ಗುರುವಾರ , ಜೂನ್ 17, 2021
21 °C

ಸುಮ್ಮನೆಯಲ್ಲ, ನಮ್ಮನೆ ಯಾನ

ಮನೋಜಕುಮಾರ್‌ ಗುದ್ದಿ Updated:

ಅಕ್ಷರ ಗಾತ್ರ : | |

ಇಂದಿಗೂ ಮನುಷ್ಯನಿಗೆ ಮುದ ನೀಡುವ ಸಂಗತಿಗಳು ಎರಡು. ಒಂದು, ಮನಸಿಗೆ ಬಂದ ಸ್ಥಳಕ್ಕೆ ಕುಟುಂಬದೊಂದಿಗೋ, ಗೆಳೆಯರೊಂದಿಗೂ ಪ್ರವಾಸ ಹೋಗುವುದು. ಇನ್ನೊಂದು ಇಷ್ಟವಾದ ಸಂಗೀತ ಆಲಿಸುವುದು. ಎರಡೂ ಒಟ್ಟಿಗೇ ಸೇರಿಸಿದರೆ ಎಷ್ಟು ಮಜವಾಗುತ್ತದಲ್ಲ?

ಈ ವಿಚಾರವನ್ನಿಟ್ಟುಕೊಂಡೇ ಧಾರವಾಡ ಮೂಲದ ಸಂಜನಾ ಹಾನಗಲ್‌ ಹಾಗೂ ಹಾಸನ ಮೂಲದ ವತ್ಸಲಾ ಅವರು ಜಂಟಿಯಾಗಿ ಟ್ರಿಪ್ಪಿ ವೀಲ್ಸ್ ಎಂಬ ಹೊಸ ಪರಿಕಲ್ಪನೆಯನ್ನು ಹುಟ್ಟು ಹಾಕಿದ್ದಾರೆ.

ಸ್ವಿಡನ್‌ನ ವೋಲ್ವೊ ವಾಹನ ತಯಾರಿಕಾ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಸಂಜನಾ ಹಾಗೂ ಒಳಾಂಗಣ ವಿನ್ಯಾಸದಲ್ಲಿ ನುರಿತಿರುವ ವತ್ಸಲಾ ಜೋಡಿ ಯೂರೋಪಿಯನ್‌ ರಾಷ್ಟ್ರಗಳಲ್ಲಿ ಜನಪ್ರಿಯವಾಗಿರುವ 'ಕಾರವಾನ್‌ ಟೂರಿಸಂ’ ಅನ್ನು ರಾಜ್ಯದಲ್ಲಿ ಪರಿಚಯಿಸುತ್ತಿದೆ. ವಾಹನವನ್ನೇ ಮನೆಯಂತೆ ವಿನ್ಯಾಸ ಮಾಡುವುದು ಹಾಗೂ ದಿನಗಟ್ಟಲೇ ಸಂಚರಿಸಿದರೂ ಆಯಾಸವಾಗದಂತೆ ವಾಹನದಲ್ಲಿಯೇ ಹಾಸಿಗೆ, ಹೊದಿಕೆ, ಕುರ್ಚಿ, ಸೋಫಾಗಳನ್ನು ಅಳವಡಿಸುವುದು. ಅಡುಗೆ ತಯಾರಿಸಲು ಬೇಕಾದ ಪರಿಕರಗಳನ್ನು ವಾಹನದಲ್ಲೇ ಇರಿಸುವುದು. ಇದು ಕಾರವಾನ್‌ ಟೂರಿಸಂನ ಸಂಕ್ಷಿಪ್ತ ಪರಿಕಲ್ಪನೆ.

ಸಂಜನಾ ಬೆಳೆದಿದ್ದು ಮೈಸೂರಿನಲ್ಲಿ. ನಂತರ ಬೆಂಗಳೂರಿನ ಅಕ್ಸೆಂಚರ್‌ ಕಂಪನಿಯಲ್ಲಿ ಸಾಫ್ಟ್‌ವೇರ್‌ ಉದ್ಯೋಗಿಯಾದರು. ಕಂಪ್ಯೂಟರ್‌ ನೆಟ್‌ವರ್ಕ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಸ್ವೀಡನ್‌ನತ್ತ ಪ್ರಯಾಣ ಬೆಳೆಸಿದ ಸಂಜನಾ ಅಲ್ಲಿನ ಹಳ್ಳಿಗಳಿಗೆ ಕಾರವಾನ್‌ನಲ್ಲಿ ಅಲೆದಾಡಿದರು. ಆ ಸಂದರ್ಭದಲ್ಲಿ ಜೊತೆಯಾದವರು ಇನ್ನೊಬ್ಬ ಸಾಹಸಿ ವತ್ಸಲಾ ರಂಗೇಗೌಡ.

ಬಹುತೇಕ ಯೂರೋಪಿಯನ್‌ ದೇಶಗಳಲ್ಲಿ ಮನೆಯಂತೆ ವಿನ್ಯಾಸ ಮಾಡಲಾದ ವಾಹನಗಳನ್ನು ತೆಗೆದುಕೊಂಡು ಗುಡ್ಡಗಾಡು ಪ್ರದೇಶಗಳು, ಜಲಪಾತ, ಕೆರೆಗಳು, ಹೊಳೆಗಳು, ಕಡಲ ತೀರಗಳಿಗೆ ಹೋಗುವುದು ಮಾಮೂಲು. ಅಲ್ಲಿಯೇ ಕಿರು ಸಂಗೀತ ಗೋಷ್ಠಿಗಳು ಆಯೋಜನೆಗಳ್ಳುತ್ತವೆ.

ವಾರಗಟ್ಟಲೇ ಕಚೇರಿಗಳಲ್ಲಿ ಏಕತಾನತೆಯ ಕೆಲಸ ಮಾಡಿ ದಣಿದ ಜೀವಗಳಿಗೆ ಈ ಪರಿಕಲ್ಪನೆ ನಿಜವಾಗಿಯೂ ಖುಷಿ ಕೊಡುತ್ತದೆ. ಅದನ್ನೇ ಇಲ್ಲಿಯೂ ಪರಿಚಯಿಸುತ್ತಿದ್ದೇವೆ ಎನ್ನುತ್ತಾರೆ ಟ್ರಿಪ್ಪಿ ವೀಲ್ಸ್‌ ಕಂಪನಿಯ ಸಹ ಸಂಸ್ಥಾಪಕಿ ವತ್ಸಲಾ.

‘ಭಾರತದ ಗ್ರಾಮೀಣ ಪ್ರದೇಶಗಳಲ್ಲಿಯೂ ಈ ಬಗೆಯ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶಗಳಿವೆ. ಆದರೆ, ಇಂತಹ ವಾಹನಗಳು ಕಡಿಮೆ ಇರುವುದರಿಂದ ಅದರ ಬಾಡಿಗೆಯೂ ದುಬಾರಿಯಾಗಿದೆ.

ನಾನು ಮತ್ತು ಸಂಜನಾ ಕಾರವಾನ್‌ ಹೊರಡಲು ಇಂತಹ ವಾಹನವನ್ನು ಕೇಳಿದೆವು. ಅವರು ಹೇಳಿದ ರೇಟು ಕೇಳಿಯೇ ಗಾಬರಿಯಾಯಿತು.

ದಿನದ ಬಾಡಿಗೆ ₹ 15 ಸಾವಿರ ಇತ್ತು! ಇಷ್ಟೊಂದು ದರ ಸ್ವೀಡನ್‌ನಲ್ಲಿಯೇ ಇಲ್ಲ. ನಾವು ಬೆಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ಕಾರ್ಯಾಚರಣೆ ಮಾಡಲು ಆರಂಭಿಸಿದ್ದೇವೆ. ಉತ್ತರ ಕರ್ನಾಟಕದ ಹಂಪಿ, ಬಾದಾಮಿ, ಗೋಕರ್ಣಕ್ಕೆ ಪ್ರವಾಸ ಹೋಗುವವರು ಈ ವಾಹನದ ಪ್ರಯೋಜನ ಪಡೆಯಬಹುದು. ಸದ್ಯಕ್ಕೆ ಈ ವಾಹನವನ್ನು ಒಂದಿನಕ್ಕೆ ₹ 5 ಸಾವಿರ ಬಾಡಿಗೆಗೆ ನೀಡುತ್ತಿದ್ದೇವೆ’ ಎಂದು ವತ್ಸಲಾ ಹೇಳುತ್ತಾರೆ.

ಇನ್ನಷ್ಟು ವಿವರ ನೀಡಿದ ಟ್ರಿಪ್ಪಿ ವೀಲ್ಸ್‌ನ ಇನ್ನೊಬ್ಬ ಸಹ ಸಂಸ್ಥಾಪಕಿ ಸಂಜನಾ ಹಾನಗಲ್‌, ‘ಭಾರತದ ಬೇರುಗಳಿರುವುದೇ ಗ್ರಾಮೀಣ ಪ್ರದೇಶಗಳಲ್ಲಿ. ನಗರದ ಒತ್ತಡದ ಜೀವನದಿಂದ ಬಳಲಿದವರು ಹಳ್ಳಿಗಳಿಗೆ ಭೇಟಿ ನೀಡಿ ಗ್ರಾಮೀಣ ಜನಜೀವನವನ್ನು ನೋಡಬೇಕೆಂಬುದು ನಮ್ಮ ಆಸೆ. ಹಾಗಾಗಿಯೇ, ಟ್ರಿಪ್ಪಿ ವೀಲ್ಸ್‌ ಮೂಲಕ ಕಡಿಮೆ ದರದಲ್ಲಿ ವಾಹನವನ್ನು ನೀಡುತ್ತೇವೆ. ಸದ್ಯಕ್ಕೆ ಟಾಟಾ ವಿಂಗರ್‌ ವಾಹನವನ್ನು ಅಗತ್ಯಕ್ಕೆ ತಕ್ಕಂತೆ ಬದಲಾಯಿಸಿದ್ದೇವೆ. ಎರಡು ತಿಂಗಳ ಹಿಂದೆ ಕಂಪನಿ ಆರಂಭಿಸಿದ್ದೆವು. ಸೆಪ್ಟೆಂಬರ್‌, ಅಕ್ಟೋಬರ್ ವೇಳೆಗೆ ಪ್ರವಾಸ ಹೊರಡುವವರು ಬುಕಿಂಗ್ ಮಾಡುತ್ತಿದ್ದಾರೆ’ ಎಂದರು.


ಸಂಜೆ ನಕ್ಷತ್ರಗಳ ಬೆಳಕಲ್ಲಿ ಕಾರವಾನ್‌ ವಾಹನ

*

ಕಾರವಾನ್‌ ಆಗಿ ಬದಲಾಗುತ್ತಿರುವ ವಾಹನದೊಂದಿಗೆ ವತ್ಸಲಾ ಹಾಗೂ ಸಂಜನಾ
 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.