಲಿ ಕಲಿಯುವ ಇಂತಹ ಪಾಠಗಳನ್ನು ಮುಂದುವರೆಸಲು ಶಾಲೆಯ ಶಿಕ್ಷಕರು ಬಹಳಷ್ಟು ಬಾರಿ ಉತ್ಸುಕರಾಗೇ ಇರುತ್ತಾರೆ.

‘ನಾಲ್ಕು ವರ್ಷದ ನನ್ನ ಮಗನನ್ನು ಅವನ ಶಿಕ್ಷಕಿ ಎಡಗೈಗೆ ಬದಲು ಬಲಗೈಯನ್ನೇ ಬಳಸಲು ಒತ್ತಾಯಿಸಿದಾಗ ಮುಖ್ಯ ಶಿಕ್ಷಕಿ ತಡೆದರು. ಅವರಂತಹ ಶಿಕ್ಷಕರು ನಮ್ಮಲ್ಲಿ ಕಾಣಸಿಗುವುದು ಬಹಳ ಅಪರೂಪ’ ಎಂದು ನನ್ನ ತಂದೆ ಒಮ್ಮೆ ಹೇಳಿದ್ದರು. ಸಹಜವಾಗಿ ಎಡಗೈ ಬಳಸುವ ತಮ್ಮ ಮಗನನ್ನು ಬಲಗೈಯನ್ನೇ ಬಳಸಲು ಒತ್ತಾಯಿಸುವುದು ಅನ್ಯಾಯ ಎಂದು ಜನರಿಗೆ ಮನವರಿಕೆ ಮಾಡಿಕೊಡಲು ಅವರು ಬಹಳ ಕಷ್ಟಪಟ್ಟಿದ್ದಾರೆ.

ನನ್ನ ತಮ್ಮ ಈ ಸಮಸ್ಯೆಯ ಕುರಿತು ಹೇಳಿಕೊಂಡಿದ್ದು ಹೀಗೆ: ‘ಶಿಕ್ಷಕರು ಯಾವಾಗಲೂ ಪಾಠ ಮಾಡುವುದು ಬಲಗೈ ಬಳಸುವವರ ದೃಷ್ಟಿಕೋನವನ್ನು ಪರಿಗಣಿಸಿ. ಪ್ರಯೋಗಶಾಲೆಗಳಲ್ಲಿ, ಕಾರ್ಯಾಗಾರಗಳಲ್ಲಿ, ಚಮಚ ಹಿಡಿದು ಊಟ ಮಾಡುವುದು ಹೀಗೆ ಎಲ್ಲಾ ಪಾಠಗಳೂ ನಡೆಯುವುದು ಬಲಗೈಯವರಿಗೆ ಸರಿ ಹೊಂದುವಂತೆ. ನಾನು ಬಹಳ ವರ್ಷಗಳ ನಂತರ ಬಲಗೈ ಬಿಟ್ಟು ಎಡಗೈಯಿಂದ ಉಣ್ಣುವುದನ್ನು ಅಭ್ಯಸಿಸಿದೆ. ಆದರೆ, ಸಮಾರಂಭಗಳಿಗೆ ಹೋದರೆ ನಾನು ಬಹಳಷ್ಟು ಬಾರಿ ಬಲಗೈಯಿಂದಲೇ ಊಟ ಮಾಡಬೇಕಾಗುತ್ತದೆ.’

‘ಶಾಲೆಯಲ್ಲಿದ್ದಾಗ ನಾನು ಶಿಕ್ಷಕಿಯರನ್ನು ಬೆಂಚಿನಲ್ಲಿ ಸ್ವಲ್ಪ ತಿರುಗಿಕೊಂಡು ಬರೆಯಲು ಸುಲಭವಾಗುವಂತೆ ಮೂಲೆಯಲ್ಲಿ ಕುಳಿತುಕೊಳ್ಳಲು ಅನುಮತಿ ಕೇಳುತ್ತಿದ್ದೆ’ ಎಂದು ಎಡಚಳಾದ ಸ್ನೇಹಿತೆ ತನ್ನ ಕಷ್ಟ ಹೇಳಿಕೊಂಡಿದ್ದಳು.

ನಾನು ಹೋದ ಎಷ್ಟೊಂದು ಕಾರ್ಯಾಗಾರಗಳಲ್ಲಿ ನಮಗೆ ಕುಳಿತುಕೊಳ್ಳಲು ಕೊಟ್ಟ ಕುರ್ಚಿಗಳಿಗೆ ಬಲಗಡೆಯಲ್ಲಿ ಹಲಗೆಗಳನ್ನ ಅಳವಡಿಸಿದ್ದರು. ಎಡಗೈಯವರು ಇಂತಹ ಹಲಗೆಗಳನ್ನು ಬಳಸುವುದಾದರೂ ಹೇಗೆ? ಅಲ್ಲಿಗೆ ಬರುವವರಲ್ಲಿ ಒಬ್ಬರಾದರೂ ಎಡಗೈ ಬಳಸುವವರು ಇರಬಹುದು ಎಂದು ಆಯೋಜಕರು ಯೋಚಿಸುವುದೇ ಇಲ್ಲ.

ತಂತ್ರಗಳ ವಿಷಯದಲ್ಲೂ ಎಡಚರು ನತದೃಷ್ಟರು. ಅಡುಗೆಕೋಣೆಯಲ್ಲಿ ಬಳಸುವ ಮಿಕ್ಸಿಯ ಗುಂಡಿಗಳು ಬಲ ಬದಿಯಲ್ಲಿ ಇವೆ. ತರಕಾರಿಗಳನ್ನು ಸುಲಿಯುವ  ಯಂತ್ರಕ್ಕೆ ಒಂದೇ ಅಂಚಿದ್ದರೆ, ಅದು ಕೂಡ ಬಲಗೈ ಬಳಕೆದಾರರಿಗಷ್ಟೇ ಸ್ನೇಹಿ. ಎಡಗೈಯವರು ಇಂತಹ ಯಂತ್ರಗಳನ್ನು ತಮ್ಮ ಬಲಗೈಯಿಂದಲೇ ಬಳಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕಷ್ಟೆ!

ಸರ್ಕಾರಿ ಕಚೇರಿಗಳಿಗೆ ಬಹಳಷ್ಟು ಜನರು ತಮ್ಮ ಕೆಲಸಗಳಿಗಾಗಿ ಬರುವ ಹಿನ್ನೆಲೆಯಲ್ಲಿ ಅಲ್ಲಿನ ಪರಿಸ್ಥಿತಿಯ ಬಗೆಗೂ ಪ್ರಶ್ನೆಗಳು ಬರುತ್ತವೆ. ಉದಾಹರಣೆಗೆ, ಅಂಚೆ ಕಳುಹಿಸುವಾಗ, ಚೀಟಿಗಳನ್ನು ಕವರುಗಳ ಬಲತುದಿಗೆ ಅಂಟಿಸುವುದು ಕ್ರಮ. ಎಡಗೈ ಸಿಬ್ಬಂದಿಯೊಬ್ಬ ಒಂದರ ಅನಂತರ ಒಂದರಂತೆ ನೂರಾರು ಕವರುಗಳ ಮೇಲೆ ಅಂಚೆಯ ಮುದ್ರೆಯೊತ್ತಬೇಕಾದರೆ ಆತನಿಗೆ ಎಷ್ಟೆಲ್ಲಾ ಪೀಕಲಾಟ ಆಗಬೇಡ?

ಎಡಗೈಯವರಾದ ಸರ್ಕಾರಿ ಅಧಿಕಾರಿಯೊಬ್ಬರನ್ನು ಕಚೇರಿಗಳಲ್ಲಿ ಅವರ ವಿಷಯದಲ್ಲಿ ಇತರರು ನಡೆದುಕೊಳ್ಳುವ ರೀತಿಯ ಬಗೆಗೆ ಕೇಳಿದಾಗ ಅವರು ಹೀಗೆಂದರು: ‘ಇಷ್ಟು ವರ್ಷಗಳಲ್ಲಿ ಕೆಲಸದ ವಿಚಾರದಲ್ಲಂತೂ ನನಗೆಂದೂ ಬಲಗೈಯನ್ನೇ ಬಳಸಬೇಕೆಂದು ಯಾರೂ ಒತ್ತಾಯಿಸಿಲ್ಲ. ಸಹಜವಾಗಿಯೇ ಎಡಗೈಯಿಂದಲೇ ಹೆಚ್ಚಿನ ಕೆಲಸ ಮಾಡುತ್ತಿರುತ್ತೇನೆ. ಅಲ್ಲದೇ, ಎಡಗೈ ಬಳಸಿ ಕೆಲಸ ಮಾಡುವ ಬೇರೆ ಯಾರಿಗೂ ಅಡಚಣೆಗಳೇನೂ ಆಗಿಲ್ಲ’.

‘ಸಾಮಾಜಿಕವಾಗಿಯೂ ಎಡಗೈಯವರನ್ನು ಬಲಗೈಯವರನ್ನಾಗಿ ಪರಿವರ್ತಿಸುವ ಬದಲು, ಅವರ ಸಹಜ ರೀತಿಯನ್ನು ಸ್ವೀಕರಿಸುವ ಮನೋಭಾವ ಈಗ ಹೆಚ್ಚಿದೆ. ಬಹಳಷ್ಟು ಪ್ರಸಿದ್ಧ ಜನರು ತಮ್ಮ ಎಡಗೈಯನ್ನು ಯಾವುದೇ ಮುಜುಗರವಿಲ್ಲದೇ ಬಳಸುವುದನ್ನು ನೋಡಿ ಜನರು ಸುಲಭದಲ್ಲೇ ಅದನ್ನು ಸ್ವೀಕರಿಸುತ್ತಿದ್ದಾರೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ, ಎಡಚ ಎನ್ನುವುದಕ್ಕೆ ಆಕರ್ಷಕ ಸ್ವಭಾವ ಎಂಬ ಗರಿಮೆ ಕೂಡ ಸಂದಿದೆ ಎನ್ನಬಹುದು’ ಎಂದು ಅಧಿಕಾರಿ ಹೇಳಿದರು.

‘ತುಂಬು ಕುಟುಂಬಗಳಲ್ಲಿ ಹಿರಿಯರು ಚಿಕ್ಕವರನ್ನು ತಮ್ಮ ಎಡಗೈನ ವ್ಯಾಪಕ ಬಳಕೆಯನ್ನು ತ್ಯಜಿಸಲು, ಬದಲಿಸಿಕೊಳ್ಳಲು ಒತ್ತಾಯಿಸುತ್ತಾರೆ. ಆದರೆ, ತಂದೆ ತಾಯಿ ಇವತ್ತು ತಮ್ಮ ಮಕ್ಕಳನ್ನು ಸಹಜ ರೀತಿಯಿಂದಲೇ ಸ್ವೀಕರಿಸುತ್ತಾರೆ. ಬಲಗೈ, ಎಡಗೈ ಎಂದು ಭೇದ ಮಾಡುವವರು ಬಹಳ ಕಡಿಮೆ. ಕೌಟುಂಬಿಕ ಸಮಾರಂಭಗಳಲ್ಲಿ ಮಾತ್ರ ಎಡಗೈಯವರು ತಮ್ಮ ಬಲಗೈಯನ್ನು ಊಟಕ್ಕೆ ಬಳಸುವ ಅನಿವಾರ್ಯತೆ ಇದೆ; ತಮ್ಮ ತಂದೆ ತಾಯಿಯರೊಂದಿಗಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

ತಮ್ಮ ನಡುವೆ ಇರುವ ಎಡಚರನ್ನು ಅವರಿಗೆ ಮುಜುಗರವನ್ನಿಸದಂತೆ, ಅಗೌರವವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಬಹುಮತೀಯರಾದ ಬಲಗೈಯವರ ಮೇಲಿದೆ. ಆಪ್ತತೆಯ, ಪ್ರಬಲತೆಯ ಸಂಕೇತವಾಗಿ ‘ಬಲಗೈ ಬಂಟ’ ಎನ್ನುತ್ತಿರುವ ಸಾಮಾಜಿಕ ಭಾಷೆ, ಅಭ್ಯಾಸ ಎಡಗೈಯವರ ಸಹಜ ಬಲವನ್ನು ಗೌರವಿಸುವಂತೆ ಬದಲಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT