ಶುಕ್ರವಾರ, ಜೂಲೈ 10, 2020
22 °C

ದಾಳಿ ಸಾಧ್ಯತೆ ನಿರ್ಲಕ್ಷಿಸಿದ್ದ ಹಿರಿಯ ಅಧಿಕಾರಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾಳಿ ಸಾಧ್ಯತೆ ನಿರ್ಲಕ್ಷಿಸಿದ್ದ ಹಿರಿಯ ಅಧಿಕಾರಿಗಳು

ಶ್ರೀನಗರ: ಭಯೋತ್ಪಾದಕರು ಕಣಿವೆ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸುವ ಸಂಭವ ಇದೆ ಎಂಬ ವರದಿಗಳನ್ನು ರಕ್ಷಣಾ ಪಡೆಗಳು ನಿರ್ಲಕ್ಷಿಸಿದ್ದ ಸಂಗತಿ ಈಗ ಬೆಳಕಿಗೆ ಬಂದಿದೆ.ಉಗ್ರ ಬುರ್ಹಾನ್ ವಾನಿಯ ಹತ್ಯೆಯಾದ ನಂತರ ಕಾಶ್ಮೀರದಲ್ಲಿ ಪ್ರತಿಭಟನೆಗಳು ಆರಂಭವಾದವು. ಈ ಸಂದರ್ಭದಲ್ಲಿ, ಲಷ್ಕರ್ ಎ ತಯಬಾ ಸಂಘಟನೆಯ ಮುಖಂಡ ಹಫೀಜ್ ಸಯೀದ್ ಮತ್ತು ಹಿಜ್ಬುಲ್ ಮುಜಾಹಿದೀನ್ ಸಂಘಟನೆ ಮುಖಂಡ ಸೈಯದ್ ಸಲಾವುದ್ದೀನ್‌, ಕಾಶ್ಮೀರ ಹಾಗೂ ದೇಶದ ಬೇರೆ ಬೇರೆ ಕಡೆಗಳಲ್ಲಿರುವ ಸೇನಾ ಶಿಬಿರಗಳ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಒಡ್ಡಿದ್ದರು.‘ಕಾಶ್ಮೀರದ ಇನ್ನಷ್ಟು ಜನರನ್ನು ಆತ್ಮಹತ್ಯಾ ಬಾಂಬರ್‌ಗಳನ್ನಾಗಿ ತರಬೇತಿಗೊಳಿಸಲಾಗುವುದು. ಕಾಶ್ಮೀರವನ್ನು ಭಾರತೀಯ ಸೇನೆಯ ಪಾಲಿಗೆ ಸ್ಮಶಾನವನ್ನಾಗಿ ಮಾಡಲಾಗುವುದು’ ಎಂದು ಇವರಿಬ್ಬರು ಉಗ್ರರು ಹೇಳಿದ್ದರು.ಈ ಬೆದರಿಕೆಯನ್ನು ಕಡೆಗಣಿಸುವಂತಿಲ್ಲ ಎಂಬ ಮಾಹಿತಿ ಗುಪ್ತಚರ ಸಂಸ್ಥೆಗಳಿಂದ ಸಿಕ್ಕಿದ್ದರೂ, ನವದೆಹಲಿಯಲ್ಲಿರುವ ಸೇನಾಪಡೆಗಳ ಪ್ರಮುಖರು ಇವುಗಳನ್ನು ನಿರ್ಲಕ್ಷಿಸಿದ್ದರು ಎಂದು ಮೂಲಗಳು ತಿಳಿಸಿವೆ.  ‘ಪಾಕಿಸ್ತಾನದ ಉಗ್ರರು ಹತ್ತಾರು ಸಂಖ್ಯೆಯಲ್ಲಿ ಕಾಶ್ಮೀರಕ್ಕೆ ಆಗಸ್ಟ್‌ನಲ್ಲಿ ನುಸುಳಿದ್ದಾರೆ.ಸೇನೆಯ ಮೇಲೆ ಭಾರಿ ಪ್ರಮಾಣದ ದಾಳಿ ನಡೆಸುವ ಉದ್ದೇಶ ಅವರದ್ದು ಎಂದು ಸೇನೆಯ ಪ್ರಮುಖರಿಗೆ ಮಾಹಿತಿ ನೀಡಲಾಗಿತ್ತು’ ಎಂದು ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.ಅತ್ಯುನ್ನತ ಮಟ್ಟದ ತರಬೇತಿ ಪಡೆದಿದ್ದ, ಉಗ್ರವಾದಿ ವಿಚಾರಗಳಿಗೆ ಮಾರುಹೋಗಿದ್ದ ಭಯೋತ್ಪಾದಕರ ತಂಡ ಭಾನುವಾರದ ದಾಳಿ ನಡೆಸಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು.‘ಕಾರ್ಯಾಚರಣೆಗಳಲ್ಲಿ ಸತತವಾಗಿ ಪಾಲ್ಗೊಂಡ ಯೋಧರು ಶಿಬಿರಕ್ಕೆ ಮರಳಿದ ಸಂದರ್ಭದಲ್ಲೇ ಆತ್ಮಹತ್ಯಾ ದಾಳಿ ನಡೆದಿದೆ. ಅಂದರೆ, ಈ ಶಿಬಿರದ ಬಗ್ಗೆ ಭಯೋತ್ಪಾದಕರು ಮೊದಲೇ ಮಾಹಿತಿ ಸಂಗ್ರಹಿಸಿದ್ದರು’ ಎಂದು ಮೂಲಗಳು ಹೇಳಿವೆ.ಭಯೋತ್ಪಾದಕರ ದಾಳಿ ಹೇಗಿರಬೇಕು ಎಂಬುದನ್ನು ಪಾಕಿಸ್ತಾನದಲ್ಲಿ ತೀರಾ ಜಾಗರೂಕತೆಯಿಂದ ಯೋಜಿಸಲಾಗಿತ್ತು. ಭಯೋತ್ಪಾದಕರಿಗೆ ಉರಿ ಪ್ರದೇಶದ ಬಗ್ಗೆ ಸಂಪೂರ್ಣ ಮಾಹಿತಿ ಇತ್ತು, ಸೇನೆಯ ಶಿಬಿರಗಳು ಎಲ್ಲಿವೆ ಎಂಬ ಅರಿವು ಇತ್ತು ಎಂದು ಗುಪ್ತಚರ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು. ಶಿಬಿರದ ಒಳಗಿನ ಚಟುವಟಿಕೆಗಳ ಮಾಹಿತಿ ಭಯೋತ್ಪಾದಕರಿಗೆ ಸಿಕ್ಕಿದ್ದು ಹೇಗೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.ಭಯೋತ್ಪಾದಕರು ದಾಳಿ ನಡೆಸಲು ಹೊಂಚು ಹಾಕುತ್ತಿರುವ ಮಾಹಿತಿ ಇರುವ ಕಾರಣ, ಗಡಿ ನಿಯಂತ್ರಣ ರೇಖೆಯ ಸಮೀಪದ ಎಲ್ಲ ಸೈನಿಕ ಶಿಬಿರಗಳು ಕಟ್ಟೆಚ್ಚರದಿಂದ ಇರಬೇಕು ಎಂಬ ಎಚ್ಚರಿಕೆ ನೀಡಲಾಗಿದೆ ಎಂದು ಗೊತ್ತಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.