ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳಂದೂರು, ವರ್ತೂರು ಕೆರೆಗಳ ಪುನಶ್ಚೇತನ: ಚಿಗುರಿದ ಕನಸು?

ಜಲಕಾಯಗಳ ಅಭಿವೃದ್ಧಿಗೆ ಟೆಂಡರ್‌ ಆಹ್ವಾನ
Last Updated 2 ಫೆಬ್ರುವರಿ 2020, 20:07 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಒಳಚರಂಡಿಯ ಕೊಳಚೆ ನೀರು ಸೇರಿ ಕಲುಷಿತಗೊಂಡಿರುವ ಬೆಳ್ಳಂದೂರು ಕೆರೆ ಹಾಗೂ ವರ್ತೂರು ಕೆರೆಗಳು ಮರಳಿ ಗತವೈಭವ ಪಡೆಯಬೇಕು ಎಂಬುದು ದಶಕಗಳ ಕನಸು. ನೀರಿನ ಕುರಿತ ಕಾಳಜಿ ಇರುವ ಜನರ ಹೋರಾಟ, ನ್ಯಾಯಾಂಗದ ಮಧ್ಯಪ್ರವೇಶಗಳ ಬಳಿಕ ಜಡ್ಡುಗಟ್ಟಿದ್ದ ಆಡಳಿತ ವ್ಯವಸ್ಥೆ ಕೊನೆಗೂ ಎಚ್ಚೆತ್ತುಕೊಂಡಿದೆ. ಈ ಎರಡು ಕೆರೆಗಳ ಪುನಶ್ಚೇತನದ ಬಗ್ಗೆ ಹೊಸ ಕನಸು ಚಿಗುರಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಈ ಎರಡೂ ಜಲಕಾಯಗಳ ಅಭಿವೃದ್ಧಿಗೆ ಜನವರಿಯಲ್ಲಿ ಟೆಂಡರ್‌ ಆಹ್ವಾನಿಸಿದೆ. ಕೆರೆಯ ಹೂಳೆತ್ತುವುದರ ಜೊತೆಗೆ ಜವುಗು ಪ್ರದೇಶ (ವೆಟ್‌ಲ್ಯಾಂಡ್‌) ಅಭಿವೃದ್ಧಿ, ಆಲ್ಗೇ ಕೊಳಗಳ ನಿರ್ಮಾಣ, ನೀರು ಸಂಸ್ಕರಣಾ ಘಟಕ ನಿರ್ಮಾಣ, ದಂಡೆಗಳನ್ನು ಬಲಪಡಿಸುವಂತಹ ಪ್ರಮುಖ ಅಂಶಗಳು ಈ ಯೋಜನೆಯಲ್ಲಿವೆ. ಅದರ ಜೊತೆಗೆ ಇಲ್ಲಿ ನಡಿಗೆ ಪಥ, ಸೈಕಲ್‌ ಪಥ, ಬಯಲು ರಂಗಮಂದಿರಗಳನ್ನು ನಿರ್ಮಿಸಿ ಇದನ್ನೊಂದು ಚಟುವಟಿಕೆಯ ತಾಣವನ್ನಾಗಿ ರೂಪಿಸುವ ಉದ್ದೇಶವೂ ಇದೆ.

ಅಭಿವೃದ್ಧಿಯ ಸಲುವಾಗಿ ಎರಡೂ ಕೆರೆಗಳ ನೀರನ್ನು ಖಾಲಿ ಮಾಡಲಾಗುತ್ತಿದೆ. ಕೆರೆಗೆ ಮತ್ತೆ ಕೊಳಚೆ ನೀರು ಸೇರದಂತೆ ತಡೆದು, ಅದು ಸಾಗಿ ಹೋಗಲು ಪ್ರತ್ಯೇಕ ಕಾಲುವೆಗಳನ್ನು ನಿರ್ಮಿಸಲಾಗಿದೆ. ಹೂಳೆತ್ತುವುದಕ್ಕೆ ಸಿದ್ಧತೆ ನಡೆದಿದೆ.

ಈ ಕೆರೆಗಳನ್ನು ಉಳಿಸುವ ಹೋರಾಟ ಮೂರು ದಶಕಗಳಿಂದ ನಡೆದಿದೆ. 1987ರಲ್ಲೇ ಬೆಳ್ಳಂದೂರು ಗ್ರಾಮ ಪಂಚಾಯಿತಿಯು ಈ ಕೆರೆಯ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆದಿತ್ತು. ಮೂರು ದಶಕಗಳ ಹಿಂದೆಯೇ ಜಗನ್ನಾಥ ರೆಡ್ಡಿ ಹಾಗೂ ರಾಮಮೂರ್ತಿ ಅವರು ಈ ಜಲಕಾಯಗಳ ರಕ್ಷಣೆಗೆ ಸಾಕಷ್ಟು ಹೋರಾಟ ನಡೆಸಿದ್ದರು ಎಂದು ಸ್ಮರಿಸುತ್ತಾರೆ ಬೆಳ್ಳಂದೂರು
ನಿವಾಸಿಗಳು.

ಕಾಮಗಾರಿ ಕೈಗೊಂಡ ಬಳಿಕವೂ ಜಲಕಾಯಗಳ ಸ್ಥಿತಿ ಸುಧಾರಣೆಯಾಗದ ಸಾಕಷ್ಟು ತಾಜಾ ಉದಾಹರಣೆಗಳು ಕಣ್ಣಮುಂದಿವೆ. ಹಾಗಾಗಿ ಪುನಶ್ಚೇತನ ಕಾರ್ಯ ಹಾದಿ ತಪ್ಪದಂತೆ ಎಚ್ಚರ ವಹಿಸಬೇಕು ಎಂಬುದು ನಾಗರಿಕರ ಅಭಿಪ್ರಾಯ.

ಅಭಿವೃದ್ಧಿಪಡಿಸಿದರಷ್ಟೇ ಸಾಲದು: ಹೂಳೆತ್ತಿ ಕೆರೆಯನ್ನು ಸುಧಾರಣೆ ಮಾಡಲಿ. ಜೊತೆಗೆ ಕಲುಷಿತ ನೀರು ಮತ್ತೆ ಈ ಕೆರೆಗಳ ಒಡಲು ಸೇರದಂತೆ ನೋಡಿಕೊಳ್ಳುವ ಅಗತ್ಯವೂ ಇದೆ ಎನ್ನುತ್ತಾರೆ ಈ ಕೆರೆಗಳನ್ನು ಉಳಿಸುವ ಹೋರಾಟದಲ್ಲಿ ತೊಡಗಿಸಿಕೊಂಡ ಸ್ಥಳೀಯರು.

‘1974ರಲ್ಲಿ ನಗರಕ್ಕೆ ಕಾವೇರಿ ನೀರನ್ನು ಹರಿಸುವ ಕಾರ್ಯ ಆರಂಭವಾಯಿತು. ಅದರಿಂದಾಚೆಗೆ ನಗರದ ಒಂದೊಂದೇ ಕೆರೆಗಳು ಅವನತಿಯ ಹಾದಿ ಹಿಡಿದವು. ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳಿಗೆ 1980ರ ದಶಕದಲ್ಲೇ ಕಲುಷಿತ ನೀರು ಸೇರಲು ಆರಂಭಿಸಿತ್ತು. ಆದರೆ, ನಮಗೆ ಅದರ ಅರಿವಿರಲಿಲ್ಲ. 1997ರವರೆಗೂ ನಾವು ಈ ಕೆರೆಗಳ ನೀರನ್ನು ಕುಡಿಯುವುದಕ್ಕೂ ಬಳಸಿದ್ದೇವೆ. ಚರ್ಮರೋಗ ಮತ್ತಿತರ ಕಾಯಿಲೆಗಳು ಕಾಣಿಸಿಕೊಳ್ಳುವುದಕ್ಕೆ ಕೆರೆ ಕಲುಷಿತಗೊಂಡಿದ್ದೇ ಕಾರಣ ಎಂದು ಮನದಟ್ಟಾದ ಬಳಿಕವಷ್ಟೇ ಅದರ ನೀರಿನ ಬಳಕೆ ನಿಲ್ಲಿಸಿದ್ದೆವು. ನಂತರ ಕೃಷಿಗೆ ಮಾತ್ರ ಬಳಸುತ್ತಿದ್ದೆವು. ಈಗ ಅದೂ ಇಲ್ಲ. ಈ ಕೆರೆ ಅಭಿವೃದ್ಧಿಗೊಂಡು ಮೊದಲಿನಂತಾಗಬೇಕು ಎಂಬುದು ನಮ್ಮ ಕನಸು’ ಎನ್ನುತ್ತಾರೆ ವರ್ತೂರು ರೈಸಿಂಗ್‌ ಸಂಘಟನೆಯ ಜಗದೀಶ ರೆಡ್ಡಿ.

ಸಮಿತಿಯ ಮೇಲುಸ್ತುವಾರಿ: ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳ ಪುನಶ್ಚೇತನ ಕಾರ್ಯದ ಮೇಲುಸ್ತುವಾರಿಯನ್ನು ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನೇಮಿಸಿರುವ ನ್ಯಾಯಮೂರ್ತಿ ಸಂತೋಷ ಹೆಗ್ಡೆ ನೇತೃತ್ವದ ಸಮಿತಿ ನೋಡಿಕೊಳ್ಳುತ್ತಿದೆ. ಈ ಸಮಿತಿ ಆಗಾಗ ಈ ಕೆರೆಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯದ ಪ್ರಗತಿಯನ್ನೂ ಪರಿಶೀಲಿಸುತ್ತಿದೆ.

ಕೆರೆ ಬತ್ತಲಿಲ್ಲ– ಹೂಳೂ ಎತ್ತಲಿಲ್ಲ

ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳು 1987ರವರೆಗೂ ಪ್ರತಿವರ್ಷ ಬತ್ತುತ್ತಿದ್ದವು. ಮಳೆಗಾಲದಲ್ಲಿ ಮತ್ತೆ ಭರ್ತಿಯಾಗುತ್ತಿದ್ದವು. ಬೇಸಿಗೆಯಲ್ಲಿ ಈ ಕೆರೆಗಳ ಹೂಳೆತ್ತಲಾಗುತ್ತಿತ್ತು ಎಂದು ಸ್ಮರಿಸುತ್ತಾರೆ ಸ್ಥಳೀಯರು.

‘1987ರಲ್ಲೂ ಈ ಕೆರೆಗಳ ಹೂಳೆತ್ತಿದ ನೆನಪಿದೆ. ಯಾವಾಗ ಒಳಚರಂಡಿ ನೀರು ಸೇರಲು ಆರಂಭವಾದ ಬಳಿಕ ಈ ಕೆರೆಗಳು ಬತ್ತಲೇ ಇಲ್ಲ. ಹೂಳೆತ್ತುವುದಂತೂ ನಿಂತೇ ಹೋಯಿತು. ಒಂದು ಕಾಲದಲ್ಲಿ ಕುಡಿಯುವ ನೀರು ಒದಗಿಸುತ್ತಿದ್ದ ಈ ಕೆರೆಗಳು ಸಂಪೂರ್ಣ ಕಲುಷಿತ ನೀರಿನ ಆಗರಗಳಾದವು’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಜಗದೀಶ ರೆಡ್ಡಿ. ಈ ಎರಡು ಕೆರೆಗಳಲ್ಲಿ 85 ಲಕ್ಷ ಟನ್‌ಗಳಷ್ಟು ಹೂಳು ತುಂಬಿದೆ ಎಂದು ಬಿಡಿಎ ಅಂದಾಜು ಮಾಡಿದೆ. ಒಳಚರಂಡಿ ನೀರು ಮತ್ತು ಕೈಗಾರಿಕೆಗಳ ತ್ಯಾಜ್ಯನೀರಿನಿಂದಾಗಿ ಈ ಕೆರೆಯನ್ನು ಸೇರಿದ ರಾಸಾಯನಿಕಗಳಿಂದ ಕಲುಷಿತಗೊಂಡಿರುವ ಹೂಳಿನ ವಿಲೇವಾರಿಯೂ ಪ್ರಾಧಿಕಾರದ ಪಾಲಿಗೆ ಸವಾಲಿನದಾಗಿದೆ.

‘ಪರಿಸರ ವ್ಯವಸ್ಥೆ ಮರುಸ್ಥಾಪನೆ’

‘ಈ ಕೆರೆಗಳೆರಡೂ ರಾಸಾಯನಿಕಗಳಿಂದ ತೀರಾ ಕಲುಷಿತಗೊಂಡಿರುವುದರಿಂದ ಇವುಗಳ ಜೈವಿಕ ವ್ಯವಸ್ಥೆ ಪೂರ್ತಿ ಕೆಟ್ಟುಹೋಗಿದೆ. ಇವುಗಳ ಹೂಳನ್ನು ಸಂಪೂರ್ಣ ತೆರವುಗೊಳಿಸಿ, ಮತ್ತೆ ಮಳೆ ನೀರಿನಿಂದ ಈ ಕೆರೆಗಳು ತುಂಬುವಂತೆ ಮಾಡಿದ್ದೇ ಆದರೆ, ಇವುಗಳ ಪರಿಸರ ವ್ಯವಸ್ಥೆ ಗತವೈಭವಕ್ಕೆ ಮರಳಲಿದೆ’ ಎನ್ನುತ್ತಾರೆ ಐಐಎಸ್ಸಿಯ ಪರಿಸರ ವಿಜ್ಞಾನಿ ಪ್ರೊ.ಟಿ.ವಿ ರಾಮಚಂದ್ರ ರಾವ್‌. ‘ಈ ಕೆರೆಗಳಿಗೆ ಹೊರಗಿನ ಪ್ರಭೇದಗಳ ಜೀವಿಗಳು ಸಸ್ಯಗಳು ಸೇರದಂತೆ ಎಚ್ಚರ ವಹಿಸಬೇಕು. ಇಲ್ಲಿ ಹಿಂದೆ ಯಾವ ಪ್ರಭೇದಗಳ ಮೀನುಗಳು ಹಾಗೂ ಇತರ ಜಲಚರಗಳಿದ್ದವೋ ಅವು ಸಹಜವಾಗಿಯೇ ಮತ್ತೆ ಬಂದು ಸೇರಿಕೊಳ್ಳಲಿವೆ. ಈ ಪ್ರದೇಶದ ಅಂತರ್ಜಲವೂ ವೃದ್ಧಿಯಾಗಲಿದೆ’ ಎಂದು ತಿಳಿಸಿದರು.

ಇಲಾಖೆಗಳ ನಡುವೆ ಸಮನ್ವಯ ಇರಲಿ

ಬೆಳ್ಳಂದೂರು ಮತ್ತು ವರ್ತೂರು ಕೆರೆಗಳು ಬಿಡಿಎ ಅಧೀನದಲ್ಲಿವೆ. ಇವುಗಳಿಗೆ ಮಳೆ ನೀರು ತರುವ ರಾಜಕಾಲುವೆಗಳು ಬಿಬಿಎಂಪಿ ಸ್ವತ್ತುಗಳು. ನಗರದಲ್ಲಿ ಉತ್ಪಾದನೆಯಾಗುವ ಅಷ್ಟೂ ತ್ಯಾಜ್ಯನೀರಿಗೆ ಜಲಮಂಡಳಿ ಹೊಣೆ. ನೀರಿನ ಮೂಲಗಳು ಕಲುಷಿತಗೊಳಿಸುವವರ ಕಿವಿಹಿಂಡಬೇಕಾದುದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ). ಈ ನಾಲ್ಕೂ ಸರ್ಕಾರಿ ಸಂಸ್ಥೆಗಳು ಸಮನ್ವಯದಿಂದ ಕೆಲಸ ನಿರ್ವಹಿಸಿದರೆ ಮಾತ್ರ ಈ ಕೆರೆ ಭವಿಷ್ಯದಲ್ಲೂ ಕಲುಷಿತಗೊಳ್ಳದಂತೆ ತಡೆಯಬಹುದು.

‘ಬಿಬಿಎಂಪಿ ರಾಜಕಾಲುವೆಗಳಿಗೆ ಕಲುಷಿತ ನೀರು ಸೇರದಂತೆ ನೋಡಿಕೊಳ್ಳಬೇಕು. ಯಾವುದಾದರೂ ಕೈಗಾರಿಕೆಗಳು, ಹೋಟೆಲ್‌ಗಳು, ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ಶುದ್ಧೀಕರಿಸದ ತ್ಯಾಜ್ಯ ನೀರನ್ನು ರಾಜಕಾಲುವೆಗೆ ಬಿಟ್ಟರೆ ತಕ್ಷಣವೇ ಗುರುತಿಸಿ ಅಂತಹವರ ವಿರುದ್ಧ ಕ್ರಮಕೈಗೊಳ್ಳುವಂತಾಗಬೇಕು. ಅನೇಕ ಅಪಾರ್ಟ್‌ಮೆಂಟ್‌ಗಳು ಕಾಟಾಚಾರಕ್ಕೆ ತ್ಯಾಜ್ಯ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ಹೊಂದಿರುತ್ತವೆ. ಆದರೆ, ನೀರನ್ನು ಶುದ್ಧೀಕರಿಸುವುದೇ ಇಲ್ಲ. ಅವುಗಳ ಮೇಲೂ ನಿಗಾ ಇಡುವ ವ್ಯವಸ್ಥೆ ಜಾರಿ ಆಗಬೇಕು’ ಎಂಬುದು ಹೋರಾಟಗಾರರ ಒತ್ತಾಯ.

‘ಹಣಕಾಸಿನ ಕೊರತೆ ಇಲ್ಲ’

ಈ ಎರಡೂ ಕೆರೆಗಳ ಅಭಿವೃದ್ಧಿಗೆ ಹಣಕಾಸಿನ ಕೊರತೆ ಇಲ್ಲ. ನಗರಾಭಿವೃದ್ಧಿ ಇಲಾಖೆ ಇವುಗಳ ಅಭಿವೃದ್ಧಿಗಾಗಿ₹ 500 ಕೋಟಿ ಅನುದಾನವನ್ನು ಬಿಬಿಎಂಪಿಗೆ ಬಿಡುಗಡೆ ಮಾಡಿದೆ. ಎನ್‌ಜಿಟಿ ಆದೇಶದ ಪ್ರಕಾರ ಈ ಮೊತ್ತವನ್ನು ಎಸ್ಟ್ಕ್ರೌ ಖಾತೆ ತೆರೆದು ಠೇವಣಿ ಇಡಲಾಗಿದೆ. ಈ ಕೆರೆಗಳ ಪರಿಸರ ವ್ಯವಸ್ಥೆಗೆ ಉಂಟಾದ ಹಾನಿ ಸರಿಪಡಿಸಲು ₹ 50 ಕೋಟಿಯನ್ನು (ದಂಡನಾ ಶುಲ್ಕ) ಬಿಬಿಎಂಪಿ ಪಾವತಿಸಿದೆ.

‘ಈ ಎರಡೂ ಕೆರೆಗಳ ಅಭಿವೃದ್ಧಿಗೆ ಒಟ್ಟು ₹363 ಕೋಟಿ ವೆಚ್ಚವಾಗಲಿದೆ. ಆದರೆ, ಬಿಡಿಎಗೆ ₹ 200 ಕೋಟಿ ಬಿಡುಗಡೆಯಾಗಿದೆ. ಉಳಿದ ಹಣವೂ ಹಂತಹಂತವಾಗಿ ಬಿಡುಗಡೆಯಾಗಲಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT