ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಕನಿ ಎಂಬ ಆಪ್ತ ಸ್ಥಳ...

Last Updated 22 ಜನವರಿ 2021, 19:30 IST
ಅಕ್ಷರ ಗಾತ್ರ

ಬಹುತೇಕರು ಬಾಲ್ಕನಿಯನ್ನು ಉಗ್ರಾಣದ ರೀತಿಯೋ, ಮಕ್ಕಳ ಸೈಕಲ್ ಇಡುವ, ಬಟ್ಟೆ ಒಣಗಿಸುವ ಇಲ್ಲವೇ ವಾಷಿಂಗ್ ಮಷೀನ್ ಇಡುವ ಸ್ಥಳವನ್ನಾಗಿಯೋ ಬಳಸುತ್ತಾರೆ. ಇದರ ಬದಲು ದಿನದ ದಣಿವು ದೂರ ಮಾಡುವ ಆಪ್ತ ಜಾಗವನ್ನಾಗಿಯೂ ಬಾಲ್ಕನಿಯನ್ನು ಬಳಸಬಹುದು.

ಮಹಾನಗರಗಳಿಗಷ್ಟೇ ಸೀಮಿತವಾಗಿದ್ದ ಅಪಾರ್ಟ್‌ಮೆಂಟ್ ಸಂಸ್ಕೃತಿ ಇದೀಗ ಸಣ್ಣ ನಗರಗಳಲ್ಲೂ ನಿಧಾನವಾಗಿ ತಲೆ ಎತ್ತುತ್ತಿದೆ. ಕಾಂಕ್ರೀಟ್ ಕಾಡಿನಲ್ಲಿ ದೊಡ್ಡ ಮನೆಗಳನ್ನು ಕಟ್ಟಿಕೊಂಡು ಪುಟ್ಟ ಹಿತ್ತಲು ಹೊಂದುವುದು ದುಬಾರಿಯೇ. ಅಪಾರ್ಟ್‌ಮೆಂಟ್‌ಗಳ ವೆಚ್ಚವೇ ದುಬಾರಿಯಾಗಿರುವಾಗ ಇನ್ನು ಹಸಿರಿನ ಹಿತ್ತಲು ದುಸ್ತರವೇ. ಹಿತ್ತಲಿನಷ್ಟು ಅಲ್ಲದಿದ್ದರೂ ಮುಂಜಾನೆ, ಸಂಜೆಯ ಚಹಾ ವೇಳೆಗೆ ಆಹ್ಲಾದವೆನಿಸುವಂಥ ಪುಟ್ಟದಾದ, ಆಪ್ತವೆನಿಸುವ ಜಾಗವೊಂದಿದ್ದರೆ ಎಷ್ಟು ಚಂದ ಅನಿಸುವುದು ಸಹಜ. ಇದಕ್ಕಾಗಿ ಅಪಾರ್ಟ್‌ಮೆಂಟ್‌ನ ಬಾಲ್ಕನಿಯೇ ಸೂಕ್ತ.

ನಾಲ್ಕು ಗೋಡೆಗಳಿಂದ ಸುತ್ತುವರಿದ ಫ್ಲಾಟ್ ಆಥವಾ ಅಪಾರ್ಟ್‌ಮೆಂಟ್‌ನಿಂದ ತುಸು ನಿರಾಳ ಭಾವ ಮೂಡಿಸುವ ಸ್ಥಳವೆಂದರೆ ಅದು ಬಾಲ್ಕನಿಯೇ. ‘ಮನೆ ಹೊರಗಿನ ಜಗತ್ತಿಗೂ, ಮನೆಯೊಳಗಿನ ಖಾಸಗಿ ಜಗತ್ತನ್ನೂ ಬೆಸೆಯುವ ಸೇತುವೆಯೆಂದರೆ ಅದು ಬಾಲ್ಕನಿ’ ಎನ್ನುತ್ತಾರೆ ವಾಸ್ತುಶಿಲ್ಪಿಗಳು.

ಮನೆಯೊಳಗಿನಿಂದಲೇ ಹೊರ ಜಗತ್ತಿನೊಂದಿಗೆ ಭಾವಬೆಸುಗೆ ಬೆಸೆಯುವ ಬಾಲ್ಕನಿಯನ್ನು ನಿಮ್ಮಿಚ್ಛೆಯಂತೆ ಆರಾಮದಾಯಕ ವಿಶ್ರಾಂತಿ ಸ್ಥಳವನ್ನಾಗಿ ಪರಿವರ್ತಿಸಬಹುದು. ಮುಂಜಾನೆಯ ಎಳೆಬಿಸಿಲಿಗೆ ಕುಳಿತು ಟೀ, ಕಾಫಿ ಕುಡಿಯುತ್ತಲೋ, ದಿನಪತ್ರಿಕೆ ಓದುತ್ತಲೋ, ಬೆಳಗ್ಗಿನ ತಿಂಡಿಗೆ ತರಕಾರಿ ಹೆಚ್ಚಲೋ ಈ ಸ್ಥಳವನ್ನು ಬಳಸಬಹುದು. ದಿನದ ಆರಂಭ ಆಹ್ಲಾದಕರವನ್ನಾಗಿಸಲು, ತಾಜಾ ಗಾಳಿ ಸೇವಿಸಲು, ಬಾಲ್ಕನಿಗಿಂತ ಮಿಗಿಲಾದ ಸ್ಥಳವಿಲ್ಲ. ಬಹುತೇಕ ಸಮಯವನ್ನು ಮನೆಯೊಳಗೇ ಕಳೆಯುವ ಗೃಹಿಣಿಯರಿಗೆ ರಿಫ್ರೆಶ್‌ ಆಗಲು ಬಾಲ್ಕನಿಗಿಂತ ಆಪ್ತಸಖ ಮತ್ತೊಬ್ಬನಿಲ್ಲ.

ರೋಮಿಯೊ–ಜ್ಯೂಲಿಯೆಟ್‌ನನ್ನು ಬೆಸೆದದ್ದೂ, ಸೆರೆವಾಸದಿಂದ ಬಿಡುಗಡೆಯಾಗಿ ಬಂದ ನೆಲ್ಸನ್‌ ಮಂಡೇಲಾ ತನ್ನ ಜನರಿಗೆ ಭರವಸೆ ನೀಡಿದ್ದು, ಪ್ರತಿ ಭಾನುವಾರ ವ್ಯಾಟಿಕನ್ ಸಿಟಿಯಲ್ಲಿ ಪೋಪ್ ಅವರು ಜನರನ್ನು ಆಶೀರ್ವದಿಸುವುದು ಬಾಲ್ಕನಿಯಲ್ಲೇ!

ಬಾಲ್ಕನಿಯನ್ನು ಹೀಗೂ ಬಳಸಬಹುದು

* ಪುಟ್ಟ ಉದ್ಯಾನ: ಬಾಲ್ಕನಿಯಲ್ಲಿ ಸೂರ್ಯನ ಕಿರಣಗಳು ಬೀಳುವುದರಿಂದ ನಿಮ್ಮದೇ ಆದ ಪುಟ್ಟ ಹಸಿರಿನ ಅಂಗಳವನ್ನು ರೂಪಿಸಿಕೊಳ್ಳಬಹುದು. ನಿಮ್ಮ ಅಭಿರುಚಿಗೆ ಅನುಗುಣವಾಗಿ ಅಲಂಕಾರಿಕ ಸಸ್ಯಗಳನ್ನೋ ಅಥವಾ ಮನೆಗೆ ಬೇಕಾದ ತರಕಾರಿ–ಸೊಪ್ಪುಗಳು, ಔಷಧೀಯ ಗಿಡಗಳನ್ನೋ ಕುಂಡಗಳಲ್ಲಿ ಬೆಳೆಸಬಹುದು. ಅಡುಗೆಗೆ ಬೇಕಾದ ತಾಜಾ ಸೊಪ್ಪುಗಳನ್ನು ಬಾಲ್ಕನಿಯಲ್ಲೇ ಬೆಳೆಯುವುದು ಖುಷಿ ನೀಡುತ್ತದೆ. ರಾಸಾಯನಿಕ ಮುಕ್ತ ಆಹಾರ ಸೇವಿಸುವ ಸಂತಸವೂ ನಿಮ್ಮದಾಗುತ್ತದೆ. ಹಸಿರು ಗಿಡಗಳಿಂದಾಗಿ ತಾಜಾ ಗಾಳಿಯೂ ದೊರೆಯುತ್ತದೆ.

* ಓದಲೊಂದು ಜಾಗ: ಓದುವ ಹವ್ಯಾಸವುಳ್ಳವರಿಗೆ ಬಾಲ್ಕನಿ ಆಪ್ತತೆ ಒದಗಿಸಬಲ್ಲದು. ದಿನಪತ್ರಿಕೆ, ಪುಸ್ತಕಗಳನ್ನು ಓದಲು ಬಯಸುವವರಿಗೆ ಏಕಾಂತ ಸ್ಥಳ ದೊರೆತಂತಾಗುತ್ತದೆ. ಬಾಲ್ಕನಿಯಲ್ಲಿ ಆರಾಮ ಕುರ್ಚಿಯಲ್ಲಿ ಕೂತು ಓದಲು ಚೆನ್ನಾಗಿರುತ್ತದೆ. ಬಾಲ್ಕನಿಯ ಹಸಿರು ಕುಂಡಗಳ ನಡುವೆ ಪುಟ್ಟದೊಂದು ಕುರ್ಚಿ ಹಾಕಿಕೊಂಡು ಓದುವುದೂ ಮನಸಿಗೆ ಸಂತಸ ನೀಡುತ್ತದೆ.

* ಬಾಲ್ಕನಿ ಬೆಡ್: ಮನೆಯೊಳಗೆ ಜಾಗದ ಕೊರತೆ ಇರುವವರು ಬಾಲ್ಕನಿಯೊಳಗೆ ಸಣ್ಣದೊಂದು ಹಾಸಿಗೆಯ ವ್ಯವಸ್ಥೆ ಮಾಡಿಕೊಳ್ಳಬಹುದು. ಇದಕ್ಕಾಗಿ ಮಲಗುವ ಕೋಣೆಗಳ ಹಾಸಿಗೆಗಿಂತ ಭಿನ್ನವಾದ ಆಕಾರ ಮತ್ತು ಗಾತ್ರಗಳ ಹಾಸಿಗೆಗಳನ್ನು ಆರಿಸುವುದು ಸೂಕ್ತ. ಬಾಲ್ಕನಿಯ ವಿನ್ಯಾಸ ಮತ್ತು ಅಗಲವನ್ನು ಗಮನದಲ್ಲಿಟ್ಟುಕೊಂಡು ಹಾಸಿಗೆ ಆರಿಸಿಕೊಳ್ಳುವುದು ಉತ್ತಮ.

* ಲಿವಿಂಗ್ ಸ್ಪೇಸ್: ಬಾಲ್ಕನಿಯನ್ನು ಲಿವಿಂಗ್ ಸ್ಪೇಸ್ ಆಗಿಯೂ ಬಳಸಬಹುದು. ಪುಟ್ಟ ಸೋಫಾ ಇಲ್ಲವೇ ಕಸ್ಟಮೈಸ್ಟ್ ಮಾಡಿದ ಪೀಠೋಪಕರಣಗಳನ್ನು ಬಳಸುವುದೊಳಿತು. ಜಾಗದ ಅನುಕೂಲತೆಗೆ ತಕ್ಕಂತೆ ಪುಟ್ಟದಾದ ಬೀನ್ ಬ್ಯಾಗ್ ಇಲ್ಲವೇ ಟೇಬಲ್ – ಎರಡು ಕುರ್ಚಿಗಳನ್ನು ಬಳಸಬಹುದು.

* ವ್ಯಾಯಾಮದ ಸ್ಥಳ: ಮನೆಯೊಳಗೆ ವ್ಯಾಯಾಮದ ಸ್ಥಳದ ಕೊರತೆ ಇರುವವರು ಬಾಲ್ಕನಿಯನ್ನು ಬಳಸ ಬಹುದು. ಮುಂಜಾನೆ ಸೂರ್ಯನ ಎಳೆಬಿಸಿಲಿನ ನಡುವೆ ಯೋಗ–ವ್ಯಾಯಾಮ ಮಾಡುವುದಕ್ಕೆ ಬಾಲ್ಕನಿ ಅನುಕೂಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT