ಶುಕ್ರವಾರ, ಏಪ್ರಿಲ್ 23, 2021
32 °C

ತೂಗು ತೋಟದ ಹಸಿರು ನೋಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರದಲ್ಲಿ ಪುಟ್ಟ ಮನೆಯಲ್ಲಿ ಸಸಿಗಳಿಗೆ ಜಾಗ ಎಲ್ಲಿ ಎಂಬ ಕೊರಗು ಹಲವರಲ್ಲಿದೆ. ಆದರೆ ತೋಟ ಮಾಡುವ, ಆ ಗಿಡಗಳು ಮನಸ್ಸಿಗೆ ನೀಡುವ ಆಹ್ಲಾದ ಸವಿಯುವ ಆಸೆಗೆ ಮಾತ್ರ ಬೇಲಿ ಹಾಕಲು ಸಾಧ್ಯವಿಲ್ಲ. ಈ ಜಾಗದ ಸಮಸ್ಯೆಗೆ ತೂಗುವ ಕುಂಡಗಳು ಪರಿಹಾರ ಒದಗಿಸಿದ್ದು, ಇತ್ತೀಚೆಗೆ ಸಾಕಷ್ಟು ಜನಪ್ರಿಯತೆ ಪಡೆಯುತ್ತಿವೆ.

ಹಲವರು ಅಲಂಕಾರಿಕ ಗಿಡಗಳು, ಔಷಧ ಸಸ್ಯಗಳ ಬಳ್ಳಿಗಳನ್ನು ಹಬ್ಬಿ ಬಿಟ್ಟು ಮನೆಯಲ್ಲಿ ಪುಟ್ಟ ತೂಗು ತೋಟ ಮಾಡಿ ಹಸಿರು ಸೃಷ್ಟಿಸಿದ್ದಾರೆ.

ಏನೆಲ್ಲಾ ಬೆಳೆಯಬಹುದು?


ಎಂ.ಆರ್‌.ಚಂದ್ರಶೇಖರ್‌

‘ಅಲಂಕಾರದ ಉದ್ದೇಶಕ್ಕೇ ಬೆಳೆಯುವುದಾದರೆ ಗೋಲ್ಡನ್‌ ಮನಿ ಪ್ಲಾಂಟ್‌, ವೇರಿಗೇಟೆಡ್‌, ಸೆಕ್ಯುಲೆಂಟ್ಸ್‌ (ಇದರಲ್ಲೇ ಸುಮಾರು 20ರಿಂದ 30 ಬಗೆಯ ಗಿಡಗಳಿವೆ) ರಿಯೋ, ಟಿಂಕ್ಚರ್‌ ಪ್ಲಾಂಟ್‌, ಬಾಲ್ಸಂ ಪ್ಲಾಂಟ್‌ ಬೆಳೆಯುವುದು ಸೂಕ್ತ’ ಎನ್ನುತ್ತಾರೆ ಲಾಲ್‌ಬಾಗ್‌ನ ಉಪನಿರ್ದೇಶಕ (ನರ್ಸರಿ) ಎಂ.ಆರ್‌.ಚಂದ್ರಶೇಖರ್‌.

‘ಸದ್ಯದ ಸನ್ನಿವೇಶದಲ್ಲಿ ಅಲಂಕಾರಿಕ ಗಿಡಗಳ ಜತೆಗೆ ಔಷಧ ಗುಣದ ಬಳ್ಳಿಗಳನ್ನೂ ಬೆಳೆಸುವುದು ಒಳ್ಳೆಯದು’ ಎನ್ನುತ್ತಾರೆ ಅವರು.

‘ಅಮೃತಬಳ್ಳಿ, ಒಂದೆಲಗ (ಬ್ರಾಹ್ಮಿ) ಮತ್ತು ದೊಡ್ಡಪತ್ರೆಯನ್ನು ಈ ತೂಗು ಕುಂಡಗಳಲ್ಲಿ ಬೆಳೆಸುವುದರಿಂದ ಮನೆಮದ್ದು ತಯಾರಿಸಲು, ತುರ್ತು ಸಂದರ್ಭಕ್ಕೆ ಔಷಧ ತಯಾರಿಕೆಗೆ ಬಳಸಬಹುದು’ ಎಂಬುದು ಅವರ ಅನುಭವ.


ಸುಪ್ರಿಯಾ ಕೋಟೆಗಾರ್ ಬೆಳೆಸಿದ ಅಲಂಕಾರಿಕ ಗಿಡ

ವೆಚ್ಚ ಎಷ್ಟು?

‘ಒಂದು ಗಿಡಕ್ಕೆ ಸರಾಸರಿ ₹200ರಿಂದ ₹300 ವೆಚ್ಚವಾಗುತ್ತದೆ. ಎರಡು ಬೆಡ್‌ರೂಮಿನ ಮನೆಗೆ ಜಾಗದ ಲಭ್ಯತೆ ನೋಡಿಕೊಂಡು 10 ರಿಂದ 15 ಗಿಡಗಳನ್ನು ಜೋಡಿಬಹುದು. ಸುಮಾರು 5ರಿಂದ 6 ಸಾವಿರ ವೆಚ್ಚ ಆಗುತ್ತದೆ’ ಎಂದು ಅವರು ಲೆಕ್ಕಾಚಾರ ತೆರೆದಿಟ್ಟರು. 

ಪ್ರಯೋಜನ?

ಉತ್ತರಹಳ್ಳಿಯ ಸುಪ್ರಿಯಾ ಕೋಟೆಗಾರ್‌ ಅವರು ಹೇಳುವಂತೆ, ‘ನನ್ನ ಹೂದೋಟ ಬೆಳೆಸುವ ಆಸಕ್ತಿಗೆ ಬೆಂಗಳೂರಿಗೆ ಬಂದ ಮೇಲೆ ಜಾಗದ ಕೊರತೆ ಎದುರಾಯಿತು. ಸಹಜವಾಗಿ ತೂಗು ಹಾಕುವ ಗಿಡಗಳನ್ನು ಬೆಳೆಸಲು ಆರಂಭಿಸಿದೆ. ಈ ಗಿಡಗಳಿಗೆ ಕಡಿಮೆ ನೀರು, ಕನಿಷ್ಠ ಆರೈಕೆ ಸಾಕು. ಈ ಗಿಡಗಳಿಂದ ಒಂದು ಆಹ್ಲಾದಕರ, ಹಸಿರು ವಾತಾವರಣ ಸೃಷ್ಟಿಯಾಗಿ ಮನಸ್ಸಿಗೆ ನೆಮ್ಮದಿ ಸಿಕ್ಕಿದೆ. ಒತ್ತಡ ನಿವಾರಣೆಗೂ ಇವು ಸಹಕಾರಿ. ಇವುಗಳ ನಿರ್ವಹಣೆ ಮಾಡುತ್ತಾ ಸಮಯ ಸದುಪಯೋಗವೂ ಆಗುತ್ತದೆ. ನನ್ನ ಬಳಿ ಲೋಳೆಸರ, ಮನಿಪ್ಲಾಂಟ್‌, ಜಡೆಗಿಡ, ಸಿಂಗೋನಿಯಂ ಹಾಗೂ ಸೆಕ್ಯುಲೆಂಟ್‌ ಪ್ರಬೇಧದ ವಿವಿಧ ಜಾತಿಯ ಗಿಡಗಳಿವೆ’ ಎಂದು ಸುಪ್ರಿಯಾ ಖುಷಿ ಹಂಚಿಕೊಂಡರು.

ನಿರ್ವಹಣೆ ಹೇಗೆ?

ಸಸ್ಯ, ಕುಂಡದ ಗಾತ್ರ ನೋಡಿಕೊಂಡು ಬೆಳಿಗ್ಗೆ ಅಥವಾ ಸಂಜೆ ಅಲ್ಪ ಪ್ರಮಾಣದಲ್ಲಿ ನೀರುಣಿಸಬೇಕು. ನೇತು ಹಾಕಿದ ಗಿಡಗಳನ್ನು ಕೆಳಗಿಳಿಸಿ ನೀರುಣಿಸುವುದು ಒಳ್ಳೆಯದು. ಹೆಚ್ಚುವರಿ ನೀರು ಹೊರ ಹರಿಯುವಂತೆ ಕುಂಡದ ತಳಭಾಗದಲ್ಲಿ ತೂತು ಇರಬೇಕು. ನೀರು ಅಲ್ಲಿಯೇ ನಿಂತರೆ ಬೇರು ಕೊಳೆಯುವ ಸಾಧ್ಯತೆ ಇರುತ್ತದೆ.

ಗಿಡಗಳಿಗೆ ತಜ್ಞರ ಸಲಹೆ ಮೇರೆಗೆ ಸಾವಯವ ಗೊಬ್ಬರ (ದ್ರವ ಅಥವಾ ಒಣ) ಬಳಸುವುದು ಉತ್ತಮ. ಗಿಡ ದಟ್ಟವಾಗಿ ಬೆಳೆದರೆ ವಿಸ್ತರಿಸಿದ ಭಾಗವನ್ನು ಕತ್ತರಿಸಬೇಕು.

ಗಿಡದ ಹೂಗಳು ಬಾಡಿದ್ದರೆ ಕಿತ್ತು ತೆಗೆಯಬೇಕು. ಹೊಸ ಮೊಗ್ಗು ಅರಳಲು ಇದು ಅನುಕೂಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು