ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯ ಅಂದಕ್ಕೆ ಹೂವಿನ ಅಲಂಕಾರ

Last Updated 6 ಮೇ 2022, 23:30 IST
ಅಕ್ಷರ ಗಾತ್ರ

ಮನೆಯ ಅಲಂಕಾರ, ನಮ್ಮ ಅಭಿರುಚಿ, ಆಸಕ್ತಿ ಅಷ್ಟೇ ಅಲ್ಲ, ಮನಸ್ಸಿನ ಭಾವಗಳ ಪ್ರತಿಬಿಂಬವಾಗಿರಬೇಕು. ಅದಕ್ಕೆ ಏನು ಮಾಡಬಹುದು?

ಬಹಳ ಸರಳ. ಮನೆಯನ್ನು ಸ್ವಚ್ಛಗೊಳಿಸಿ. ಚೆಲ್ಲಾಪಿಲ್ಲಿಯಾಗಿರುವ ವಸ್ತುಗಳನ್ನೆಲ್ಲ ಒಪ್ಪ ಓರಣವಾಗಿಡಿ. ಜೊತೆಗೆ, ಅರಳಿರುವ ಒಂದಿಷ್ಟು ತಾಜಾ ಹೂವುಗಳನ್ನು ಮನೆಯ ಪ್ರಮುಖ ಭಾಗಗಳ ಬಳಿ ಕುಂಡಗಳಲ್ಲಿ ಜೋಡಿಸಿಡಿ. ಇಷ್ಟು ಮಾಡಿದರೆ ಮನೆಯ ಅಂದವೂ ಹೆಚ್ಚುತ್ತದೆ. ಮನೆಯೊಳಗೆ ಆಹ್ಲಾದಕರ ವಾತಾವರಣ ನಿರ್ಮಾಣವಾಗಿ, ಮನಸ್ಸು ಪ್ರಫುಲ್ಲವಾಗುತ್ತದೆ!

ಅಷ್ಟೇ ಅಲ್ಲ, ಲಿವಿಂಗ್ ರೂಮ್, ಬೆಡ್ ರೂಮ್ ಸೇರಿದಂತೆ ಮನೆಯ ಎಲ್ಲ ಕೋಣೆಗಳನ್ನೂ ಇಂಥ ಪರಿಮಳ ಬೀರುವ ತಾಜಾ ಹೂವುಗಳಿಂದ ಅಲಂಕರಿಸಿದರೆ, ಆಯಾ ಕೊಠಡಿಯ ವಾತಾವರಣವೂ ತಾಜಾ ಆಗುತ್ತದೆ. ಕೊಠಡಿಯಲ್ಲಿರುವವರ ಮನಸ್ಸು ಹೂವಿನಂತೆ ಅರಳುತ್ತದೆ.

ಲಿವಿಂಗ್ ರೂಮ್‌

ಇದು ಮನೆಯ ಪ್ರಮುಖ ಜಾಗ. ಹೆಚ್ಚು ಸಮಯ ಕಳೆಯುವ ಸ್ಥಳ. ಅಷ್ಟೇ ಅಲ್ಲ, ನಿಮ್ಮ ಸೃಜನಶೀಲತೆ ಹೆಚ್ಚಿಸುವ ತಾಣ. ಇಂಥ ಕೊಠಡಿಗಳು ಸ್ವ‌ಲ್ಪ ದೊಡ್ಡದಾಗಿರುತ್ತವೆ. ಈ ಸ್ಥಳಗಳಿಗೆ ತುಂಬಾ ಪ್ರಕಾಶಮಾನ ಬಣ್ಣವಿರುವ, ಅಂದವಾದ ಗಾತ್ರದಲ್ಲಿ ಅಗಲವಿರುವ ಹೂವುಗಳನ್ನು ಆಯ್ಕೆ ಮಾಡಬಹುದು. ಈ ಕೊಠಡಿಯಲ್ಲಿ ನೀವು ಕುಳಿತಿರುವ ಟೇಬಲ್‌ ಮಧ್ಯೆ ಒಂದು ವ್ಯಾಸ್ ಇಟ್ಟು, ಅದರಲ್ಲಿ ಕೆಂಪು ಗುಲಾಬಿಗಳನ್ನೋ ಅಥವಾ ಸೂರ್ಯಕಾಂತಿ ಹೂವುಗಳನ್ನೋ ಜೋಡಿಸಿಡಿ. ಒಂದೊಮ್ಮೆ ನಿಮ್ಮ ಕೋಣೆಯ ಗೋಡೆಗಳ ಬಣ್ಣ ತಿಳಿಯಾಗಿದ್ದರೆ ಪ್ರಖರ ಬಣ್ಣದ ಹೂವುಗಳನ್ನು ಜೋಡಿಸಿ. ಅದಕ್ಕೆ ವಿರುದ್ಧವಾಗಿದ್ದರೆ ತಿಳಿ ಬಣ್ಣಗಳ ಹೂವುಗಳಿಂದ ಕೋಣೆಯನ್ನು ಅಲಂಕರಿಸಿ.

ಕೆಲಸ ಮಾಡುವ ಕೊಠಡಿ

ನೀವು ಕೆಲಸ ಮಾಡುವ ಕೊಠಡಿಯಲ್ಲಿ ಹೆಚ್ಚು ಪರಿಮಳಯುಕ್ತ ಹೂವುಗಳನ್ನು ಬಳಸಬೇಡಿ. ಏಕೆಂದರೆ ನಿಮ್ಮನ್ನು ಭೇಟಿಯಾಗಲು ಬರುವ ಅತಿಥಿಗಳಿಗೆ ಕೆಲವು ಹೂಗಳ ಸುಗಂಧ ಅಲರ್ಜಿ ಉಂಟು ಮಾಡಬಹುದು.

ಇದರ ಜೊತೆಗೆ, ಅಲ್ಲಲ್ಲಿ ಅಗಲವಾದ ಪಾತ್ರೆಯಲ್ಲಿ ನೀರು ತುಂಬಿಸಿಟ್ಟು, ಅದರಲ್ಲಿ ಗುಲಾಬಿಯ ಪಕಳೆಗಳನ್ನು ಹಾಕಿ. ಆ ಪಾತ್ರೆಯ ಸುತ್ತ ಮಲ್ಲಿಗೆ, ಚೆಂಡುಹೂವು ಮತ್ತು ಇತರೆ ಸಣ್ಣ ಸಣ್ಣ ಹೂವುಗಳಿಂದ ಅಲಂಕರಿಸಬಹುದು. ರಾತ್ರಿ ವೇಳೆ ಇದೇ ನೀರಿನಲ್ಲಿ ಪುಟ್ಟ ಪುಟ್ಟ ಬೌಲ್‌ಗಳಲ್ಲಿ ಮೇಣದಬತ್ತಿ ಇಟ್ಟು, ಬೆಳಗಿಸಿ ಅವುಗಳನ್ನು ತೇಲಿಸಬಹುದು.

ಗುಲಾಬಿಗಳು, ಟ್ಯುಲಿಪ್‌ಗಳು, ಕಾರ್ನೇಷನ್‌ಗಳು, ಡೈಸಿಗಳು, ಚೆಂಡುಹೂವು, ಸೂರ್ಯಕಾಂತಿ, ಗಾರ್ಡೇನಿಯಾ,, ಟ್ಯೂಬ್‌ರೋಸ್‌, ಲಿಲ್ಲಿಗಳು ನಿಮ್ಮ ಮನೆಯನ್ನು ಇನ್ನಷ್ಟು ಸುಂದರಗೊಳಿಸುತ್ತವೆ. ಲಿಲ್ಲಿಗಳಿಗೆ ಮುತ್ತಿಕೊಳ್ಳುವ ದುಂಬಿಗಳನ್ನು ನೋಡುವುದೇ ಚಂದ. ಈ ಹೂವಿನ ಅಲಂಕಾರ, ನಿಮ್ಮ ಮನೆ, ಕಚೇರಿಗೆ ಬರುವ ಅತಿಥಿಗಳಿಗೆ ಉತ್ತಮ ಆತಿಥ್ಯವನ್ನು ನೀಡುತ್ತವೆ.

ಮಲಗುವ ಕೋಣೆ

ಮಲಗುವ ಕೋಣೆ ಎಂದರೆ, ಅದು ವಿಶ್ರಾಂತಿ ಪಡೆಯುವ ಸ್ಥಳ. ಈ ಕೋಣೆಯಲ್ಲಿ ತಿಳಿ ಹಳದಿ, ಗುಲಾಬಿ ಅಥವಾ ಲ್ಯಾವೆಂಡರ್‌ನಂತಹ ಹಿತವಾದ ಬಣ್ಣಗಳಿರುವ ಹೂವುಗಳನ್ನು ಆಯ್ಕೆ ಮಾಡಿ, ಕೋಣೆಯ ಪ್ರಮುಖ ಭಾಗಗಳಲ್ಲಿ ಜೋಡಿಸಿಡಿ. ಇವೆಲ್ಲ ‘ಸುಗಂಧ ಚಿಕಿತ್ಸೆ’ಯಲ್ಲಿ ಬಳಸುವ ಹೂವುಗಳು. ಇಲ್ಲಿ ಹೂವಿನ ನೋಟ ಮತ್ತು ಪರಿಮಳ ಎರಡೂ ನಿಮ್ಮನ್ನು ಆಕರ್ಷಿಸುವಂತಿದ್ದರೆ, ಕೋಣೆಯ ವಾತಾವರಣವೂ ಸುಂದರವಾಗಿರುತ್ತದೆ.

ಸುಗಂಧ ಬೀರುವುದು ಹೂವು ಮಾತ್ರವಲ್ಲ, ಲ್ಯಾವೆಂಡರ್, ಕ್ಯಾಮೊಮೈಲ್‌ನಂತಹ ಲಘು ಪರಿಮಳ ಸೂಸುವ ಸಸ್ಯಗಳೂ ಇವೆ. ಅಂಥವನ್ನು ಕೊಠಡಿಯೊಳಗೆ ಬೆಳೆಸಬಹುದು. ಕೆಂಪುಗುಲಾಬಿಯಂತಹ ಹೂವುಗಳು ಕೋಣೆಗೆ ‘ರೊಮ್ಯಾಂಟಿಕ್‌’ ನೋಟ ನೀಡುತ್ತವೆ. ನೆನಪಿಡಿ; ಪ್ರತಿ ದಿನ ಹೂವುಗಳನ್ನು ಬದಲಾಯಿಸಬೇಕು. ಕೋಣೆಯಲ್ಲಿ ಗಾಳಿ ಬೆಳಕು ಚೆನ್ನಾಗಿರಬೇಕು.

ಸ್ನಾನದ ಕೋಣೆಯಲ್ಲಿ ಗುಲಾಬಿ ಬಣ್ಣದ ಆರ್ಕಿಡ್‌ಗಳನ್ನು ಇಡಿ. ಅದರ ನೋಟವೇ ದಿನಪೂರ್ತಿ ನಿಮ್ಮ ಮನಸ್ಸನ್ನು ಪ್ರಫುಲ್ಲವಾಗಿ ಇಡುತ್ತದೆ. ಆರ್ಕಿಡ್‌ಗಳನ್ನು ಸಿಂಕ್ ಅಥವಾ ಸ್ನಾನದ ತೊಟ್ಟಿಯ ಬಳಿ ಇರಿಸಬಹುದು.ಹಳದಿ, ಬಿಳಿ ಮತ್ತು ಗುಲಾಬಿ ಬಣ್ಣ ಸೇರಿದಂತೆ ವಿವಿಧ ಬಣ್ಣಗಳಲ್ಲಿ ಆರ್ಕಿಡ್‌ಗಳಿವೆ.ಒಂದೊಂದು ಬಣ್ಣದ ಆರ್ಕಿಡ್‌ಗಳು ಮನಸ್ಸನ್ನು ಒಂದೊಂದು ರೀತಿ ಆರೈಕೆ ಮಾಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT