ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಮತದಾರರಲ್ಲಿ ರಾಜಕೀಯ ಜಿಗುಪ್ಸೆ

ಅಧ್ಯಕ್ಷೀಯ ಚುನಾವಣೆ ಕುರಿತು ದಿ ನ್ಯೂಯಾರ್ಕ್‌ ಟೈಮ್ಸ್‌’ – ‘ಸಿಬಿಎಸ್‌ ನ್ಯೂಸ್‌’ ಸಮೀಕ್ಷೆ
Last Updated 4 ನವೆಂಬರ್ 2016, 19:30 IST
ಅಕ್ಷರ ಗಾತ್ರ
ನ್ಯೂಯಾರ್ಕ್ (ಪಿಟಿಐ): ಅಧ್ಯಕ್ಷೀಯ ಚುನಾವಣೆಗೆ ದಿನಗಣನೆ ಶುರುವಾಗಿರುವಾಗಲೇ ಬಹುಪಾಲು ಮತದಾರರು ಅಮೆರಿಕದ ರಾಜಕೀಯದ ಬಗ್ಗೆ ಜಿಗುಪ್ಸೆ ಹೊಂದಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
 
ಚುನಾವಣೆಯ ಬಳಿಕ ದೇಶವನ್ನು ಒಗ್ಗೂಡಿಸುವ ವಿಚಾರದಲ್ಲಿ ಡೆಮಾಕ್ರಟಿಕ್‌ ಪಕ್ಷದ ಹಿಲರಿ ಕ್ಲಿಂಟನ್ ಮತ್ತು ರಿಪಬ್ಲಿಕನ್ ಪಕ್ಷದ ಡೊನಾಲ್ಡ್‌ ಟ್ರಂಪ್‌ ಇಬ್ಬರೂ ಅಪ್ರಾಮಾಣಿಕರು ಮತ್ತು ಅಸಮರ್ಥರು ಎಂದು ಮತದಾರರು ಅಭಿಪ್ರಾಯಪಟ್ಟಿದ್ದಾರೆ.
 
ಭಾರಿ ಪ್ರಮಾಣದ ಮತದಾರರು ಅಮೆರಿಕದ ರಾಜಕೀಯ ಸನ್ನಿವೇಶದ ಕುರಿತು ಜಿಗುಪ್ಸೆ ಹೊಂದಿದ್ದಾರೆ. ಅಲ್ಲದೆ, ‘ಐತಿಹಾಸಿಕ ಅಸಹ್ಯಕರ ಚುನಾವಣಾ ಪ್ರಚಾರ’ದ ಬಳಿಕ ಎರಡೂ ಪಕ್ಷಗಳ ಅಭ್ಯರ್ಥಿಗಳು ದೇಶವನ್ನು ಒಂದುಗೂಡಿಸುತ್ತಾರೆ ಎಂಬ ಬಗ್ಗೆ ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ‘ದಿ ನ್ಯೂಯಾರ್ಕ್‌ ಟೈಮ್ಸ್‌’ ಮತ್ತು ‘ಸಿಬಿಎಸ್‌ ನ್ಯೂಸ್‌’ ನಡೆಸಿರುವ ಸಮೀಕ್ಷೆ ಹೇಳಿದೆ.
 
ಹಿಲರಿ ಮತ್ತು ಟ್ರಂಪ್‌ ಅವರು ಚುನಾವಣಾ ಅವಧಿ ಮುಕ್ತಾಯದ ನಂತರ ದೇಶವನ್ನು ಒಗ್ಗೂಡಿಸಲಾರರು ಎಂದು ಬಹುಪಾಲು ಮಂದಿ ಅಭಿಪ್ರಾಯ ಪಟ್ಟಿದ್ದಾರೆ.
ಚುನಾವಣಾ ಪ್ರಚಾರವು ಉದ್ವೇಗ ಮೂಡಿಸುವ ಬದಲು ಅಸಹ್ಯ ಉಂಟುಮಾಡಿದೆ ಎಂದು 10ರಲ್ಲಿ ಎಂಟು ಮತದಾರರು ಹೇಳಿದ್ದಾರೆ. ಹಿಲರಿ ಮತ್ತು ಟ್ರಂಪ್‌ ಅವರು ಅಪ್ರಾಮಾಣಿಕರಾಗಿದ್ದಾರೆ ಹಾಗೂ ಪ್ರತಿಕೂಲಕರವಾಗಿದ್ದಾರೆ ಎಂದು  ಹೆಚ್ಚಿನ ಮತದಾರರಿಗೆ ಅನಿಸಿದೆ.
 
ಹಿಲರಿ ಅವರು ಟ್ರಂಪ್ ಅವರಿಗಿಂತ ಎರಡಂಕಿ ಮುನ್ನಡೆ ಪಡೆದುಕೊಳ್ಳಲು ಯಶಸ್ವಿಯಾಗಿದ್ದರೂ, ಮತಗಳ ಅಂತರ ತೀರಾ ಕಡಿಮೆಯಿದೆ. ಆದರೆ, ಮಹಿಳೆಯರ ಬೆಂಬಲ ಮತ್ತು ಶ್ವೇತವರ್ಣೀಯರೇತರ ಮತಗಳ ಲಾಭ ಅವರಿಗಿದೆ. ಸಮೀಕ್ಷೆಯ ಚುನಾವಣೆಯಲ್ಲಿ ಹಿಲರಿ ಶೇ 45ರಷ್ಟು ಮತಗಳನ್ನು ಪಡೆದಿದ್ದರೆ, ಟ್ರಂಪ್‌ ಶೇ 42ರಷ್ಟು ಮತ ಗಳಿಸಿದ್ದಾರೆ.
 
ಹಿಲರಿ ಅವರ ಇ–ಮೇಲ್ ವಿವಾದದ ಕುರಿತು ಮರು ತನಿಖೆ ನಡೆಸುವುದಾಗಿ ಎಫ್‌ಬಿಐ ಹೇಳಿದ ಬಳಿಕ ಈ ಸಮೀಕ್ಷೆ ನಡೆಸಲಾಗಿದೆ. ಅಂತಿಮ ಹಂತದಲ್ಲಿ ಇಬ್ಬರೂ ಅಭ್ಯರ್ಥಿಗಳ ಕುರಿತು ಮಾಹಿತಿ ಹೊರಹಾಕುವುದರಿಂದ ತಮ್ಮ ಮತಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಹತ್ತರಲ್ಲಿ ಆರು ಮಂದಿ ಹೇಳಿದ್ದಾರೆ. ಆದರೆ, ಹಿಲರಿ ವಿರುದ್ಧದ ಆರೋಪದಲ್ಲಿನ ಇತ್ತೀಚಿನ ಬೆಳವಣಿಗೆ ಗಳಿಗಿಂತಲೂ ಟ್ರಂಪ್‌ ವಿರುದ್ಧದ ಆರೋಪಗಳು ಹೆಚ್ಚು ನಕಾರಾತ್ಮಕ ಪರಿಣಾಮ ಬೀರುತ್ತವೆ ಎಂದು ಹೆಚ್ಚಿನ ಮತದಾರರು ಅಭಿಪ್ರಾಯಪಟ್ಟಿದ್ದಾರೆ.
 
ಅಮಿತಾಭ್‌ ಕುರಿತು ಕೇಳಿದ್ದ ಹಿಲರಿ: ಹಿಂದಿ ಚಿತ್ರರಂಗದ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ಕುರಿತು ಹಿಲರಿ ಕ್ಲಿಂಟನ್ ಅವರು ತಮ್ಮ ನಿಕಟವರ್ತಿ ಬಳಿ ವಿಚಾರಿಸಿದ್ದರ ಮಾಹಿತಿ ಸೋರಿಕೆ ಯಾದ ಇ–ಮೇಲ್‌ನಿಂದ ಬಹಿರಂಗವಾಗಿದೆ.
 
ಹಿಲರಿ ಅವರು 2011ರ ಜುಲೈನಲ್ಲಿ ತಮ್ಮ ನಿಕಟವರ್ತಿ, ಪಾಕಿಸ್ತಾನ ಮೂಲದ ಹುಮಾ ಅಬೆದಿನ್‌ ಅವರಿಗೆ ಕಳುಹಿಸಿದ್ದ ಇ–ಮೇಲ್‌ನಲ್ಲಿ ‘ನಾವು ಕೆಲವು ವರ್ಷದ ಹಿಂದೆ ಭೇಟಿ ಮಾಡಿದ್ದ ಭಾರತದ ಖ್ಯಾತ ನಟನ ಹೆಸರೇನು’ ಎಂದು ಕೇಳಿದ್ದರು. ಅದಕ್ಕೆ ಹುಮಾ ಅವರು ‘ಅಮಿತಾಭ್ ಬಚ್ಚನ್‌’ ಎಂದು ಪ್ರತಿಕ್ರಿಯೆ ನೀಡಿದ್ದರು.  ಈ ಇ–ಮೇಲ್ ವ್ಯವಹಾರದ ಚಿತ್ರವನ್ನು ವಾಷಿಂಗ್ಟನ್ ಪೋಸ್ಟ್‌ನ ರಾಜಕೀಯ ವರದಿಗಾರ ಜೋಸ್‌ ಎ ಡೆಲ್‌ರಿಯಲ್‌ ಅವರು ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿದ್ದಾರೆ. ಆದರೆ, ಯಾವ ಕಾರಣಕ್ಕೆ ಹಿಲರಿ ಅವರು ಬಚ್ಚನ್ ಅವರ ಕುರಿತು ವಿಚಾರಿಸಿದ್ದರು ಎಂಬುದು ಗೊತ್ತಾಗಿಲ್ಲ.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT