ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

370 ಕೋಟಿ ವರ್ಷಗಳ ಹಿಂದೆಯೇ ಜೀವ ಅಸ್ತಿತ್ವ

ಗ್ರೀನ್‌ಲ್ಯಾಂಡ್‌ನಲ್ಲಿ ಅತ್ಯಂತ ಹಳೆಯ ಪಳೆಯುಳಿಕೆ ಪತ್ತೆ; ಭೂಮಿಯ ಇತಿಹಾಸಕ್ಕೆ ಹೊಸ ಹೊಳಹು
Last Updated 1 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್‌ (ಪಿಟಿಐ): ಭೂಮಿಯು 370 ಕೋಟಿ ವರ್ಷಗಳ ಹಿಂದೆಯೇ ಜೀವಪೋಷಕವಾಗಿತ್ತೇ? ‘ಹೌದು’ ಎಂದು ಹೇಳುತ್ತಿದ್ದಾರೆ ವಿಜ್ಞಾನಿಗಳು. ಜಗತ್ತಿನ ಅತ್ಯಂತ ಹಳೆಯದಾದ, ಅಂದರೆ 370 ಕೋಟಿ ವರ್ಷಗಳಷ್ಟು ಹಿಂದಿನ ಸ್ಟ್ರೊಮಾಟೊಲೈಟ್‌ ಪಳೆಯುಳಿಕೆಗಳನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

ಆ ಕಾಲದಲ್ಲಿಯೇ ಭೂಮಿಯಲ್ಲಿ ಜೀವಿಗಳು ಇದ್ದವು ಎಂಬುದಕ್ಕೆ ಇವು ಸಾಕ್ಷ್ಯವನ್ನು ನೀಡಿವೆ. ಇಷ್ಟು ಹಳೆಯದಾದ  ಪಳೆಯುಳಿಕೆ ಗಳು ಪತ್ತೆಯಾಗುತ್ತಿರುವುದು ಇದೇ ಮೊದಲು.

‘ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಪತ್ತೆಯಾಗಿದ್ದ 22 ಕೋಟಿ ವರ್ಷಗಳ ಹಿಂದಿನ ಪಳೆಯುಳಿಕೆಗಳು, ಇದುವರೆಗೆ ಭೂಮಿ ಮೇಲೆ ಕಂಡು ಬಂದಿದ್ದ ಅತ್ಯಂತ ಹಳೆಯ ಪಳೆಯುಳಿಕೆಯಾಗಿದ್ದವು’ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ವೊಲ್ಲೊಂಗಾಂಗ್‌ ವಿಶ್ವವಿದ್ಯಾಲಯದ  ಅಲೆನ್‌ ನಟ್‌ಮನ್‌ ಹೇಳಿದ್ದಾರೆ.

‘ಭೂಮಿಯ ಆರಂಭ ಕಾಲದ ಜೀವ ವೈವಿಧ್ಯವನ್ನು ಅರ್ಥಮಾಡಿಕೊಳ್ಳಲು ಈ ಪಳೆಯುಳಿಕೆಗಳು ನೆರವಾಗಲಿವೆ. ಜೊತೆಗೆ, ಮಂಗಳಗ್ರಹದಲ್ಲಿ ಜೀವಿಗಳ ಅಸ್ತಿತ್ವದ ಕುರಿತ ನಮ್ಮ ಗ್ರಹಿಕೆಯ ಮೇಲೂ ಇವುಗಳು ಪ್ರಭಾವ ಬೀರಲಿದೆ’ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಭೂಮಿ ಆರಂಭದ ಕಾಲದಿಂದಲೂ ಇಲ್ಲಿ ಜೀವಿಗಳು ನೆಲೆಸಿವೆ ಎಂಬುದಕ್ಕೆ ಪುರಾವೆಗಳನ್ನು ಈ ಆವಿಷ್ಕಾರ ನೀಡಿದೆ.

‘ಭೂಮಿಯ ಇತಿಹಾಸದ ಬಗ್ಗೆ ಪ್ರಸ್ತಾಪವಾದಾಗಲೆಲ್ಲಾ ಏಕಕೋಶ ಜೀವಿಗಳಿಂದ ಜೀವಿಯ ಉಗಮವಾಗಿರುವ ಬಗ್ಗೆ ಚರ್ಚೆಯಾಗುತ್ತದೆ. ಸ್ಟ್ರೊಮಾಟೊಲೈಟ್‌ ಪಳೆಯುಳಿಕೆಗಳು  ಸೂಕ್ಷ್ಮಾಣುಗಳ ಸಮುದಾಯದಿಂದಾಗಿ ಉಂಟಾಗಿರುವ ಪದರಗಳನ್ನೊಳಗೊಂಡ ಶಿಲಾ ರಚನೆಗಳು.

ಇವುಗಳು ಪುರಾತನ ಜೀವಿಗಳ ಅಸ್ತಿತ್ವದ ಬಗ್ಗೆ ಸಾಕ್ಷ್ಯಗಳನ್ನು ನೀಡುವುದರ ಜೊತೆಗೆ, ಆ ಕಾಲದ ಸಂಕೀರ್ಣ ಪರಿಸರ ವ್ಯವಸ್ಥೆಯ ಬಗ್ಗೆಯೂ ಮಾಹಿತಿ ನೀಡುತ್ತವೆ’ ಎಂದು ನಟ್‌ಮನ್‌ ವ್ಯಾಖ್ಯಾನಿಸಿದ್ದಾರೆ.

‘370 ಕೋಟಿ ವರ್ಷಗಳ ಹಿಂದೆಯೇ ವಿಭಿನ್ನವಾದ ಸೂಕ್ಷ್ಮಾಣು ಜೀವಿಗಳೂ ಭೂಮಿಯಲ್ಲಿದ್ದವು ಎಂಬುದನ್ನು ಇದು ತೋರಿಸುತ್ತದೆ’ ಎಂದು ವಿವರಿಸಿದ್ದಾರೆ.

‘ಭೂಮಿ ಸೃಷ್ಟಿಯಾದ ಕೆಲವು ಕೋಟಿ ವರ್ಷಗಳಲ್ಲೇ ಜೀವಿಗಳ ಉಗಮವಾಗಿದೆ ಎಂಬುದನ್ನು ಈ ವೈವಿಧ್ಯವು ಪ್ರತಿಪಾದಿಸುತ್ತದೆ’ ಎಂದು ವಿಶ್ಲೇಷಿಸಿದ್ದಾರೆ. ಈ ಅಧ್ಯಯನವು ಭೂಮಿಯ ಜೀವ ಇತಿಹಾಸಕ್ಕೆ ಹೊಸ ದೃಷ್ಟಿಕೋನ ನೀಡಿದೆ ಎಂದು ಆಸ್ಟ್ರೇಲಿಯನ್‌ ನ್ಯಾಷನಲ್‌ ಯೂನಿವರ್ಸಿಟಿಯ (ಎಎನ್‌ಯು) ಸಹಾಯಕ ಪ್ರಾಧ್ಯಾಪಕಿ ವಿಕ್ಕಿ ಬೆನೆಟ್‌ ಹೇಳಿದ್ದಾರೆ.

‘ಭೂಮಿಯ ಆದಿ ಕಾಲದಲ್ಲಿದ್ದ ಜೀವಿಗಳ ಬಗ್ಗೆ  ಇದುವರೆಗೂ ವದಂತಿಗಳೇ ಹರಿದಾಡುತ್ತಿದ್ದವು. ಆದರೆ ಇದೇ ಮೊದಲ ಬಾರಿಗೆ ಸ್ಪಷ್ಟ ಚಿತ್ರಣ ಸಿಕ್ಕಿದೆ’ ಎಂದಿದ್ದಾರೆ.

*
ಪಳೆಯುಳಿಕೆ ಪತ್ತೆಯಾಗಿದ್ದು ಎಲ್ಲಿ?
ಹಿಮಚ್ಛಾದಿತ ಗ್ರೀನ್‌ಲ್ಯಾಂಡ್‌ನ ಅಂಚಿನಲ್ಲಿರುವ ಇಸುವಾ ಹಸಿರುಶಿಲಾ ಪಟ್ಟಿಯಲ್ಲಿರುವ ಅತ್ಯಂತ ಹಳೆಯ  ಸಂಚಿತ ಶಿಲೆಗಳ ನಡುವೆ ಇದ್ದ ಸ್ಟ್ರೊಮಾಟೊಲೈಟ್‌ ಪಳೆಯುಳಿಕೆಗಳನ್ನು  ವೊಲ್ಲೊಂಗಾಂಗ್‌ ವಿಶ್ವವಿದ್ಯಾಲಯದ (ಯುಒಡಬ್ಲ್ಯು) ಅಧ್ಯಯನಕಾರರ ತಂಡ ಪತ್ತೆ ಹಚ್ಚಿದೆ.

ಇವುಗಳು ಹೆಚ್ಚೇನು ಆಳವಿಲ್ಲದ ಸಮುದ್ರದಡಿ ಇದ್ದವು. ಸಮುದ್ರದ ಮೇಲ್ಮೈ ಮಂಜುಗಡ್ಡೆಯ ಭಾರಿ ತುಂಡು ಇತ್ತೀಚೆಗೆ ಕರಗಿದಾಗ ಸ್ಟ್ರೊಮಾಟೊಲೈಟ್‌ ಪಳೆಯುಳಿಕೆಗಳು ಹೊರಜಗತ್ತಿಗೆ ತೆರೆದುಕೊಂಡಿವೆ.

*
ಏನಿದು ಸ್ಟ್ರೊಮಾಟೊಲೈಟ್‌?

ಸೂಕ್ಷ್ಮಾಣು ಜೀವಿ, ಸಾಮಾನ್ಯವಾಗಿ ಬ್ಯಾಕ್ಟೀರಿಯಾಗಳ (ಸಯನೊಬ್ಯಾಕ್ಟೀರಿಯಾ) ಗುಂಪುಗಳಿಂದ ಸೃಷ್ಟಿಯಾಗಿರುವ, ಪದರಗಳನ್ನು ಹೊಂದಿರುವ ಶಿಲಾರಚನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT