ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ ಜಿಲ್ಲೆ ಘೋಷಣೆಯ ಬೆನ್ನಲ್ಲೇ ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ಸಂಚಲನ

ನಿವೇಶನ, ಮನೆ ಬಾಡಿಗೆ ದರ ಏರಿಕೆ
Last Updated 18 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ವಿಜಯನಗರ (ಹೊಸಪೇಟೆ): ವಿಜಯನಗರ ಜಿಲ್ಲೆ ಘೋಷಣೆಯ ಬೆನ್ನಲ್ಲೇ ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ಸಂಚಲನ ಮೂಡಿದೆ.

ಒಂದರ್ಥದಲ್ಲಿ ಜಿಲ್ಲೆ ಘೋಷಣೆಯೂ, ಮಂಕು ಬಡಿದಿದ್ದ ರಿಯಲ್‌ ಎಸ್ಟೇಟ್‌ಗೆ ಹೊಸ ಚೈತನ್ಯ ತಂದುಕೊಟ್ಟಿದೆ. ನಿವೇಶನ, ಕಟ್ಟಡಗಳ ಜತೆಗೆ ಮನೆ ಬಾಡಿಗೆ ದರ ಜಿಗಿತ ಕಂಡಿದೆ. ವಾಣಿಜ್ಯ ಮಳಿಗೆಗಳ ಬಾಡಿಗೆ ದರವೂ ಹೆಚ್ಚಾಗಿದೆ. ಭವಿಷ್ಯದಲ್ಲಿ ಜಿಲ್ಲೆಯ ಬೆಳವಣಿಗೆಯ ನೆಪ ಮಾಡಿಕೊಂಡು ನಿವೇಶನ, ವಾಣಿಜ್ಯ ಮಳಿಗೆಗಳ ಮಾರಾಟ, ಬಾಡಿಗೆಗಾಗಿ ಪ್ರಚಾರವೂ ಶುರುವಾಗಿದೆ.

ದರ ಜಿಗಿತಕ್ಕೆ ಕಾರಣವೇನು?

ಜಿಲ್ಲಾ ಕೇಂದ್ರ ಸ್ಥಾನವಾಗಿ ಘೋಷಣೆಯಾಗಿರುವ ಹೊಸಪೇಟೆ ನಗರ ಬೆಳೆಯುವುದಕ್ಕೆ ಸೀಮಿತ ಅವಕಾಶಗಳಿವೆ. ಒಂದು ಕಡೆ ತುಂಗಭದ್ರಾ ಜಲಾಶಯ, ತುಂಗಭದ್ರಾ ನದಿ, ಮತ್ತೊಂದು ಕಡೆ ವಿಶ್ವ ವಿಖ್ಯಾತ ಹಂಪಿ ಸುತ್ತಮುತ್ತಲಿನ ಪ್ರದೇಶವೂ ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ವ್ಯಾಪ್ತಿಗೆ ಬರುತ್ತದೆ. ಅಲ್ಲಿ ಯಾವುದೇ ರೀತಿಯ ನಿರ್ಮಾಣ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುವಂತಿಲ್ಲ. ಹೀಗೆ ಮೂರು ಭಾಗಗಳಲ್ಲಿ ನಗರ ಬೆಳೆಯುವುದಕ್ಕೆ ಅವಕಾಶಗಳಿಲ್ಲ.

ನಗರ ಬೆಳೆಯಬೇಕಿದ್ದರೂ ಬಳ್ಳಾರಿ ರಸ್ತೆಯ ಸಂಕ್ಲಾಪುರ, ಕಾರಿಗನೂರು, ವಡ್ಡರಹಳ್ಳಿಯ ಕಡೆಗೆ.
ರಿಯಲ್‌ ಎಸ್ಟೇಟ್‌ನಲ್ಲಿ ತೊಡಗಿಸಿಕೊಂಡಿರುವವರು ಈ ವಿಷಯ ಚೆನ್ನಾಗಿ ಅರಿತಿದ್ದಾರೆ. ಅದನ್ನೇ ನೆಪ ಮಾಡಿಕೊಂಡು ಎಲ್ಲ ಕಡೆ ಕೃತಕವಾಗಿ ಬೆಲೆ ಹೆಚ್ಚಿಸಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ.

ನಗರ ಹೊರವಲಯದ ಅನಂತಶಯನಗುಡಿ, ಕೊಂಡನಾಯಕನಹಳ್ಳಿ, ಎಂ.ಪಿ. ಪ್ರಕಾಶ್‌ ನಗರದ ಸುತ್ತಮುತ್ತ 30X40 ಅಳತೆಯ ನಿವೇಶನದ ಬೆಲೆ ಈಗ ₹25ರಿಂದ 30 ಲಕ್ಷಕ್ಕೆ ಮಾರಾಟವಾಗುತ್ತಿದೆ. ಈ ಹಿಂದೆ ಇದೇ ವಿಸ್ತೀರ್ಣದ ನಿವೇಶನಗಳು ₹15ರಿಂದ ₹20 ಲಕ್ಷದೊಳಗೆ ಮಾರಾಟವಾಗುತ್ತಿದ್ದವು.

ಜಿಲ್ಲೆ ಘೋಷಣೆಯಾಗುವುದು ಬಹುತೇಕ ಖಾತ್ರಿಯೆಂದು ಅರಿತ ಅನೇಕ ಸಿರಿವಂತರು ಈ ಹಿಂದೆಯೇ ತಾಲ್ಲೂಕಿನ ಹೊಸೂರು, ವೆಂಕಟಾಪುರ, ಕಮಲಾಪುರ, ಕಡ್ಡಿರಾಂಪುರ, ಕಲ್ಲಹಳ್ಳಿ ಸುತ್ತ ನೂರಾರು ಎಕರೆ ಕೃಷಿ ಜಮೀನು ಖರೀದಿಸಿದ್ದಾರೆ. ಸಂಕ್ಲಾಪುರ, ಕಾರಿಗನೂರು, ವಡ್ಡರಹಳ್ಳಿ, ಅಷ್ಟೇಕೆ ಪಾಪಿನಾಯಕನಹಳ್ಳಿ ವರೆಗೆ ಹಲವರು ರಸ್ತೆಯ ಎರಡೂ ಕಡೆಗಳಲ್ಲಿ ನಿವೇಶನ ನಿರ್ಮಿಸಲು ಜಮೀನು ಖರೀದಿಸಿದ್ದಾರೆ.

‘ಪ್ರವಾಸಿ ಕೇಂದ್ರ ಹಂಪಿ ಇರುವುದರಿಂದ ಮೊದಲಿನಿಂದಲೂ ಹೊರಗಿನವರು ಬಂದು ಹೋಗುವುದು ಇದ್ದೇಇದೇ. ಈಗ ಮೇಲಿಂದ ಜಿಲ್ಲೆಯೂ ಆಗಿದೆ. ಸಹಜವಾಗಿಯೇ ನಗರ ಬೆಳೆಯುತ್ತದೆ. ಹಂಪಿ ಸುತ್ತಮುತ್ತ ಏನೂ ಮಾಡಲು ಆಗುವುದಿಲ್ಲ. ಇದನ್ನರಿತ ಹಣವಂತ ರಾಜಕಾರಣಿಗಳು ಹಂಪಿಯಿಂದ ಸ್ವಲ್ಪ ದೂರದಲ್ಲಿ ನೂರಾರು ಎಕರೆ ಕೃಷಿ ಜಮೀನು ಖರೀದಿಸಿದ್ದಾರೆ. ಭವಿಷ್ಯದಲ್ಲಿ ರೆಸಾರ್ಟ್‌ ಮಾಡಲು ಉದ್ದೇಶಿಸಿದ್ದಾರೆ. ಇನ್ನು ಕೆಲವೇ ವರ್ಷಗಳಲ್ಲಿ ವೆಂಕಟಾಪುರ, ಕಮಲಾಪುರ, ಧರ್ಮದಗುಡ್ಡ, ಕಾಳಘಟ್ಟ ಸುತ್ತ ಅನೇಕ ರೆಸಾರ್ಟ್‌ ಬಂದರೂ ಆಶ್ಚರ್ಯ ಪಡಬೇಕಿಲ್ಲ’ ಎಂದು ವೆಂಕಟಾಪುರದ ರೈತರಾದ ಹುಲುಗಪ್ಪ, ರಮೇಶ, ಬಸವರಾಜ ಹೇಳಿದರು.

‘ಹೊಸೂರು ಸುತ್ತಮುತ್ತ ಪ್ರತಿ ಎಕರೆ ಕೃಷಿ ಜಮೀನು ₹80 ಲಕ್ಷದಿಂದ ₹1 ಕೋಟಿ ವರೆಗೆ ಮಾರಾಟವಾಗುತ್ತಿದೆ. ಹೊಸೂರಿಗೆ ಹೋಲಿಸಿದರೆ ವೆಂಕಟಾಪುರದಲ್ಲಿ ಸ್ವಲ್ಪ ಕಮ್ಮಿಯಿದೆ. ದುಡ್ಡಿನಾಸೆಗೆ ಅನೇಕ ರೈತರು ನೀರಾವರಿ ಹೊಂದಿದ ಫಲವತ್ತಾದ ಜಮೀನು ಮಾರಾಟ ಮಾಡುತ್ತಿದ್ದಾರೆ. ಬರುವ ದಿನಗಳಲ್ಲಿ ಅಲ್ಲಿ ತಲೆ ಎತ್ತುವ ರೆಸಾರ್ಟ್‌ಗಳಲ್ಲಿ ರೈತರೇ ಕೂಲಿಯಾಳು ಆದರೂ ಆಗಬಹುದು’ ಎಂದರು.

ಇನ್ನು, ನಗರದಲ್ಲಿ ಸಿಂಗಲ್‌ ಬೆಡ್‌ ರೂಂ ಪ್ರತಿ ತಿಂಗಳ ಬಾಡಿಗೆ ಈ ಹಿಂದೆ ಮೂರೂವರೆಯಿಂದ ನಾಲ್ಕೂವರೆ ಸಾವಿರದ ಆಸುಪಾಸಿನಲ್ಲಿ ಇತ್ತು. ಈಗ ಐದೂವರೆ– ಆರು ಸಾವಿರಕ್ಕೆ ಏರಿದೆ. ಕಟ್ಟಡ ಮಾಲೀಕರು ಠೇವಣಿ ಕೂಡ ಹೆಚ್ಚಿಗೆ ಮಾಡಿದ್ದಾರೆ ಎಂದು ಗೊತ್ತಾಗಿದೆ.

***

ಜಿಲ್ಲೆ ಘೋಷಣೆಯಾದ ನಂತರ ರಿಯಲ್‌ ಎಸ್ಟೇಟ್‌ ಚುರುಕುಗೊಂಡಿರುವುದು ನಿಜ. ಅನೇಕ ಜನ ನಿವೇಶನ, ಜಮೀನಿಗಾಗಿ ಸಂಪರ್ಕಿಸುತ್ತಿದ್ದಾರೆ

- ರಮೇಶ, ರಿಯಲ್‌ ಎಸ್ಟೇಟ್‌ ಉದ್ಯಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT