ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಭ ತಂದ ನಾಟಿಕೋಳಿ ಸಾಕಣೆ ಪ್ರಯೋಗ

Last Updated 9 ನವೆಂಬರ್ 2016, 11:08 IST
ಅಕ್ಷರ ಗಾತ್ರ

ಗುಬ್ಬಿ: ತಾಲ್ಲೂಕಿನ ವದಲೂರು ಸಮೀಪ ನೆಲಮಂಗಲದ ಜಯಣ್ಣ ಎಂಬುವರು ತಮ್ಮ 3 ಎಕರೆ ತೆಂಗಿನ ತೋಟದಲ್ಲಿ ಸಾವಿರಾರು ನಾಟಿಕೋಳಿಗಳನ್ನು ಸಾಕಣೆ ಮಾಡಿ ನೂರಾರು ರೈತರಿಗೆ ಕುಕ್ಕುಟೋದ್ಯಮದ ಪಾಠ ಹೇಳುತ್ತಿದ್ದಾರೆ. ಹೊಸದಾಗಿ ಖರೀದಿಸಿದ ತೋಟಕ್ಕೆ ತಾಕತ್ತು ನೀಡಲು ಗೊಬ್ಬರಕ್ಕಾಗಿ ಅಲೆಯುವುದನ್ನು ತಪ್ಪಿಸಲು ಕೋಳಿಗಳನ್ನು ಸಾಕಿದ್ದಾರೆ. ಕೋಳಿಗಳು ದೊಡ್ಡವಾಗಿರುವುದರಿಂದ ಇವುಗಳ ಮಾಂಸದಿಂದ ಸಾಕಷ್ಟು ಆದಾಯ ಸಿಗುತ್ತಿದೆ. ಅಲ್ಲದೆ ಮೊಟ್ಟೆಗಳಿಂದ ಇನ್ನಷ್ಟು ಆದಾಯದ ನಿರೀಕ್ಷೆಯಲ್ಲಿದ್ದಾರೆ.

ಇಲ್ಲಿನ ನಾಟಿ ಕೋಳಿಗಳು ಸಾಂಪ್ರದಾಯಿಕ ಪದ್ಧತಿಯಂತೆ ಬೆಳೆಯುತ್ತಿದ್ದರೂ ಹಾದಿ ಬೀದಿಗಳಲ್ಲಿ ಸುತ್ತುವುದಿಲ್ಲ. ತೋಟದಲ್ಲಿ ಇರುತ್ತವೆ. ತೋಟದ ಹಸಿರ ನಡುವಿನ ಕೀಟ, ಹುಳುಗಳನ್ನು ಹೆಕ್ಕಿ ತಿನ್ನುತ್ತಾ, ಹಸಿರಾಗಿ ಬೆಳೆದ ಕಳೆಯನ್ನು ತಿಂದು ನಾಶ ಮಾಡುತ್ತಿವೆ. ಹಗಲು ಹೊತ್ತು ತೋಟದಲ್ಲಿ ಸುತ್ತಾಡುವ ಕೋಳಿಗಳು, ರಾತ್ರಿ ಹೊತ್ತು ಎರಡು ಶೆಡ್‌ಗಳಲ್ಲಿ ಮಲಗುತ್ತವೆ. ಕೋಳಿಗಳಿಗೆ ನೀರುಣಿಸಲು ಒಂದು ಕೊಳವೆಬಾವಿ ಇದೆ.

ಬೆಂಗಳೂರಿನ ಹೆಸರುಘಟ್ಟದ ಕೋಳಿಫಾರ್ಮ್‌ನಿಂದ ಕೋಳಿಮರಿಗಳನ್ನು ಖರೀದಿಸಿ ತಂದು ಸಾಕಿದ್ದಾರೆ. ಮರಿಗಳು ಹುಟ್ಟಿದ 1 ಗಂಟೆ ನಂತರ ನೇರವಾಗಿ ಇಲ್ಲಿಗೆ ತಂದಿದ್ದಾರೆ. ಪ್ರತಿ ಕೋಳಿ ಮರಿಗೆ ₹26 ವೆಚ್ಚವಾಗಿದ್ದು, ಒಟ್ಟು 2500 ಮರಿಗಳನ್ನು ಬಿಟ್ಟಿದ್ದರು. ಈಗಾಗಲೇ ಕೋಳಿಗಳಿಗೆ ನಾಲ್ಕು ತಿಂಗಳಾಗಿದ್ದು, ಪ್ರತಿ ಕೋಳಿ ಎರಡೂವರೆ ಕೆ.ಜಿ ತೂಗುತ್ತಿವೆ.

ಮೆಸ್ ಅಳವಡಿಕೆಯಿಂದ ರಕ್ಷಣೆ: ತೋಟದಿಂದ ಕೋಳಿಗಳು ಹೊರ ಹೋಗದಂತೆ, ನಾಕಾಣೆ ಅಗಲದ ರಂಧ್ರವಿರುವ ತಂತಿಯ ಮೆಸ್ ಅಳವಡಿಸಲಾಗಿದೆ. 40 ಮೀಟರ್ ಉದ್ದ, 6 ಅಡಿ ಎತ್ತರ ಇರುವ ಮೆಸ್‌ಗೆ ₹6200 ಕೊಟ್ಟು ಖರೀದಿ ಮಾಡಿ ತಂದು ಬಳಸಲಾಗಿದೆ. 3 ಎಕರೆಗೆ 18 ರೋಲ್ ಮೆಸ್‌ ಅಳವಡಿಸಲಾಗಿದೆ. ಇದರಿಂದ ಕೋಳಿಗಳು ಹೊರ ಹೋಗುವುದಿಲ್ಲ. ಹೊರಗೆ ಅಡ್ಡಾಡುವ ನಾಯಿ, ತೋಳ ಹಾಗೂ ಕಾಡು ಪ್ರಾಣಿಗಳಿಂದ ರಕ್ಷಣೆ ಸಿಕ್ಕುತ್ತಿದೆ.

ರಾತ್ರಿ ತಂಗಲು ಎರಡು ಶೆಡ್: ಹಗಲು ತೋಟದಲ್ಲಿ ಅಡ್ಡಾಡುವ ಕೋಳಿಗಳು, ರಾತ್ರಿ ಹೊತ್ತು ಶೆಡ್‌ನಲ್ಲಿ ಮಲಗುತ್ತವೆ. 40x60 ಮತ್ತು  20x40ರ ವ್ಯಾಸದ  ಎರಡು ಶೆಡ್‌ಗಳು ಇವೆ. ಕೋಳಿಗಳು ತಾವು ತಂಗುವ ಶೆಡ್ ಹಾಗೂ ಜಾಗವನ್ನು ಅವುಗಳೇ ಗೊತ್ತು ಮಾಡಿಕೊಂಡಿವೆ. ಮೂರು ಇಂಚು ದಪ್ಪ ಭತ್ತದ ಹೊಟ್ಟನ್ನು ನೆಲಕ್ಕೆ ಹಾಕುತ್ತಾರೆ. ಇದರಿಂದ ಕೋಳಿಗಳ ದೇಹಕ್ಕೆ ರಾತ್ರಿ ಹೊತ್ತು ಶಾಖ ಸಿಕ್ಕುವುದರಿಂದ ಕೋಳಿಗಳ ಆರೋಗ್ಯದಲ್ಲಿ ಚೇತರಿಕೆ ಸಿಗುತ್ತಿದೆ.

ಆಹಾರ ಪೂರೈಕೆ:  ಪ್ರತಿ ದಿನ ಎರಡು ಸಲ ಆಹಾರ ಎರಚುತ್ತಾರೆ. ಅಂಗಡಿಗಳಲ್ಲಿ ಆಹಾರ ಖರೀದಿಸಿ ತಂದರೆ ಪ್ರತಿ ಕ್ವಿಂಟಲ್ ಆಹಾರಕ್ಕೆ₹ 3300 ತಗಲುತ್ತದೆ. ಆದ್ದರಿಂದ ನಾವೇ ನಿತ್ಯ ಅಕ್ಕಿ, ರಾಗಿ, ಜೋಳ ಮಿಶ್ರ ಮಾಡಿ ಎರಚುತ್ತೇವೆ. ಪ್ರತಿ ಕ್ವಿಂಟಲ್ ಗೆ ₹2600 ವೆಚ್ಚವಾಗುತ್ತದೆ. ದಿನಕ್ಕೆ ಎರಡು ಕ್ವಿಂಟಲ್ ಸಾಕಾಗುತ್ತದೆ. ಇದರಿಂದ ನಾಲ್ಕು ತಿಂಗಳ ಆಹಾರಕ್ಕೆ ₹6 ಲಕ್ಷ ಖರ್ಚಾಗಿದೆ. ಮೊಟ್ಟೆಗಳನ್ನು ಇಡಲು ಕೋಳಿಗಳು ಸಿದ್ಧವಾಗಿವೆ. ಆಹಾರಕ್ಕಾಗಿ ಮಾಡಿದ ಖರ್ಚೆಲ್ಲ ಕಳೆದು ನಾಲ್ಕು ತಿಂಗಳಿಗೆ ಒಟ್ಟು ₹6 ಲಕ್ಷ ಆದಾಯ ಸಿಗುವ ನಿರೀಕ್ಷೆಯಿದೆ.

ಮಾಂಸಕ್ಕೆ ಬೇಡಿಕೆ: ಮಾರುಕಟ್ಟೆಯಲ್ಲಿ ನಾಟಿ ಕೋಳಿಯ 1ಕೆ.ಜಿ.ಮಾಂಸಕ್ಕೆ 180 ರಿಂದ 200 ಇದೆ. ಯಾವುದೇ ಮಾರುಕಟ್ಟೆಗೆ ಕೋಳಿಗಳನ್ನು ಮಾರದೇ, ಸ್ಥಳೀಯರಿಗೆ ಮಾರಾಟ ಮಾಡುತ್ತಿದ್ದಾರೆ.  ಮಹಾನವಮಿ, ಯುಗಾದಿಯಲ್ಲಿ ಮಾಂಸಕ್ಕೆ ಬೇಡಿಕೆ ಹೆಚ್ಚು. ಭಾನುವಾರ ಬಂತೆಂದರೆ ಇಪ್ಪತ್ತಕ್ಕೂ ಅಧಿಕ ಕೋಳಿ ಮಾರಾಟವಾಗುತ್ತಿವೆ. ನಾಟಿ ಕೋಳಿಗೆ ಯಾವುದೇ ರೋಗ ಈವರೆಗೂ ಬಂದಿಲ್ಲ. ಕೋಳಿ ಸಾಕಲು ಮಾರ್ಗದರ್ಶನ ಮಾಡಿದ ಸ್ನೇಹಿತ ಗೋಪಿ ಅವರು ಬೆಂಗಳೂರಿನ ಶಿವಾಜಿನಗರದಲ್ಲಿ ನಾಟಿಕೋಳಿ ಹೋಟೆಲ್ ಮಾಡಿದ್ದಾರೆ. ಅಲ್ಲಿಗೆ ವಾರದಲ್ಲಿ ಐದು ದಿನ ತಲಾ 20 ಕೋಳಿ ಕಳುಹಿಸುತ್ತಿದ್ದಾರೆ.

ಪ್ರತಿ ನಾಲ್ಕು ತಿಂಗಳಿಗೆ ಒಂದು ಬ್ಯಾಚ್ ಮಾಡಬಹುದು. ಮತ್ತೊಂದು ಬ್ಯಾಚ್ ಕೋಳಿ ಬಿಡುವ ಮಧ್ಯೆ ಒಂದು ತಿಂಗಳ ಅಂತರ ಇಟ್ಟುಕೊಳ್ಳಬೇಕು. ನಾನು ವರ್ಷಕ್ಕೆ ಎರಡು ಬ್ಯಾಚ್ ಮಾಡಲು ಇಚ್ಛಿಸಿದ್ದೇನೆ. ಕೋಳಿಗಳು ಮೊಟ್ಟೆ ಇಟ್ಟ ನಂತರ ಮೊಟ್ಟೆ ಗಾತ್ರ ನೋಡಿಕೊಂಡು, ಮರಿಗಳನ್ನು ಮಾಡಿಸುವ ಯೋಜನೆ ಇದೆ ಎನ್ನುತ್ತಾರೆ ಕೋಳಿ ಸಾಕಣೆದಾರ ಜಯಣ್ಣ.
– ಪಂಚಾಕ್ಷರಯ್ಯ ಟಿ.ಎಚ್.ಗುಬ್ಬಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT